ಒಕ್ಕೂಟ ಸರ್ಕಾರ ಜಾರಿಗೆ ತಂದಿರುವ ವಿವಾದಿತ ಕೃಷಿ ಕಾನೂನುಗಳ ವಿರುದ್ಧ ದೆಹಲಿಯ ಗಡಿಗಳಲ್ಲಿ ಹೋರಾಟ ನಡೆಸುತ್ತಿರುವ ರೈತರಿಗೆ ಬೆಂಬಲ ವ್ಯಕ್ತಪಡಿಸಿದ ಹಲವು ಮಂದಿಯ ಟ್ವಿಟರ್ ಖಾತೆಗಳನ್ನು ಸರ್ಕಾರದ ಮನವಿ ಮೇರೆಗೆ ನಿರ್ಬಂಧಗೊಳಿಸಲಾಗಿದೆ.
ಕೆನಡಾದ-ಪಂಜಾಬಿ ಗಾಯಕ ಜಾಝಿಬಿ, ಕ್ಯಾಲಿಫೋರ್ನಿಯಾದ ಸಿಖ್ ಯುವ ಸಮೂಹ, ಹಿಪ್‌ಹಾಪ್ ಗಾಯಕ ಎಲ್ ಫ್ರೆಶ್ ದಿ ಲಯನ್ ಮತ್ತು ತರನ್‌ದೀಪ್ ಗುರಾಯ ಅವರ ಖಾತೆಗಳನ್ನು ನಿರ್ಬಂಧಿಸಲಾಗಿದೆ. ಇವರು ಸರ್ಕಾರದ ಕೃಷಿ ಕಾನೂನುಗಳನ್ನು ವಿರೋಧಿಸಿ ಪ್ರತಿಭಟಿಸುವ ರೈತರಿಗೆ ಬೆಂಬಲವಾಗಿ ಆಗಾಗ್ಗೆ ಟ್ವೀಟ್ ಮಾಡುತ್ತಿದ್ದರು.
ಈ ನಾಲ್ಕು ಖಾತೆಗಳಿಗೆ ಭಾರತದಲ್ಲಿ ಮಾತ್ರ ನಿರ್ಬಂಧ ವಿಧಿಸಲಾಗಿದ್ದು, ಭಾರತದ ಹೊರಗೆ ಈ ಖಾತೆಗಳು ಸಕ್ರಿಯವಾಗಿವೆ. ಕಾನೂನಿನ್ವಯ ಭಾರತ ಸರ್ಕಾರ ನೀಡಿದ ದೂರಿನ ಆಧಾರದ ಮೇಲೆ ಖಾತೆಗಳನ್ನು ನಿರ್ಬಂಧಿಸಲಾಗಿದೆ ಎಂದು ಟ್ವಿಟರ್ ತಿಳಿಸಿದೆ.
ಇದನ್ನೂ ಓದಿ: ರೈತ ಹೋರಾಟ ತೀವ್ರಗೊಳಿಸಲು ನಿರ್ಧಾರ: ಮಮತಾ ಬ್ಯಾನರ್ಜಿ ಭೇಟಿಯಾಗಲಿರುವ ರಾಕೇಶ್ ಟಿಕಾಯತ್
’ಸರ್ಕಾರ ನೀಡಿದ ದೂರಿನ ಆಧಾರದ ಮೇಲೆ ಖಾತೆಗಳನ್ನು ನಿರ್ಬಂಧಿಸಲಾಗಿದೆ. ಟ್ವಿಟರ್ ನಿಯಮಗಳನ್ನು ಉಲ್ಲಂಘಿಸಿದರೆ, ಅಂತಹ ಟ್ವೀಟನ್ನು ತೆಗೆದು ಹಾಕಲಾಗುವುದು. ನಿರ್ದಿಷ್ಟವ್ಯಾಪ್ತಿಯಲ್ಲಿ ಇದು ಅಕ್ರಮವಾಗಿದ್ದರೆ, ಅಲ್ಲಿಗೆ ಮಾತ್ರ ನಿರ್ಬಂಧಿಸಲಾಗುತ್ತದೆ. ಮತ್ತು ಇದನ್ನು ಬಳಕೆದಾರರಿಗೆ ತಿಳಿಸಲಾಗುತ್ತದೆ ಎಂದು ಟ್ವಿಟರ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಟೆಕ್ನಾಲಜಿ ನ್ಯೂಸ್ ವೆಬ್‌ಸೈಟ್ ಟೆಕ್‌ಕ್ರಂಚ್ ಪ್ರಕಾರ, ಎಲ್ಲಾ ನಾಲ್ಕು ಖಾತೆಗಳು ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರವನ್ನು ಟೀಕಿಸಿವೆ ಮತ್ತು ವಿವಾದಿತ ಕೃಷಿ ಕಾನೂನುಗಳನ್ನು ವಿರೋಧಿಸಿ ಹಲವು ಪೋಸ್ಟ್ ಮಾಡಿವೆ.
ಕಳೆದ 6 ತಿಂಗಳಿಂದ ವಿವಾದಿತ ಕೃಷಿ ಕಾನೂನುಗಳನ್ನು ವಿರೋಧಿಸಿ ಲಕ್ಷಾಂತರ ರೈತರು ದೆಹಲಿಯ ನಾಲ್ಕು ಗಡಿಗಳು ಮತ್ತು ರಾಜಸ್ಥಾನ್ ಶಹಜಾನ್‌ಪುರ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಉತ್ತರಪ್ರದೇಶ ಬಿಜೆಪಿಯಲ್ಲಿ ಭಿನ್ನಮತ: ಯೋಗಿ ಬದಲಾವಣೆಯೇ? ಸಂಪುಟ ವಿಸ್ತರಣೆಯೇ?


