Homeನ್ಯಾಯ ಪಥಜಾಗೃತಿ ಮತ್ತು ಬದಲಾವಣೆಗಾಗಿ ಹಾಡುವುದನ್ನೆ ಅಸ್ತ್ರವಾಗಿಸಿಕೊಂಡ ಭೂಮ್ತಾಯಿ ಬಳಗ

ಜಾಗೃತಿ ಮತ್ತು ಬದಲಾವಣೆಗಾಗಿ ಹಾಡುವುದನ್ನೆ ಅಸ್ತ್ರವಾಗಿಸಿಕೊಂಡ ಭೂಮ್ತಾಯಿ ಬಳಗ

- Advertisement -
- Advertisement -

“ಪ್ರೀತಿಯ ಗಾಳಿ ಬೀಸುತಿದೆ!
ಅಟ್ಟಿಮೊಹಲ್ಲಗಳಾ ನಡುವೆ!
ಗಡಿಗಳ ಮೀರಿ ಗೆಳೆತನವಾ ಮಾಡೋಣ ಬಾ
ನನ್ನ ಸಂಗಾತಿಯೇ….”

ಪರಿಸರ, ಮಕ್ಕಳ-ಮಾನವ ಹಕ್ಕುಗಳು, ಸೌಹಾರ್ದತೆಯ ಸಂರಕ್ಷಣೆ ಹಾಗೂ ಅಸಮಾನತೆ, ಅನ್ಯಾಯಗಳ ವಿರುದ್ಧ ಹೋರಾಡಲು ಹಲವು ಮಂದಿ ಸಂಘಸಂಸ್ಥೆಗಳನ್ನು ಕಟ್ಟಿಕೊಂಡು ನಿರಂತರವಾಗಿ ಕಾರ್ಯನಿರ್ವಹಿಸುತ್ತಾರೆ. ಎಷ್ಟೋ ಬಾರಿ ಸರ್ಕಾರಗಳಿಗೆ ಸಾಧ್ಯವಾಗದ ಜನಪರ ಕೆಲಸಗಳನ್ನು ಈ ಸಂಸ್ಥೆಗಳು ಮಾಡಿಕೊಂಡು ಬರುತ್ತಿವೆ. ಒಂದೊಂದು ಗುಂಪುಗಳ ಆಲೋಚನೆ, ರೀತಿನೀತಿಗಳು ಬೇರೆ ಆದರೆ, ಗುರಿ ಮಾತ್ರ ಜನರಲ್ಲಿ ಜಾಗೃತಿ ಮೂಡಿಸುವುದು ಮತ್ತು ಸರ್ಕಾರಗಳ ಆಚೆಗೆ ಜನರಿಗೆ ವಿವಿಧ ರೀತಿಯಲ್ಲಿ ಸಹಾಯ ಮಾಡುವುದು. ಇಂತಹದ್ದೆ ಕೆಲಸಕ್ಕೆ ಕೈಹಾಕಿ ಹಾಡುಗಳ ಮೂಲಕ ವಿಭಿನ್ನವಾಗಿ ಜನಮನದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ ಭೂಮ್ತಾಯಿ ಬಳಗ.

ಜನರ ಬಳಿಗೆ ತಲುಪಿ, ಅವರೊಂದಿಗೆ ಬೆರೆತು, ಜನಪರ ಮತ್ತು ಜನಪದ ಹಾಡುಗಳನ್ನು ಹಾಡುತ್ತಾ ತಿಳಿವು ಮೂಡಿಸಲು ಶ್ರಮಿಸುತ್ತಿರುವ ತಂಡ ’ಭೂಮ್ತಾಯಿ ಬಳಗ’. ಮನರಂಜನೆಗಾಗಿ ಹಾಡುವ ವೃತ್ತಿಪರ ಕಲಾತಂಡಗಳ ಮಧ್ಯೆ ಈ ತಂಡ ವಿಭಿನ್ನವಾಗಿ ಗುರುತಿಸಿಕೊಂಡಿದೆ. ಹಾಡುಗಳನ್ನೆ ಅಸ್ತ್ರವಾಗಿಸಿಕೊಂಡು ಜಾಗೃತಿ ಮೂಡಿಸುವ, ಬದಲಾವಣೆಗಾಗಿ ಪ್ರಯತ್ನಿಸುವುದು ಈ ತಂಡದ ಮುಖ್ಯ ಕೆಲಸ. ಇನ್ನೊಂದು ವಿಷಯವೆಂದರೆ ಇಲ್ಲಿನ ಹಲವು ಹಾಡುಗಾರರು ಶಾಸ್ತ್ರೀಯವಾಗಿ ಅಥವಾ ಪಾರಂಪರಿಕವಾಗಿ ಸಂಗೀತ ಕಲಿತವರಲ್ಲ.

ಪರಿಸರಿ ಸಂರಕ್ಷಣೆ, ನೆಲ-ಜಲ, ಮಕ್ಕಳ ಹಕ್ಕುಗಳು, ಮಹಿಳಾ ಸಮಾನತೆ, ದಲಿತರ ಹಕ್ಕುಗಳು, ಜಾಗತಿಕ ವಿಷಯಗಳು, ಮಾನವ ಹಕ್ಕುಗಳ ಸಂರಕ್ಷಣೆ ಮುಂತಾದ ವಿಷಯಗಳನ್ನು ಹಾಡುಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು ಭೂಮ್ತಾಯಿ ಬಳಗ ಶ್ರಮಿಸುತ್ತಿದೆ.

ಗಂಗಮ್ಮನ ಹೊಕ್ಕಲು ಕಲಾ ತಂಡಕ್ಕೆ 2007ರಲ್ಲಿ ಭೂಮ್ತಾಯಿ ಬಳಗ ಎಂದು ಹೆಸರಿಡಲಾಗಿದೆ. ಈ ಬಳಗದ ಸಂಸ್ಥಾಪಕರಾದ ಜನಾರ್ದನ ಕೆಸರಗದ್ದೆ ಈ ಹೆಸರು ಇಟ್ಟಿದ್ದರು. ಸದ್ಯ ಈ ತಂಡವನ್ನು ಮುನ್ನಡೆಸುತ್ತಿರುವುದು 2017ರಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯೆಯಾಗಿದ್ದ, ಈ ತಂಡದ ಗಾಯಕಿ ನಿರ್ಮಲಾ ಡಿ.ಆರ್.

“ಭಾಷಣಗಳಲ್ಲಿ ವಿಷಯಗಳನ್ನು ಹೇಳಿ ಅರ್ಥ ಮಾಡಿಸುವುದಕ್ಕಿಂತ ಕಲೆಗಳ ಮೂಲಕ ಅದರಲ್ಲೂ ಹಾಡುಗಳ ಮೂಲಕ ಮತ್ತು ಸಂಗೀತದ ಮೂಲಕ ತಿಳಿಸಿದರೆ, ಜನರಿಗೆ ಹೆಚ್ಚು ಆಪ್ತವಾಗುತ್ತದೆ” ಎಂದು ಹೇಳುತ್ತಾರೆ ಗಾಯಕಿ ನಿರ್ಮಲಾ. “ಮೊದಲು ಹಾಡುಗಳ ಜೊತೆಗೆ ಬೀದಿನಾಟಕಗಳನ್ನು ಮಾಡುತ್ತಿದ್ದೆವು. ಈಗ ಕಲಾವಿದರ ಕೊರತೆಯಿದೆ. ಸದ್ಯ ತಂಡದಲ್ಲಿ 10 ಜನರಿದ್ದೇವೆ. ತಂಡದಲ್ಲಿದ್ದ ಹಳಬರು ಕೂಡ ಕಾರ್ಯಕ್ರಮಗಳಿಗೆ ಬರುತ್ತಾರೆ. ಮೊದಲಿಗೆ ವಾಲಂಟಿಯರ್ ಆಗಿದ್ದವರೆಲ್ಲಾ ಹತ್ತಿರದ ಕಾರ್ಯಕ್ರಮಗಳಿಗೆ ಬರುತ್ತಾರೆ. ಹೊಸ ಹೊಸ ಕಾರ್ಯಕ್ರಮಗಳನ್ನು ಮಾಡಬೇಕು ಎಂಬ ಆಶಯಕ್ಕೆ ಸದ್ಯ ಕೊರೊನಾ ಬ್ರೇಕ್ ಹಾಕಿದೆ” ಎನ್ನುತ್ತಾರೆ.

ನಮಗೆ ನಮ್ಮ ಪೂರ್ವಿಕರು ಬಳುವಳಿಯಾಗಿ ನೀಡಿರುವ, ಜನಪದವನ್ನು, ಜನಪದ ಶೈಲಿಯನ್ನು ಇಟ್ಟುಕೊಂಡು ಹಾಡುಗಳನ್ನು ಕಟ್ಟುವುದು, ಅವುಗಳಿಗೆ ಸಂಗೀತ ಸಂಯೋಜಿಸುವುದು, ಜಾನಪದವನ್ನು ಉಳಿಸಿಕೊಂಡು ಜನರಲ್ಲಿ ಜಾಗೃತಿ ಮೂಡಿಸುವುದು ನಮ್ಮ ಕರ್ತವ್ಯ ಎನ್ನುತ್ತದೆ ಈ ಭೂಮ್ತಾಯಿ ಬಳಗ.

ಬೆಂಗಳೂರಿನಲ್ಲಿ ’ಹಾಡು ಬೆಂಗಳೂರು’ ಎನ್ನುವ ಕಾರ್ಯಕ್ರಮವನ್ನು ಎರಡು ಬಾರಿ ನಡೆಸಿ, ಮೂರು ತಿಂಗಳಲ್ಲಿ ಕರ್ನಾಟಕ ಹಲವು ಕಡೆ 100ಕ್ಕೂ ಹೆಚ್ಚು ಕಾರ್ಯಕ್ರಮ ಮಾಡಿರುವ ಕೀರ್ತಿ ಈ ತಂಡಕ್ಕೆ ಇದೆ.

“ಈ ’ಹಾಡು ಬೆಂಗಳೂರು’ ನಮಗೆ ಹೊಸ ಅನುಭವವಾಗಿತ್ತು. ಕಾಲೇಜುಗಳಲ್ಲಿ ಮತ್ತಿತರ ಕಡೆ ಸಾರ್ವಜನಿಕವಾಗಿ ತುಂಬಾ ಕಾರ್ಯಕ್ರಮ ಮಾಡಿದ್ದೆವು. ನೆಲ-ಜಲ, ಸಮಾನತೆ, ಮಹಿಳಾ ಪರ ವಿಚಾರಗಳು, ಪರಿಸರ, ಸಮಾನತೆ ಬಗ್ಗೆ ಹಾಡುಗಳನ್ನು ಹಾಡಿದ್ದೇವೆ. ಇವುಗಳಿಂದಾಗಿಯೇ ಹಾಡು ಕರ್ನಾಟಕ ಎಂಬ ಕಾರ್ಯಕ್ರಮ ಆರಂಭವಾಯಿತು. ಇಡೀ ಕರ್ನಾಟಕದಲ್ಲಿ ಹಾಡಿನ ಮೂಲಕ ಬದಲಾವಣೆಗೆ ಕರೆ ಕೊಡುವ ಆಶಯ ನಮ್ಮದಾಗಿತ್ತು. ಆದರೆ, ಹಾಸನ, ಚಿಕ್ಕಬಳ್ಳಾಪುರದಲ್ಲಿ ನಾಲ್ಕಾರು ಕಾರ್ಯಕ್ರಮ ನಡೆಸುವಷ್ಟರಲ್ಲಿ ಕೊರೊನಾ ಸಾಂಕ್ರಾಮಿಕ ಇದಕ್ಕೆ ತಡೆ ಹಾಕಿತು. ಇಡೀ ಕರ್ನಾಟಕ ಸುತ್ತುವ ನಮ್ಮ ಯೋಚನೆ ಸದ್ಯಕ್ಕೆ ಅಲ್ಲಿಗೆ ನಿಂತಿದೆ. ಆದರೆ ಹಾಡು ಕರ್ನಾಟಕ ಎಂಬುದು ನಾಲ್ಕಾರು ವರ್ಷಗಳ ಕನಸು. ಅದು ಈಗ ಸದ್ಯಕ್ಕೆ 2-3 ಜಿಲ್ಲೆಗಳಿಗೆ ನಿಂತು ಹೋಗಿದ್ದು ಬೇಸರ ಇದೆ. ಮುಂದಿನ ದಿನಗಳಲ್ಲಿ ಪುನರಾರಂಭಿಸುತ್ತೇವೆ” ಎನ್ನುತ್ತಾರೆ ನಿರ್ಮಲಾ.

“ಬಳಗದ ಸಂಸ್ಥಾಪಕರಾದ ಜನಾರ್ದನ ಕೆಸರುಗದ್ದೆ, ಗೊಲ್ಲಹಳ್ಳಿ ಶಿವಪ್ರಸಾದ, ಕೊಟಗಾನಹಳ್ಳಿ ರಾಮಯ್ಯ, ಗ್ಯಾರಂಟಿ ರಾಮಣ್ಣ ಅವರ ಜನಪರ ಮತ್ತು ಹೋರಾಟದ ಹಾಡುಗಳನ್ನು ಹೆಚ್ಚಾಗಿ ಹಾಡುತ್ತೇವೆ. ನಮ್ಮ ತಂಡದ ಗಾಯಕ ಅರುಣ್ ಕುಮಾರ್ ಕೂಡ ಹೋರಾಟದ, ರೈತಪರ ಹಾಡುಗಳನ್ನು ರಚಿಸುವಲ್ಲಿ ತೊಡಗಿಸಿಕೊಂಡಿದ್ದಾರೆ. ನಾವು ಹೊಸ ಬಗೆಯ ಹಾಡುಗಳನ್ನು ರಚನೆ ಮಾಡಿ ಸಂಯೋಜಿಸಿ ಜನರ ಮುಂದಿಡುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ತಮ್ಮ ಆಶಯಗಳನ್ನು” ನಿರ್ಮಲಾ ನ್ಯಾಯಪಥದ ಮುಂದಿಡುತ್ತಾರೆ.

“ಜನಪದವನ್ನು ಬೆಳೆಸಿ ಜನಪ್ರಿಯಗೊಳಿಸುವುದು ಕೂಡ ನಮ್ಮ ಕರ್ತವ್ಯ. ನಮ್ಮ ಹಾಡುಗಳು ಮತ್ತಷ್ಟು ಜನರಿಗೆ ತಲುಪಲಿ ಎನ್ನುವ ಉದ್ದೇಶದಿಂದಲೇ ನಾನು ಖಾಸಗಿ ಚಾನೆಲ್ ಒಂದರ ಸಂಗೀತ ಕಾರ್ಯಕ್ರಮದ ಸ್ಪರ್ಧಿಯಾಗಿದ್ದೆ. ನಮ್ಮ ಜನಪರ ಹಾಡುಗಳನ್ನು ಹಾಡಿಸುವುದಾಗಿಯೂ ಅವರು ಹೇಳಿದ್ದರು. ಆದರೆ, ಅದು ಸ್ಪರ್ಧೆ ಆಗಿದ್ದರಿಂದ ಹೆಚ್ಚಾಗಿ ಸಿನಿಮಾ ಹಾಡುಗಳಿಗೆ ಪ್ರಾಮುಖ್ಯತೆ ಇತ್ತು. ಚಾನೆಲ್‌ಗಳ ಪ್ರಾಮುಖ್ಯತೆ, ಅವುಗಳ ಮಾನದಂಡ ಬೇರೆಯೇ ಇರುವುದರಿಂದ ಅಲ್ಲಿ ನಮ್ಮ ಹಾಡುಗಳಿಗೆ ಅಷ್ಟೊಂದು ಸ್ಥಳ ಸಿಕ್ಕಲಿಲ್ಲ. ಆದರೂ,
ಕೆಲವು ಜನಪದ ಹಾಡುಗಳಿಗೆ ದನಿಯಾದೆ” ಎಂದು ನಿರ್ಮಲಾ ಹೇಳುತ್ತಾರೆ.

ತಂಡವನ್ನು ಮುನ್ನಡೆಸಲು ಆರ್ಥಿಕ ಸಹಾಯ ಬೇಕಲ್ಲವೇ ಹಾಗೂ ತಂಡದ ಸದಸ್ಯರ ಆರ್ಥಿಕ ಸ್ಥಿತಿಗತಿ ಕೂಡ ಮುಖ್ಯ ಅಲ್ಲವೇ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿರುವ ನಿರ್ಮಲಾ, “ದಲಿತಪರ, ಮಹಿಳಾ ಪರ, ರೈತಪರ ಸಂಘಟನೆಗಳ ಕಾರ್ಯಕ್ರಮಗಳಿಗೆ ಕಡಿಮೆ ಗೌರವಧನ ಪಡೆಯುತ್ತೇವೆ. ಮೊದಲು ಅತಿ ಕಡಿಮೆ ಹಣ ಪಡೆಯುತ್ತಿದ್ದೇವು. ಆರ್ಥಿಕವಾಗಿ ಬಳಗದ ಮೇಲೆ ಅವಲಂಬಿಸಿರುವವರಿಗೆ ಸ್ಪಲ್ಪವಾದರೂ ಸಹಾಯ ಮಾಡಬೇಕು. ನಮ್ಮ ಓಡಾಟದ ಖರ್ಚು ಎಲ್ಲವನ್ನೂ ನೋಡಿಕೊಂಡು ಗೌರವಧನ ಫಿಕ್ಸ್ ಮಾಡುತ್ತೆವೆ. ಕೆಲವೊಮ್ಮೆ ಹಲವು ಸಂಘಟನೆಗಳ ಬಳಿ ಹಣವನ್ನೇ ತೆಗೆದುಕೊಂಡಿಲ್ಲ. ಹೋರಾಟಗಳಲ್ಲಿ ಹಾಗೆಯೇ ಹಾಡುತ್ತೇವೆ. ಕೇವಲ ಓಡಾಟದ ಖರ್ಚು ಪಡೆಯುತ್ತೇವೆ” ಎನ್ನುತ್ತಾರೆ.

“ತಂಡದ ಎಲ್ಲರಿಗೂ ಇದು ತಮ್ಮ ತಂಡ ಎಂಬ ಭಾವನೆ ಇದೆ. ಹೀಗಾಗಿ ತಂಡ ಇಷ್ಟು ವರ್ಷದಿಂದ ಉಳಿದುಕೊಂಡಿದೆ. ಒಬ್ಬರಿಗೊಬ್ಬರು ಪೂರಕವಾಗಿ ಕೆಲಸ ಮಾಡುತ್ತಾರೆ. ತಂಡದಲ್ಲಿ ಬರೀ ಹಣವೇ ಮುಖ್ಯ
ಅಂದುಕೊಂಡವರು ಯಾರೂ ಇಲ್ಲ. ತಂಡ ಬೆಳೆಯಬೇಕು, ಇನ್ನೂ ಹೆಚ್ಚೆಚ್ಚು ಹಾಡಬೇಕು ಎನ್ನುವವರೆ ಎಲ್ಲರೂ. ಮೊದಲು ಹಲವು ಹೆಣ್ಣು ಮಕ್ಕಳು ತಂಡದಲ್ಲಿದ್ದರು. ಆದರೆ ಅವರಲ್ಲಿ ಕೆಲವರು ಈಗ ಗೃಹಿಣಿಯರು, ಮತ್ತೆ ಕೆಲವರು ವೈಯಕ್ತಿಕ ಕಾರಣದಿಂದ ತಂಡದಲ್ಲಿ ಮುಂದುವರೆಯಲಿಲ್ಲ. ನನ್ನ ಪತಿ ರವಿಶಾಸ್ತ್ರಿ ನನ್ನನ್ನು ಅರ್ಥ ಮಾಡಿಕೊಂಡು ಜೊತೆಗೆ ಇರುತ್ತಾರೆ. ಅವರ ಬೆಂಬಲ ಹೆಚ್ಚಾಗಿರುವುದರಿಂದ ನಾನು ಈ ತಂಡವನ್ನು ಮುನ್ನಡೆಸಲು ಸಾಧ್ಯವಾಗುತ್ತಿದೆ” ಎನ್ನುತ್ತಾರೆ ನಿರ್ಮಲಾ.

“ನಮ್ಮ ತಂಡವನ್ನು ಜನ ಗುರುತಿಸುವ ರೀತಿಗೆ ಖುಷಿಯಾಗುತ್ತದೆ. ಮೊದಲಿಗಿಂತಲೂ ಈಗ ತಂಡಕ್ಕೆ ಬೇಡಿಕೆ ಹೆಚ್ಚಾಗಿದೆ. ನಿಮ್ಮ ತಂಡದ ಹಾಡುಗಳೇ ಬೇಕು ಎಂದು ಹಠ ಹಿಡಿದು ಕರೆಯುತ್ತಾರೆ. ಕೊರೊನಾ ಸೋಂಕು ಕಡಿಮೆಯಾದ ಬಳಿಕ ಹಲವು ಕಾರ್ಯಕ್ರಮಗಳ ಆಹ್ವಾನ ಬಂದಿದೆ. ಪ್ರತಿ ವರ್ಷವೂ ಒಂದೊಂದು ಶೀರ್ಷಿಕೆ ಅಡಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ಹಾಡು ಬೆಂಗಳೂರು, ಹಾಡು ಕರ್ನಾಟಕ ಕೂಡ ಇವುಗಳ ಒಂದು ಭಾಗ” ಎನ್ನುತ್ತಾರೆ.

ತಂಡದಲ್ಲಿ ಸದ್ಯಕ್ಕೆ ಮುಖ್ಯ ಗಾಯಕರಾಗಿ ಅರುಣ್ ಕುಮಾರ್, ಬಾಲು ಜಂಬೆ (ಜಂಬೆ ವಾದ್ಯ, ಅಂತಾರಾಷ್ಟ್ರೀಯ ಕಲಾವಿದ), ವಿವೇಕ್ ಮೌರ್ಯ (ಕೀಬೋರ್ಡ್), ಹೊಂಬೇಗೌಡ, ರವಿಶಾಸ್ತ್ರಿ, ನಾಗೇಶ್ (ರಿದಮ್ ಪ್ಯಾಡ್) ಇದ್ದಾರೆ. ಉಳಿದವರು ಕಾರ್ಯಕ್ರಮಗಳಿಗೆ ಸಾಥ್ ನೀಡುತ್ತಾರೆ.

ಬಿಎಸ್‌ಸಿ ಪದವಿ ಮುಗಿಸಿ, ಕಳೆದ 6 ವರ್ಷಗಳಿಂದ ತಂಡದ ಜೊತೆಗೆ ಗುರುತಿಸಿಕೊಂಡಿರುವ ದೇವನಹಳ್ಳಿಯ ಕಲಾವಿದ ಅರುಣ್ ಕುಮಾರ್ ತಮ್ಮ ಅನುಭವವನ್ನು ಹಂಚಿಕೊಂಡಿದ್ದು ಹೀಗೆ.

“ಭೂಮ್ತಾಯಿ ಬಳಗ ತುಂಬಾ ಹಣಕಾಸು ಇರುವ ತಂಡವೇನಲ್ಲ. ಆದರೂ ಇಂದು ನಮ್ಮ ಮನೆಯಲ್ಲಿ ಮೂರು ಹೊತ್ತು ಊಟ ಸಿಗುತ್ತಿರುವುದು ಇದೇ ತಂಡದಿಂದ. ಬಡ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಾರೆ. ತಂಡದವರಿಗೆ ಸಮಾನ ಮನಸ್ಥಿತಿ ಇದೆ. ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಸಾಗುವ ಇವರ ಗುಣ ನನ್ನನ್ನು 6 ವರ್ಷಗಳಿಂದ ಇವರ ಜೊತೆಗೆ ಇರಿಸಿದೆ. ಬಡ ಕಲಾವಿದರಿಗೆ ಈ ತಂಡ ನೀಡುವ ಪ್ರೋತ್ಸಾಹ ಅನುಕರಣೀಯ” ಎನ್ನುತ್ತಾರೆ.

“ಬಳಗ ಹಲವು ಜನರಿಗೆ ಜೀವನ ನೀಡಿದೆ. ಮುಖ್ಯ ವೇದಿಕೆಗೆ ಬಡ ಕಲಾವಿದರು ಬರಲು ಹಲವು ವರ್ಷಗಳು ಬೇಕು. ಆದರೆ ಇಲ್ಲಿ ತಾವೇ ಹಾಡುಗಳನ್ನು ಕಲಿಸಿ, ಹಾಡಲು ಅವಕಾಶ ನೀಡಿದ್ದಾರೆ. 10 ವರ್ಷದ ಸಮಯದಲ್ಲಿ ಕಲಿಯುವಂತಾದನ್ನು ನನಗೆ ಇಲ್ಲಿ ಒಂದು ವರ್ಷಕ್ಕೆ ಕಲಿಸಿದ್ದಾರೆ. ಹಳಬರ ಜೊತೆಗೆ ಹೊಸಬರನ್ನು ಬೆಳೆಸುವ ತಂಡದ ಗುಣ ನನಗೆ ತುಂಬಾ ಇಷ್ಟ. ನಾನು ಕೂಡ ಈಗ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಮತ್ತಷ್ಟು ಉತ್ತಮ ಹಾಡುಗಳನ್ನು ಸಂಯೋಜಿಸಬೇಕು” ಎನ್ನುತ್ತಾರೆ ಅರುಣ್ ಕುಮಾರ್. ಪ್ರತಿಭಟನೆಗಳು, ಜನಪರ ಚಳವಳಿಗಳ ಜೊತೆಗೆ ಹಾಡುಗಳ ಮೂಲಕವೂ ಜನರಲ್ಲಿ ಅರಿವು ಮೂಡಿಸಲು ಸಾಧ್ಯ. ಹಾಡುಗಳು ಕೇವಲ ಮನರಂಜನೆಗೆ ಮಾತ್ರವಲ್ಲ, ಜಾಗೃತಿಯಾಗಲೂ ಸಾಧ್ಯ. ಹಾಡುಗಳನ್ನೇ ಅಸ್ತ್ರವನ್ನಾಗಿಸಿಕೊಂಡಿರುವ ಮತ್ತಷ್ಟು ಬದಲಾವಣೆಗೆ ದುಡಿಯುತ್ತಿರುವ ಈ ತಂಡ ಭೂಮಿ ತಾಯಿಯ ಬಳಗವೇ ಸರಿ.

ಬಳಗ ಹಾಡುವ ಹಾಡೊಂದರ ಈ ಸಾಲುಗಳು “ಮಸಣದಲ್ಲಿ ಗಿಡವ ನೆಡು, ಬೆಳೆದು ಹಣ್ಣು ನೀಡುವುದು! ಎಲ್ಲ ಮಣ್ಣಿನಲ್ಲಿ ಹೊನ್ನು ಇದೇ..” ಇಂದಿನ ದಿನಕ್ಕೆ ಎಷ್ಟು ಸೂಕ್ತ ಅಲ್ಲವೇ!

  • ಮಮತ ಎಂ

ಇದನ್ನೂ ಓದಿ: 14 ವರ್ಷ ವನವಾಸದಿಂದ ಮರಳಿ ಬಂದಳೇ ಸೀತೆ?: ಕರೀನಾ, ಆಯಿಷಾ, ಭವ್ಯ ವಿರುದ್ಧ ನಿಂತ ಶಕ್ತಿಗಳು ಯಾವುವು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...

ಕೊಲ್ಕತ್ತಾದ 26 ಲಕ್ಷ ಮತದಾರರ ಹೆಸರು 2002 ರ ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ: ಮುಖ್ಯ ಚುನಾವಣಾ ಅಧಿಕಾರಿ

ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಹಲವಾರು ವಿಧಾನಸಭಾ ಕ್ಷೇತ್ರಗಳ ಮತದಾರರ ಹೆಸರುಗಳು 2002 ರ ಮತದಾರರ ಪಟ್ಟಿಯಲ್ಲಿರುವ ನಮೂದುಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ...