ಬಿಜೆಪಿ ನೇತೃತ್ವದ ಒಕ್ಕೂಟ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆಯನ್ನು ನಿತಂತರವಾಗಿ ಹೆಚ್ಚಿಸುತ್ತಿರುವುದನ್ನು ಖಂಡಿಸಿ ಕಾಂಗ್ರೆಸ್ ರಾಜ್ಯಾದ್ಯಂತ ಬೃಹತ್ ಆಂದೋಲನ ನಡೆಸುತ್ತಿದೆ. ಬಿಜೆಪಿ ಆಡಳಿತದಲ್ಲಿ ಪೆಟ್ರೋಲ್ ಬೆಲೆ 100 ರೂಪಾಯಿಗಳ ಗಡಿ ದಾಟಿರುವುದನ್ನು ವಿರೋಧಿಸಿ ’ಪೆಟ್ರೋಲ್ 100 ನಾಟೌಟ್’ ಎಂಬ ಆಂದೋಲನ ನಡೆಸುತ್ತಿದೆ.
ಜೂನ್ 11 ರಿಂದ 15ರ ವರೆಗೆ 5 ದಿನ ಎಲ್ಲಾ ಜಿಲ್ಲಾ, ತಾಲೂಕು, ಪಂಚಾಯಿತಿ ಹಾಗೂ ಹೋಬಳಿ ಕೇಂದ್ರಗಳಲ್ಲಿ 5,000 ಪೆಟ್ರೋಲ್ ಬಂಕ್‌ಗಳ ಮುಂದೆ ಪ್ರತಿಭಟನೆ ನಡೆಯಲಿದೆ ಎಂದು ಕಾಂಗ್ರೆಸ್ ತಿಳಿಸಿದೆ. ವಿಪಕ್ಷ ನಾಯಕ್ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಆಂದೋಲನಕ್ಕೆ ಚಾಲನೆ ನೀಡಲಾಗಿದೆ.
ಶುಕ್ರವಾರ ಬೆಂಗಳೂರಿನ ಶಿವಾನಂದ ವೃತ್ತದ ಬಳಿ ರೆಡ್ಡಿ ಪೆಟ್ರೋಲ್ ಬಂಕ್ ಸಮೀಪ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ, ಮಾಜಿ ಸಚಿವರಾದ ಆರ್.ವಿ. ದೇಶಪಾಂಡೆ, ದಿನೇಶ್ ಗುಂಡೂರಾವ್ ಸೇರಿದಂತೆ ಪ್ರದೇಶ ಕಾಂಗ್ರೆಸ್ ಸದಸ್ಯರು ’100 ನಾಟೌಟ್’, ’ಪೆಟ್ರೋಲ್ ಪಿಕ್‌ಪಾಕೆಟ್’ ಪ್ರತಿಭಟನೆ ನಡೆಸಿದರು.
ಇದನ್ನೂ ಓದಿ: ಎಚ್ ಎಸ್ ದೊರೆಸ್ವಾಮಿ ಶ್ರದ್ಧಾಂಜಲಿ; ನಮ್ಮ ಕಾಲದ ಪ್ರಾಣವಾಯು: ಪ್ರೊ. ಎಂ ಎಸ್ ಆಶಾದೇವಿ
’ಕೇಂದ್ರ ಸರ್ಕಾರದ ಜನ ವಿರೋಧಿ ನೀತಿ ವಿರುದ್ಧ ಹೋರಾಟ ಮಾಡಬೇಕಿದೆ. ಹಿಂದೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಸಾಕಷ್ಟು ಹೋರಾಟ ನಡೆಸಿದೆ. ಇದೇ ಯಡಿಯೂರಪ್ಪ, ಶೋಭ ಕರಂದ್ಲಾಜೆ ಮತ್ತು ಬಿಜೆಪಿ ಸಚಿವರು ಯುಪಿಎ ಸರ್ಕಾರದ ಅವಧಿಯಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಒಂದೆರಡು ರೂಪಾಯಿ ಹೆಚ್ಚಾದಾಗ ಗಲಾಟೆ ಮಾಡಿದ್ದರು. ಆದರೆ ಕೇಂದ್ರದ ಬಿಜೆಪಿ ಸರ್ಕಾರ ಈ ವರ್ಷ ಜನವರಿಯಿಂದ ಇಲ್ಲಿಯವರೆಗೂ 42 ಕ್ಕೂ ಹೆಚ್ಚು ಬಾರಿ ಬೆಲೆ ಏರಿಕೆ ಮಾಡಿದೆ’ ಎಂದು ಸರ್ಕಾರದ ವಿರುದ್ಧ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ.
’ಚುನಾವಣೆ ಇದ್ದ ಏಪ್ರಿಲ್ ತಿಂಗಳಲ್ಲಿ ಮಾತ್ರ ದರ ಹೆಚ್ಚಾಗಲಿಲ್ಲ. ಅದನ್ನು ಬಿಟ್ಟರೆ ಉಳಿದ ಐದು ತಿಂಗಳೂ ಬೆಲೆ ಹೆಚ್ಚಳ ಮಾಡಿದೆ. ಇಂಧನ ಬೆಲೆ ಹೆಚ್ಚಿಸಿ, 20.60 ಲಕ್ಷ ಕೋಟಿ ತೆರಿಗೆ ಸಂಗ್ರಹಿಸಿದೆ. ಸರ್ಕಾರ ತನ್ನ ಆದಾಯ ಹೆಚ್ಚಿಸಿಕೊಳ್ಳಲು ಎಲ್ಲ ಪದಾರ್ಥಗಳ ಬೆಲೆ ಹೆಚ್ಚಿಸುತ್ತಾ, ಜನರ ಜೇಬಿಗೆ ಕನ್ನ ಹಾಕುತ್ತಿದ್ದು, ಇದೊಂದು ಪಿಕ್ ಪಾಕೆಟ್ ಸರ್ಕಾರ’ ಎಂದು ಶಿವಕುಮಾರ್ ಆರೋಪಿಸಿದ್ದಾರೆ.

’ಕೇಂದ್ರ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ತೆರಿಗೆ ಇಳಿಸಿ ತೈಲಬೆಲೆಗೆ ಅನುಗುಣವಾಗಿ ದರ ಇಳಿಸಬೇಕು. ಸಾವಿನಲ್ಲಿ, ಔಷಧಿಯಲ್ಲಿ, ಆಸ್ಪತ್ರೆ ಹಾಸಿಗೆಯಲ್ಲಿ ಹಣ ದೋಚಿದ್ದಲ್ಲದೇ, ಈಗ ಪೆಟ್ರೋಲ್ ಮತ್ತು ಡೀಸೆಲ್ ಮೂಲಕ ಜನರನ್ನು ಪಿಕ್ ಪಾಕೆಟ್ ಮಾಡುತ್ತಿದ್ದಾರೆ. ಜನರಿಗೆ ಹಣ ವಾಪಸ್ ನೀಡಬೇಕು, ಜನರಿಂದ ದೋಚುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.
’ರಾಜ್ಯದಲ್ಲಿ ಒಟ್ಟು 5 ಸಾವಿರ ಕಡೆಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದೇವೆ. ಈ ಹೋರಾಟ ಐದು ದಿನಗಳ ಕಾಲ ನಡೆಯಲಿದ್ದು, ಇಂದು (ಶುಕ್ರವಾರ) ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಶನಿವಾರ ತಾಲೂಕು ಕೇಂದ್ರ, ಭಾನುವಾರ ಜಿಲ್ಲಾ ಪಂಚಾಯಿತಿ ಮತ್ತು ಹೋಬಳಿ ಕೇಂದ್ರಗಳಲ್ಲಿ 14 ರಂದು, ಗ್ರಾಮಪಂಚಾಯಿತಿ ವ್ಯಾಪ್ತಿಯ ಪೆಟ್ರೋಲ್ ಬಂಕ್ ಬಳಿ ಹಾಗೂ 15 ರಂದು ಇತರ ಕಡೆಗಳಲ್ಲಿ ಪ್ರತಿಭಟನೆ ನಡೆಸಲಿದ್ದೇವೆ’ ಎಂದು ಮಾಹಿತಿ ನೀಡಿದ್ದಾರೆ.
’ಸರ್ಕಾರ ಕೋವಿಡ್ ಇದ್ದರೂ ಚುನಾವಣೆ ನಡೆಸಿದೆ. ಆದರೂ ಅವರ ಮೇಲೆ ಪ್ರಕರಣ ದಾಖಲಾಗಿಲ್ಲ. ಆದರೆ ಅಂತರ ಕಾಯ್ದುಕೊಂಡು ಪ್ರತಿಭಟನೆ ನಡೆಸುತ್ತಿರುವ ನಮ್ಮ ಮೇಲೆ ಪೊಲೀಸ್ ಅಧಿಕಾರಿಗಳು ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ನಿಮ್ಮ ಈ ಬೆದರಿಕೆಗೆ ಕಾಂಗ್ರೆಸಿಗರು ಹೆದರುವುದಿಲ್ಲ. ಈ ದೇಶದ ಸ್ವಾತಂತ್ರ್ಯಕ್ಕೆ ಪ್ರಾಣ ಕೊಟ್ಟವರು ನಾವು. ನಮ್ಮ ಹೋರಾಟ ಇದೇ ರೀತಿ ಮುಂದುವರಿಯಲಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ದೇಶಾದ್ಯಂತ ಇಂಧನ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ ನಡೆಯುತ್ತಿದ್ದರೂ, ಅಂತರರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಹೆಚ್ಚಾಗಿರುವ ಕಾರಣ ಇಂಧನ ಬೆಲೆ ಏರಿಕೆಯಾಗುತ್ತಿದೆ ಎಂದು ಬಿಜೆಪಿ ಸಮರ್ಥನೆ ಮಾಡಿಕೊಳ್ಳುತ್ತಿದೆ.
ಇದನ್ನೂ ಓದಿ: ರಾಜಸ್ಥಾನ: ಅಂಬೇಡ್ಕರ್ ಪೋಸ್ಟರ್ ತೆರವಿಗೆ ಆಕ್ಷೇಪಿಸಿದ ದಲಿತ ಯುವಕನ ಹತ್ಯೆ


