ಕೇರಳ ಮತ್ತು ಜಮ್ಮು ಕಾಶ್ಮೀರದಲ್ಲಿ ಯಶಸ್ವಿಯಾಗಿ ನಡೆಸುತ್ತಿರುವ ಮನೆ ಬಾಗಿಲಿಗೆ ಲಸಿಕೆ ಕಾರ್ಯಕ್ರಮವನ್ನು ನೋಡಿ ಮತ್ತು ಮನೆ ಬಾಗಿಲಿಗೆ ಲಸಿಕೆ ಹಾಕಲು ಸಾಧ್ಯವಿಲ್ಲ ಎಂದು ಹೇಳುವ ಪ್ರಸ್ತುತ ನೀತಿಯ ಬಗ್ಗೆ ಉತ್ತಮ ನಿರ್ಧಾರ ಕೈಗೊಳ್ಳಿ ಎಂದು ಬಾಂಬೆ ಹೈಕೋರ್ಟ್ ಒಕ್ಕೂಟ ಸರ್ಕಾರಕ್ಕೆ ಹೇಳಿದೆ.
ಕೇರಳ ಮತ್ತು ಜಮ್ಮು ಕಾಶ್ಮೀರದಂತಹ ರಾಜ್ಯಗಳು ಈಗಾಗಲೇ ಇಂತಹ ಪ್ರಕ್ರಿಯೆಗಳನ್ನು ನಡೆಸುತ್ತಿರುವಾಗ ಮನೆ ಬಾಗಿಲಿಗೆ ಲಸಿಕೆ ಹಾಕಲು ಸಾಧ್ಯವಿಲ್ಲ ಎಂದು ಹೇಳುವ ಒಕ್ಕೂಟ ಸರ್ಕಾರದ ಸಮಸ್ಯೆ ಏನೆಂಬುದನ್ನು ಅರ್ಥವಾಗುತ್ತಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತ ಮತ್ತು ನ್ಯಾಯಮೂರ್ತಿ ಜಿ.ಎಸ್. ಕುಲಕರ್ಣಿ ಅವರ ವಿಭಾಗೀಯ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ: ಫ್ಯಾಕ್ಟ್ ಚೆಕ್: ಕೊವೀಡ್ ಲಸಿಕೆ ಪಡೆದ ಮೇಲೆ ಮ್ಯಾಗ್ನೆಟಿಕ್ (ಅಯಸ್ಕಾಂತೀಯ) ಶಕ್ತಿ ದೊರೆಯುತ್ತದೆಯೇ?
75 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಮತ್ತು ವಿಶೇಷ ಸಾಮರ್ಥ್ಯ ಹೊಂದಿರುವ, ಗಾಲಿಕುರ್ಚಿ ಅಥವಾ ಹಾಸಿಗೆ ಹಿಡಿದಿರುವ ವ್ಯಕ್ತಿಗಳ ಮನೆ ಬಾಗಿಲಿಗೆ ತೆರಳಿ ಲಸಿಕೆ ನೀಡುವಂತೆ ಕೋರಿ ವಕೀಲರಾದ ಧ್ರುತಿ ಕಪಾಡಿಯಾ ಮತ್ತು ಕುನಾಲ್ ತಿವಾರಿ ಅವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ನ್ಯಾಯಾಲಯ ವಿಚಾರಣೆ ನಡೆಸಿತು.
ಕೇರಳ ಮತ್ತು ಜಮ್ಮು ಕಾಶ್ಮೀರದಂತಹ ಪ್ರತ್ಯೇಕ ರಾಜ್ಯಗಳು ಮನೆ ಬಾಗಿಲಿಗೆ ತೆರಳಿ ಲಸಿಕೆಯನ್ನು ನೀಡುತ್ತಿರುವಾಗ ಒಕ್ಕೂಟ ಸರ್ಕಾರ ಮಾತ್ರ ಮನೆ ಬಾಗಿಲಿಗೆ ತೆರಳಿ ಲಸಿಕೆ ಹಾಕಲು ಸಾಧ್ಯವಿಲ್ಲ ಎಂದು ಹೇಗೆ ಹೇಳುತ್ತದೆ ಎಂದು ನ್ಯಾಯಾಲಯ ಕೇಳಿದೆ.
“ಕೇರಳ ಮತ್ತು ಜಮ್ಮು ಕಾಶ್ಮೀರದಂತಹ ಪ್ರತ್ಯೇಕ ರಾಜ್ಯಗಳು ಮನೆ ಬಾಗಿಲಿಗೆ ತೆರಳಿ ಚುಚ್ಚುಮದ್ದನ್ನು ಯಶಸ್ವಿಯಾಗಿ ನೀಡುತ್ತಿರುವುದು ಹೇಗೆ? ಕೇರಳ ಮತ್ತು ಜಮ್ಮು ಕಾಶ್ಮೀರ ಮಾದರಿಯ ಬಗ್ಗೆ ಕೇಂದ್ರದ ಅಭಿಪ್ರಾಯವೇನು?” ನ್ಯಾಯಪೀಠ ಪ್ರಶ್ನಿಸಿದೆ.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಇದು ಕೊರೊನಾ ಲಸಿಕೆ ಪಡೆದ ವ್ಯಕ್ತಿಯ ಶ್ವಾಸಕೋಶದ ಸಿಟಿ ಸ್ಕ್ಯಾನ್ ಚಿತ್ರವಲ್ಲ
“ಒಕ್ಕೂಟ ಸರ್ಕಾರದ ಸಮಸ್ಯೆ ಏನೆಂದು ನಮಗೆ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನೀವು ಈ ರಾಜ್ಯಗಳೊಂದಿಗೆ ಏಕೆ ಸಂವಹನ ನಡೆಸಬಾರದು. ಇದೇ ರೀತಿ ಲಸಿಕೆ ನೀಡಲು ನೀವು ಇತರ ರಾಜ್ಯಗಳಿಗೂ ಮನವಿ ಮಾಡಿದರೆ, ಅಲ್ಲಿ ಕೂಡ ಹಾಗೆಯೆ ಮಾಡಬಹುದು” ಎಂದು ನ್ಯಾಯಾಲಯ ಹೇಳಿದ್ದು, ಒಕ್ಕೂಟ ಸರ್ಕಾರಕ್ಕೆ “ಉತ್ತಮ ನಿರ್ಧಾರ” ತೆಗೆದುಕೊಳ್ಳಲು ಕೇಳಿದೆ.
ಸಾಂಕ್ರಾಮಿಕ ಸಮಯದಲ್ಲಿ ಮುಂಬೈ ಕಾರ್ಪೋರೇಷನ್(BMC) ಉತ್ತಮ ಕೆಲಸ ಮಾಡಲಾಗುತ್ತಿರುವುದು ತುಂಬಾ ಖುಷಿಕೊಟ್ಟಿದೆ ಎಂದು ನ್ಯಾಯಾಲಯ ಹೇಳಿದ್ದು, ಮನೆ ಬಾಗಿಲಿಗೆ ತೆರಳಿ ಲಸಿಕೆ ಹಾಕಲು BMC ಯಾಕೆ ಹಿಂಜರಿಯುತ್ತಿದೆ ಎಂದು ಪ್ರಶ್ನಿಸಿದೆ.
ನ್ಯಾಯಾಲಯದ ಪ್ರಶ್ನೆಗೆ ಉತ್ತರಿಸಿದ BMC ಸಲಹೆಗಾರರಾದ ಸಖ್ರೆ ಅವರು, BMC ಆಯುಕ್ತ ಇಕ್ಬಾಲ್ ಚಾಹಲ್ ಅವರು ಕೇಂದ್ರಕ್ಕೆ ಬರೆದ ಪತ್ರದ ಬಗ್ಗೆ ಗಮನಸೆಳೆದು, “BMC ಮನೆ ಬಾಗಿಲಿಗೆ ಲಸಿಕೆ ನೀಡಲು ಸಿದ್ಧವಿದೆ. ಇದಕ್ಕಾಗಿ ಮಾರ್ಗಸೂಚಿಗಳನ್ನು ನೀಡುವಂತೆ ಒಕ್ಕೂಟ ಸರ್ಕಾರವನ್ನು ಕೋರಿದೆ” ಎಂದು ಹೇಳಿದ್ದಾರೆ.
ಈ ಪತ್ರದ ಕುರಿತು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಆರೋಗ್ಯ ಕಾರ್ಯದರ್ಶಿಯ ಸೂಚನೆಗಳನ್ನು ತೆಗೆದುಕೊಳ್ಳುವಂತೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್ ಅವರಿಗೆ ನ್ಯಾಯಪೀಠ ನಿರ್ದೇಶನ ನೀಡಿದೆ.
ಇದನ್ನೂ ಓದಿ: ನೋಟು ಅಮಾನ್ಯೀಕರಣದಿಂದ ತೆರಿಗೆ ಸಂಗ್ರಹ ಹೆಚ್ಚಳ- ನಿರ್ಮಲ ಸೀತಾರಾಮನ್


