ಭೂ ಕಬಳಿಕೆ ಆರೋಪದ ಮೇಲೆ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ರಾಜ್ಯ ಸಚಿವ ಸಂಪುಟದಿಂದ ಕೈಬಿಡಲಾಗಿದ್ದ ಮಾಜಿ ಸಚಿವ ಈಟೆಲಾ ರಾಜೇಂದರ್ ಸೋಮವಾರ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಮೇದಕ್ ಜಿಲ್ಲೆಯಲ್ಲಿ ಭೂ ಕಬಳಿಕೆ ಆರೋಪದ ಮೇಲೆ ಮೇ 1 ರಂದು ಈಟೆಲಾ ರಾಜೇಂದರ್ ಅವರನ್ನು ಮಂತ್ರಿಮಂಡಲದಿಂದ ವಜಾ ಮಾಡಿ ಕೈಬಿಡಲಾಗಿತ್ತು.
ಮಾಜಿ ಟಿಆರ್‌ಎಸ್ ನಾಯಕ ಈಟೆಲಾ ರಾಜೇಂದರ್, ಪಕ್ಷದ ಇತರ ಆರು ನಾಯಕರೊಂದಿಗೆ ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್, ಜಿ.ಕಿಶನ್ ರೆಡ್ಡಿ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ದುಶ್ಯಂತ್ ಗೌತಮ್ ಮತ್ತು ತರುಣ್ ಚುಗ್ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರಿದ್ದಾರೆ.
ಇದನ್ನೂ ಓದಿ: ತೆಲಂಗಾಣ: 40,000 ಕೋಟಿ ಸಾಲವಿದ್ದರೂ ಅಧಿಕಾರಿಗಳಿಗೆ ಐಷಾರಾಮಿ ಕಾರು ನೀಡಿದ ಸರ್ಕಾರ
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನ್, ಮುಂದಿನ ವಿಧಾನಸಭಾ ಚುನಾವಣೆಯ ನಂತರ ತೆಲಂಗಾಣದಲ್ಲಿ ಸರ್ಕಾರ ರಚಿಸಲು ಬಿಜೆಪಿ ಸಜ್ಜಾಗಿದೆ ಎಂದಿದ್ದಾರೆ.
ಮಾಜಿ ಸಚಿವ ರಾಜೇಂದರ್ ಕಳೆದ ವಾರ ತಮ್ಮ ವಿಧಾನಸಭಾ ಕ್ಷೇತ್ರವಾದ ಹುಜುರಾಬಾದ್‌ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಾಲ್ಕು ಬಾರಿ ಶಾಸಕರಾಗಿರುವ ಅವರು ತಮ್ಮ ವಿರುದ್ಧದ ಆರೋಪಗಳು ಸುಳ್ಳು ಎಂದಿದ್ದಾರೆ. ಆರೋಪದ ಬಗ್ಗೆ ವಿವರಣೆಯನ್ನು ನೀಡಲು ಅವಕಾಶ ನೀಡದೆ ತಮ್ಮನ್ನು ತಮ್ಮ ಸ್ಥಾನದಿಂದ ತೆಗೆದುಹಾಕಲಾಗಿದೆ ಎಂದು ಆರೋಪಿಸಿದ್ದಾರೆ. ಈ ಎಲ್ಲಾ ಆರೋಪಗಳು ಅನಾಮಧೇಯ ದೂರುಗಳನ್ನು ಆಧರಿಸಿವೆ ಎಂದು ಹೇಳಿಕೊಂಡಿದ್ದಾರೆ.
ತೆಲಂಗಾಣದ ಮೆದಕ್ ಜಿಲ್ಲೆಯ ಅಚಂಪೆಟಾ ಮತ್ತು ಹಕಿಂಪೇಟೆ ಗ್ರಾಮಗಳಲ್ಲಿ ನಡೆದ ಭೂ ಕಬಳಿಕೆ ಕುರಿತು ತನಿಖೆ ನಡೆಸಲು ತೆಲಂಗಾಣ ಸರ್ಕಾರ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಮತ್ತು ವಿಜಿಲೆನ್ಸ್ (Vigilance) ಇಲಾಖೆಗೆ ಆದೇಶಿಸಿದೆ.
ಇದನ್ನೂ ಓದಿ: ಪ್ರಧಾನಿಯಿಂದ ಸಚಿವರ ಮೌಲ್ಯ ಮಾಪನ : ಸಹೋದ್ಯೋಗಿಗಳ ಕಾರ್ಯವೈಖರಿಗೆ ಮೋದಿ ಅಸಮಾಧಾನ


