ಕನ್ನಡ ಪುಸ್ತಕ ಪ್ರಾಧಿಕಾರದ 2020ನೇ ಸಾಲಿನ ವಿವಿಧ ವಾರ್ಷಿಕ ಪ್ರಶಸ್ತಿ ಪ್ರಕಟವಾಗಿದೆ. 10 ವರ್ಷಗಳಿಂದ ಕನ್ನಡಕ್ಕಾಗಿ ಸೇವೆ ಸಲ್ಲಿಸುತ್ತಿದ್ದ, ಕನ್ನಡಕ್ಕಾಗಿ ಗ್ರಂಥಾಲಯವನ್ನು ಕಟ್ಟಿದ್ದ ಪುಸ್ತಕ ಪ್ರೇಮಿ ಮೈಸೂರಿನ ರಾಜೀವ್ ನಗರದ ಸೈಯದ್ ಇಸಾಕ್ ಅವರಿಗೆ ಡಾ. ಜಿ.ಪಿ ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿ ಲಭಿಸಿದೆ.
ಇತ್ತೀಚೆಗೆ ಸೈಯದ್ ಇಸಾಕ್ ಅವರ ಸಾರ್ವಜನಿಕ ಗ್ರಂಥಾಲಯ ಬೆಂಕಿಗಾಹುತಿಯಾಗಿತ್ತು. ಇವರ ಸೇವೆಯನ್ನು ಗಮನಿಸಿ, ಡಾ. ಜಿ.ಪಿ ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿ ನೀಡಲಾಗಿದೆ. ಈ ಪ್ರಶಸ್ತಿ 50 ಸಾವಿರ ರೂಪಾಯಿ ನಗದು ಮತ್ತು ಪ್ರಶಸ್ತಿ ಫಲಕ ಒಳಗೊಂಡಿರುತ್ತದೆ.
ಇದರೊಂದಿಗೆ 75 ಸಾವಿರ ನಗದು ಬಹುಮಾನವಿರುವ ಡಾ. ಎಂ.ಎಂ ಕಲಬುರ್ಗಿ ಮಾನವಿಕ ಅಧ್ಯಯನ ಪ್ರಶಸ್ತಿಗೆ, ಹಿರಿಯ ಸಾಹಿತಿ, ಸಂಶೋಧಕ ಡಾ. ಟಿ.ವಿ. ವೆಂಕಟಾಚಲ ಶಾಸ್ತ್ರೀ ಅವರನ್ನು ಆಯ್ಕೆ ಮಾಡಲಾಗಿದೆ.
ಇದನ್ನೂ ಓದಿ: ಪಠ್ಯಕ್ರಮ ನಿರ್ಧರಿಸಲಿರುವ ಕೇಂದ್ರ: ಒಕ್ಕೂಟ ಕಲ್ಪನೆಗೇ ಅನ್ಯಾಯ ಎಂದ ಶಿಕ್ಷಣ ತಜ್ಞರು
ಶುಕ್ರವಾರ (ಜುಲೈ 2)ರಂದು ನಿಧನರಾದ ಡಿಆರ್‌ಡಿಒ ಮಾಜಿ ವಿಜ್ಞಾನಿ, ಪ್ರಸಿದ್ಧ ವಿಜ್ಞಾನ ಅಂಕಣಕಾರ ಸುಧೀಂದ್ರ ಹಾಲ್ದೊಡ್ಡೇರಿ ಅವರಿಗೆ ಅನುಪಮ ನಿರಂಜನ ವೈದ್ಯಕೀಯ ಹಾಗೂ ವಿಜ್ಞಾನ ಸಾಹಿತ್ಯ ಪುರಸ್ಕಾರ ಲಭಿಸಿದೆ. ಇದು 25 ಸಾವಿರ ನಗದು ಮತ್ತು ಪ್ರಶಸ್ತಿ ಫಲಕ ಒಳಗೊಂಡಿರುತ್ತದೆ.
ಪುಸ್ತಕ ಪ್ರಾಧಿಕಾರ ನೀಡುವ ಅತ್ಯುತ್ತಮ ಪ್ರಕಾಶನ ಪ್ರಶಸ್ತಿಗೆ ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನ ಆಯ್ಕೆಯಾಗಿದೆ. ಅತ್ಯುತ್ತಮ ಪ್ರಕಾಶನ ಪ್ರಶಸ್ತಿ ರೂ. 1 ಲಕ್ಷ ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿರುತ್ತದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಎಂ.ಎನ್. ನಂದೀಶ್ ಹಂಚೆ ತಿಳಿಸಿದ್ದಾರೆ.
ಇದನ್ನೂ ಓದಿ: ನನ್ನ ತಪ್ಪಿನಿಂದ ರಾಹುಲ್ ಗಾಂಧಿ ಕೆಟ್ಟ ರೀತಿಯ ಟ್ರೋಲ್‌ಗೆ ಒಳಗಾದರು- ನಟಿ ರಮ್ಯಾ


