ಹಿರಿಯ ಪತ್ರಕರ್ತ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಮಾಧ್ಯಮ ಸಲಹೆಗಾರ ಕೆ.ಸಿ. ಸದಾನಂದ ಅವರು ಹೃದಯಾಘಾತದಿಂದ ಮಂಗಳವಾರ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.
ಸೋಮವಾರ ರಾತ್ರಿ ತೀವ್ರ ಹೃದಯಾಘಾತಕ್ಕೆ ಒಳಗಾದ ಅವರನ್ನು ತಕ್ಷಣ ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ, ರಾತ್ರಿ ಹನ್ನೆರಡು ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ಪತ್ನಿ ಮತ್ತು ಪುತ್ರನನ್ನು ಅಗಲಿದ್ದಾರೆ.
ಸದಾನಂದ ಅವರ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಂತಾಪ ವ್ಯಕ್ತಪಡಿಸಿದ್ದಾರೆ. “ದೀರ್ಘ ಕಾಲದ ನನ್ನ ಒಡನಾಡಿ, ಹಿರಿಯ ಪತ್ರಕರ್ತ, ಮಾಧ್ಯಮ ಕಾರ್ಯದರ್ಶಿಯೂ ಆಗಿದ್ದ ಕೆ.ಸಿ. ಸದಾನಂದ ನಿಧನರಾಗಿದ್ದಾರೆ. ಅವರ ಅಗಲಿಕೆ ನನ್ನನ್ನು ನೋವಿಗೆ ತಳ್ಳಿದೆ. ಎಂಥ ಆಮಿಷಗಳಿಗೂ ಜಗ್ಗದ ಸದಾನಂದ ಕರ್ತವ್ಯನಿಷ್ಠೆ, ಸ್ವಾಮಿನಿಷ್ಠೆಯನ್ನೂ ಪ್ರದರ್ಶಿಸಿದ್ದರು. ಅವರ ಕುಟುಂಬದ ನೋವು ನನ್ನದೂ ಕೂಡ. ನೀವು ನಿರ್ಗಮಿಸಿದರೂ ‘ಸದಾ’ ನೆನಪಲ್ಲಿರುತ್ತೀರಿ” ಎಂದು ಟ್ವೀಟ್ ಮಾಡಿದ್ದಾರೆ.
ದೀರ್ಘ ಕಾಲದ ನನ್ನ ಒಡನಾಡಿ, ಹಿರಿಯ ಪತ್ರಕರ್ತ, ಮಾಧ್ಯಮ ಕಾರ್ಯದರ್ಶಿಯೂ ಆಗಿದ್ದ ಕೆ.ಸಿ. ಸದಾನಂದ ನಿಧನರಾಗಿದ್ದಾರೆ. ಅವರ ಅಗಲಿಕೆ ನನ್ನನ್ನು ನೋವಿಗೆ ತಳ್ಳಿದೆ. ಎಂಥ ಆಮಿಷಗಳಿಗೂ ಜಗ್ಗದ ಸದಾನಂದ ಕರ್ತವ್ಯನಿಷ್ಠೆ, ಸ್ವಾಮಿನಿಷ್ಠೆಯನ್ನೂ ಪ್ರದರ್ಶಿಸಿದ್ದರು. ಅವರ ಕುಟುಂಬದ ನೋವು ನನ್ನದೂ ಕೂಡ. ನೀವು ನಿರ್ಗಮಿಸಿದರೂ ‘ಸದಾ’ ನೆನಪಲ್ಲಿರುತ್ತೀರಿ. pic.twitter.com/oIbjje0S8c
— H D Kumaraswamy (@hd_kumaraswamy) July 6, 2021
ಸೋಶಿಯಲ್ ಮೀಡಿಯಾದಲ್ಲಿ ಸದಾ ಕ್ರಿಯಾಶೀಲರಾಗಿದ್ದ ಚನ್ನಪಟ್ಟಣದ ಸದಾನಂದ ಅವರು, ಸಂಜೆವಾಣಿ, ಈ ಸಂಜೆ, ಕನ್ನಡಪ್ರಭ ಸೇರಿದಂತೆ ಹಲವು ಪತ್ರಿಕೆಯಲ್ಲಿ ಕೆಲಸ ಮಾಡಿದ್ದರು. ಬೆಂಗಳೂರು ವರದಿಗಾರರ ಕೂಟದ ಪ್ರಧಾನ ಕಾರ್ಯದರ್ಶಿಯಾಗಿ ಸಹ ಕಾರ್ಯ ನಿರ್ವಹಿಸಿದ್ದರು. ಸದಾನಂದ ಅವರ ನಿಧನಕ್ಕೆ ಬೆಂಗಳೂರು ವರದಿಗಾರರ ಕೂಟ ಸಂತಾಪ ಸೂಚಿಸಿದೆ.
ಇದನ್ನೂ ಓದಿ: ಜಿಎಸ್‌ಟಿ ವಿಚಾರದಲ್ಲಿ ರಾಜ್ಯಗಳನ್ನು ವಂಚಿಸಿದ್ದಕ್ಕೆ ಸಂಭ್ರಮಿಸಬೇಕೆ?: ಕುಮಾರಸ್ವಾಮಿ ಆಕ್ರೋಶ


