ರಾಜಕೀಯ ಪಕ್ಷ ಕಟ್ಟುತ್ತೇನೆ ಎಂದು ಸಂಚಲನ ಸೃಷ್ಟಿಸಿದ್ದ ಸೂಪರ್‌ಸ್ಟಾರ್ ರಜನಿಕಾಂತ್ ಅನಾರೋಗ್ಯದ ಕಾರಣ ರಾಜಕೀಯಕ್ಕೆ ಪ್ರವೇಶಿಸುವುದಿಲ್ಲ, ಪಕ್ಷ ಪ್ರಾರಂಭಿಸುವುದಿಲ್ಲ ಎಂದು ಉಲ್ಟಾ ಹೊಡೆದಿದ್ದರು. ಈಗ ಮತ್ತೆ ತಮ್ಮ ರಜನಿಕಾಂತ್ ಮಕ್ಕಲ್ ಮಂದ್ರಂ (RMM) ಪದಾಧಿಕಾರಿಗಳೊಂದಿಗೆ ಚರ್ಚಿಸಿದ ನಂತರ ರಾಜಕೀಯಕ್ಕೆ ಪ್ರವೇಶಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದಾಗಿ ಸೋಮವಾರ ಹೇಳಿದ್ದಾರೆ.
ಏಳು ತಿಂಗಳ ಹಿಂದೆ ತಾವು ರಾಜಕೀಯ ಪಕ್ಷ ಸ್ಥಾಪಿಸುವುದಿಲ್ಲ ಎಂದು ಅಧಿಕೃತವಾಗಿ ಹೇಳಿ, ಚುನಾವಣಾ ರಾಜಕೀಯ ಮಾಡದೇ ಜನರ ಸೇವೆ ಮಾಡುತ್ತೇನೆ ಎಂದು ರಜನಿಕಾಂತ್ ಹೇಳಿದ್ದರು. ಇದಕ್ಕೆ ಅನಾರೋಗ್ಯ ಕೂಡ ಕಾರಣ ಎನ್ನಲಾಗಿತ್ತು. ಈ ಆರೋಗ್ಯ ಚೇತರಿಸಿಕೊಂಡಿರುವ ನಟ ಮತ್ತೆ ರಾಜಕೀಯ ಪ್ರವೇಶದ ಬಗ್ಗೆ ಹೇಳಿಕೆ ನೀಡಿದ್ದಾರೆ.
ಆರ್‌ಎಂಎಂನ ಪದಾಧಿಕಾರಿಗಳೊಂದಿಗಿನ ಭೇಟಿಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ನಟ ರಜನಿಕಾಂತ್, “ವೇದಿಕೆ ಮುಂದುವರಿಯಬೇಕೇ ಅಥವಾ ಬೇಡವೇ, ಇನ್ನು ಮುಂದೆ ಈ ವೇದಿಕೆಯ ಕರ್ತವ್ಯಗಳೇನು ಎಂಬ ಪ್ರಶ್ನೆಗಳಿವೆ. ಭವಿಷ್ಯದಲ್ಲಿ ನಾನು ರಾಜಕೀಯಕ್ಕೆ ಪ್ರವೇಶಿಸುತ್ತೇನೆಯೇ ಅಥವಾ ಇಲ್ಲವೇ ಎಂಬ ಪ್ರಶ್ನೆ ಆರ್‌ಎಂಎಂನ ಪದಾಧಿಕಾರಿಗಳು ಮತ್ತು ನನ್ನ ಅಭಿಮಾನಿಗಳ ಮನಸ್ಸಿನಲ್ಲಿದೆ. ಈ ವಿಷಯಗಳ ಬಗ್ಗೆ ವೇದಿಕೆಯ ಪದಾಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪ್ರಶಸ್ತಿ ಮತ್ತು ಪ್ರಭುತ್ವ; ಸೂಪರ್ ಸ್ಟಾರ್ ರಜನಿಕಾಂತ್‌ಗೆ ’ದಾದಾಸಾಹೇಬ್ ಫಾಲ್ಕೆ’ ಪ್ರಶಸ್ತಿ
ಅನ್ನಾಥೆ ಚಿತ್ರದ ಶೂಟಿಂಗ್ ವಿಳಂಬವಾದಾಗಿನಿಂದ ಸ್ವಲ್ಪ ಸಮಯದವರೆಗೆ ಆರ್‌ಎಂಎಂನ ಪದಾಧಿಕಾರಿಗಳನ್ನು ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಕೊರೊನಾವೈರಸ್ನಿಂದಾಗಿ ಸಭೆಯನ್ನು ಮುಂದೂಡಿದೆ ಎಂದಿದ್ದಾರೆ.
ಅನಾರೋಗ್ಯದಿಂದಾಗಿ ವೈದ್ಯಕೀಯ ತಪಾಸಣೆಗಾಗಿ ಅಮೆರಿಕಾಗೆ ತೆರಳಿದ್ದ ನಟ ಕೆಲವು ದಿನಗಳ ಹಿಂದೆ ಮನೆಗೆ ಮರಳಿದ್ದರು.
ಈ ಹಿಂದೆ ರಜನಿಕಾಂತ್ ಕಳೆದ ಜನವರಿಯಲ್ಲಿ ತಮ್ಮ ಹೊಸ ಪಕ್ಷವನ್ನು ಆರಂಭಿಸುವುದಾಗಿ ಅಧಿಕೃತ ಘೋಷಣೆ ಮಾಡಿದ್ದರು. ಪಕ್ಷ ಆರಂಭದ ವಿಚಾರಕ್ಕೆ ಸಂಬಂಧಿಸಿದ ವಿಚಾರಗಳನ್ನು ಡಿಸೆಂಬರ್ 31 ರಂದು ತಿಳಿಸಲಾಗುವುದು ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ದೃಢಪಡಿಸಿದ್ದರು. ಆದರೆ, ಡಿಸೆಂಬರ್ 29 ರಂದು ಟ್ವೀಟ್ ಮಾಡಿದ್ದ ನಟ, “ನನ್ನ ಆರೋಗ್ಯದಲ್ಲಾದ ಏರುಪೇರಿನಿಂದ ಮತ್ತು ಕೊರೊನಾ ಸೋಂಕಿನ ಕಾರಣದಿಂದ ಪಕ್ಷ ಸ್ಥಾಪನೆಯ ವಿಚಾರವನ್ನು ಕೈಬಿಟ್ಟಿದ್ದೇನೆ. ಇದು ನನ್ನ ಮೇಲೆ ಭರವಸೆಯಿಟ್ಟಿದ್ದ ಅಭಿಮಾನಿಗಳಿಗೆ ನಿರಾಸೆಯನ್ನುಂಟುಮಾಡುತ್ತದೆ ಎಂಬುದು ನನಗೆ ತಿಳಿದಿದೆ” ಎಂದಿದ್ದರು.
ಇದನ್ನೂ ಓದಿ: ರಾಜಕೀಯ ಪಕ್ಷ ಸ್ಥಾಪಿಸುವುದಿಲ್ಲ: ಉಲ್ಟಾ ಹೊಡೆದ ರಜನಿಕಾಂತ್


