ರಾಜ್ಯದಲ್ಲಿ ಶೀಘ್ರವೇ ಎಲೆಕ್ಟ್ರಿಕ್ ಬೈಕ್ (ಇ-ಬೈಕ್) ಟ್ಯಾಕ್ಸಿ ಸೇವೆಗಳು ಪ್ರಾರಂಭವಾಗಿಲಿದ್ದು, ಸಾರಿಗೆ ಇಲಾಖೆಯು ಅದರ ಕಾರ್ಯಾಚರಣೆಗೆ ಅನುಮೋದನೆ ನೀಡಲಿದೆ. ಆದರೆ ಇದಕ್ಕೆ ‘ನಮ್ಮ ಚಾಲಕರ ಟ್ರೇಡ್ ಯುನಿಯನ್(NCTU)’ ಆಕ್ಷೇಪ ವ್ಯಕ್ತಪಡಿಸಿದ್ದು, ಸರ್ಕಾರವು ಒಂದು ಅಥವಾ ಎರಡು ಸಂಸ್ಥೆಗಳ ಅನುಕೂಲಕ್ಕಾಗಿ ಇ-ಬೈಕ್ ಟ್ಯಾಕ್ಸಿ ಜಾರಿಗೆ ತರುವ ಮೂಲಕ ಲಕ್ಷಾಂತರ ಚಾಲಕರ ಜೀವನಕ್ಕೆ ಕೊಳ್ಳಿ ಇಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ. ಅಷ್ಟೇ ಅಲ್ಲದೆ ಬೈಕ್ ಟ್ಯಾಕ್ಸಿ ಚಾಲನೆಗೆ ಬಂದರೆ ಆಟೋ ಕ್ಯಾಬ್ ಹಾಗೂ ಬಿಎಂಟಿಸಿಗೆ ಹೊಡೆತ ಬೀಳುತ್ತದೆ ಎಂದು ಅದು ಹೇಳಿದೆ.
ಇ-ಬೈಕ್ ಟ್ಯಾಕ್ಸಿ ಪ್ರಾರಂಭವಾದರೆ ಚಾಲಕ ವೃತ್ತಿಯನ್ನೇ ನಂಬಿ ಸುಮಾರು ನಲವತ್ತು ವರ್ಷಗಳಿಂದ ದುಡಿಯುತ್ತಿರುವ ಹಿರಿಯ ಆಟೋ ಚಾಲಕರ ಪರಿಸ್ಥಿತಿ ಹೀನಾಯವಾಗುತ್ತದೆ. ಈಗಾಗಲೆ ಹಳ್ಳಿಗಳಲ್ಲಿ ಅಲ್ಪಸ್ವಲ್ಪ ಉಳಿದಂತಹ ಜಮಿನುಗಳನ್ನು, ಮನೆಗಳನ್ನು, ಮನೆಯ ಆಭರಣಗಳನ್ನು ಮಾರಿ ಅಥವಾ ಅಡ ಇಟ್ಟು ಸಾಲ ಮಾಡಿ ಕ್ಯಾಬ್ ಆಟೋ ಖರೀದಿ ಮಾಡಿ ಜೀವನ ನಡೆಸುತ್ತಿರುವವರ ಪರಿಸ್ಥಿತಿ ಏನಾಗಬಹುದು ಎಂದು ಯುನಿಯನ್ ಪ್ರಶ್ನಿಸಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಶೀಘ್ರದಲ್ಲೇ ‘ಇ-ಬೈಕ್ ಟ್ಯಾಕ್ಸಿ’ ಸೇವೆ ಪ್ರಾರಂಭ!
“ಚಾಲಕರು ಸುಮಾರು ಒಂದೂವರೆ ವರ್ಷಗಳಿಂದ ದುಡಿಮೆಯಿಲ್ಲದೆ EMI, ಇನ್ಶೂರೆನ್ಸ್ ,ಟ್ಯಾಕ್ಸ್ ಅನ್ನು ಕಟ್ಟಿದ್ದಾರೆ. ಕೋವಿಡ್ 1ನೇ ಅಲೆಯ ಸಮಯದಲ್ಲಿ ಮಾತ್ರ ಕೇವಲ 3 ತಿಂಗಳ EMI ಅನ್ನು ಮುಂದೂಡಲಾಗಿತ್ತು. ಆದರೆ ಅದರ ಬಡ್ಡಿಯನ್ನು ಸಹ ಕಡಿಮೆ ಮಾಡಿರಲಿಲ್ಲ. ಚಾಲಕರು ಕೊರೊನಾದಿಂದಾಗಿ ಕಂಗೆಟ್ಟು ಸುಮಾರು 2 ವರ್ಷಗಳಿಂದ ಸರಿಯಾದ ದುಡಿಮೆಯಿಲ್ಲದೆ ಸಾಲ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಇದೀಗ ಇ-ಬೈಕ್ ಟ್ಯಾಕ್ಸಿಯಿಂದ ಅವರ ಜೀವನ ಮತ್ತಷ್ಟು ಹದಗೆಡುತ್ತದೆ” ಎಂದು ಯುನಿಯನ್ ಆತಂಕ ವ್ಯಕ್ತಪಡಿಸಿದೆ.
“ಖಾಸಗಿ ಫೈನಾನ್ಸ್‌ನವರು ಚಾಲಕರಿಗೆ ಹಿಂಸೆ ನೀಡುತ್ತಾ ದಬ್ಬಾಳಿಕೆ ಮಾಡಿ EMI ವಸೂಲಿ ಮಾಡುತ್ತಿರುವುದನ್ನು ಅನೇಕ ಬಾರಿ ಸರಕಾರದ ಗಮನಕ್ಕೆ ತಂದಿದ್ದೆವು. ಆದರೂ ಸಹ ಅವರ ವಿರುದ್ಧ ಕ್ರಮ ಜರುಗಿಸದೇ ಇದ್ದುದರಿಂದ ಅನೇಕ ಚಾಲಕರು ಆತ್ಮಹತ್ಯೆಯ ದಾರಿ ಹಿಡಿದು ಅವರ ಕುಟುಂಬ ಸದಸ್ಯರು ಬೀದಿ ಪಾಲಾಗುವಂತಾಗಿದೆ. ಇದಕ್ಕೆಲ್ಲಾ ಈ ಸರ್ಕಾರವೇ ಹೊಣೆ. ಇದೀಗ ಒಂದು ಅಥವಾ ಎರಡು ಸಂಸ್ಥೆಗಳ ಅನುಕೂಲಕ್ಕಾಗಿ ಇ-ಬೈಕ್ ಟ್ಯಾಕ್ಸಿ ತರುವ ಮೂಲಕ ಲಕ್ಷಾಂತರ ಚಾಲಕರ ಜೀವನಕ್ಕೆ ಕೊಳ್ಳಿ ಇಡುವಂತಾಗಿದೆ” ಎಂದು ಯುನಿಯನ್ ಆಕ್ರೋಶ ವ್ಯಕ್ತಪಡಿಸಿದೆ.
ಇದನ್ನೂ ಓದಿ: ಸುದ್ದಿಯೇನೇ ಮನೋಲ್ಲಾಸಿನಿ; ಮಾಧ್ಯಮ ನಲ್ಲರು – ರಾಜಧಾನಿ ಎಂಬ ಮಾಯಾಮೋಹಿನಿ
ರಾಜ್ಯದಲ್ಲಿ ಶೀಘ್ರವೇ ಎಲೆಕ್ಟ್ರಿಕ್ ಬೈಕ್ (ಇ-ಬೈಕ್) ಟ್ಯಾಕ್ಸಿ ಸೇವೆಗಳು ಪ್ರಾರಂಭವಾಗಿಲಿದ್ದು, ಸಾರಿಗೆ ಇಲಾಖೆಯು ಅದರ ಕಾರ್ಯಾಚರಣೆಗೆ ಅನುಮೋದನೆ ನೀಡಲಿದೆ. ಅಧಿಕಾರಿಗಳ ಪ್ರಕಾರ, ಇ-ಬೈಕನ್ನು ಟ್ಯಾಕ್ಸಿಯಾಗಿ ನೋಂದಾಯಿಸಲು ವ್ಯಕ್ತಿಗಳಿಗೆ ಅವಕಾಶ ನೀಡಲು ಸರ್ಕಾರ ನಿರ್ಧರಿಸಿದೆ. ಇದರಂತೆ ವೈಯಕ್ತಿಕವಾಗಿ ಅಥವಾ ಒಂದು ಸಂಸ್ಥೆಯಾಗಿ ರಿಜಿಸ್ಟರ್ ಮಾಡಿ ಈ ಸೇವೆಯನ್ನು ನೀಡಬಹುದಾಗಿದೆ.
ಇ-ಬೈಕ್ ಟ್ಯಾಕ್ಸಿಗಳು ಆರಂಭದಲ್ಲಿ ಬೆಂಗಳೂರಿನಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸುತ್ತವೆ ಮತ್ತು ನಂತರ ರಾಜ್ಯದಾದ್ಯಂತ ಇತರ ನಗರ ಕೇಂದ್ರಗಳಿಗೆ ವಿಸ್ತರಿಸಲಾಗುವುದು ಎಂದು ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿತ್ತು.
ಇದನ್ನೂ ಓದಿ: ಟಿಎಸ್‌ಆರ್‌ಟಿಸಿ: ಸಂಜೆ 7: 30 ರ ನಂತರ ಮಹಿಳೆಯರು ಎಲ್ಲಾದರೂ ಬಸ್ಸು ಏರಬಹುದು!


