ದಿವಂಗತ ಫಾದರ್ ಸ್ಟಾನ್ ಸ್ವಾಮಿ, ಒಬ್ಬ ಅದ್ಭುತ ವ್ಯಕ್ತಿ ಅವರು ಮಾಡಿರುವ ಉತ್ತಮ ಕೆಲಸಗಳಿಂದಾಗಿ ಅವರ ಮೇಲೆ ನ್ಯಾಯಾಲಯವು ಹೆಚ್ಚಿನ ಗೌರವ ಹೊಂದಿದೆ ಎಂದು ಬಾಂಬೆ ಹೈಕೋರ್ಟ್ ತಿಳಿಸಿದೆ. ಎಲ್ಗರ್ ಪರಿಷತ್, ಭೀಮಾ ಕೋರೆಗಾಂವ್ ಪ್ರಕರಣದಲ್ಲಿ UAPA ಅಡಿಯಲ್ಲಿ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿಯೇ ಸ್ಟಾನ್ ಸ್ವಾಮಿ ಅವರು ಸಾವನ್ನಪ್ಪಿದ್ದಾರೆ.
ಫಾದರ್ ಸ್ಟಾನ್ ಸ್ವಾಮಿ ಸಲ್ಲಿಸಿದ್ದ ಮೇಲ್ಮನವಿಗಳನ್ನು ಮರಣೋತ್ತರವಾಗಿ ವಿಚಾರಣೆ ನಡೆಸುತ್ತಿರುವ ಬಾಂಬೆ ಹೈಕೋರ್ಟ್, ಸೋಮವಾರ ವಿಚಾರಣೆ ವೇಳೆ ಈ ಅಭಿಪ್ರಾಯ ಮಂಡಿಸಿದೆ.
ಜುಲೈ 5 ರಂದು ಸ್ಟಾನ್ ಸ್ವಾಮಿಯ ವೈದ್ಯಕೀಯ ಜಾಮೀನು ಅರ್ಜಿಯ ವಿಚಾರಣೆ ನಡೆಬೇಕಿದ್ದ ನ್ಯಾಯಮೂರ್ತಿಗಳಾದ ಎಸ್.ಎಸ್. ಶಿಂಧೆ ಮತ್ತು ಎನ್.ಜೆ.ಜಮದಾರ್ ಅವರ ನ್ಯಾಯಪೀಠ ಈ ಅಭಿಪ್ರಾಯ ನೀಡಿದೆ.
ಇದನ್ನೂ ಓದಿ: ‘ಸ್ಟಾನ್‌ಸ್ವಾಮಿಯದ್ದು ನಿಧನವಲ್ಲ; ಪ್ರಭುತ್ವ ಮುಂದೆ ನಿಂತು ಮಾಡಿಸಿದ ಕೊಲೆ’
” ಕಾನೂನುಬದ್ಧವಾಗಿ, ಸ್ಟಾನ್ ಸ್ವಾಮಿ ಅವರ ವಿರುದ್ಧ ಏನೇ ಇರಲಿ ಅದು ಬೇರೆ ವಿಷಯ. ಆದರೆ, ಅವರು ಅದ್ಭುತ ವ್ಯಕ್ತಿ. ಅವರು ಸಮಾಜಕ್ಕೆ ಸೇವೆ ಸಲ್ಲಿಸಿರುವ ರೀತಿಗೆ, ಅವರ ಕೆಲಸದ ಬಗ್ಗೆ ನಮಗೆ ಅಪಾರ ಗೌರವವಿದೆ” ಎಂದು ನ್ಯಾಯಮೂರ್ತಿ ಶಿಂಧೆ ಹೇಳಿದ್ದಾರೆ.
ಸ್ಟಾನ್ ಸ್ವಾಮಿ ಅವರ ಸಾವಿನ ನಂತರ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮತ್ತು ನ್ಯಾಯಾಂಗದ ವಿರುದ್ಧ ವ್ಯಕ್ತವಾಗಿರುವ ಆಕ್ರೋಶ, ಟೀಕೆಗಳನ್ನೂ ನ್ಯಾಯಪೀಠ ವಿಚಾರಣೆ ವೇಳೆ ಉಲ್ಲೇಖಿಸಿದೆ. ಜುಲೈ 23 ರಂದು ಹೈಕೋರ್ಟ್ ವಿಚಾರಣೆ ಮುಂದುವರೆಸಲಿದೆ.
ಕಳೆದ ಅಕ್ಟೋಬರ್‌ನಲ್ಲಿ ಎಲ್ಗರ್ ಪರಿಷತ್ ಪ್ರಕರಣಕ್ಕೆ (ಭೀಮಾ ಕೋರೆಗಾಂವ್) ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಫಾದರ್ ಸ್ಟಾನ್ ಸ್ವಾಮಿ ಅವರನ್ನು ಬಂಧಿಸಿತ್ತು. ಜುಲೈ 5 ರಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ನ್ಯಾಯಾಂಗ ಬಂಧನದಲ್ಲಿಯೇ ಅವರು ನಿಧನರಾದರು.
ಇದನ್ನೂ ಓದಿ: ‘ಸ್ಟಾನ್‌ಸ್ವಾಮಿಯದ್ದು ನಿಧನವಲ್ಲ; ಪ್ರಭುತ್ವ ಮುಂದೆ ನಿಂತು ಮಾಡಿಸಿದ ಕೊಲೆ’



ಸ್ಟಾನ್ ಸ್ವಾಮಿ ಅದ್ಭುತ ವ್ಯಕ್ತಿ! ನಿಜ ಆದರೆ, ಕೊಳ್ಳೆ ಹೋದ ಮೇಲೆ ದಡ್ಡಿ ಬಾಗಿಲು ಮುಚ್ಚುವ ಪ್ರಯತ್ನದಿಂದ ಏನು ಪ್ರಯೋಜನ?