ತೃಣಮೂಲ ಕಾಂಗ್ರೆಸ್ ಸಂಸದ ಅಭಿಷೇಕ್ ಬ್ಯಾನರ್ಜಿ ಮತ್ತು ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರ ಹೆಸರುಗಳು ಪೆಗಾಸಸ್ ಪ್ರಾಜೆಕ್ಟ್‌ನಲ್ಲಿ ಕೇಳಿ ಬಂದ ಹಿನ್ನೆಲೆ, ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಸರ್ಕಾರದ ವಿರುದ್ಧ ಟಿಎಂಸಿ ವಾಗ್ದಾಳಿ ನಡೆಸಿದೆ. “ಫೋನ್ ಹ್ಯಾಕಿಂಗ್” ಹೊರತಾಗಿಯೂ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಗೆಲ್ಲಲು ಸಾಧ್ಯವಾಗಲಿಲ್ಲ” ಎಂದು ತೃಣಮೂಲ ಕಾಂಗ್ರೆಸ್ ವ್ಯಂಗ್ಯವಾಡಿದೆ.
’ಪೆಗಾಸಸ್’ ತಂತ್ರಾಂಶವನ್ನು ಬಳಸಿಕೊಂಡು ಭಾರತದ ವಿರೋಧ ಪಕ್ಷಗಳ ನಾಯಕರು, ಪತ್ರಕರ್ತರು, ಸಚಿವರ ಫೋನ್ ಟ್ಯಾಪ್ ಮಾಡಲಾಗುತ್ತಿದೆ ಎಂದು ಪ್ಯಾರಿಸ್ ಮೂಲದ ಪಾರ್ಬಿಡನ್ ಸ್ಟೋರಿಸ್ ತನಿಖಾ ವರದಿ ಬಹಿರಂಗ ಪಡಿಸಿದೆ. ಇದರಲ್ಲಿ ಟಿಎಂಸಿ ಪಕ್ಷದ ಸಂಸದ ಅಭಿಷೇಕ್ ಬ್ಯಾನರ್ಜಿ ಮತ್ತು ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರ ಹೆಸರುಗಳು ಪಟ್ಟಿಯಲ್ಲಿವೆ.
ಇಸ್ರೇಲಿ ಕಂಪನಿ ಎನ್‌ಎಸ್‌ಒ ಗ್ರೂಪ್‌ನ ಪೆಗಾಸಸ್ ಗೂಢಚರ್ಯೆ ತಂತ್ರಾಂಶ ಬಳಸಿಕೊಂಡು ಪ್ರಸ್ತುತ ಸಂಪುಟದಲ್ಲಿರುವ ಇಬ್ಬರು ಮಂತ್ರಿಗಳು, 40 ಕ್ಕೂ ಹೆಚ್ಚು ಪತ್ರಕರ್ತರು, ಮೂವರು ವಿರೋಧ ಪಕ್ಷದ ನಾಯಕರು ಮತ್ತು ಒಬ್ಬ ನ್ಯಾಯಾಧೀಶರು, ಹಲವಾರು ಉದ್ಯಮಿಗಳು ಮತ್ತು ಹೋರಾಟಗಾರರು ಸೇರಿದಂತೆ 300 ಕ್ಕೂ ಹೆಚ್ಚು ಜನರ ಮೊಬೈಲ್ ಫೋನ್ ಸಂಖ್ಯೆಗಳನ್ನು ಹ್ಯಾಕ್ ಮಾಡಲಾಗಿದೆ ಎಂದು ಪ್ಯಾರಿಸ್ ಮೂಲದ ಫಾರ್ಬಿಡನ್ ಸ್ಟೋರೀಸ್ ಸಂಸ್ಥೆ ನಡೆಸಿದ ತನಿಖೆಯಿಂದ ಬಹಿರಂಗಗೊಂಡಿದೆ.
ಇದನ್ನೂ ಓದಿ: ನ್ಯಾ. ರಂಜನ್ ಗೊಗೊಯ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾಕೆಯ ಇಡೀ ಕುಟುಂಬದ ಮೇಲೆ ಪೆಗಾಸಸ್ ಕಣ್ಗಾವಲು!
ಭಾನುವಾರ ಪ್ರಕಟವಾದ ವರದಿಯ ಪ್ರಕಾರ, ಟಿಎಂಸಿಯ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರ ಫೋನ್ ನಂಬರ್ ಅನ್ನು ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಹ್ಯಾಕ್ ಮಾಡಲಾಗಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ಸೋದರಳಿಯ ಮತ್ತು ಟಿಎಂಸಿಯ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿಯಾಗಿರುವ ಅಭಿಷೇಕ್ ಬ್ಯಾನರ್ಜಿಯ ಮೊಬೈಲ್ ಸಂಖ್ಯೆಯನ್ನು ಹ್ಯಾಕ್ ಮಾಡಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಂಸದ ಅಭಿಷೇಕ್ ಬ್ಯಾನರ್ಜಿ, “ಸೋತವರಿಗಾಗಿ ಎರಡು ನಿಮಿಷಗಳ ಮೌನವಹಿಸಿ. ಇಡಿ, ಸಿಬಿಐ, ಎನ್ಐಎ, ಐಟಿ, ಇಸಿಐ, ಬಿಜೆಪಿಯ ಹಣ ಮತ್ತು ಶಕ್ತಿ ಇದರ ಜೊತೆಗೆ ಪೆಗಾಸಸ್ ಸ್ಪೈಯಿಂಗ್… ಇಷ್ಟಿದ್ದರೂ ಅಮಿತ್ ಶಾ ಅವರಂತಹವರು 2021ರ ಬಂಗಾಳ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಗಲಿಲ್ಲ. ದಯವಿಟ್ಟು 2024 ರಲ್ಲಿ ಮತ್ತಷ್ಟು ಉತ್ತಮ ಸಂಪನ್ಮೂಲಗಳೊಂದಿಗೆ ಸಿದ್ಧರಾಗಿ!” ಎಂದು ವ್ಯಂಗ್ಯವಾಡಿದ್ದಾರೆ.
Two Minutes of SILENCE for the SORE LOSERS!
Despite ALLIES like ED, CBI, NIA, IT, ECI , @BJP4India's money + might and #PegasusSpying Mr @AmitShah couldn't save his face in #BengalElections2021.
Please COME Prepared with Better RESOURCES in 2024!
— Abhishek Banerjee (@abhishekaitc) July 19, 2021
ಟಿಎಂಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕುನಾಲ್ ಘೋಷ್ ಬಿಜೆಪಿ ಭಯ ಮತ್ತು ಮನೋರೋಗದಿಂದ ಬಳಲುತ್ತಿದೆ ಎಂದು ಒಕ್ಕೂಟ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Explainer: ಏನಿದು ಪೆಗಾಸಸ್? ಹೇಗೆ ಫೋನ್ ಹ್ಯಾಕ್ ಮಾಡುತ್ತದೆ? ಅಪಾಯಗಳೇನು?


