ರಾಜ್ಯ ರಾಜಕಾರಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದ ಮುಖ್ಯಮಂತ್ರಿ ಬದಲಾವಣೆ ವಿಚಾರಕ್ಕೆ ಹೊಸ ತಿರುವು ಬಂದಿದ್ದು, ರಾಜೀನಾಮೆ ನೀಡುವ ಸೂಚನೆಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಾವೇ ನೀಡಿದ್ದಾರೆ.
ಗುರುವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೇ ಜುಲೈ 26ಕ್ಕೆ ನಮ್ಮ ಸರ್ಕಾರಕ್ಕೆ 2 ವರ್ಷ ತುಂಬುತ್ತದೆ. ಅಂದು ರಾಷ್ಟ್ರ ನಾಯಕರು ಏನು ಸೂಚನೆ ನೀಡುತ್ತಾರೋ ಅದರಂತೆ ನಡೆದುಕೊಳ್ಳುವೆ ಎಂದಿದ್ದಾರೆ.
“75 ವರ್ಷ ದಾಟಿದವರಿಗೆ ಈವರೆಗೆ ಬಿಜೆಪಿಯಲ್ಲಿ ಯಾವುದೇ ಸ್ಥಾನಮಾನ ಕೊಟ್ಟಿಲ್ಲ. ಆದರೆ ನನಗೆ ಕೊಟ್ಟಿದ್ದಾರೆ. ಇದೀಗ ರಾಷ್ಟ್ರೀಯ ನಾಯಕರು ಯಾವ ಕೆಲಸ ಕೊಡುತ್ತಾರೋ ನಾನು ಆ ಕೆಲಸ ನಡೆಸಿಕೊಂಡು ಹೋಗುತ್ತೇನೆ. ಹೈಕಮಾಂಡ್ ಹೇಳಿದಂತೆ ನಡೆದುಕೊಂಡು ಹೋಗುತ್ತೇನೆ. ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನವೇ ನನ್ನ ತೀರ್ಮಾನ. ಜುಲೈ 25 ಕ್ಕೆ ಹೈಕಮಾಂಡ್‌ನಿಂದ ಸಂದೇಶ ಬರಲಿದೆ. ಅವರ ಸೂಚನೆಯಂತೆ ನಡೆದುಕೊಳ್ಳುತ್ತೇನೆ” ಎಂದಿದ್ದಾರೆ.
ಇದನ್ನೂ ಓದಿ: ಅನಾರೋಗ್ಯದ ಕಾರಣ ಮುಂದಿಟ್ಟು ರಾಜೀನಾಮೆಗೆ ಮುಂದಾದ ಯಡಿಯೂರಪ್ಪ?
“ಮುಂದಿನ ಎರಡು ವರ್ಷ ಪಕ್ಷಕ್ಕಾಗಿ ದುಡಿದು ಮತ್ತೆ ರಾಜ್ಯದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುವುದು ನನ್ನ ಉದ್ದೇಶ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ನನ್ನ ಮೇಲೆ ವಿಶೇಷ ಕಾಳಜಿ ತೋರಿಸಿ ಅಧಿಕಾರ ನೀಡಿದ್ದಾರೆ. ಹೈಕಮಾಂಡ್ ಸೂಚನೆಯೇ ಅಂತಿಮ” ಎಂದು ಹೇಳಿದ್ದಾರೆ.
“ನನಗೆ ಎಲ್ಲ ಜನಾಂಗದ ನೂರಾರು ಮಠಾಧಿಪತಿಗಳು ಬಂದು ಆಶೀರ್ವಾದ ಮಾಡಿದ್ದಾರೆ, ಬೆಂಬಲವನ್ನು ಕೂಡ ನೀಡಿದ್ದಾರೆ, ಅದನ್ನು ಮರೆಯಲು ಸಾಧ್ಯವಿಲ್ಲ. ರಾಜ್ಯದಲ್ಲಿ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು, ಮಠಾಧಿಪತಿಗಳು ಯಾವುದೇ ಗೊಂದಲ ಮಾಡಿಕೊಳ್ಳದೆ ನನ್ನ ಜೊತೆಗೆ ಇರಬೇಕು. ಇಂದಿನಿಂದ ನನ್ನ ಪರವಾಗಿ ಯಾರು ಹೇಳಿಕೆ ನೀಡಬಾರದು ಮತ್ತು ಪ್ರತಿಭಟನೆ ನಡೆಸಬಾರದು” ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಮನವಿ ಮಾಡಿದ್ದಾರೆ.
ರಾಜಕೀಯ ಬೆಳವಣಿಗೆಗಳನ್ನಾಧರಿಸಿ ನನ್ನ ಪರವಾಗಿ ಹೇಳಿಕೆ, ಪ್ರತಿಭಟನೆಗಳಿಗೆ ಯಾರೂ ಮುಂದಾಗಬಾರದೆಂದು ವಿನಂತಿಸುತ್ತೇನೆ. ಅಭಿಮಾನ ಶಿಸ್ತಿನ ವ್ಯಾಪ್ತಿ ಮೀರಬಾರದು.
ಪಕ್ಷ ನನಗೆ ಮಾತೃ ಸಮಾನ,ಅದರ ಗೌರವಕ್ಕೆ ಚ್ಯುತಿ ತರುವ ಘಟನೆಗಳು ನನಗೆ ಅತೀವ ನೋವು ತರುತ್ತದೆ. ನಿಜವಾದ ಹಿತೈಷಿಗಳು ಈ ನಿಟ್ಟಿನಲ್ಲಿ ನನ್ನ ಭಾವನೆಗೆ ಸ್ಪಂದಿಸುತ್ತಾರೆಂದು ನಂಬಿರುವೆ— B.S. Yediyurappa (@BSYBJP) July 21, 2021
ಬುಧವಾರ ಟ್ವೀಟ್ ಮಾಡಿದ್ದ ಮುಖ್ಯಮಂತ್ರಿ ಯಡಿಯೂರಪ್ಪ, “ರಾಜಕೀಯ ಬೆಳವಣಿಗೆಗಳನ್ನಾಧರಿಸಿ ನನ್ನ ಪರವಾಗಿ ಹೇಳಿಕೆ, ಪ್ರತಿಭಟನೆಗಳಿಗೆ ಯಾರೂ ಮುಂದಾಗಬಾರದೆಂದು ವಿನಂತಿಸುತ್ತೇನೆ. ಅಭಿಮಾನ ಶಿಸ್ತಿನ ವ್ಯಾಪ್ತಿ ಮೀರಬಾರದು. ಪಕ್ಷ ನನಗೆ ಮಾತೃ ಸಮಾನ, ಅದರ ಗೌರವಕ್ಕೆ ಚ್ಯುತಿ ತರುವ ಘಟನೆಗಳು ನನಗೆ ಅತೀವ ನೋವು ತರುತ್ತದೆ. ನಿಜವಾದ ಹಿತೈಷಿಗಳು ಈ ನಿಟ್ಟಿನಲ್ಲಿ ನನ್ನ ಭಾವನೆಗೆ ಸ್ಪಂದಿಸುತ್ತಾರೆಂದು ನಂಬಿರುವೆ” ಎಂದಿದ್ದರು.
ಕೆಲ ದಿನಗಳ ಹಿಂದಷ್ಟೇ ಸಿಎಂ ಯಡಿಯೂರಪ್ಪ ಮತ್ತು ಅವರ ಮಗ ವಿಜಯೇಂದ್ರ ದೆಹಲಿಗೆ ತೆರಳಿ ಬಿಜೆಪಿ ನಾಯಕರನ್ನು ಭೇಟಿ ಮಾಡಿದ್ದರು. ರಾಜ್ಯದ ಹಲವು ಮಠಗಳ ಸ್ವಾಮಿಜಿಗಳು ಬುಧವಾರ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಬೆಂಬಲ ಘೋಷಿಸಿದ್ದರು.
ಇದನ್ನೂ ಓದಿ: ಬದಲಾವಣೆಯತ್ತ ಕರ್ನಾಟಕ ರಾಜಕೀಯ; ಯಡಿಯೂರಪ್ಪ ಸುತ್ತ ಏನಾಗುತ್ತಿದೆ?


