ದೇಶಾದ್ಯಂತ ಅಪ್ಪಳಿದ ಕೊರೊನಾ 2ನೇ ಅಲೆಯಲ್ಲಿ ಆಕ್ಸಿಜನ್ ಕೊರತೆಯಿಂದಾದ ಸಾವುಗಳ ಕುರಿತು ಯಾವುದೇ ವರದಿಯನ್ನು ರಾಜ್ಯಗಳು ನೀಡಿಲ್ಲ ಎಂದು ಒಕ್ಕೂಟ ಸರ್ಕಾರ ತನ್ನ ವೈಫಲ್ಯವನ್ನು ರಾಜ್ಯ ಸರ್ಕಾರದ ಮೇಲೆ ಹೇರಿತ್ತು. ಈಗ ರಾಜ್ಯಗಳಿಂದ ಅಂಕಿ ಅಂಶಗಳನ್ನೇ ಕೇಳಿಲ್ಲ ಎಂದು ಛತ್ತಿಸ್‌ಘಡ ಆರೋಗ್ಯ ಸಚಿವ ಟಿಎಸ್ ಸಿಂಗ್ ಡಿಯೋ ಒಕ್ಕೂಟ ಸರ್ಕಾರಕ್ಕೆ ತಿರುಗೇಟು ನೀಡಿದ್ದಾರೆ.
“ಕೊರೊನಾ 2ನೇ ಅಲೆಯಲ್ಲಿ ಆಕ್ಸಿಜನ್ ಕೊರತೆಯಿಂದ ರೋಗಿಗಳು ಬಲಿಯಾಗಿದ್ದಾರೆಯೇ ಎಂದು ತಿಳಿಯಲು ರಾಜ್ಯ ಸರ್ಕಾರವು ದಾಖಲಾದ ಸಾವುಗಳ ಮರು ಲೆಕ್ಕಪರಿಶೋಧನೆ ನಡೆಸುತ್ತಿದೆ” ಎಂದು ಆರೋಗ್ಯ ಸಚಿವ ಟಿಎಸ್ ಸಿಂಗ್ ಡಿಯೋ ಮಾಹಿತಿ ಹೇಳಿದ್ದಾರೆ.
ಒಕ್ಕೂಟ ಸರ್ಕಾರವು ಜುಲೈ 20 ರಂದು ರಾಜ್ಯಸಭೆಯಲ್ಲಿ ಆಮ್ಲಜನಕದ ಕೊರತೆಯಿಂದ ಯಾವುದೇ ಸಾವು ಸಂಭವಿಸಿಲ್ಲ. ಆಕ್ಸಿಜನ್ ಕೊರತೆಯ ಸಾವುಗಳ ಬಗ್ಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ವರದಿಯನ್ನು ನೀಡಿಲ್ಲ ಎಂದು ಹೇಳಿತ್ತು. ಇದು ವಿರೋಧ ಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿತ್ತು.
“ಭಾರತ ಸರ್ಕಾರಕ್ಕೆ ರಾಜ್ಯ ಸರ್ಕಾರಗಳಿಮದ ನಿರಂತರವಾಗಿ ಮಾಹಿತಿ ನೀಡಲಾಗಿದೆ. ಆದರೆ, ಅವರು ಆಮ್ಲಜನಕದ ಕೊರತೆಯಿಂದ ಉಂಟಾಗುವ ಸಾವುಗಳ ಬಗ್ಗೆ ಪ್ರತ್ಯೇಕವಾಗಿ ಮಾಹಿತಿ ಕೇಳಲಿಲ್ಲ. ಈಗ ರಾಜ್ಯಗಳು ಸರಿಯಾದ ಡೇಟಾ ನೀಡಲ್ಲ ಎಂದು ಹೇಳುತ್ತಿದ್ದಾರೆ. ಇದು ಅವರ ವೈಫಲ್ಯ ಅಸಮರ್ಥತೆಯನ್ನು ಮುಚ್ಚಿಕೊಳ್ಳಲು ಹೇಳುತ್ತಿರುವ ದುರುದ್ದೇಶದ ಹೇಳಿಕೆಯಾಗಿದೆ” ಎಂದು ಸಚಿವ ಟಿಎಸ್ ಸಿಂಗ್ ಡಿಯೋ ಒಕ್ಕೂಟ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಇದನ್ನೂ ಓದಿ: ಆಕ್ಸಿಜನ್ ಕೊರತೆಯಿಂದ ಯಾವುದೇ ಸಾವು ಸಂಭವಿಸಿಲ್ಲ: ಡೇಟಾ ಇಲ್ಲದ್ದಕ್ಕೆ ರಾಜ್ಯಗಳೆ ಹೊಣೆ ಎಂದ ಕೇಂದ್ರ ಸರ್ಕಾರ!
“ಛತ್ತಿಸ್‌ಘಡ ರಾಜ್ಯದಲ್ಲಿ ಆಕ್ಸಿಜನ್ ನಿರ್ವಹಣೆಯನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಲಾಗಿದೆ. ಹೀಗಾಗಿ ನಾವು ಆಕ್ಸಿಜನ್ ಕೊರತೆಗೆ ಸಂಬಂಧಿಸಿದ ಸಾವುಗಳನ್ನು ದಾಖಲಿಸಿಲ್ಲ. ಆದರೆ, ಈ ಬಗ್ಗೆ ನಾವು ಮೊಂಡುತನವನ್ನು ಪ್ರದರ್ಶಿಸುವುದಿಲ್ಲ. ನಾವು ಆಕ್ಸಿಜನ್ ಸಾವುಗಳ ಬಗ್ಗೆ ಜನರು ಮತ್ತು ಇತರ ಅಧಿಕಾರಿಗಳಿಂದ ಮಾಹಿತಿ ಪಡೆಯಲು ಸಿದ್ದರಿದ್ದೇವೆ. ಆಕ್ಸಿಜನ್ ಸಂಬಂಧಿತ ಸಾವುಗಳ ಬಗ್ಗೆ ಮರು ಪರಿಶೀಲನೆ ನಡೆಸುತ್ತಿದ್ದೇವೆ” ಎಂದು ಹೇಳಿದ್ದಾರೆ.
“ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ ಆಮ್ಲಜನಕದ ಕೊರತೆಯಿಂದಾಗಿ ರಾಜ್ಯದಲ್ಲಿ ಯಾವುದೇ ಸಾವು ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ಆದರೂ, ಕೆಲವು ದೂರುಗಳನ್ನು ಪಡೆಯಲಾಗಿದೆ. ಹಾಗಾಗಿ, ಎಲ್ಲಾ ಅನುಮಾನಗಳನ್ನು ಹೋಗಲಾಡಿಸಲು ನಾವು ಮತ್ತೆ ಸಾವುಗಳ ಅಂಕಿಅಂಶಗಳನ್ನು ಮರು ಲೆಕ್ಕಪರಿಶೋಧನೆ ಮಾಡುತ್ತಿದ್ದೇವೆ” ಎಂದು ಸಿಂಗ್ ಡಿಯೋ ತಿಳಿಸಿದ್ದಾರೆ.
ದೇಶಾದ್ಯಂತ ಇದೇ ರೀತಿಯ ಸಾವುಗಳ ಲೆಕ್ಕಪರಿಶೋಧನೆ ನಡೆಸಬೇಕೆಂದು ಒಕ್ಕೂಟ ಸರ್ಕಾರವನ್ನು ಸಿಂಗ್ ಡಿಯೋ ಒತ್ತಾಯಿಸಿದ್ದಾರೆ. “ಯಾವುದೇ ಪುರಾವೆಗಳಿಲ್ಲದೆ ಲಸಿಕೆ ವ್ಯರ್ಥವಾಗಿದೆಯೆಂದು ಕೇಂದ್ರವು ಛತ್ತಿಸ್‌ಘಡದ ಮೇಲೆ ಆರೋಪ ಮಾಡುತ್ತಿದೆ. ಈ ರೀತಿ ದೇಶಾದ್ಯಂತ ತಮ್ಮ ತಂಡಗಳನ್ನು ಕಳುಹಿಸುವ ಮೂಲಕ ಎಷ್ಟು ಸಾವುಗಳು ಸಂಭವಿಸಿವೆ ಎಂಬುದನ್ನು ತಿಳಿಯಲು ಸಾಧ್ಯವಾಗುವುದಿಲ್ಲವೇ?” ಎಂದು ಪ್ರಶ್ನಿಸಿದ್ದಾರೆ.
“ಪಾರದರ್ಶಕತೆ ಪ್ರಜಾಪ್ರಭುತ್ವದಿಂದ ಚುನಾಯಿತವಾದ ಸರ್ಕಾರದ ಒಂದು ಅಂಶವಾಗಿದೆ. ಪಾರದರ್ಶಕತೆಗೆ ಕಾಂಗ್ರೆಸ್ ಬದ್ದವಾಗಿದೆ. ವೈದ್ಯಕೀಯ ಆಮ್ಲಜನಕದ ಕೊರತೆಯಿಂದಾಗಿ ಯಾವುದೇ ಕೊರೊನಾ ರೋಗಿಯು ಸಾವನ್ನಪ್ಪಿದ್ದರೆ, ಆ ಬಗ್ಗೆ ಮಾಹಿತಿ ನೀಡುವಂತೆ ಎನ್‌ಜಿಒಗಳು, ನಾಗರಿಕ ಸಮಾಜದ ಸದಸ್ಯರು ಮತ್ತು ರಾಜ್ಯದ ಪತ್ರಕರ್ತರಿಗೆ ನಾವು ಮನವಿ ಮಾಡುತ್ತೇವೆ” ಎಂದು ಆರೋಗ್ಯ ಸಚಿವರು ಹೇಳಿದ್ದಾರೆ.
ಇದನ್ನೂ ಓದಿ: ದೇಶದಲ್ಲಿ ಕೊರೊನಾದಿಂದ ಸುಮಾರು 4.9 ದಶಲಕ್ಷದಷ್ಟು ಸಾವುಗಳು: ವರದಿ


