ಲಖನೌದಿಂದ 28 ಕಿ.ಮೀ ದೂರದಲ್ಲಿರುವ ಉತ್ತರ ಪ್ರದೇಶದ ಬರಾಬಂಕಿ ಜಿಲ್ಲೆಯಲ್ಲಿ ವೇಗವಾಗಿ ಚಲಿಸುತ್ತಿದ್ದ ಟ್ರಕ್‌ವೊಂದು ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ರಸ್ತೆಯಲ್ಲಿ ಮಲಗಿದ್ದ 18 ಮಂದಿ ಕಾರ್ಮಿಕರು ಸ್ಥಳದಲ್ಲೇ ಚಿರನಿದ್ರೆಗೆ ಜಾರಿರುವ ದುರಂತ ಘಟನೆ ನಡೆದಿದೆ.
ಬಿಹಾರ ಮೂಲದ ಕಾರ್ಮಿಕರು ಹರಿಯಾಣ ಮತ್ತು ಪಂಜಾಬ್‌ನಿಂದ ತಮ್ಮ ಊರಿಗೆ ಹಿಂದಿರುಗುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್‌ನ ಆಕ್ಸಲ್ ಬ್ಲೇಡ್ ಕಟ್ ಆಗಿದೆ. ಹೀಗಾಗಿ ಕಾರ್ಮಿಕರು ಬಸ್ ಮುಂದೆ ರಸ್ತೆಯಲ್ಲಿಯೇ ಮಲಗಿದ್ದರು ಎನ್ನಲಾಗಿದೆ.
ನಿಂತಿದ್ದ ಬಸ್‌ಗೆ ವೇಗವಾಗಿ ಚಲಿಸುತ್ತಿದ್ದ ಟ್ರಕ್ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಇದರಿಂದ ಬಸ್ ಮುಂದೆ ಸಾಗಿ, ಮಲಗಿದ್ದ ಕಾರ್ಮಿಕರ ಮೇಲೆ ಹರಿದಿದ್ದು, ದುರಂತ ಸಂಭವಿಸಿದೆ. ಘಟನೆಯಲ್ಲಿ 25 ಮಂದಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ: ನವಜೋತ್ ಸಿಧು ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಬಸ್ ಅಪಘಾತ: 3 ಸಾವು, 60 ಮಂದಿ ಗಾಯಾಳು
“ಘಟನೆಯಲ್ಲಿ ಗಾಯಗೊಂಡಿರುವ ಕಾರ್ಮಿಕರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಬಸ್‌ನ ಕೆಳಗೆ ಸಿಲುಕಿರುವ ಕಾರ್ಮಿಕರ ಮೃತದೇಹಗಳನ್ನು ವಶಪಡಿಸಿಕೊಳ್ಳಲು ಕಾರ್ಯಾಚರಣೆ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಸತ್ಯ ನಾರಾಯಣ್ ಸಬತ್ ತಿಳಿಸಿದ್ದಾರೆ.
“ನಾವು ಹರಿಯಾಣದ ಅಂಬಾಲಾ ಬಸ್ ನಿಲ್ದಾಣದಿಂದ ಬಿಹಾರಕ್ಕೆ ಸುಮಾರು 130 ಜನರಿದ್ದೆವು. ರಾತ್ರಿ 8 ರ ಸುಮಾರಿಗೆ ಬಸ್ ಆಕ್ಸಲ್ ಬ್ಲೇಡ್ ಕಟ್ ಆಯಿತು. ದುರಸ್ತಿ ಕಾರ್ಯಕ್ಕೆ ಸಮಯವಾಗುತ್ತದೆ ಎಂದು ಚಾಲಕ ಮಾಹಿತಿ ನೀಡಿದರು. ನಮ್ಮಲ್ಲಿ ಹಲವರು ಬಸ್‌ನಿಂದ ಹೊರಬಂದು ವಿಶ್ರಾಂತಿ ಪಡೆಯುತ್ತಿದ್ದರು. ಕೆಲವರು ರಸ್ತೆಯಲ್ಲಿ ಮಲಗಿದ್ದರು, ಕೆಲವರು ಊಟ ಮಾಡುತ್ತಿದ್ದರು. ರಾತ್ರಿ 11 ರ ಸುಮಾರಿಗೆ, ನಿಲುಗಡೆ ಮಾಡಿದ ಬಸ್‌ಗೆ ಟ್ರಕ್ ಡಿಕ್ಕಿ ಹೊಡೆದಿದ್ದು, ಅನೇಕ ಸಾವುನೋವು ಸಂಭವಿಸಿದೆ” ಎಂದು ಬಸ್‌ನಲ್ಲಿದ್ದ ಭರತ್ ಮಾಹಿತಿ ನೀಡಿದಾರೆ.
ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಸಂತಾಪ ಸೂಚಿಸಿರುವ ಪ್ರಧಾನಿ ನರೇಂದ್ರ ಮೋದಿ, ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂಪಾಯಿ ಹಾಗೂ ಗಾಯಗೊಂಡವರಿಗೆ ತಲಾ 50 ಸಾವಿರ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
यूपी के बाराबंकी में हुए सड़क हादसे की खबर से बहुत दुखी हूं। शोकाकुल परिवारों के साथ मेरी संवेदनाएं हैं। अभी सीएम योगी जी से भी बात हुई है। सभी घायल साथियों के उचित उपचार की व्यवस्था की जा रही है।
— Narendra Modi (@narendramodi) July 28, 2021
ಇದನ್ನೂ ಓದಿ: ನರಗುಂದ ಹೋರಾಟ ಮುಗಿಸಿ ತೆರಳುತ್ತಿದ್ದಾಗ ಅಪಘಾತ: ಹಿರಿಯ ರೈತ ಮುಖಂಡರಾದ ಜಿ.ಟಿ ರಾಮಸ್ವಾಮಿ, ರಾಮಣ್ಣ ನಿಧನ


