ಪಶ್ಚಿಮ ಬಂಗಾಳ ಚುನಾವಣಾ ಫಲಿತಾಂಶದ ಬಳಿಕ ಮೊದಲ ಬಾರಿಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದಾರೆ. ಚುನಾವಣಾ ಪ್ರಚಾರಗಳಲ್ಲಿ ಇಬ್ಬರು ಪರಸ್ಪರ ಜಿದ್ದಾಜಿದ್ದಿಗೆ ಇಳಿದು ವ್ಯಂಗ್ಯ ತುಂಬಿದ ಹೇಳಿಕೆಗಳನ್ನು ನೀಡಿದ್ದರು. ಬಂಗಾಳ ಚುನಾವಣೆಯನ್ನು ದೀದಿ ವರ್ಸಸ್ ಮೋದಿ ಎಂದೇ ಕರೆಯಲಾಗಿತ್ತು.
ಪ್ರಧಾನಿ ಮೋದಿ ಭೇಟಿ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿರುವ ಮಮತಾ ಬ್ಯಾನರ್ಜಿ, ವಿರೋಧ ಪಕ್ಷದ ನಾಯಕರು, ಇಬ್ಬರು ಕೇಂದ್ರ ಸಚಿವರು ಮತ್ತು 40 ಪತ್ರಕರ್ತರನ್ನು ಒಳಗೊಂಡಂತೆ ಸುಮಾರು 300 ಜನರ ಮೇಲಾಗಿರುವ ಪೆಗಾಸಸ್ ಕಣ್ಗಾವಲು ಹಗರಣದ ಬಗ್ಗೆ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಈಗಾಗಲೇ ಮುಂಗಾರು ಅಧಿವೇಶನದಲ್ಲಿ ಈ ಕುರಿತು ಕೋಲಾಹಲ ಉಂಟಾಗಿದೆ. ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಪೆಗಾಸಸ್ ಹಗರಣದ ಕುರಿತು ಉತ್ತರ ನೀಡಬೇಕು ಎಂದು ಒತ್ತಾಯಿಸಿ ಪ್ರತಿಪಕ್ಷಗಳು ಪ್ರತಿಭಟನೆ ನಡೆಸುತ್ತಿವೆ.
ಇದನ್ನೂ ಓದಿ: ಪೆಗಾಸಸ್: ಐಟಿ ಮತ್ತು ಗೃಹ ಸಚಿವಾಲಯದ ಅಧಿಕಾರಿಗಳನ್ನು ಪ್ರಶ್ನಿಸಲಿರುವ ಶಶಿ ತರೂರ್ ನೇತೃತ್ವದ ಸ್ಥಾಯಿ ಸಮಿತಿ
ಮಮತಾ ಬ್ಯಾನರ್ಜಿಯ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಮತ್ತು ಟಿಎಂಸಿಯ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರ ಫೋನ್ ನಂಬರ್ ಅನ್ನು ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಹ್ಯಾಕ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
ಪಿಎಂ ಮೋದಿ ಅವರೊಂದಿಗಿನ ಸಭೆಯನ್ನು ‘ಸೌಜನ್ಯ ಭೇಟಿ’ ಎಂದು ತಿಳಿಸಿದ್ದಾರೆ. ’ಕೋವಿಡ್ ಪರಿಸ್ಥಿತಿ, ರಾಜ್ಯಕ್ಕೆ ಲಸಿಕೆಗಳು ಮತ್ತು ಔಷಧಿಗಳ ಪೂರೈಕೆ ಕುರಿತು ಚರ್ಚಿಸಿದ್ದೇನೆ. ಜೊತೆಗೆ ಬಂಗಾಳವನ್ನು ಬಾಂಗ್ಲಾ ಎಂದು ಮರುನಾಮಕರಣ ಮಾಡುವ ಪ್ರಸ್ತಾಪದ ಕುರಿತು ಗಮನಕ್ಕೆ ತಂದಿದ್ದೇನೆ’ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಮೂರು ದಿನಗಳ ದೆಹಲಿ ಭೇಟಿಯಲ್ಲಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಬುಧವಾರ (ಜುಲೈ 28) ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.
ಇದನ್ನೂ ಓದಿ: ಪೆಗಾಸಸ್ ಹಗರಣ: ನ್ಯಾಯಾಂಗ ತನಿಖೆಗೆ ಒತ್ತಾಯಿಸಿ ಸುಪ್ರೀಂ ಮೆಟ್ಟಿಲೇರಿದ ಹಿರಿಯ ಪತ್ರಕರ್ತರು