ಅಸ್ಸಾಂ- ಮಿಜೋರಾಂ ಈಶಾನ್ಯ ರಾಜ್ಯಗಳ ನಡುವಿನ ವಿವಾದಿತ ಗಡಿಯಲ್ಲಿ ಸೋಮವಾರ ನಡೆದ ಗಡಿ ಘರ್ಷಣೆಯ ಪಿತೂರಿಯಲ್ಲಿ ಮಿಜೋರಾಂನ ಆಡಳಿತ ಪಕ್ಷದ ಸಂಸತ್ ಸದಸ್ಯನ ಪಾತ್ರವಿದೆ ಎಂದಿರುವ ಅಸ್ಸಾಂ ಪೊಲೀಸರು. ಇದರ ಬಗ್ಗೆ ಮತ್ತಷ್ಟು ಪರಿಶೀಲನೆ ನಡೆಸುತ್ತಿದ್ದಾರೆ.
“ರಾಜ್ಯಸಭಾ ಸಂಸದ ಕೆ.ವನ್ಲಾಲ್ವೆನಾ ಅವರ ಮಾಧ್ಯಮ ಸಂದರ್ಶನ ಬೆಳಕಿಗೆ ಬಂಬ ಬಳಿಕ, ಸಂಘರ್ಷದ ಹಿಂದಿನ ಪಿತೂರಿಯಲ್ಲಿ ಅವರ ಪಾತ್ರವಿರುವುದು ತಿಳಿದೆ. ಇದರ ಬಗ್ಗೆ ಕಾನೂನು ಕ್ರಮ ಕೈಗೊಳ್ಳಲು ಅಸ್ಸಾಂ ಪೊಲೀಸರ ತನಿಖಾ ತಂಡವು ದೆಹಲಿಗೆ ತೆರಳುತ್ತಿದೆ’ ಎಂದು ಬುಧವಾರ ಹೇಳಿಕೆಯೊಂದರಲ್ಲಿ ತಿಳಿಸಲಾಗಿದೆ.
ಸಂದರ್ಶನದಲ್ಲಿ ಅಸ್ಸಾಂ ಪೊಲೀಸರು ಮತ್ತೆ ತಮ್ಮ ರಾಜ್ಯದ ಭೂಪ್ರದೇಶಕ್ಕೆ ಪ್ರವೇಶಿಸಿದರೆ ಎಲ್ಲರೂ ಕೊಲ್ಲಲ್ಪಡುತ್ತಾರೆ ಎಂದು ಸಂಸದರು ಬೆದರಿಕೆ ಹಾಕಿದ್ದಾರೆ ಎಂದು ಅಸ್ಸಾಂ ಪೋಲಿಸರು ಆರೋಪಿಸಿದ್ದಾರೆ. ಕೆ.ವನ್ಲಾಲ್ವೆನಾ ಆಡಳಿತಾರೂಢ ಮಿಜೋ ನ್ಯಾಷನಲ್ ಫ್ರಂಟ್ ಸಂಸದರಾಗಿದ್ದಾರೆ.
ಇದನ್ನೂ ಓದಿ: ಅಸ್ಸಾಂ-ಮಿಜೋರಾಂ ವಿವಾದಿತ ಗಡಿಯಲ್ಲಿ ಹಿಂಸಾಚಾರ: ಅಸ್ಸಾಂನ 6 ಪೊಲೀಸರ ಹತ್ಯೆ
ಅಸ್ಸಾಂ ಪೊಲೀಸರು, ಸಂಸದರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ ಅಡಿಯಲ್ಲಿ ಶಸ್ತ್ರಾಸ್ತ್ರ ಕಾಯ್ದೆ, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮತ್ತು ಕೊಲೆ, ಕ್ರಿಮಿನಲ್ ಪಿತೂರಿ, ಕ್ರಿಮಿನಲ್ ಅತಿಕ್ರಮಣ, ಮಾನವ ಜೀವಕ್ಕೆ ಅಪಾಯ, ಕೊಲೆ ಯತ್ನ ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ವಿವಾದಿತ ಅಸ್ಸಾಂ-ಮಿಜೋರಾಂ ಗಡಿಯಲ್ಲಿ ಸೋಮವಾರ ಉಲ್ಭಣಿಸಿದ ಹಿಂಸಾಚಾರದಲ್ಲಿ ಅಸ್ಸಾಂನ ಆರು ಪೊಲೀಸರು ಹತ್ಯೆಯಾಗಿದ್ದಾರೆ ಎಂದು ಸಿಎಂ ಹಿಮಂತ ಬಿಸ್ವ ಶರ್ಮಾ ತಿಳಿಸಿದ್ದಾರೆ. ಸಂಘರ್ಷದಲ್ಲಿ ಭಾಗಿಯಾಗಿರುವವರ ಬಂಧನಕ್ಕೆ ಪೂರಕವಾದ ಮಾಹಿತಿ ನೀಡುವವರಿಗೆ ತಲಾ 5 ಲಕ್ಷ ರೂಪಾಯಿ ನಗದು ಬಹುಮಾನವನ್ನು ಘೋಷಿಸಲಾಗಿದೆ.
ಘರ್ಷಣೆಗಳಿಂದ ಅಸ್ಸಾಂ ಕಡೆಯಿಂದ 41 ಜನರು ಗಾಯಗೊಂಡಿದ್ದರೆ, ಮಿಜೋರಾಂ ತನ್ನ ಕಡೆಯಿಂದ ಯಾವುದೇ ಗಾಯಗಳ ವಿವರಗಳನ್ನು ನೀಡಿಲ್ಲ. ಕೊಲಸಿಬ್ ಗಡಿಯನ್ನು ದಾಟಿದ ಅಸ್ಸಾಂ ಪೊಲೀಸರು ರಾಷ್ಟ್ರೀಯ ಹೆದ್ದಾರಿಯಲ್ಲಿನ ವಾಹನಗಳನ್ನು ಧ್ವಂಸಗೊಳಿಸಿ ಗುಂಡು ಹಾರಿಸಿದರು ಮಿಜೋರಾಂ ಪೊಲೀಸರು ಆರೋಪಿಸಿದ್ದಾರೆ. ಘರ್ಷಣೆ ಬಗ್ಗೆ ಉಭಯ ರಾಜ್ಯಗಳು ಪರಸ್ಪರ ದೂಷಿಸುತ್ತಿವೆ.
ಮಿಜೋರಾಂನ ಗೃಹ ಸಚಿವ ಲಾಲ್‌ಚಾಮ್ಲಿಯಾನಾ, ಸುಮಾರು 200 ಅಸ್ಸಾಂ ಪೊಲೀಸ್ ಸಿಬ್ಬಂದಿ ತಮ್ಮ ರಾಜ್ಯಕ್ಕೆ ಬಲವಂತವಾಗಿ ಪ್ರವೇಶಿಸಿ ಹಿಂಸಾಚಾರಕ್ಕೆ ಕಾರಣರಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಗಡಿ ವಿವಾದವೇನು?
ಮಿಜೋರಾಂನ ಮೂರು ಜಿಲ್ಲೆಗಳಾದ ಐಜಾಲ್, ಕೋಲಾಸಿಬ್ ಮತ್ತು ಮಾಮಿತ್ ಅಸ್ಸಾಂನ ಕ್ಯಾಚರ್, ಹೈಲಕಂಡಿ ಮತ್ತು ಕರಿಮಗಂಜ್ ಜಿಲ್ಲೆಗಳೊಂದಿಗೆ 164.6 ಕಿ.ಮೀ ಉದ್ದದ ರಾಜ್ಯ ಗಡಿಯನ್ನು ಹಂಚಿಕೊಂಡಿವೆ. ಈ ಪ್ರದೇಶವು ಹಲವು ವರ್ಷಗಳಿಂದ ಘರ್ಷಣೆಯಲ್ಲಿ ಮುಳುಗಿದೆ. ಸ್ಥಳೀಯರು ಮತ್ತು ಭದ್ರತಾ ಪಡೆಗಳು ಒಳನುಸುಳುವಿಕೆ ಬಗ್ಗೆ ಪದೇ ಪದೇ ಆರೋಪ-ಪ್ರತ್ಯಾರೋಪದಲ್ಲಿ ತೊಡಗಿವೆ. ಗಡಿ ಗುರುತಿಸುವಿಕೆಯನ್ನು ಎದುರಿಸಲು ಮಿಜೋರಾಂ ಸರ್ಕಾರ ಗಡಿ ಆಯೋಗವನ್ನು ರಚಿಸಿದೆ. ಅಸ್ಸಾಂ ರಾಜ್ಯವು ಮೇಘಾಲಯ ಮತ್ತು ಅರುಣಾಚಲ ಪ್ರದೇಶದೊಂದಿಗೆ ಗಡಿ ವಿವಾದಗಳನ್ನು ಹೊಂದಿದೆ.
ಇದನ್ನೂ ಓದಿ: ಅತಿ ಹೆಚ್ಚು ಮಕ್ಕಳನ್ನು ಹೊಂದಿರುವ ಪೋಷಕರಿಗೆ 1 ಲಕ್ಷ ಬಹುಮಾನ ಘೋಷಿಸಿದ ಮಿಜೋರಾಂ ಸಚಿವ!


