ಪುಲಿಟ್ಜರ್ ಪ್ರಶಸ್ತಿ ವಿಜೇತ ಫೋಟೊ ಜರ್ನಲಿಸ್ಟ್ ದಾನಿಶ್ ಸಿದ್ದೀಕಿ ಅಫ್ಘಾನಿಸ್ತಾನದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿಲ್ಲ. ಅವರ ಗುರುತನ್ನು ಪತ್ತೆ ಹಚ್ಚಿದ ಬಳಿಕ ತಾಲಿಬಾನಿಗಳು ಅವರನ್ನು “ಕ್ರೂರವಾಗಿ ಕೊಂದಿದ್ದಾರೆ” ಎಂದು ಅಮೆರಿಕದ ನಿಯತಕಾಲಿಕವೊಂದರಲ್ಲಿ ಗುರುವಾರ ಪ್ರಕಟವಾದ ವರದಿಯಲ್ಲಿ ಹೇಳಲಾಗಿದೆ.
38 ವರ್ಷದ ರಾಯ್ಟರ್ಸ್‌ನ ಮುಖ್ಯ ಫೋಟೋಗ್ರಾಫರ್ ಆಗಿದ್ದ ದಾನಿಶ್ ಸಿದ್ದೀಕಿ ಕಂದಹಾರ್‌ನ ಸ್ಪಿನ್ ಬೋಲ್ಡಾಕ್ ಜಿಲ್ಲೆಯಲ್ಲಿ ಅಫ್ಘಾನ್ ಪಡೆಗಳು ಮತ್ತು ತಾಲಿಬಾನ್ ನಡುವೆ ನಡೆದ ಘರ್ಷಣೆಯಲ್ಲಿ ಸಾವನ್ನಪ್ಪಿದ್ದರು. ಅವರು ಅಫ್ಘಾನ್ ವಿಶೇಷ ಪಡೆಯೊಂದಿಗೆ ವರದಿಗಾಗಿ ಅಲ್ಲಿ ನಿಯೋಜನೆಗೊಂಡಿದ್ದರು ಎನ್ನಲಾಗಿದೆ.
ದಾನಿಶ್ ಸಿದ್ದೀಕಿ ಕಸ್ಟಮ್ಸ್ ಪೋಸ್ಟ್ ಬಳಿಯಿದ್ದಾಗ ತಾಲಿಬಾನಿಗಳ ದಾಳಿಯಿಂದ ಅವರ ತಂಡ ಬೇರ್ಪಟ್ಟಿತ್ತು. ಅಫ್ಘಾನ್ ವಿಶೇಷ ಪಡೆಯ ಕಮಾಂಡರ್ ಮತ್ತು ಇತರ ಸೈನಿಕರು ಸಿದ್ದೀಕಿ ಅವರಿಂದ ಬೇರ್ಪಟ್ಟು, ಅವರು ಇತರ ಮೂರು ಅಫ್ಘಾನ್ ಪಡೆಗಳೊಂದಿಗೆ ಉಳಿದಿದ್ದರು ಎಂದು ವಾಷಿಂಗ್ಟನ್ ಎಕ್ಸಾಮಿನರ್ ವರದಿ ಮಾಡಿದೆ.
ಇದನ್ನೂ ಓದಿ: ದಿಟ್ಟ ಪತ್ರಕರ್ತ ದಾನಿಶ್ ಸಿದ್ದೀಕಿ ಹತ್ಯೆಗೆ ಪಿಎಂ ಮೋದಿ ಸಂತಾಪ ಸೂಚಿಸಲಿಲ್ಲವೇಕೆ?
ಈ ದಾಳಿಯ ಸಮಯದಲ್ಲಿ, ಸಿದ್ದೀಕಿ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿ ಅವರ ತಂಡವು ಸ್ಥಳೀಯ ಮಸೀದಿಯಲ್ಲಿ ಪ್ರಥಮ ಚಿಕಿತ್ಸೆ ಪಡೆದಿದ್ದಾರೆ. ಆದರೆ, ಒಬ್ಬ ಪತ್ರಕರ್ತ ಮಸೀದಿಯಲ್ಲಿದ್ದನೆಂಬ ಸುದ್ದಿ ಹರಡುತ್ತಿದ್ದಂತೆ, ತಾಲಿಬಾನಿಗಳು ಮಸೀದಿ ಮೇಲೆ ದಾಳಿ ಮಾಡಿದ್ದರು.
ತಾಲಿಬಾನ್‌ಗಳು ಮಸೀದಿಯ ಮೇಲೆ ದಾಳಿ ನಡೆಸಿರುವುದು ಸಿದ್ದಿಕಿಯವರು ಅಲ್ಲಿ ಇದ್ದದ್ದರಿಂದ ಮಾತ್ರವೇ ಎಂದು ಸ್ಥಳೀಯ ತನಿಖೆಯು ವರದಿ ಬಹಿರಂಗ ಪಡಿಸಿದೆ.
“ತಾಲಿಬಾನಿಗಳು ಅವರನ್ನು ಸೆರೆಹಿಡಿದಾಗ ಸಿದ್ದಿಕಿ ಜೀವಂತವಾಗಿದ್ದರು. ತಾಲಿಬಾನಿಗಳು ದಾನಿಶ್ ಸಿದ್ದೀಕಿ ಗುರುತನ್ನು ಪರಿಶೀಲಿಸಿದ ನಂತರ ಅವರನ್ನು ಮತ್ತು ಅವರ ಜೊತೆಗಿದ್ದವರನ್ನು ಕೊಲ್ಲಲಾಗಿದೆ. ಕಮಾಂಡರ್ ಮತ್ತು ಅವರ ತಂಡದ ಉಳಿದವರು ಸಿದ್ದಿಕಿ ಅವರನ್ನು ರಕ್ಷಿಸಲು ಪ್ರಯತ್ನಿಸಿದಾಗ ಸಾವನ್ನಪ್ಪಿದ್ದರು” ಎಂದು ಸ್ಥಳೀಯ ತನಿಖೆಯು ವರದಿ ಹೇಳಿದೆ.
“ವ್ಯಾಪಕವಾಗಿ ವೈರಲ್ ಆದ ಛಾಯಾಚಿತ್ರದಲ್ಲಿ ಸಿದ್ದಿಕಿ ಅವರ ಮುಖವನ್ನು ಗುರುತಿಸಬಹುದು. ಇದರ ಜೊತೆಗೆ ನಾನು ಉಳಿದ ಚಿತ್ರಗಳನ್ನು ಪರಿಶೀಲಿಸಿದ್ದೇನೆ ಮತ್ತು ಸಿದ್ದಿಕಿ ಅವರ ಮೃತದೇಹದ ವಿಡಿಯೊ ಕೂಡ ಪರಿಶೀಲಿಸಿದ್ದು, ತಾಲಿಬಾನಿಗಳು ಸಿದ್ದಿಕಿಯವರ ತಲೆಯ ಸುತ್ತ ಹೊಡೆದು ನಂತರ ಅವರ ದೇಹಕ್ಕೆ ಗುಂಡುಗಳಿಂದ ಹೊಡೆದಿದ್ದಾರೆ” ಎಂದು ಅಮೆರಿಕನ್ ಎಂಟರ್‌ಪ್ರೈಸ್ ಇನ್‌ಸ್ಟಿಟ್ಯೂಟ್‌ನ ಹಿರಿಯ ಬರಹಗಾರ ಮೈಕೆಲ್ ರೂಬಿನ್ ಬರೆದಿದ್ದಾರೆ.
ಸಿದ್ದಿಕಿ ಅವರನ್ನುಈ ರೀತಿಯಲ್ಲಿ ಕೊಲ್ಲುವ ತಾಲಿಬಾನ್ ನಿರ್ಧಾರ ಮತ್ತು ನಂತರ ಅವರ ಮೃತ ದೇಹವನ್ನು ವಿರೂಪಗೊಳಿಸಿರುವುದು, ಯುದ್ಧದ ನಿಯಮಗಳನ್ನು ಗೌರವಿಸುವುದಿಲ್ಲ ಎಂಬುದನ್ನು ತೋರಿಸುತ್ತದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ: ಅಫ್ಘಾನ್‌ನಲ್ಲಿ ಹತರಾದ ಖ್ಯಾತ ಫೋಟೊ ಜರ್ನಲಿಸ್ಟ್ ದಾನಿಶ್ ಕ್ಲಿಕ್ಕಿಸಿದ ಕೆಲವು ಫೋಟೊಗಳು!


