ಮಣಿಪುರಿ ಭಾಷೆಯಲ್ಲಿ ಒಲಿಂಪಿಕ್ ಪದಕ ವಿಜೇತೆ ಸೈಖೋಮ್ ಮೀರಾಬಾಯಿ ಚಾನು ಅವರ ಜೀವನ ಆಧಾರಿತ ಚಿತ್ರ ನಿರ್ಮಾಣವಾಗಲಿದೆ. ಚಿತ್ರವನ್ನು ಇಂಗ್ಲಿಷ್ ಮತ್ತು ವಿವಿಧ ಭಾರತೀಯ ಭಾಷೆಗಳಿಗೆ ಡಬ್ ಮಾಡಲಾಗುವುದು ಎಂದು ಹೇಳಲಾಗಿದೆ.
ಚಿತ್ರ ನಿರ್ಮಾಣ ಕುರಿತ ಒಪ್ಪಂದಕ್ಕೆ ಮೀರಾಬಾಯಿ ಚಾನು ಕಡೆಯವರು ಮತ್ತು ಇಂಫಾಲ್ ಮೂಲದ ಸ್ಯೂಟಿ ಫಿಲ್ಮ್ಸ್ ಪ್ರೊಡಕ್ಷನ್ ಸಂಸ್ಥೆಯವರು ಶನಿವಾರ ಸಹಿ ಮಾಡಿದ್ದಾರೆ.
ಇಂಫಾಲ್ ಪೂರ್ವ ಜಿಲ್ಲೆಯ ನೋಂಗ್‌ಪೋಕ್ ಕಾಕ್ಚಿಂಗ್ ಹಳ್ಳಿಯಲ್ಲಿರುವ ಮೀರಾಬಾಯಿ ಚಾನು ನಿವಾಸದಲ್ಲಿ ಚಿತ್ರದ ಮಾತುಕತೆ ನಡೆದು ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಪ್ರಖ್ಯಾತ ನಾಟಕಕಾರ ಮತ್ತು ನಿರ್ಮಾಣ ಕಂಪನಿಯ ಅಧ್ಯಕ್ಷ ಮನೊಬಿ ಎಂ.ಎಂ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.
ಇದನ್ನೂ ಓದಿ: ತಪ್ಪಿದ ಆರ್ಚರ್ ತರಬೇತಿ: ವೇಟ್ ಲಿಫ್ಟಿಂಗ್‌ನಲ್ಲಿ ಬೆಳ್ಳಿ ಪದಕಕ್ಕೆ ಮುತ್ತಿಟ್ಟ ಮೀರಾಬಾಯಿ ಚಾನು ಯಾರು?
ಪಿಟಿಐ ಜೊತೆ ಮಾತನಾಡಿಡಿರುವ ಮನೊಬಿ, “ನಾವು ಮೀರಾಬಾಯಿ ಚಾನು ಪಾತ್ರವನ್ನು ನಿರ್ವಹಿಸಬಲ್ಲ ನಟಿಯ ಹುಡುಕಾಟ ಆರಂಭಿಸಿದ್ದೇವೆ. ಪಾತ್ರಕ್ಕೆ ಹೊಂದಲಿರುವ ನಟಿ, ಚಾನು ಅವರಷ್ಟು ವಯಸ್ಸು, ಎತ್ತರ, ಮೈಕಟ್ಟು ಹೊಂದಬೇಕು. ಜೊತೆಗೆ ನೋಡಲು ಸ್ವಲ್ಪ ಚಾನು ಅವರ ಹೋಲಿಕೆಯನ್ನು ಹೊಂದಿರಬೇಕು’ ಎಂದಿದ್ದಾರೆ.
’ನಟಿಯ ಆಯ್ಕೆ ಬಳಿಕ ಆಕೆಗೆ ಮೀರಾಬಾಯಿ ಚಾನು ಅವರ ಜೀವನ ಶೈಲಿಯ ತರಬೇತಿ ನೀಡಬೇಕು. ಈ ಚಿತ್ರದ ಚಿತ್ರೀಕರಣ ಆರಂಭಿಸಲು ಕನಿಷ್ಠ ಆರು ತಿಂಗಳು ಬೇಕಾಗುತ್ತದೆ” ಎಂದು ಮನೊಬಿ ಹೇಳಿದ್ದಾರೆ.

ಮಣಿಪುರದ ರಾಜಧಾನಿ ಇಂಫಾಲ್‌ನಿಂದ 22 ಕಿ.ಮೀ ದೂರದಲ್ಲಿರುವ ನಾಂಗ್‌ಪೋಕ್ ಕಾಚಿಂಗ್ ಗ್ರಾಮದಲ್ಲಿ ಜನಿಸಿದ ಮೀರಾಬಾಯಿ ಚಿಕ್ಕಂದಿನಲ್ಲಿಯೇ ತಾನು ಆರ್ಚರ್ ಕ್ರೀಡಾಪಟುವಾಗಲು ನಿರ್ಧರಿಸಿದ್ದರು. 2008ರಲ್ಲಿ ಇಂಫಾಲ್‌ನ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಕಚೇರಿಗೆ ತೆರಳಿದ ಆಕೆಗೆ ಆರ್ಚರ್ ಕ್ರೀಡೆಗೆ ತರಬೇತು ನೀಡುವವರು ಸಿಗಲೇ ಇಲ್ಲ. ಅದೇ ಸಮಯಕ್ಕೆ ಮಣಿಪುರದ ವೇಟ್ ಲಿಫ್ಟರ್ ಕುಂಜುರಾಣಿ ದೇವಿಯವರ ವಿಡಿಯೋ ನೋಡಿದ ಆಕೆ ಅದರಿಂದ ಸ್ಫೂರ್ತಿಗೊಂಡು ತಾನೂ ವೇಟ್ ಲಿಫ್ಟರ್ ಆಗಲು ನಿರ್ಧರಿಸಿದ್ದರು. ಈಗ ಟೋಕಿಯೋ ಒಲಂಪಿಕ್ಸ್‌ನಲ್ಲಿ ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾರತದ ಮೀರಾಬಾಯಿ ಚಾನು ಬೆಳ್ಳಿ ಪದಕ ಜಯಿಸುವ ಮೂಲಕ ಎಲ್ಲರ ಮನೆಮಾತಾಗಿದ್ದಾರೆ.
ಇದನ್ನೂ ಓದಿ: ತ್ಯಾಗ.. ತ್ಯಾಗ.. ತನ್ನೆಲ್ಲ ಖುಷಿಗಳನ್ನು ತ್ಯಾಗ ಮಾಡಿ ದೇಶದ ಸಂಭ್ರಮಕ್ಕೆ ಕಾರಣವಾಗಿಬಿಟ್ಟರು ಮೀರಾಬಾಯಿ


