Homeಮುಖಪುಟಉತ್ತರ ಕನ್ನಡ ಆಳುವವರ ಅಸಡ್ಡೆ; ಬೀದಿಗೆ ಬೀಳುವ ಭಯದಲ್ಲಿ ಅರಣ್ಯ ಸಾಗುವಳಿದಾರರು

ಉತ್ತರ ಕನ್ನಡ ಆಳುವವರ ಅಸಡ್ಡೆ; ಬೀದಿಗೆ ಬೀಳುವ ಭಯದಲ್ಲಿ ಅರಣ್ಯ ಸಾಗುವಳಿದಾರರು

- Advertisement -
- Advertisement -

ಉತ್ತರ ಕನ್ನಡವೆಂದರೆ ನಿರಾಶ್ರಿತರ ಜಿಲ್ಲೆ! ಹಲವು ಜಲವಿದ್ಯುತ್ ಯೋಜನೆಗಳು, ಕೈಗಾ ಅಣು ವಿದ್ಯುತ್ ಯೋಜನೆ, ಕೊಂಕಣ ರೈಲು ಮಾರ್ಗ, ಸೀ ಬರ್ಡ್ ನೌಕಾ ನೆಲೆ, ಹೀಗೆ ಅನೇಕ ದೈತ್ಯ ಸರ್ಕಾರಿ ಪ್ರಾಜೆಕ್ಟ್‌ಗಳು ಸಾವಿರಾರು ಕುಟುಂಬಗಳ ನೆಲೆತಪ್ಪಿಸಿವೆ. ಈ ಮಂದಿ ಇವತ್ತಿಗೂ ಬದುಕು ಕಟ್ಟಿಕೊಳ್ಳಲಾಗದೆ ಒದ್ದಾಡುತ್ತಿವೆ. ಇಂಥ ಇನ್ನಷ್ಟು ಪ್ರಳಯಾಂತಕ ಯೋಜನೆಗಳನ್ನು ಜಿಲ್ಲೆ ಮೇಲೆ ಹೇರಲು ಪರ್ಯಾವರ್ಣ ಪಂಡಿತರು ಹೊಂಚುಹಾಕುತ್ತಲೇ ಇದ್ದಾರೆ. ಈಗ ಜಿಲ್ಲೆಯ ಒಟ್ಟು ಜನಸಂಖ್ಯೆಯ ಒಂದನೇ ಮೂರಂಶದಷ್ಟಿರುವ ಅರಣ್ಯ ಭೂಮಿ ಸಾಗುವಳಿದಾರರು ಬೀದಿಪಾಲಾಗುವ ಆತಂಕದಲ್ಲಿ ಕಂಗಾಲಾಗಿ ಕೂತಿದ್ದಾರೆ. ಆಳುವ ವರ್ಗದ ಉದಾಸೀನ, ಇಚ್ಚಾಶಕ್ತಿ ಕೊರತೆಯಿಂದ ಅರಣ್ಯ ಅತಿಕ್ರಮಣಕಾರರ ಸಮಸ್ಯೆ ಗಂಡಾಂತರಕಾರಿ ಆಗುತ್ತಿದೆ.

ಅರಣ್ಯ ಭೂಮಿಯೇ ಬದುಕು

ಕರಾವಳಿ, ಮಲೆನಾಡು, ಅರೆಬಯಲು ಸೀಮೆಯಂಥ ತ್ರಿವಿಧ ಭೌಗೋಳಿಕ ಗುಣಲಕ್ಷಣದ ಉತ್ತರ ಕನ್ನಡ ಶೇಕಡಾ 80ರಷ್ಟು ಪ್ರದೇಶ ಅರಣ್ಯದಿಂದ ಆವೃತವಾಗಿದೆ. ಈ ’ಕಾಡಿನ’ ಜಿಲ್ಲೆಯ ಜನರು ವಸತಿ ಮತ್ತು ಸಾಗುವಳಿಗಾಗಿ ಅರಣ್ಯ ಭೂಮಿಯನ್ನು ಅನಿವಾರ್ಯವಾಗಿ ಅವಲಂಬಿಸಬೇಕಾಗಿದೆ. ಜಿಲ್ಲೆಯ ಒಟ್ಟು ವಿಸ್ತೀರ್ಣ 10,851 ಚ.ಕಿ.ಮೀ. ಇದರಲ್ಲಿ 8500 ಚ.ಕಿ.ಮೀ ಅರಣ್ಯ ಪ್ರದೇಶವಾಗಿದೆ. ಜಿಲ್ಲೆಯ ಜನಸಂಖ್ಯೆ 14 ಲಕ್ಷವಿದ್ದು ಲಭ್ಯವಿರುವ ಕಂದಾಯ ಭೂಮಿಯನ್ನು ಸರಿಯಾಗಿ ಹಂಚಿದರೆ ಪ್ರತಿ ಕುಟುಂಬಕ್ಕೆ 4 ಕುಂಟೆ ಬರಬಹುದೆಂದು ಅಂದಾಜಿಸಲಾಗಿದೆ. ಹಾಗಾಗಿ ವಾಸ್ತವ್ಯಕ್ಕಾಗಿ, ವ್ಯವಸಾಯಕ್ಕಾಗಿ, ಬದುಕಿನ ಇತರ ಕಸುಬಿಗಾಗಿ ಜಿಲ್ಲೆಯ ಜನರು ಅರಣ್ಯ ಭೂಮಿಯನ್ನು ಅನಿವಾರ್ಯವಾಗಿ ಅವಲಂಬಿಸಿದ್ದಾರೆ. ಅರಣ್ಯ ವಾಸಿಗಳಲ್ಲಿ ಶೇ.51ರಷ್ಟು ಮಂದಿ ವಾಸ್ತವ್ಯಕ್ಕಾಗಿ ಕಾಡಿನ ಭೂಮಿ ಅತಿಕ್ರಮಿಸಿಕೊಂಡಿದ್ದರೆ, ವಾಸ್ತವ್ಯ ಮತ್ತು ಜೀವನಕ್ಕಾಗಿ ಶೇ.26 ಮಂದಿ ಅರಣ್ಯ ಪ್ರದೇಶ ಬಳಸಿಕೊಳ್ಳುತ್ತಿದ್ದಾರೆ. ಇನ್ನುಳಿದ ಶೇ.23 ಮಂದಿಗೆ ಮಾಲ್ಕಿ ಜಮೀನಿದ್ದರೂ ಹೆಚ್ಚುವರಿ ಕೃಷಿ ಮತ್ತು ವಾಸದ ಮನೆಗಾಗಿ ಅರಣ್ಯ ಪ್ರದೇಶ ತೀರಾ ಅವಶ್ಯವಾಗಿದೆ.

ಉತ್ತರ ಕನ್ನಡದ ಅರಣ್ಯ ವಾಸಿಗಳ ಸಮಸ್ಯೆ ಮತ್ತವರು ಅರಣ್ಯ ಅತಿಕ್ರಮಿಸಿರುವ ಉದ್ದೇಶ ದೇಶದ ಇನ್ನಿತರ ಕಡೆಯ ಅರಣ್ಯ ಒತ್ತುವರಿಕೆಗಿಂತ ಭಿನ್ನವಾಗಿದೆ. ಸಿದ್ದಿ, ಗೌಳಿ, ಕುಣಬಿ, ಮರಾಠಿ, ಕುಂಬ್ರಿ ಮರಾಠಿಯಂಥ ಬುಡಕಟ್ಟು ಜನಾಂಗ ಹಾಗು ಪಾರಂಪರಿಕ ಅರಣ್ಯವಾಸಿಗಳು ಕಾಡಿನಲ್ಲಿ ತಲತಲಾಂತರದಿಂದ ಬದುಕು ಕಟ್ಟಿಕೊಂಡಿದ್ದಾರೆ. ಒಂದು ಸಮೀಕ್ಷೆ ಪ್ರಕಾರ ವಾಸ್ತವ್ಯ ಮತ್ತು ಕೃಷಿಗಾಗಿ ಅರಣ್ಯವನ್ನು ಮೂರು ಎಕರೆಗಿಂತ ಕಡಿಮೆ ಪ್ರದೇಶ ಅತಿಕ್ರಮಿಸಿರುವ ಕುಟುಂಬಗಳ ಸಂಖ್ಯೆ ಶೇ.86ಷ್ಟಿದೆ ಎಂಬುದನ್ನು ಗಮನಿಸಿದಾಗ ಜಿಲ್ಲೆಯ ದೊಡ್ಡ ಸಮೂಹಕ್ಕೆ ಕಾಡಿನ ಭೂಮಿ ಬಿಟ್ಟರೆ ಬದುಕೇ ಇಲ್ಲವೆಂಬುದು ಪಕ್ಕಾ ಆಗುತ್ತದೆ.

ಸೌಲಭ್ಯವಿದೆ; ಮಂಜೂರು ಮಾತ್ರ ಮಾಡುತ್ತಿಲ್ಲ!

ಅನಾದಿಕಾಲದಿಂದ ವಾಸ್ತವ್ಯ ಮತ್ತು ಕೃಷಿ ಕಾರ್ಯಗಳಿಗಾಗಿ ಕಾಡಿನಲ್ಲಿ ವನವಾಸಿಗಳು ಕಟ್ಟಿಕೊಂಡಿರುವ ಕಟ್ಟಡಗಳಿಗೆ, ಮನೆಗಳಿಗೆ ಸ್ಥಳಿಯ ಸಂಸ್ಥೆಗಳು ನಂಬರ್ ಕೊಟ್ಟಿವೆ. ಸರ್ಕಾರ ವಿದ್ಯುತ್, ನೀರು, ರಸ್ತೆ, ಅಂಗನವಾಡಿ, ಶಾಲೆ ಮುಂತಾದ ಮೂಲಭೂತ ಸೌಕರ್ಯ ಒದಗಿಸಿದೆ. ಒಂದು ಅಂದಾಜಿನಂತೆ ಗ್ರಾಮ ಪಂಚಾಯತ್‌ಗಳ ವಾರ್ಷಿಕ ಬಜೆಟ್‌ನ ಅರ್ಧದಷ್ಟು ಅರಣ್ಯ ಅತಿಕ್ರಮಿತರ ಕೇರಿಗಳಲ್ಲೇ ಖರ್ಚಾಗುತ್ತಿದೆ! ಅರಣ್ಯವಾಸಿಗಳಿಗೆ ರೇಷನ್ ಕಾರ್ಡ್, ಆಧಾರ್ ಕಾರ್ಡ್, ಮತದಾರರ ಗುರುತು ಚೀಟಿ ಒದಗಿಸಲಾಗಿದೆ. ಸೌಲಭ್ಯ, ಸೌಕರ್ಯಗಳನ್ನು ಅರಣ್ಯದಲ್ಲಿರುವವರಿಗೆ ಕೊಡಲಾಗುತ್ತಿದೆ; ತೆರಿಗೆಯನ್ನು ನಿಯಮಿತವಾಗಿ ವಸೂಲಿ ಮಾಡಲಾಗುತ್ತಿದೆ. ವಿಪರ್ಯಾಸವೆಂದರೆ, ತಾವು ಊಳುತ್ತಿರುವ ಭೂಮಿ ಮೇಲೆ ಬದುಕು, ಕೃಷಿ ಮಾಡುವ ಹಕ್ಕು ಕೊಡಿಯೆಂದು ಕೇಳಿದರೆ ಆಳುವವರು ಕಾನೂನು ತೊಡಕಿನ ಸಬೂಬು ಹೇಳುತ್ತ ಸತಾಯಿಸುತ್ತಿದ್ದಾರೆ.

ಅರಣ್ಯಾಧಿಕಾರಿಗಳ ದೌರ್ಜನ್ಯ!

ವ್ಯವಸಾಯದ ಹಕ್ಕಿಗಾಗಿ ಕಳೆದ ಮೂರು ದಶಕದಿಂದ ಅತಿಕ್ರಮಣಕಾರರು ನ್ಯಾಯಾಲಯದ ಒಳಗೆ-ಹೊರಗೆ ಹೋರಾಡುತ್ತಲೇ ಇದ್ದಾರೆ. ಅರಣ್ಯ ಹಕ್ಕು ಕಾಯ್ದೆ ಅನುಕೂಲವಿದ್ದರೂ ಅಧಿಕಾರಶಾಹಿ ಮತ್ತು ಆಳುವ ರಾಜಕೀಯ ಮುಂದಾಳುಗಳು ಅವಕಾಶ ಕೊಡುತ್ತಿಲ್ಲ! ಮಂಜೂರಿ ಕೊಡುವುದಿರಲಿ, ಕಾನೂನುಗಳನ್ನು ತಮ್ಮ ಮೂಗಿನ ನೇರಕ್ಕೆ ತಪ್ಪಾಗಿ ಅರ್ಥೈಸುತ್ತ ಹಲವು ತಲೆಮಾರುಗಳಿಂದ ಕಾಡಲ್ಲಿರುವವರನ್ನು ಹಠದಿಂದ ಒಕ್ಕಲೆಬ್ಬಿಸಲಾಗುತ್ತಿದೆ. ಹಳೆ ಮನೆಗಳನ್ನು ರಿಪೇರಿಗೂ ಬಿಡದೆ ಅರಣ್ಯಾಧಿಕಾರಿಗಳು ಹಲ್ಲೆ ಮಾಡುವ ಕ್ರೌರ್ಯಗಳು ನಡೆಯುತ್ತಿದೆ; ಅಮಾಯಕರ ಮೇಲೆ ಸುಳ್ಳು ಕೇಸುಗಳನ್ನು ಹಾಕಲಾಗುತ್ತಿದೆ. ಜೀವದಂತೆ ಬೆಳೆಸಿದ್ದ ಗಿಡ, ಮರಗಳನ್ನು ಅರಣ್ಯಾಧಿಕಾರಿಗಳು ಧ್ವಂಸ ಮಾಡುತ್ತಿದ್ದಾರೆ. ಭತ್ತದ ಬೆಳೆ ನಾಶಮಾಡಿದ್ದೂ ಇದೆ!

ಅರಣ್ಯಾಧಿಕಾರಿಗಳ ದೌರ್ಜನ್ಯದಿಂದ ಕಾಡಿನ ಮಕ್ಕಳು ಹೈರಾಣಾಗಿಹೋಗಿದ್ದಾರೆ. ಕಾಡನ್ನೆ ಜೀವ ಮತ್ತು ಜೀವನವನ್ನಾಗಿಸಿಕೊಂಡಿರುವ ಗೌಳಿ, ಸಿದ್ದಿ, ಕುಣಬಿಗಳಂತ ಬುಡಕಟ್ಟು ಜನರಂತೂ ಅರಣ್ಯಾಧಿಕಾರಿಗಳ ಹುಚ್ಚಾಟದಿಂದ ಬದುಕುವುದೇ ಕಷ್ಟವಾಗಿದೆ.

ಅರಣ್ಯ ಹಕ್ಕು ಕಾಯ್ದೆ ಕ್ಲೇಮು ತಿರಸ್ಕೃತವಾಗಿದ್ದೇ ಹೆಚ್ಚು!

2006ರಲ್ಲಿ ಅಂದಿನ ಮನಮೋಹನ್ ಸಿಂಗ್ ಸರ್ಕಾರ ಪಾರಂಪರಿಕ ಅರಣ್ಯವಾಸಿಗಳಿಗೆ ಅನುಕೂಲವಾಗುವಂಥ ಅರಣ್ಯ ಹಕ್ಕು ಕಾಯ್ದೆ ತಂದಿತ್ತು. 2010ರಲ್ಲಿ ವನವಾಸಿಗಳಿಗೆ ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ವ್ಯವಸಾಯ ಜಾಗದ ಒಡೆತನಕ್ಕೆ ಕ್ಲೇಮು ಅರ್ಜಿ ಸಲ್ಲಿಸಲು ಆ ವೇಳೆ ಅಧಿಕಾರದಲ್ಲಿದ್ದ ಯಡಿಯೂರಪ್ಪ ಸರ್ಕಾರ ಹೇಳಿತ್ತು. ಬಿಜೆಪಿ ಆಡಳಿತಗಾರರು ಅರ್ಜಿ ಕರೆಯಲಿಕ್ಕೂ ಒಂದು ಕಾರಣವಿತ್ತು. 2008ರಲ್ಲಿ ಜಾರಿಗೊಂಡಿರುವ ಅರಣ್ಯ ಹಕ್ಕು ಕಾನೂನಿನಂತೆ ವನವಾಸಿಗಳಿಗೆ ಒಡೆತನ ಮಂಜೂರಿ ಮಾಡದಿದ್ದರೆ ಕೇಂದ್ರದ ಅನುದಾನ ನಿಲ್ಲಿಸಬೇಕಾಗುತ್ತದೆಂದು ಮನಮೋಹನ್ ಸಿಂಗ್ ಸರ್ಕಾರ ಎಚ್ಚರಿಸಿತ್ತು. ಆಗ ಸುಮಾರು 45000 ಅರ್ಜಿಗಳಷ್ಟೇ ಬಂದಿದ್ದವು. ವ್ಯಾಪಕವಾಗಿ ಪ್ರಚಾರವಾಗದಿರುವುದೇ ಇಷ್ಟು ಕಡಿಮೆ ಅರ್ಜಿ ಬರಲು ಕಾಣವಾಗಿತ್ತು. ಈ ಪ್ರಕ್ರಿಯೆಯಲ್ಲಿ ಕೇವಲ 606 ಬುಡಕಟ್ಟು ಜನರಿಗೆ ಮಂಜೂರಿ ಕೊಡಲಾಗಿತ್ತು.

ಉತ್ತರ ಕನ್ನಡ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅತಿಕ್ರಮಣಕಾರರಿಗೆ ಸಾಗುವಳಿ ಒಡೆತನ ಬೇಡಿಕೆ ಇಟ್ಟು 2013ರಲ್ಲಿ 110 ಕಿ.ಮೀ ಪಾದಯಾತ್ರೆ ನಡೆಸಿದ್ದರು. ಈ ಬಗ್ಗೆ ಆಗ ಸ್ಪೀಕರ್ ಆಗಿದ್ದ ಕಾಗೋಡು ತಿಮ್ಮಪ್ಪ ಮುತುವರ್ಜಿ ವಹಿಸಿ ಸಿದ್ದರಾಮಯ್ಯನವರ ಸರ್ಕಾರದ ಮೇಲೆ ಒತ್ತಡ ಹಾಕಿದ್ದರು. ಸಿದ್ದರಾಮಯ್ಯ ಸರ್ಕಾರ ಮತ್ತೆ ಕ್ಲೇಮ್ ಅರ್ಜಿ ಆಹ್ವಾನಿಸಿತು. ಈವರೆಗೆ 87,625 ಭೂ ಬೇಡಿಕೆ ಅರ್ಜಿ ಬಂದಿವೆ. ಇದರಲ್ಲಿ 65,220 ಅರ್ಜಿ ತಿರಸ್ಕೃತಗೊಂಡಿವೆ. ಬುಡಕಟ್ಟು ಜನಾಂಗದ 1,331, ಪಾರಂಪರಿಕ ಅರಣ್ಯವಾಸಿಗಳ 349 ಮತ್ತು ಸಮೂಹ ಉದ್ದೇಶದ 1,127 ಅರ್ಜಿಗಳಿಗೆ ಮಾತ್ರ ಮಂಜೂರಿ ಸಿಕ್ಕಿದೆ! ಅಂದರೆ ಶೇ.3.32 ಬೇಡಿಕೆಗೆ ಉಪವಿಭಾಗಾಧಿಕಾರಿ ನೇತೃತ್ವದ ಹಕ್ಕು ಕಮಿಟಿಯ ಮಾನ್ಯತೆ ದೊರಕಿದೆ. ಮೂರು ತಲೆಮಾರಿನಿಂದ ಅತಿಕ್ರಮಣ ಜಾಗದಲ್ಲಿ ಬಾಳಿ ಬದುಕಿದ್ದಾರೆಂದು ದೃಢೀಕರಿಸುವ ದಾಖಲೆ ಒದಗಿಸಿಲ್ಲವೆಂಬ ನೆಪದಿಂದ ಅರ್ಹ ಅರ್ಜಿಗಳನ್ನು ಸಾರಾಸಗಟಾಗಿ ಕಸದಬುಟ್ಟಿಗೆ ಅಧಿಕಾರಶಾಹಿ ಎಸೆದಿದೆ!

ಅರಣ್ಯ ಕಾಯ್ದೆಗಳ ಗೊಂದಲ!

ಅರಣ್ಯ ಸಂರಕ್ಷಣಾ ಕಾಯ್ದೆ ಮತ್ತು 2006ರ ಅರಣ್ಯವಾಸಿಗಳ ಹಕ್ಕು ಕಾಯ್ದೆ ಪರಸ್ಪರ ವಿರೋಧಿ ಉದ್ದೇಶದವು. ಈ ಗೊಂದಲದಿಂದಾಗಿ ಅರಣ್ಯವಾಸಿಗಳಿಗೆ ಭೂ ಒಡೆತನ ದೊರಕದೆ ಅನ್ಯಾಯವಾಗುತ್ತಿದೆ. 2006ರ ಹಕ್ಕು ಕಾಯ್ದೆಗೆ ಕಸುವು ಇಲ್ಲದಂತಾಗಿದೆ. ಪರಿಶಿಷ್ಟ, ಬುಡಕಟ್ಟು ಮತ್ತು ಇತರೆ ಪಾರಂಪರಿಕ ಅರಣ್ಯವಾಸಿ ಹಕ್ಕು ಅಧಿನಿಯಮ 2008ರಲ್ಲಿ ಅನುಷ್ಠಾನಗೊಳಿಸಲಾಯಿತು. 2012ರಲ್ಲಿ ತಿದ್ದುಪಡಿಮಾಡಿ ಪರಿಶಿಷ್ಟ ಪಂಗಡ ಮತ್ತು ಇತರೆ ಪಾರಂಪರಿಕ ಅರಣ್ಯವಾಸಿಗಳು 13.12.2005ಕ್ಕಿಂತ ಮೊದಲು ಅರಣ್ಯವಾಸ ಅಥವಾ ಜೀವನೋಪಾಯಕ್ಕಾಗಿ ಅರಣ್ಯ ಪ್ರದೇಶಗಳ ಮೇಲೆ ಅವಲಂಬಿತರಾಗಿದ್ದರೆ ಅಂಥವರು ಅರಣ್ಯ ಭೂಮಿ ಪಡೆಯಲು ಅರ್ಹರೆಂದು ನಿರ್ದೇಶನ ನೀಡಲಾಯಿತು.

ಈ ಕಾನೂನು ಅರಣ್ಯ ಅಧಿಕಾರಿಗಳಿಗೆ ಮತ್ತು ಭೂ ಮಂಜೂರಾತಿಗೆ ರಚಿಸಲಾಗಿರುವ ಉಪವಿಭಾಗಾಧಿಕಾರಿ ಅಧ್ಯಕ್ಷತೆಯ ಸಮಿತಿಗಳಿಗೆ ಅರ್ಥವೇ ಆಗಿಲ್ಲ. ಅರಣ್ಯವಾಸಿಗಳಿಗೆ ಸಾಗುವಳಿ ಮಂಜೂರಾತಿಗೆ ಮೂರು ತಲೆಮಾರಿನ ದಾಖಲೆ ಬೇಕೆಂಬುದೇನೂ ನಿಜ. ಹಾಗಂತ ’ನಿರ್ದಿಷ್ಟ’ ದಾಖಲೆ ಒತ್ತಾಯಿಸುವಿಕೆ ಇಲ್ಲವೆ ಅವುಗಳ ಅವಶ್ಯಕತೆಯ ಉಲ್ಲೇಖವಿಲ್ಲ. ಆದರೆ ಅರ್ಜಿ ಪರಿಶೀಲನೆ ಮಾಡುವಾಗ ಅಧಿಕಾರಿಗಳು ’ನಿರ್ದಿಷ್ಟ’ ದಾಖಲೆಗೆ ಒತ್ತಾಯಿಸಿ ಭೂ ಹಕ್ಕು ದಕ್ಕದಂತೆ ಮಾಡುತ್ತಿದ್ದಾರೆಂದು ಅರಣ್ಯವಾಸಿಗಳು ಅಲವತ್ತುಕೊಳ್ಳುತ್ತಿದ್ದಾರೆ.

ಅರಣ್ಯ ಹಕ್ಕು ಕಾಯಿದೆ ತಿದ್ದುಪಡಿ [6.9.2012]

ಕಲಮ್12ಎ[4]ನಲ್ಲಿ-ಉಪವಿಭಾಗ ಮಟ್ಟದ ಅಥವಾ ಜಿಲ್ಲಾ ಮಟ್ಟದ ಸಮಿತಿ ಕ್ಲೇಮ್‌ಗಳನ್ನು ನಿರ್ಧರಿಸುವಾಗ 13ನೆ ನಿಯಮದಲ್ಲಿ ನಿರ್ದಿಷ್ಟಪಡಿಸಿದ ಸಾಕ್ಷ್ಯವನ್ನು ಪರಿಗಣಿಸತಕ್ಕದ್ದು; ಕ್ಲೇಮಿನ ಪರಿಗಣನೆಗೆ ನಿರ್ದಿಷ್ಟ ದಾಖಲಾತಿ ಸಾಕ್ಷ್ಯಗಳನ್ನು ಆಧರಿಸಲು ಒತ್ತಾಯಿಸುವಂತಿಲ್ಲ ಎಂದು ಹೇಳಲಾಗಿದೆ. ಕೇಂದ್ರ ಬುಡಕಟ್ಟು ಮಂತ್ರಾಲಯದ ಕಾನೂನನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ. ಆದರೆ ಅರಣ್ಯವಾಸಿಗಳು ಕ್ಲೇಮಿಗೆ ಸಂಬಂಧಿಸಿದಂತೆ, ಮೂರು ತಲೆಮಾರಿನ ಜನವಸತಿ ಪ್ರದೇಶವೆಂದು ಪುರಾವೆ ಮಾಡಿದರೆ ಸಾಕು ಎಂದು ಆದೇಶಿಸಿದೆ. ಆರ್ಚ್ ವಾಹಿನಿ ವರ್ಸಸ್ ಗುಜರಾತ್ ಸರಕಾರ ಮತ್ತು ಇತರರು ಪ್ರಕರಣದಲ್ಲಿ ಗುಜರಾತ್ ಉಚ್ಚ ನ್ಯಾಯಾಲಯವು 3.5.2013ರಂದು ರಿಟ್ ಪಿಟಿಷನ್ ನಂ.100/2010ರಲ್ಲಿ ದಾಖಲೆಯ ಸಾಕ್ಷ್ಯ ಮಂಜೂರಿ ಮಾನದಂಡವೆಂದು ಪರಿಗಣಿಸುವುದು ಕಾನೂನುಬಾಹಿರವೆಂದು ಹೇಳಿದೆ. ಈ ಕಾನೂನಾತ್ಮಕ ಅಂಶ ಮೂರು ತಲೆಮಾರಿನ ವೈಯಕ್ತಿಕ ಸಾಗುವಳಿ ದಾಖಲೆ ಒದಗಿಸುವ ಅವಶ್ಯಕತೆಯಿಲ್ಲವೆಂಬುದನ್ನು ಖಾತ್ರಿ ಪಡಿಸುತ್ತದೆ.

ರವೀಂದ್ರ ನಾಯ್ಕ

ಅರಣ್ಯ ಹಕ್ಕು ಕಾಯಿದೆ ನಿಯಮ 13ರಲ್ಲಿ ಮನೆ, ಗುಡಿಸಲು ಮತ್ತು ಒಡ್ದುಗಳು, ತಡೆ ಒಡ್ಡುಗಳು ಮತ್ತು ಭೂಮಿಯನ್ನು ಸಮತಟ್ಟು ಮಾಡುವುದು, ಅದನ್ನು ಕಾಯಂ ಆಗಿ ಅಭಿವೃದ್ದಿಪಡಿಸಿದಂತ ವಾಸ್ತವಿಕ ಸಂಗತಿಗಳು; ಬಾವಿಗಳು, ಸ್ಮಶಾನಗಳು, ಪವಿತ್ರ ಸ್ಥಳಗಳಂಥ ಪ್ರಾಚೀನತೆ ರುಜುವಾತುಪಡಿಸುವಂಥ ಪಾರಂಪರಿಕ ರಚನೆಗಳು; ಹಿಂದಿನ ಭೂ ದಾಖಲೆಯಲ್ಲಿ ನಮೂದಿಸಿದ ಅಥವಾ ಪ್ರಾಚೀನ ಕಾಲದಲ್ಲಿ ಹಳ್ಳಿಯಲ್ಲಿ ಕಾನೂನು ಸಮ್ಮತವಾದ ನಿವಾಸಿಯೆಂದು ಮಾನ್ಯತೆ ಪಡೆದ ವ್ಯಕ್ತಿಗಳ ಪೂರ್ವಜರನ್ನು ಗುರ್ತಿಸುವ ವಂಶಾವಳಿ ಮತ್ತು ಗ್ರಾಮದ ಸಾಗುವಳಿ ಪ್ರದೇಶದ ಸಾಂದರ್ಭಿಕ ದಾಖಲೆಗಳ ಆಧಾರದಲ್ಲಿ ಅರಣ್ಯ ಭೂಮಿ ಹಕ್ಕು ಪಡೆಯಬಹುದೆಂದು ಹೇಳಲಾಗಿದೆ. ಅರಣ್ಯ ಅತಿಕ್ರಮಣಕಾರರಿಗೆ ಅನುಕೂಲಕರವಾದ ಈ ಮಹತ್ವದ ಕಾನೂನಿನ ಅಂಶಗಳನ್ನು ಅಧಿಕಾರಿಗಳು ಕಡೆಗಣಿಸುತ್ತಿರುವುದು ಅನೇಕ ಅನುಮಾನ ಹುಟ್ಟುಹಾಕಿದೆ. ಅಧಿಕಾರಶಾಹಿಗೆ ಮೂಗುದಾರ ಹಾಕಬೇಕಿದ್ದ ಶಾಸಕ, ಸಂಸದ, ಮಂತ್ರಿಗಳೆಲ್ಲ ಉದಾಸೀನದಲ್ಲಿದ್ದಾರೆ. ಪಾರ್ಲಿಮೆಂಟ್, ಅಸೆಂಬ್ಲಿಯಲ್ಲಿ ಚರ್ಚೆಯಾಗಬೆಕಾದ ಈ ಗಂಭೀರ ವಿಷಯದ ಬಗ್ಗೆ ಜನಪ್ರತಿನಿಧಿಗಳು ಅಸಡ್ಡೆ ತೋರುತ್ತಿರುವುದು ಅರಣ್ಯವಾಸಿಗಳ ಸಮಸ್ಯೆ ಬಿಗಡಾಯಿಸುವಂತೆ ಮಾಡಿದೆ. ಶಾಸಕ, ಸಂಸದರಿಗೆ ಇಚ್ಛಾಶಕ್ತಿ ಒಂಚೂರು ಇದ್ದಿದ್ದರೆ ಅರಣ್ಯ ಅತಿಕ್ರಮಣಕಾರರಿಗೆ ಅದ್ಯಾವಾಗಲೋ ವ್ಯವಸಾಯದ ಹಕ್ಕು ಸಿಗುತಿತ್ತು.

ನಿರಾಶ್ರಿತರ ಡೇರೆಯಾಗುವ ಭಯ!

ಅರಣ್ಯ ಹಕ್ಕು ಕಾಯ್ದೆಯಡಿ ಭೂ ಮಂಜೂರಿಗೆ ಅನರ್ಹರೆಂದು ತಿರಸ್ಕೃತಗೊಂಡಿರುವ ಅರ್ಜಿದಾರರನ ಒಕ್ಕಲೆಬ್ಬಿಸಿ ಆ ಜಾಗದಲ್ಲಿ ಅರಣ್ಯೀಕರಣ ಮಾಡಬೇಕೆಂದು 8 ಪರಿಸರವಾದಿ ಸಂಘಟನೆಗಳು ಸರ್ವೋಚ್ಚ ನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ [ರಿಟ್ ಪಿಟಿಷನ್ ನಂ;109/2008] ದಾಖಲಿಸಿವೆ. ಆ ಅರ್ಜಿ ವಿಚಾರಣೆ ಸಂದರ್ಭದಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರ ಅರಣ್ಯವಾಸಿಗಳ ಪರ ನಿಲುವು ಪ್ರಕಟಿಸದಿರುವುದು ಕಾಡಿನ ಮಕ್ಕಳ ತಲೆ ಮೇಲೆ ತೂಗುಗತ್ತಿ ಬಿಟ್ಟಂತಾಗಿದೆ! ತಿರಸ್ಕೃತ ಅರ್ಜಿದಾರರನ್ನು ಹಂತ-ಹಂತವಾಗಿ ಒಕ್ಕಲೆಬ್ಬಿಸುವುದಾಗಿ ಎರಡೂ ಸರಕಾರಗಳು ನ್ಯಾಯಾಲಯಕ್ಕೆ ಪ್ರಮಾಣ ಪತ್ರವನ್ನು ಕೊಟ್ಟಿರುವುದು ಅರಣ್ಯ ಅವಲಂಬಿತರನ್ನು ಚಿಂತೆಗೀಡುಮಾಡಿದೆ!

ಸುಪ್ರೀಮ್ ಕೋರ್ಟ್ 13.2.2019ರಂದು ಅರ್ಜಿ ತಿರಸ್ಕೃತವಾಗಿರುವ ಅರಣ್ಯವಾಸಿಗಳನ್ನು 24.7.2019ರ ಒಳಗೆ ಒಕ್ಕಲೆಬ್ಬಿಸಿ ಆ ಪ್ರದೇಶದ ಉಪಗೃಹ ಚಿತ್ರ ಹಾಜರುಪಡಿಸುವಂತೆ ಆದೇಶಿಸಿತ್ತು. ಆದರೆ ದೇಶಾದ್ಯಂತ ಅರಣ್ಯವಾಸಿ ಪರ ಸಂಘಟನೆಗಳ ಹೋರಾಟ ಜೋರಾದ್ದರಿಂದ ಸುಪ್ರೀಮ್ ಕೋರ್ಟ 28.2.2019ರಂದು ಸ್ವಯಂ ಪ್ರೇರಿತವಾಗಿ ಒಕ್ಕಲೆಬ್ಬಿಸುವ ಮಧ್ಯಂತರ ಆದೇಶವನ್ನು ಸ್ಥಗಿತಗೊಳಿಸಿಕೊಂಡಿತ್ತು. ಇದು ರಾಜ್ಯ ಆಳುವವರಿಗೆ ಮತ್ತು ಉತ್ತರ ಕನ್ನಡದ ಎಂಪಿ, ಎಂಎಲ್‌ಎಗಳಿಗೆ ಎಚ್ಚರಿಸುವಂತಿದೆ! ಈಗಲೂ ಜನಪ್ರತಿನಿಧಿಗಳು ಅರಣ್ಯವಾಸಿಗಳ ಸಂಕಷ್ಟಕ್ಕೆ ಸ್ಪಂದಿಸದಿದ್ದರೆ ಇಡೀ ಜಿಲ್ಲೆ ನಿರಾಶ್ರಿತರ ಡೇರೆಯಂತಾಗುವುದರಲ್ಲಿ ಅನುಮಾನವೇ ಇಲ್ಲ!

ಮೂರು ದಶಕದ ಹೋರಾಟ!

ಉತ್ತರ ಕನ್ನಡದಲ್ಲಿ ಅರಣ್ಯ ಹಕ್ಕು ಹೋರಾಟಗಾರರ ಸಂಘಟನೆಯನ್ನು ರವೀಂದ್ರ ನಾಯ್ಕ್ ಪ್ರಬಲವಾಗಿ ಕಟ್ಟಿದ್ದಾರೆ. ಕಳೆದ 30 ವರ್ಷದಿಂದ ಅರಣ್ಯ ಅಧಿಕಾರಿಗಳ ದೌರ್ಜನ್ಯಕ್ಕೆ ತಕ್ಷಣ ಪ್ರತಿಭಟನೆ, ಅನಕ್ಷರಸ್ಥ ಅರಣ್ಯವಾಸಿಗಳಲ್ಲಿ ಜಾಗೃತಿ, ಕಾನೂನು ಜ್ಞಾನ ನೀಡುವುದನ್ನು ಅರಣ್ಯ ಹಕ್ಕು ಹೋರಾಟಗಾರರ ಸಂಘ ನಿರಂತವಾಗಿ ಮಾಡುತ್ತಿದೆ. ಅರಣ್ಯ ಹಕ್ಕು ಕಾನೂನಿನ ಪ್ರಯೋಜನ ವನವಾಸಿಗಳಿಗೆ ಸಿಗುವಂತೆ ಮಾಡಲು ಸರಕಾರದ ಮೇಲೆ ಒತ್ತಡ, ಅರಣ್ಯ ಕಾನೂನಿನ ವ್ಯತಿರಿಕ್ತ ಅನುಷ್ಟಾನ, ಸಾಮೂಹಿಕ ಅರ್ಜಿ ತಿರಸ್ಕಾರದ ವಿರುದ್ಧ ರವೀಂದ್ರ ನಾಯ್ಕ್ ತಂಡ ಪಾದ ಯಾತ್ರೆ, ಉರುಳು ಸೇವೆ, ರ್‍ಯಾಲಿ, ಪ್ರತಿಭಟನೆ ನಡೆಸುತ್ತಲೇ ಇದೆ. ಸರಕಾರದಿಂದಾಗುತ್ತಿರುವ ಈ ತಪ್ಪನ್ನು ಉಚ್ಚ ನ್ಯಾಯಾಲಯಕ್ಕೆ ಅರುಹಿ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸದಂತೆ ಮಧ್ಯಂತರ ಆದೇಶವನ್ನು ಉತ್ತರ ಕನ್ನಡ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟ ವೇದಿಕೆ ಪಡೆದುಕೊಂಡಿದೆ. ಅರಣ್ಯವಾಸಿಗಳು ಬೀದಿಗಿಳಿದು ಬದುಕುವ ಹಕ್ಕಿಗಾಗಿ, ಸ್ವಾವಲಂಬನೆಗಾಗಿ ಹೋರಾಡುತ್ತಿದ್ದರೂ ಸ್ಥಳೀಯ ಎಂಪಿ, ಎಂಎಲ್‌ಎ, ಮಂತ್ರಿ ಅಸಡ್ಡೆಯಲ್ಲಿರುವುದು ದುರಂತ!


ಇದನ್ನೂ ಓದಿ: ಯಡಿಯೂರಪ್ಪ ಪದಚ್ಯುತಿ; ದುಃಖಕ್ಕೂ ಸಂಭ್ರಮಕ್ಕೂ ಯೋಗ್ಯವಲ್ಲದ ಬದಲಾವಣೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಸರ್ ನಾನು ಜಮೀನಲ್ಲಿ 30 ವರ್ಷದಿಂದ ಕೃಷಿ ಬೆಳೆಯುತ್ತಿದ್ದೇನೆ ಅದು ಸರ್ಕಾರದ ಅತಿಕ್ರಮಣ ವಾಗಿದ್ದು ನಾನು ನಾನು ಜಿಪಿಎಸ್ ಮಾಡಿ ಜಿಪಿಎಸ್ ಮಾಡಿ ಅರ್ಜಿ ಸಲ್ಲಿಸಿದೆ ಐದು ವರ್ಷವಾದರೂ ನನಗೆ ಪಟ್ಟ ಸಿಗಲಿಲ್ಲ ಆದಕಾರಣದಯವಿಟ್ಟು ಪರಿಶೀಲಿಸಿ ನನ್ನ ಹೆಸರಿಗೆ ಪಟ್ಟ ಬರುವಂತೆ ಮಾಡಿಕೊಡಿ ಎಂದು ವಿನಂತಿಸಿಕೊಳ್ಳುತ್ತೇನೆ. ನನ್ನ ಹೆಸರು ಸುಂದರವ್ವ ಗಂಗಪ್ಪಇಂಗಳಗಕಿ. ಸಾಕಿನ್ ರಾಮಪುರ ತಾಲೂಕ್ ಮುಂಡಗೋಡ ಜಿಲ್ಲೆಉತ್ತರ ಕನ್ನಡ ಇದು ನನ್ನ ವಿಳಾಸ

LEAVE A REPLY

Please enter your comment!
Please enter your name here

- Advertisment -

Must Read

ಗಾಳಿಪಟ-2: ಯೋಗರಾಜ ಭಟ್ರ ಲಾಜಿಕ್‌ಗಳನ್ನು ‘ದೇವ್ಲೆ’ ಬಲ್ಲ!

ನೀವು ಬರಹಗಾರರಾಗಿದ್ದೀರಾ? ಹೌದಾದರೆ, ನೀವು ಆರಂಭಿಕ ದಿನಗಳಲ್ಲಿ ಬರೆದ ಒಂದು ಬರಹವನ್ನು ಮತ್ತೆ ಓದಿ ನೋಡಿ. ಎಷ್ಟೊಂದು ಪೇವಲವಾಗಿ ಬರೆದಿದ್ದೇನಲ್ಲ ಅಂತ ನಿಮಗೆಯೇ ಅನಿಸಲೂಬಹುದು. ಕಾಲ ಉರುಳಿದಂತೆ, ನಮ್ಮ ಅನುಭವಗಳು ದಟ್ಟವಾದಂತೆ ಬರವಣಿಗೆಯೂ...