(ಈ ಲೇಖನ ಹೊಸಬರಹದಲ್ಲಿದೆ. ಇಲ್ಲಿ ಮಹಾಪ್ರಾಣಗಳ ಬಳಕೆಯನ್ನು ಕಡಿತಗೊಳಿಸಲಾಗಿದೆ)

’1960-70ರ ದಶಕದಲ್ಲಿ ನೀವು ಪಡ್ಡೆಹುಡುಗರ ನಿದ್ದೆ ಕೆಡಿಸಿದ್ದು ಸರಿಯೇ’ ಎಂದು ಪತ್ರಕರ್ತರು ಕೀಟಲೆ ಮಾಡಿದಾಗ ಕಣ್ಣರಳಿಸಿ ’ಹೌದಾ’ ಎಂದು ತುಂಟನಗೆ ಬೀರಿದ್ದರು ನಟಿ ಜಯಂತಿ. ಮುಗ್ದತೆ ಮತ್ತು ತುಂಟತನ ಎರಡೂ ಅವರ ವ್ಯಕ್ತಿತ್ವದ ಭಾಗವಾಗಿತ್ತು. ಇಂದು ತಮ್ಮ 76ನೇ ವಯಸ್ಸಿನಲ್ಲಿ ನಿದನರಾಗಿದ್ದಾರೆ. ನನಗಂತೂ ಜಯಂತಿಯವರು ವೃದ್ದರಾಗುತ್ತಾರೆ ಎನ್ನುವ ನಂಬಿಕೆಯೇ ಇರಲಿಲ್ಲ. ಈಗಲೂ ಸಹ ನಂಬುವುದು ಕಷ್ಟ. ಇದಕ್ಕೆ ಅವರ ವ್ಯಕ್ತಿತ್ವದೊಳಗಿನ ತಾರುಣ್ಯದ ಮನಸ್ಸು, ಗಟ್ಟಿತನ ಹಾಗೂ ಬಂದದ್ದನ್ನು ಹಾಗೇ ಎದುರಿಸುವೆ ಎನ್ನುವ ನಿರ್ಲಿಪ್ತತೆಯೂ ಸಹ ಕಾರಣ. ಕನ್ನಡ, ತಮಿಳು, ತೆಲುಗು, ಹಿಂದಿ ಒಳಗೊಂಡಂತೆ ಆರು ಬಾಶೆಗಳಲ್ಲಿ ನಟಿಸಿದ್ದ ಜಯಂತಿಯವರು ರಾಜಕುಮಾರ್, ಉದಯ್‌ಕುಮಾರ್, ಕಲ್ಯಾಣಕುಮಾರ್, ರಾಜೇಶ್, ಎಎನ್‌ಆರ್, ಎನ್‌ಟಿಆರ್, ಜೆಮಿನಿ ಗಣೇಶನ್, ಎಂಜಿಆರ್, ಶಿವಾಜಿ ಗಣೇಶನ್‌ರಂತಹ ಹಿರಿಯ ಕಲಾವಿದರ ಜೊತೆ ಅಬಿನಯಿಸಿದಶ್ಟೇ ಸರಾಗವಾಗಿ ತನಗಿಂತ ಕಿರಿಯರಾದ ವಿಶ್ಣುವರ್ದನ್, ಅನಂತನಾಗ್, ಶ್ರೀನಾಥರಂತಹ ಕಲಾವಿದರ ಜೊತೆಗೂ ನಾಯಕಿಯಾಗಿ ನಟಿಸಿದ್ದರು ಮತ್ತು ಈ ಕಿರಿಯ ಕಲಾವಿದರಿಗಿಂತಲೂ ಹೆಚ್ಚು ಯೌವ್ವನದಿಂದ ಕಂಗೊಳಿಸುತ್ತಿದ್ದರು. ಬಹದ್ದೂರ್ ಗಂಡು ಸಿನಿಮಾದಲ್ಲಿನ ಜಯಂತಿಯವರ ಆ ನಳನಳಿಸುವ ಪ್ರಖರ ಸೌಂದರ್ಯವು ಇಂದಿಗೂ ಕಾಡುತ್ತದೆ. ಮಿಸ್ ಲೀಲಾವತಿ, ಜೇಡರ ಬಲೆ, ಬಹದ್ದೂರ ಗಂಡು ಸಿನಿಮಾಗಳಲ್ಲಿ ಜಯಂತಿ ಬಿಕಿನಿ ದರಿಸಿದ್ದರು ಎನ್ನುವುದು ತೊಂಬತ್ತರ ದಶಕದವರೆಗೂ ಚರ್ಚೆಯ ವಿಶಯವಾಗಿತ್ತು. ಜಯಂತಿಯವರ ವ್ಯಕ್ತಿತ್ವದಲ್ಲಿನ ಮಾದಕತೆ ಪ್ರೇಕ್ಷಕರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿತ್ತು.

ವಿಪರ್ಯಾಸವೆಂದರೆ ಆ ಕಾಲದಲ್ಲಿ ’ತೆಳ್ಳಗೆ, ಬೆಳ್ಳಗೆ ಬಳಕುವ ಬಳ್ಳಿಯಂತಿರುವ ಭಾರತಿ ನಮಗೆ ಇಶ್ಟ’ ಎಂದು ಮದ್ಯಮವರ್ಗವು ಕೊಂಡಾಡುತ್ತಿತ್ತು. ಪ್ರೇಕ್ಷಕರು ಮಾತ್ರ ಜಯಂತಿಯನ್ನು ಇದನ್ನು ಹೊರತುಪಡಿಸಿದ ಅನೇಕ ಕಾರಣಗಳಿಗೆ ಪ್ರೀತಿಸಿದ್ದರು. ಆಗ ಚಾಲ್ತಿಯಲ್ಲಿದ್ದ “ಆರತಿ, ಭಾರತಿ, ಕಲ್ಪನ, ಮಂಜುಳ, ಚಂದ್ರಕಲಾ” ಎಂದು ನಾಯಕಿಯರ ಗುಣಗಾನದ ಸಾಲಿನಲ್ಲಿ ಜಯಂತಿಯವರ ಹೆಸರು ಇಲ್ಲದಿರುವುದು ನಮಗೆ ಆಶ್ಚರ್ಯವಾಗಿತ್ತು. ವಂಚನೆಯಂತೆ ಕಾಣುತ್ತಿತ್ತು. ಆದರೆ ವೃತ್ತಿಜೀವನ ಮತ್ತು ವೈಯಕ್ತಿಕ ಜೀವನದಲ್ಲಿ ಎದುರಿಸಿದ ಸವಾಲುಗಳ ಹಿನ್ನೆಲೆಯಲ್ಲಿ ಈ ಎಲ್ಲಾ ನಟಿಯರಿಗಿಂತಲೂ ಜಯಂತಿ ಬಹಳ ಮುಖ್ಯವಾಗುತ್ತಾರೆ. 1963ರಲ್ಲಿ ಜಯಂತಿ ಸಿನಿಮಾರಂಗ ಪ್ರವೇಶಿಸಿದ ಸಂದರ್ಬದಲ್ಲಿ ಬಿ.ಸರೋಜಾದೇವಿ ಜನಪ್ರಿಯ ನಾಯಕಿಯಾಗಿದ್ದರು. ಕನ್ನಡ, ತಮಿಳು, ಹಿಂದಿ ಸಿನಿಮಾಗಳಲ್ಲಿ ಮಿಂಚುತ್ತಿದ್ದರು. 1961ರಲ್ಲಿ ಎನ್‌ಟಿಆರ್ ನಾಯಕ, ಬಿ.ಸರೋಜಾದೇವಿ ನಾಯಕಿಯಾಗಿ ನಟಿಸಿದ್ದ ತೆಲುಗಿನ ’ಜಗದೇಕವೀರುನಿ ಕಥಾ’ ಸಿನಿಮಾದಲ್ಲಿ ಜಯಂತಿಯವರೂ ಸಹ ಸಣ್ಣ ಪಾತ್ರ ಮಾಡಿದ್ದರು.

ಇನ್ನು ಕನ್ನಡದ ಲೀಲಾವತಿ, ಹರಿಣಿಯವರನ್ನು ಹೊರತುಪಡಿಸಿದರೆ 1950-1965ರವರೆಗೆ ಕ್ರಿಷ್ಣಕುಮಾರಿ, ಸಾಹುಕಾರ್ ಜಾನಕಿ, ಜಮುನಾ, ರಾಜಶ್ರೀಯಂತಹ ಪರಬಾಷಾ ಕಲಾವಿದೆಯರು ಕನ್ನಡದಲ್ಲಿಯೂ ನಟಿಸುತ್ತಿದ್ದರು. ಮತ್ತು ಆ ಕಾಲದ ಬಹುತೇಕ ನಟಿಯರು ರಂಗಬೂಮಿಯ ಹಿನ್ನೆಲೆಯಿಂದ ಬಂದವರಾಗಿದ್ದರು ಆದರೆ ಜಯಂತಿಯವರಿಗೆ ಯಾವ ನಟನೆಯ ಅನುಬವವೂ ಇರಲಿಲ್ಲ. ಆದರೆ ಕನ್ನಡದ ನಟಿ ಎನ್ನುವ ಹೆಚ್ಚುವರಿ ಪ್ರಶಂಸೆಯೂ ಸೇರಿದಂತೆ (ಆಗ ಅವರ ಕನ್ನಡ ಉಚ್ಚಾರಣೆಯೂ ಬಳ್ಳಾರಿಯ ಶೈಲಿಯ ಆಂದ್ರಮಿಶ್ರಿತವಾಗಿತ್ತು ಎಂದೂ ಹೇಳುತ್ತಾರೆ) ಸ್ವತಃ ಅವರೊಳಗಿನ ವೃತ್ತಿಪರತೆಯ ಕಾರಣದಿಂದ ಸಹ ಬಲುಬೇಗನೆ ಸ್ಟಾರ್ ಆಗಿ ಬೆಳೆದರು. ಅವರು ಅಬಿನಯಿಸಿದ ಮೂರನೇ ಸಿನಿಮಾ ’ಚಂದವಳ್ಳಿಯ ತೋಟ’ದಲ್ಲಿ ನಾಯಕಿಯಾಗಿ ಆಯ್ಕೆಯಾದರು. ನಂತರ ಹಿಂದಿರುಗಿ ನೋಡುವ ಪ್ರಮೇಯವೇ ಬರಲಿಲ್ಲ.

ಜಯಂತಿ ನಾಯಕಿಯಾಗಿ ತಮ್ಮ ಸಿನಿಮಾ ಪಯಣ ಆರಂಬಿಸಿದ ದಿನಗಳಲ್ಲಿ ರಾಜ್‌ಕುಮಾರ್-ಲೀಲಾವತಿ ಜನಪ್ರಿಯ ಜೋಡಿಯಾಗಿತ್ತು. ಆದರೆ ’ಚಂದವಳ್ಳಿಯ ತೋಟ’ ಸಿನಿಮಾದಲ್ಲಿ ಹನುಮನ ಪಾತ್ರ ವಹಿಸಿದ್ದ ರಾಜಕುಮಾರ್ ಜೊತೆಗೆ ನಾಯಕಿಯಾಗಿ ತುಂಬಾ ಸಹಜವಾಗಿ ಅಬಿನಯಿಸಿದ ಜಯಂತಿ ಚಿತ್ರರಂಗದ ಗಮನ ಸೆಳೆಯಲು ತಡವಾಗಲಿಲ್ಲ. ನಂತರ ರಾಜ್ ಜೊತೆ ಮುಂದಿನ ಹತ್ತು ವರ್ಶಗಳಲ್ಲಿ ನಲವತ್ತು ಸಿನಿಮಾಗಳಲ್ಲಿ ನಟಿಸಿದ್ದರು. ಸಂದರ್ಶನವೊಂದರಲ್ಲಿ ಅವರೇ ಹೇಳಿಕೊಂಡಂತೆ ಅಣ್ಣಾವ್ರನ್ನು ’ರಾಜ್’ ಎಂದು ಕರೆಯುತ್ತಿದ್ದ ಏಕಮಾತ್ರ ನಟಿ ಜಯಂತಿ. ಪರೋಪಕಾರಿ ಸಿನಿಮಾದ ’ಹೋದರೆ ಹೋಗು ನನಗೇನು’ ಯುಗಳ ಗೀತೆಯಲ್ಲಿ ರಾಜ್‌ರವರು ಜಯಂತಿಯವರನ್ನು ’ಈ ದಾರಿಲಿ ಬರೀ ಕಲ್ಲು, ಬರೀ ಮುಳ್ಳು’ ಎಂದು ಛೇಡಿಸಿ
ಕೆಣಕುವುದು ಅದಕ್ಕೆ ಸರಿಸಾಟಿಯಾಗಿ ’ನನ್ನನು ಕಾಡಿ ಫಲವಿಲ್ಲ, ಹೆದರುವ ಹೆಣ್ಣು ನಾನಲ್ಲ, ಬಲ್ಲೇ ನಿನ್ನ ತುಂಟಾಟ… ಓ ರಾಜಕುಮಾರ್ ಎಂದು ಜಯಂತಿ ಟಾಂಗ್ ಕೊಡುವುದು ನೋಡುವುದೇ ಚಂದ. ಆರು ವರ್ಶಗಳ ನಂತರ ’ಬಹದ್ದೂರ್ ಗಂಡು’ ಸಿನಿಮಾದಲ್ಲಿ ಅಣ್ಣಾವ್ರು ’ಮುತ್ತಿನಂಥ ಮಾತೊಂದು ಗೊತ್ತೇನಮ್ಮ’ ಎಂದು ಛೇಡಿಸಿದಶ್ಟೂ ಕೋಪಾವಿಶ್ಟಳಾಗುವ ಜಯಂತಿಯ ಎಂದಿಗೂ ಮಾಸದ ಆ ಸೌಂದರ್ಯವೂ ಸಹ ನೋಡಲು ಚಂದವೋ ಚಂದ.

 

ಸ್ವಲ್ಪ ಸ್ಥೂಲವೆನ್ನಬಹುದಾದ ದೇಹ, ಸೆಳೆಯುವ ದನಿಯಿಲ್ಲದ ಮತ್ತು ನಟನಾ ಪ್ರತಿಬೆಯ ಕೊರತೆಯಿದ್ದರೂ ಸಹ ಒಬ್ಬ ವೃತ್ತಿಪರ ನಟಿಗಿರಬೇಕಾದ ಅಂಗಿಕ ಬಾಶೆ, ಬಟ್ಟಲು ಕಣ್ಣುಗಳ ಆ ಮಿಂಚು ಮತ್ತು ಮುದ್ದು ಮುಖದಲ್ಲಿ ಲೀಲಾಜಾಲವಾಗಿ ವ್ಯಕ್ತಪಡಿಸುತ್ತಿದ್ದ ಬಾವನೆಗಳ ಮೂಲಕವೇ ಜಯಂತಿ ಪ್ರೇಕ್ಷಕರ ಮೋಡಿ ಮಾಡುತ್ತಿದ್ದರು. ನಂತರ ಬಿರುಗಾಳಿಯಂತೆ ಬಂದ ಕಲ್ಪನಾ, ಎಪ್ಪತ್ತರ ದಶಕದ ಆರತಿ, ಮಂಜುಳಾ, ಜಯಮಾಲಾರಂತಹ ಹೊಸ ಸ್ಟಾರ್‌ಗಳ ಪ್ರವಾಹದಲ್ಲಿಯೂ ಕೊಚ್ಚಿ ಹೋಗದೆ ಎಂಬತ್ತರ ದಶಕದ ಆರಂಬದ ಸಿನಿಮಾ ’ಜನ್ಮ ಜನ್ಮದ ಅನುಬಂಧ’ದವರೆಗೂ ತಮ್ಮ ನಾಯಕಿಯ ಪಟ್ಟವನ್ನು ಉಳಿಸಿಕೊಂಡರು. 17 ವರ್ಶಗಳ ಕಾಲ ನಾಯಕಿಯಾಗಿ ಅಬಿನಯಿಸಿದ ಅಪರೂಪದ ಕಲಾವಿದೆ ಜಯಂತಿ. ಇದಕ್ಕೆ ಸರಿಸಾಟಿ ಉದಾಹರಣೆ ಬೇರೆಲ್ಲಿಯೂ ಕಂಡುಬರುವುದಿಲ್ಲ. ಯಾವುದೇ ಇಮೇಜ್‌ನ ಹಂಗಿಲ್ಲದೆ ಎಲ್ಲಾ ಬಗೆಯ ಪಾತ್ರಗಳಲ್ಲಿ ತೊಡಗಿಸಿಕೊಂಡರು ಮತ್ತು ಇದನ್ನು ಸವಾಲಾಗಿ ಸ್ವೀಕರಿಸಿದ್ದರು.

ಅಳುಮುಂಜಿಯಾಗಿ ನಟಿಸಿದಶ್ಟೇ ಸಲೀಸಾಗಿ ಬಿಕಿನಿ ತೊಟ್ಟೂ ಮಿಂಚಬಲ್ಲ ಜಯಂತಿ ಹುಡುಗಾಟದ ಹುಡುಗಿಯಾಗಿಯೂ ರಂಜಿಸಬಲ್ಲವರಾಗಿದ್ದರು. ’ಲಗ್ನಪತ್ರಿಕೆ’ಯ ಗಯ್ಯಾಳಿ ಸೀತಾಳ ಪಾತ್ರದಲ್ಲಿ ಮನಸೂರೆಗೊಳ್ಳುವ ಜಯಂತಿ ’ಕಸ್ತೂರಿ ನಿವಾಸ’ದ ನೀಲಾ ಪಾತ್ರದ ಆ ಮೌನ ಮತ್ತು ಅಂತರ್ಮುಖಿಯ ಸಂಕೀರ್ಣತೆಯನ್ನು, ಅನಾಥೆಯಾಗಿ ಪ್ರತಿಕ್ಷಣ ಎದುರಿಸಬೇಕಾದ ತನ್ನ ಕೈ ಮೀರಿದ ಬದುಕಿನ ತಿರುವುಗಳನ್ನು
ಸಮರ್ಥವಾಗಿ ಅಬಿನಯಿಸಿದ್ದರು. ’ಚಂದವಳ್ಳಿಯ ತೋಟ’, ’ಚಕ್ರತೀರ್ಥ’ ಸಿನಿಮಾಗಳಲ್ಲಿ ಕುಟುಂಬ ಉಳಿಸಿಕೊಳ್ಳುವ ಟಿಪಿಕಲ್ ಭಾರತೀಯ ಮಹಿಳೆಯ ಪಾತ್ರಗಳನ್ನು ನಿರ್ವಹಿಸಿದ್ದರು

1965ರಲ್ಲಿ ಬಿಡುಗಡೆಯಾದ ’ಮಿಸ್ ಲೀಲಾವತಿ’ ಸಿನಿಮಾದಲ್ಲಿ ಆದುನಿಕತೆಯನ್ನು ಮೈಗೂಡಿಸಿಕೊಂಡ ನಾಯಕಿ ವಿವಾಹಪೂರ್ವ ಲೈಂಗಿಕತೆಯನ್ನು ಬೆಂಬಲಿಸುವ, ಸ್ವತಂತ್ರವಾಗಿ ಬದುಕಲು ಇಚ್ಚಿಸುವ ದಿಟ್ಟ ಸ್ತ್ರೀವಾದಿ ಪಾತ್ರದಲ್ಲಿ ನಟಿಸಿದ ಜಯಂತಿ ಎಂಟು ವರ್ಶಗಳ ನಂತರ ಇದಕ್ಕೆ ಸಂಪೂರ್ಣ ವ್ಯತಿರಿಕ್ತವಾಗಿ ಪುಟ್ಟಣ ಕಣಗಾಲ್ ನಿರ್ದೇಶನದ ’ಎಡಕಲ್ಲು ಗುಡ್ಡದ ಮೇಲೆ’ ಸಿನಿಮಾದಲ್ಲಿ ವಿವಾಹಬಾಹಿರ ಸಂಬಂದಕ್ಕೆ ಹಪಾಹಪಿಸುವವಳು ಎಂಬಂತೆ ಕೆಟ್ಟದಾಗಿ ಬಿಂಬಿಸಲ್ಪಟ್ಟ ’ಮಾದವಿ’ ಪಾತ್ರದಲ್ಲಿ ಅಬಿನಯಿಸಿದರು. ಸಹಜವಾಗಿಯೇ ಭಾರತದಂತಹ ಸಾಂಪ್ರದಾಯಿಕ, ಪುರುಶಾದಿಪತ್ಯದ ಸಮಾಜವು ಈ ಮಾದವಿಯ ದೈಹಿಕ ಬಯಕೆಯನ್ನು, ಆಯ್ಕೆಯ ಸ್ವಾತಂತ್ರ್ಯವನ್ನು ಒಂದು ಅಪರಾದವೆನ್ನುವಂತೆ ಟೀಕಿಸಿತು.

ಈ ಕರ್ಮಠ ವ್ಯವಸ್ಥೆಗೆ ಪೂರಕವಾಗಿ ನಿರ್ದೇಶಕ ಪುಟ್ಟಣ ಕಣಗಾಲ್‌ರವರು ಮಾದವಿ ಪಾತ್ರವನ್ನು ತನ್ನ ಗಂಡ ರಂಗನನ್ನು ತಿರಸ್ಕರಿಸಿ ಲೈಂಗಿಕ ತೃಶೆಗೋಸ್ಕರ ನಂಜುಂಡನ ಜೊತೆಗೆ ಅಕ್ರಮ ಸಂಬಂದ ಬೆಳೆಸುತ್ತಾಳೆ ಎಂದು ಕೀಳಾಗಿ ಚಿತ್ರಿಸಿದರು ಮತ್ತು ಆಕೆಯ ತಂಗಿ ದೇವಕಿಯು ಈ ಸಂಬಂದವನ್ನು ವಿರೋದಿಸಿ ’ನಿಲ್ಲು ನಿಲ್ಲು ಪತಂಗ, ಬೇಡ ಬೇಡ ಬೆಂಕಿಯ ಸಂಗ’ ಎಂದು ಮಾದವಿಯನ್ನು ಎಚ್ಚರಿಸುತ್ತಾಳೆ. ಮತ್ತು ಜಯಂತಿಯವರೂ ಸಹ ಈ ಪಾತ್ರ ತನ್ನ ಸಿನಿಮಾ ಜೀವನದ ಮೈಲಿಗಲ್ಲು ಎಂದು ಮುಗ್ಧವಾಗಿ ನಂಬಿದ್ದರು. ಹಾಗಿದ್ದರೆ ಮಿಸ್ ಲೀಲಾವತಿಯ ಪಾತ್ರ ಒಂದು ಸುಳ್ಳಾ ಎಂದು ನಾನು ಅನೇಕ ಬಾರಿ ಜಯಂತಿಯವರನ್ನು ಕೇಳಲು ಪ್ರಯತ್ನಿಸಿದೆ. ದೈರ್ಯ ಬರಲಿಲ್ಲ. ಪುಟ್ಟಣನವರ ಮಹಿಳಾ ವಿರೋದಿ, ಸನಾತನವಾದಿ ದೃಶ್ಟಿಕೋನದ ಪಾತ್ರ ಪೋಶಣೆಯು ಮಾದವಿಯ ಪಾತ್ರದ ಎಲ್ಲಾ ಮಗ್ಗಲುಗಳನ್ನು ಲೀಲಾಜಾಲವಾಗಿ ನಿಬಾಯಿಸಿದ ಜಯಂತಿಯವರ ಆ ಸಮರ್ಥ ಅಬಿನಯವನ್ನು ನುಂಗಿ ಜೀರ್ಣಿಸಿಕೊಂಡಿತು. ಮಹಿಳೆಗೂ ಒಂದು ವ್ಯಕ್ತಿತ್ವವಿರುತ್ತದೆ, ಆಕೆಯದೇ ಆಯ್ಕೆಯಿರುತ್ತದೆ ಅದು ಬೌದ್ದಿಕವಿರಬಹುದು, ಬೌತಿಕವಿರಬಹುದು, ಕಡೆಗೂ ಅದು ಆಕೆಯ ಸ್ವಾತಂತ್ರ್ಯ ಎನ್ನುವ ಮಾನವೀಯ ನೀತಿಯನ್ನು ದಿಕ್ಕರಿಸಿ ಆಕೆ ಹಾದಿ ತಪ್ಪಿದವಳು ಎಂದು ಹೇಳಿಕೆಕೊಟ್ಟ ಪುಟ್ಟಣ ಕಣಗಾಲ್ ಒಬ್ಬ ಜೀವ ವಿರೋದಿ ನಿರ್ದೇಶಕನಾಗಿ ಮೆರೆದರೆ ಜಯಂತಿಯವರು ಅದರ ಬಲಿಪಶುವಾದರು.

ತಮ್ಮ ಸಿನಿಮಾ ಜೀವನವನ್ನು ಪಕ್ಕಾ ವೃತ್ತಿಪರಳಾಗಿ ಯಶಸ್ವಿಯಾಗಿ ನಿರ್ವಹಿಸಿದ ಜಯಂತಿಯವರು ವೈಯುಕ್ತಿಕ ಬದುಕಿನಲ್ಲಿ ಅಪ್ರಬುದ್ದಳಂತೆ ಪ್ರತಿ ಹಂತದಲ್ಲಿ ಎಡವಿದ್ದು ಸೋಜಿಗವನ್ನು ಮೂಡಿಸುತ್ತದೆ. ಯಾಕೆ ಹೀಗೆ? ಜಾಣೆಯಾಗಿರಬೇಕಾದ ಸಂದರ್ಭದಲ್ಲಿ ಹುಂಬತನದ ನಿರ್ದಾರಗಳನ್ನು ತೆಗೆದುಕೊಂಡ ಜಯಂತಿ ಅದರ ಕಾರಣಕ್ಕೆ ಅಪಾರ ನಶ್ಟ ಮತ್ತು ಮಾನಸಿಕ ಅಶಾಂತಿ ಅನುಬವಿಸಬೇಕಾಯಿತು. ಅದಾಗಲೇ ಮದುವೆಯಾಗಿದ್ದ, ತನಗಿಂತ 27 ವರ್ಶ ದೊಡ್ಡವರಾಗಿದ್ದ ನಟ, ನಿರ್ದೇಶಕ ಪೇಕೆಟಿ ಶಿವಾರಂ ಅವರನ್ನು ಮದುವೆಯಾದ ಜಯಂತಿ ಆ ದಾಂಪತ್ಯದಲ್ಲಿ ಯಾತನೆ, ನೋವು ಅನುಬವಿಸಿದರು. ನಂತರ ತನಗಿಂತ ಕಿರಿಯರಾದ ರಾಜಶೇಖರ್ ಎಂಬುವವರನ್ನು ಮದುವೆಯಾದರು. ಮತ್ತು ಆತನನ್ನು ಸಿನಿಮಾ ಸ್ಟಾರ್ ಮಾಡಲು ಸಿನಿಮಾ ನಿರ್ಮಾಣಕ್ಕಿಳಿದರು ಮತ್ತು ಹಣ ಕಳೆದುಕೊಂಡರು. ಈ ಸಂಬಂದವೂ ಉಳಿಯಲಿಲ್ಲ.

ತನ್ನ ಬದುಕಿನಲ್ಲಿ ಬಂದ ಗಂಡಸರ ಕುರಿತು ’ಸೇವಿ’ ಇಂಗ್ಲೀಶ್ ಪತ್ರಿಕೆಯಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ. ಇದೆಲ್ಲದರಾಚೆ ವೈಯಕ್ತಿಕ ವೈಫಲ್ಯಗಳನ್ನು ಮೀರಿ ಸ್ವಾಬಿಮಾನದಿಂದ ಬದುಕಿದ ಜಯಂತಿಯರ ಆ ಮಾನಸಿಕ ಶಕ್ತಿ, ಆತ್ಮಬಲ ಇಂದಿಗೂ ಬೆರಗು ಮೂಡಿಸುತ್ತದೆ. ಇವೆರಡೂ ಇಲ್ಲದ ಮೀನಾಕುಮಾರಿ, ಸಾವಿತ್ರಿ, ಕಲ್ಪನಾರಂತಹ ಸೂಕ್ಷ್ಮ ಸಂವೇದನೆಯ ಕಲಾವಿದೆಯರು ಬದುಕನ್ನು ಅದು ಬಂದಂತೆ ಸ್ವೀಕರಿಸಲು, ನಿರ್ವಹಿಸಲು ವಿಫಲರಾಗಿ, ಆ ಕ್ಷಣದ ದೌರ್ಬಲ್ಯಕ್ಕೆ ಬಲಿಯಾಗಿ ಆತ್ಮಹತ್ಯೆ ಮಾಡಿಕೊಂಡರು. ಆದರೆ ಈ ನಟಿಯರಿಗಿಂತಲೂ ಹತ್ತು ಪಟ್ಟು ಹೆಚ್ಚು ಅವಮಾನ, ತಲ್ಲಣ, ದೌರ್ಜನ್ಯಗಳನ್ನು ಅನುಬವಿಸಿದ ಜಯಂತಿ ಇದೆಲ್ಲವನ್ನೂ ಹಿಂದಿಕ್ಕಿ ’ಆನು ಒಲಿದಂತೆ ಹಾಡುವೆ’ ಎಂದು ಘನತೆಯಿಂದ ಬದುಕಿದ್ದು ನಿಜಕ್ಕೂ ಬೆರಗು ಮೂಡಿಸುತ್ತದೆ.

ಜಯಂತಿ ಎಂದರೆ ನಮ್ಮೆಲ್ಲರ ಹೆಮ್ಮೆ. ಅವರಿಗೆ ನಮ್ಮ ವಿದಾಯಗಳು

ಬಿ. ಶ್ರೀಪಾದ ಭಟ್

ಬಿ. ಶ್ರೀಪಾದ ಭಟ್
ವೃತ್ತಿಯಲ್ಲಿ ಇಂಜಿನಿಯರ್ ಆದ ಬಿ.ಶ್ರೀಪಾದ್ ಭಟ್ ಹಿರಿಯ ಚಿಂತಕ, ಬರಹಗಾರ. ಹಲವು ಸಾಮಾಜಿಕ ಚಳವಳಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಸಮಾಜದ ಆಗುಹೋಗುಗಳಿಗೆ ನಿರಂತರ ಸ್ಪಂದಿಸುವ ಇವರು ಸಮಾನ ಶಿಕ್ಷಣಕ್ಕಾಗಿ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ.


ಇದನ್ನೂ ಓದಿ: ಸರ್ವಾಧಿಕಾರದ ಧೋರಣೆಗೆ ವಿರುದ್ಧವಾಗಿ ಪ್ರಜಾಸತ್ತಾತ್ಮಕ ಮೌಲ್ಯಗಳ ’ಸರ್‌ಪಟ್ಟ ಪರಂಪರೈ’

LEAVE A REPLY

Please enter your comment!
Please enter your name here