ಈ ತಿಂಗಳು ಉಕ್ರೇನ್‌ನಲ್ಲಿ ನಡೆಯುತ್ತಿರುವ ಮಿನಿ ಫುಟ್ಬಾಲ್ ಮಹಿಳಾ ವಿಶ್ವಕಪ್ -2021ರ ಭಾರತೀಯ ಫುಟ್‌ಬಾಲ್ ತಂಡದಲ್ಲಿ ಕರ್ನಾಟಕದ ಐವರು ಯುವತಿಯರು ಆಟವಾಡಲಿದ್ದಾರೆ. ಅದರಲ್ಲೂ ಈ ತಂಡದಲ್ಲಿ ಬೆಳಗಾವಿಯ ಮೂವರು ಯುವತಿಯು ಸ್ಥಾನ ಪಡೆದುಕೊಂಡಿದ್ದಾರೆ.
ಬೆಳಗಾವಿಯ ಬೇರೆ ಬೇರೆ ಪದವಿ ಕಾಲೇಜುಗಳಲ್ಲಿ ಓದುತ್ತಿರುವ ಅಂಜಲಿ, ಅದಿತಿ ಮತ್ತು ಪ್ರಿಯಾಂಕಾ ಎಂಬ ಮೂವರು ವಿದ್ಯಾರ್ಥಿನಿಯರು ತಂಡದಲ್ಲಿದ್ದಾರೆ. ಇವರ ಜೊತೆಗೆ ಬೆಂಗಳೂರಿನ ಸಂಜನಾ ಮತ್ತು ವಿಭಾ ಕೂಡ ಸ್ಥಾನ ಪಡೆದಿದ್ದಾರೆ. 11 ಕ್ರೀಡಾಪಟುಗಳಿರುವ ಭಾರತೀಯ ತಂಡದಲ್ಲಿ ಐವರು ಕನ್ನಡಿಗರು ಸ್ಥಾನ ಪಡೆದುಕೊಂಡಿದ್ದಾರೆ.
ಈ ಐವರು ಯುವತಿಯರು ಜುಲೈ ಕೊನೆಯ ವಾರದಲ್ಲಿ ಬೆಂಗಳೂರಿನಲ್ಲಿ ಎಂಟು ದಿನಗಳ ಕಾಲ ವಿಶೇಷ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದರು. ಅಂಜಲಿ, ಅದಿತಿ ಮತ್ತು ಪ್ರಿಯಾಂಕಾ ಬೆಳಗಾವಿ ಯುನೈಟೆಡ್ ಫುಟ್ಬಾಲ್ ಅಕಾಡೆಮಿಯಲ್ಲಿ ಮತಿನ್ ಇನಾಮದಾರ್ ಅವರ ಮಾರ್ಗದರ್ಶನದಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.
ಇದನ್ನೂ ಓದಿ: ಟೋಕಿಯೋ ಒಲಂಪಿಕ್‌ನಲ್ಲಿ ಭಾರತಕ್ಕೆ ಮೊದಲ ಪದಕ: ಬೆಳ್ಳಿ ಗೆದ್ದ ಮೀರಾಬಾಯಿ ಚಾನು
ಬೆಂಗಳೂರಿನಲ್ಲಿ ನಡೆದ ಸೂಪರ್ ಡಿವಿಷನ್ ಲೀಗ್ ಪಂದ್ಯಗಳಲ್ಲಿ ಇವರೆಲ್ಲರೂ ಭಾಗವಹಿಸಿದ್ದರು. ನಂತರ ಅವರನ್ನು ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಆಗಸ್ಟ್ 6 ರಂದು ಐವರು ಕನ್ನಡತಿಯರು ದೆಹಲಿಗೆ ತೆರಳಲಿದ್ದು, ಅಲ್ಲಿಂದ ಉಕ್ರೇನ್‌ಗೆ ಪ್ರಯಾಣಿಸಲಿದ್ದಾರೆ.
“ನಾನು ಭಾರತ ತಂಡದಲ್ಲಿ ಆಡಲು ಉತ್ಸುಕಳಾಗಿದ್ದೇನೆ. ತಂಡಕ್ಕೆ ಆಯ್ಕೆಯಾದ ನಂತರ ಅಭಿನಂದನಾ ಸಂದೇಶಗಳು ಹರಿದು ಬರುತ್ತಿವೆ. ನನ್ನ ಚೊಚ್ಚಲ ಅಂತರಾಷ್ಟ್ರೀಯ ಸ್ಪರ್ಧೆ ಇದಾಗಿದ್ದು, ಉತ್ತಮ ಪ್ರದರ್ಶನ ನೀಡುತ್ತೇನೆ ಎಂದು ಆಶೀಸುತ್ತೇನೆ” ಎಂದು ಬೆಳಗಾವಿಯ ಕೆಎಲ್‌ಇ ಲಿಂಗರಾಜ್ ಕಾಲೇಜಿನ ಬಿಕಾಂ ವಿದ್ಯಾರ್ಥಿನಿ ಅಂಜಲಿ ಹೇಳಿದ್ದಾರೆ.
ಬೆಳಗಾವಿಯ ಕೆಎಲ್‌ಇ ಲಿಂಗರಾಜ್ ಕಾಲೇಜಿನಲ್ಲಿ ಅದಿತಿ ಜಾಧವ್ ಬಿಎ ವಿದ್ಯಾರ್ಥಿನಿಯಾಗಿದ್ದಾರೆ. ಪ್ರಿಯಾಂಕ ಕಾಂಗ್ರಾಲ್ಕರ್ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಬಿಕಾಂ ಓದುತ್ತಿದ್ದಾರೆ. 23 ವರ್ಷದೊಳಗಿನ ಮಿನಿ ಫುಟ್ಬಾಲ್ ಮಹಿಳಾ ವಿಶ್ವಕಪ್ -2021 ಏಳು-ಬದಿಯ ಪಂದ್ಯಾವಳಿಯಾಗಿದ್ದು, ಇದು ಉಕ್ರೇನ್‌ನ ಕೀವ್‌ನಲ್ಲಿ ಆಗಸ್ಟ್ 11 ರಿಂದ 16 ರವರೆಗೆ ನಡೆಯಲಿದೆ.
ಇದನ್ನೂ ಓದಿ: ಒಲಿಂಪಿಕ್ಸ್ ಬಾಕ್ಸಿಂಗ್: ಭಾರತಕ್ಕೆ ಮತ್ತೊಂದು ಪದಕ ತಂದುಕೊಟ್ಟ ಹೆಣ್ಣುಮಗಳು ಲವ್ಲಿನಾ


