ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯಲ್ಲಿ ಬುಧವಾರ ಮಧ್ಯಾಹ್ನ ಸಂಭವಿಸಿದ ಭೂಕುಸಿತದಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾರೆ. ದುರಂತದಲ್ಲಿ ಸುಮಾರು 30 ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿದ್ದಾರೆ ಎಂದು ಶಂಕಿಸಲಾಗಿದೆ.
ಕಿನ್ನೌರ್‌ನ ರಿಕಾಂಗ್ ಪಿಯೋ-ಶಿಮ್ಲಾ ಹೆದ್ದಾರಿಯಲ್ಲಿ ಮಧ್ಯಾಹ್ನ 12.45 ರ ಸುಮಾರಿಗೆ ಭೂಕುಸಿತ ಸಂಭವಿಸಿದೆ. ಒಂದು ಟ್ರಕ್, ಸರ್ಕಾರಿ ಬಸ್ ಮತ್ತು ಇತರ ವಾಹನಗಳು ಅವಶೇಷಗಳ ಅಡಿಯಲ್ಲಿ ಸಿಲುಕಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಿಮ್ಲಾಕ್ಕೆ ಪ್ರಯಾಣಿಸುತ್ತಿದ್ದ ಬಸ್ಸಿನಲ್ಲಿ 40 ಜನರಿದ್ದರು ಎಂದು ವರದಿಗಳು ತಿಳಿಸಿವೆ. 25 ರಿಂದ 30 ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿದ್ದಾರೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಈವರೆಗೆ ಚಾಲಕ ಸೇರಿದಂತೆ ಆರು ಜನರನ್ನು ರಕ್ಷಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟ -ಸಿಡಿಲಿನ ಹೊಡೆತಕ್ಕೆ 75 ಸಾವು
A landslide reported on Reckong Peo- Shimla Highway in #Kinnaur District in Himachal Pradesh today at around 12.45 Hrs. One truck, a HRTC Bus and few vehicles reported came under the rubble. Many people reported trapped. ITBP teams rushed for rescue. More details awaited. pic.twitter.com/ThLYsL2cZK
— ITBP (@ITBP_official) August 11, 2021
ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP) ತಂಡಗಳನ್ನು ರಕ್ಷಣಾ ಕಾರ್ಯಾಚರಣೆಗಾಗಿ ಘಟನಾ ಪ್ರದೇಶಕ್ಕೆ ಕಳುಹಿಸಲಾಗಿದೆ. ರಾಷ್ಟ್ರೀಯ ವಿಪತ್ತು ಪಡೆಯನ್ನೂ (ಎನ್‌ಡಿಆರ್‌ಎಫ್) ಕರೆಸಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಹೇಳಿದ್ದಾರೆ.
“ನಾನು ಪೋಲಿಸ್ ಮತ್ತು ಸ್ಥಳೀಯ ಆಡಳಿತಕ್ಕೆ ರಕ್ಷಣಾ ಕಾರ್ಯಾಚರಣೆ ನಡೆಸುವಂತೆ ಸೂಚಿಸಿದ್ದೇನೆ. NDRF ಅನ್ನು ಸಹ ಕರೆಸಿಕೊಳ್ಳಲಾಗಿದೆ. ಒಂದು ಬಸ್ ಮತ್ತು ಕಾರು ಅವಶೇಷಗಳ ಅಡಿಯಲ್ಲಿ ಸಿಲುಕಿದೆ ಎಂದು ನಮಗೆ ಮಾಹಿತಿ ಸಿಕ್ಕಿದೆ. ನಾವು ವಿವರವಾದ ಮಾಹಿತಿಗಾಗಿ ಕಾಯುತ್ತಿದ್ದೇವೆ” ಎಂದು ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಸುದ್ದಿಗಾರರಿಗೆ ಹೇಳಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಅವರೊಂದಿಗೆ ಪರಿಸ್ಥತಿ ಬಗ್ಗೆ ಮಾತನಾಡಿದ್ದು, ಸಾಧ್ಯವಿರುವ ಎಲ್ಲ ಸಹಾಯ ಮಾಡುವ ಭರವಸೆ ನೀಡಿದ್ದಾರೆ.
PM @narendramodi spoke to Himachal Pradesh CM @jairamthakurbjp regarding the situation in the wake of the landslide in Kinnaur. PM assured all possible support in the ongoing rescue operations.
— PMO India (@PMOIndia) August 11, 2021
ಹಿಮಾಚಲ ಪ್ರದೇಶದಲ್ಲಿ ಕಳೆದ ಕೆಲವು ವಾರಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಹಲವು ಕಡೆ ಭೂಕುಸಿತ ಉಂಟಾಗಿದೆ. ಕಳೆದ ತಿಂಗಳು, ಕಿನ್ನೌರಿನ ಇನ್ನೊಂದು ಭಾಗದಲ್ಲಿ ಬೃಹತ್ ಬಂಡೆಗಳು ಕಾರುಗಳ ಮೇಲೆ ಬಿದ್ದು ಒಂಬತ್ತು ಪ್ರವಾಸಿಗರು ಸಾವನ್ನಪ್ಪಿದ್ದರು.
ಇದನ್ನೂ ಓದಿ: ಜಗತ್ತಿನ ಹಲವೆಡೆ ಪ್ರವಾಹದ ಹಾವಳಿ; ಎಲ್ಲವೂ ಕೊಚ್ಚಿಕೊಂಡು ಹೋಗುವ ದಿನ ಬರುವ ಮುನ್ನ…


