ರಾಜ್ಯದಲ್ಲಿ ಆಗಸ್ಟ್ 23 ರಿಂದ 9 ಮತ್ತು 10ನೇ ತರಗತಿ ಪ್ರಾರಂಭಕ್ಕೆ ರಾಜ್ಯ ಸರ್ಕಾರ ಅಧಿಕೃತ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಪ್ರತಿದಿನ ಬೆಳಗಿನ ಅವಧಿಯಲ್ಲಿ ಭೌತಿಕ ತರಗತಿಗೆ ಅವಕಾಶ ನೀಡಲಾಗಿದ್ದು, ಕೊರೊನಾ ಪಾಸಿಟಿವಿಟಿ ರೇಟ್ ಶೇ.2ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಮಾತ್ರ ಶಾಲೆ ಆರಂಭವಾಗಲಿದೆ.
ಶಾಲೆಗೆ ಹಾಜರಾಗುವ ವಿದ್ಯಾರ್ಥಿಗಳು ಶಾಲೆಗೆ ಬರುವುದಕ್ಕೆ ಪೋಷಕರ ಅನುಮತಿ ಪತ್ರ ಕಡ್ಡಾಯವಾಗಿ ತರಬೇಕು. ಅನುಮತಿ ಪತ್ರದಲ್ಲಿ ವಿದ್ಯಾರ್ಥಿಗೆ ಕೊರೊನಾ ಲಕ್ಷಣಗಳಿಲ್ಲದಿರುವುದು ದೃಢಪಡಿಸಿರಬೇಕು. ಮಕ್ಕಳು ಮನೆಯಿಂದಲೇ ಕುಡಿಯುವ ನೀರು, ಊಟ ತರಬೇಕು.
ಮಕ್ಕಳ ಅವಶ್ಯಕತೆಗೆ ಅನುಸಾರ ಶಾಲೆಯಲ್ಲಿ ಬಿಸಿ ನೀರಿನ ವ್ಯವಸ್ಥೆ ಮಾಡಬೇಕು. ಶಾಲೆಯಲ್ಲಿ ಮಕ್ಕಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸೋಮವಾರದಿಂದ ಶುಕ್ರವಾರದವರೆಗೆ ಅರ್ಧದಿನ ಅಂದರೆ, ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1.30ರವರೆಗೆ ತರಗತಿ ನಡೆಯಲಿದೆ. ಶನಿವಾರ ಬೆಳಗ್ಗೆ 10ರಿಂದ ಮ.12.50ರ ವರೆಗೆ ತರಗತಿಗಳು ನಡೆಯಲಿದೆ.
ಇದನ್ನೂ ಓದಿ: ಸಾರ್ವಜನಿಕವಾಗಿ ಟೆಂಟ್ ಹಾಕಿ ಗಣೇಶ ಕೂರಿಸುವಂತಿಲ್ಲ: ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಪ್ರಕಟ

ತರಗತಿಗಳಿಗೆ ವಿದ್ಯಾರ್ಥಿಗಳ ಭೌತಿಕ ಹಾಜರಾತಿ ಕಡ್ಡಾಯವಿರುವುದಿಲ್ಲ. ಆನ್‌ಲೈನ್ ಅಥವಾ ಆಫ್‌ಲೈನ್ ಮೂಲಕ ಹಾಜರಾಗಬಹುದು. ಶಿಕ್ಷಕರು 15 ರಿಂದ 20 ಸಂಖ್ಯೆಯ ವಿದ್ಯಾರ್ಥಿಗಳ ತಂಡಗಳನ್ನಾಗಿ ಮಾಡಿ ಭೌತಿಕ ತರಗತಿ ನಡೆಸಬೇಕು.
ಶಾಲೆ ಆರಂಭಕ್ಕೂ ಮೊದಲು ಸಂಪೂರ್ಣ ಶಾಲೆಯನ್ನು ಸ್ವಚ್ಛಗೊಳಿಸಬೇಕು. ಶಾಲೆಯ ಆವರಣವನ್ನು ಸ್ಯಾನಿಟೈಸ್ ಮಾಡಬೇಕು. ಕುಡಿಯುವ ನೀರಿನ ಸೌಲಭ್ಯ, ಶೌಚಾಲಯಗಳನ್ನು ಸ್ವಚ್ಛಗೊಳಿಸಬೇಕು.
ಇನ್ನು, ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಸೆಪ್ಟಂಬರ್ ತಿಂಗಳಲ್ಲಿ ನಡೆಯಲಿರುವ ಗಣೇಶ ಚತುರ್ಥಿ, ಮೊಹರಂ, ದುರ್ಗಾಪೂಜೆ ಸೇರಿದಂತೆ ಧಾರ್ಮಿಕ ಹಬ್ಬಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಆಚರಣೆ ಮಾಡುವುದನ್ನು ನಿಷೇಧಿಸಿ ರಾಜ್ಯ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಸೆಪ್ಟಂಬರ್, ಅಕ್ಟೋಬರ್ ತಿಂಗಳಲ್ಲಿ ಆಚರಣೆ ಮಾಡಲಾಗುವ ಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ, ಮೊಹರಂ, ದುರ್ಗಾಪೂಜೆಯ ಧಾರ್ಮಿಕ ಆಚರಣೆಗಳಲ್ಲಿ ಜನ ಸೇರದಂತೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಜನರ ಒಗ್ಗೂಡುವಿಕೆ, ಬೃಹತ್ ಸಭೆ-ಸಮಾರಂಭಗಳನ್ನು ನಿಷೇಧಿಸಲಾಗಿದೆ.
ಇದನ್ನೂ ಓದಿ: ಸ್ವಾತಂತ್ರ್ಯದ ಅಮೃತ ಮಹೋತ್ಸವ:’ಅಮೃತ’ ಯೋಜನೆಗಳನ್ನು ಘೋಷಿಸಿದ ಸಿಎಂ ಬಸವರಾಜ ಬೊಮ್ಮಾಯಿ


