ದೆಹಲಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (JNU) ಮಾಜಿ ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಸಲ್ಲಿಸಿದ ಜಾಮೀನು ಅರ್ಜಿಯನ್ನು ದೆಹಲಿ ನ್ಯಾಯಾಲಯ ಸೋಮವಾರ ವಿಚಾರಣೆ ನಡೆಸಲಿದೆ.
ಉಮರ್ ಖಾಲೀದ್ ಅವರನ್ನು ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಕಠಿಣ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ಬಂಧಿಸಲಾಗಿದೆ. ಜಾಮೀನು ಅರ್ಜಿ ವಿಚಾರಣೆ ಆಗಸ್ಟ್ 20 ರಂದು ನಡೆಸಬೇಕಿತ್ತು. ನಂತರ ಅದನ್ನು ಆಗಸ್ಟ್ 18 ಕ್ಕೆ ಮುಂದೂಡಲಾಯಿತು. ಆದರೆ, ಆಗಸ್ಟ್ 18 ರಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅಮಿತಾಭ್ ರಾವತ್ ಪ್ರಕರಣವನ್ನು ಮತ್ತೆ ಆಗಸ್ಟ್ 23 ಕ್ಕೆ( ಸೋಮವಾರ) ಮುಂದೂಡಿದ್ದರು.
ಖಾಲಿದ್ ಜಾಮೀನು ಅರ್ಜಿಯ ಹಿಂದಿನ ವಿಚಾರಣೆಯಲ್ಲಿ, “ಉಮರ್ ಖಾಲಿದ್ ಸಲ್ಲಿಸಿರುವ ಜಾಮೀನು ಅರ್ಜಿಯು ಯಾವುದೇ ಅರ್ಹತೆಯನ್ನು ಹೊಂದಿಲ್ಲ” ಎಂದು ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ಹೇಳಿದ್ದರು. ಈಶಾನ್ಯ ದೆಹಲಿ ಗಲಭೆಗೆ ಸಂಬಂಧಿಸಿದ ಮತ್ತೊಂದು ಪ್ರಕರಣದಲ್ಲಿ ಖಾಲಿದ್‌ಗೆ ಜಾಮೀನು ನೀಡಲಾಗಿದೆ.
ಇದನ್ನೂ ಓದಿ: ಜೈಲಿನೊಳಗಿಂದ ಹೋರಾಟಗಾರ ಉಮರ್ ಖಾಲಿದ್ ಬರೆದ ಹೃದಯಸ್ಪರ್ಶಿ ಪತ್ರ
ದೆಹಲಿ ಗಲಭೆ ಪ್ರಕರಣದ ಎಫ್ಐಆರ್ ಪ್ರಕಾರ, ಯುಎಪಿಎ ಕಾಯ್ದೆಯ ಸೆಕ್ಷನ್ 13, 16, 17, 18, ಶಸ್ತ್ರಾಸ್ತ್ರ ಕಾಯಿದೆಯ ಸೆಕ್ಷನ್ 25, 27 ಮತ್ತು ಸಾರ್ವಜನಿಕ ಆಸ್ತಿಗೆ ಹಾನಿ ತಡೆಯುವ ಸೆಕ್ಷನ್ 3 ಮತ್ತು 4 ರ ಅಡಿಯಲ್ಲಿ ಕಠಿಣ ಆರೋಪಗಳನ್ನು ದಾಖಲಿಸಲಾಗಿದೆ.
2020 ರ ದೆಹಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿ ಹೋರಾಟಗಾರರಾದ ನತಾಶಾ ನರ್ವಾಲ್, ದೇವಂಗಾನಾ ಕಾಳಿತಾ ಮತ್ತು ಆಸಿಫ್ ಇಕ್ಬಾಲ್ ತನ್ಹಾ ಅವರಿಗೆ ದೆಹಲಿ ಹೈಕೋರ್ಟ್ ಜಾಮೀನು ನೀಡಿದೆ. ಇವರಿಗೆ ಜಾಮೀನು ನೀಡಿದ್ದರೂ ದೆಹಲಿ ಪೊಲೀಸರ ಕಾರಣಕ್ಕೆ ಸೆಷನ್ಸ್ ನ್ಯಾಯಾಲಯ ಅವರನ್ನು ಬಿಡುಗಡೆ ಮಾಡಿರಲಿಲ್ಲ. ಇದರ ವಿರುದ್ದ ವಿದ್ಯಾರ್ಥಿಗಳು ಮತ್ತೆ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು ಬಳಿಕ ನ್ಯಾಯಾಲಯವು ಅವರನ್ನು ಕೂಡಲೆ ಬಿಡುಗಡೆ ಮಾಡಬೇಕು ಎಂದಿತ್ತು.
ಈಶಾನ್ಯ ದೆಹಲಿಯಲ್ಲಿ ಫೆಬ್ರವರಿ 24, 2020 ರಂದು ಗಲಭೆ ಭುಗಿಲೆದ್ದಿತು. ಇದರಲ್ಲಿ ಕನಿಷ್ಠ 53 ಸಾವನ್ನಪ್ಪಿದ್ದರು. 200ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಹಿಂಸಾಚಾರಕ್ಕೆ ಸಂಬಂಧಿಸಿ ದೆಹಲಿ ಪೊಲೀಸರು 750 ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿದ್ದಾರೆ. 250 ಕ್ಕೂ ಅಧಿಕ ಚಾರ್ಜ್ ಶೀಟ್‌ಗಳನ್ನು ಸಲ್ಲಿಸಿದ್ದಾರೆ.
ಇದನ್ನೂ ಓದಿ: ಯಾರನ್ನೂ ಭೇಟಿಯಾಗಲು ಬಿಡುತ್ತಿಲ್ಲ, ಭದ್ರತೆಯ ಹೆಸರಲ್ಲಿ ಏಕಾಂತ ಶಿಕ್ಷೆ: ಉಮರ್ ಖಾಲಿದ್



ಉಮರ್ ಕಾಲಿದ್ ಗೆ ಜಾಮೀನು ದೊರಕಬೇಕು. ಈ ದೇಶದ ಯುವ ಪ್ರತಿಬೆಗಳು ವಿನಾಕಾರಣ ಜೈಲಿನಲ್ಲಿ ಇದ್ದರೆ, ಈ ದೇಶಕ್ಕೆ ಬವಿಶ್ಯ ಇರುವುದಿಲ್ಲ.