Homeಅಂಕಣಗಳುಕೋತಿಗಳಿಗೂ ರೈತರ ಮೇಲೆ ಕರುಣೆಯಿಲ್ಲ: ನಾವು ಕೋತಿ ಹಿಡಿಸಿದ್ದು ಹೀಗೆ..

ಕೋತಿಗಳಿಗೂ ರೈತರ ಮೇಲೆ ಕರುಣೆಯಿಲ್ಲ: ನಾವು ಕೋತಿ ಹಿಡಿಸಿದ್ದು ಹೀಗೆ..

ಈ ಸಲ ಕೋತಿಗಳನ್ನು ಹಿಡಿಸಿ ಮನೇಕಾ ಗಾಂಧಿ ಪ್ರಣೀತ ಪ್ರಾಣಿದಯಾ ಸಂಘದ ಸದಸ್ಯರ ಮನೆಗಳಿಗೆ ತಲುಪಿಸುವ ತೀರ್ಮಾನ ಮಾಡಿದ್ದೇವೆ.

- Advertisement -
- Advertisement -

ನಮ್ಮ ತೋಟದ ಸಾಲಿಗೆ ನೀವೂ ಬನ್ನಿ…: ಭಾಗ-14

ಪ್ರಾಣಿ ದಯಾ ಸಂಘದವರ ಬಗೆಗೆ ನನಗೂ ದಯವಿದೆ. ಆದರೆ ಹುಚ್ಚು ನಾಯನ್ನೂ ಯಾರಾದರೂ ಸಾಕಬೇಕೆಂಬ ಅವರ ಹುಚ್ಚುತನಕ್ಕೆ ನನ್ನ ಬೆಂಬಲವಿಲ್ಲ. ವಿಚಿತ್ರವೆಂದರೆ ನಮ್ಮ ಹಳ್ಳಿಗಳಲ್ಲಿ ನಗರಗಳಲ್ಲಿರುವಂತೆ ಈ ಪ್ರಾಣಿದಯಾ ಸಂಘವಿಲ್ಲ, ಪ್ರಾಣಿಗಳನ್ನು ದಯೆಯಿಂದ ಸಾಕುವವರು ಇದ್ದಾರೆ.

ಮನೇಕಾ ಗಾಂಧಿ ಪ್ರೇರಿತ ಈ ಪ್ರಾಣಿದಯಾ ಸಂಘದವರು, ರೈತರಿಗೆ ವಿಪರೀತ ಕಾಟ ಕೊಡುವ ಕೋತಿ, ಕಾಡು ಹಂದಿ, ಕಡವೆ, ಆನೆ ಮುಂತಾದುವನ್ನು ಕೊಲ್ಲುವುದಿರಲಿ, ಹೊಡೆದು ಓಡಿಸುವುದೂ ಮಹಾಪಾಪ ಎಂದು ದೆಹಲಿ, ಬೆಂಗಳೂರುಗಳಲ್ಲಿ ಕೂತು ಫರ್ಮಾನು ಹೊರಡಿಸುತ್ತಾರೆ. ಇವರೇನು ಸ್ವತಃ ರೈತರೂ ಅವುಗಳನ್ನು ಕೊಲ್ಲಲು ಇಚ್ಚಿಸುವುದಿಲ್ಲ. ಆದರೆ ಅವು ರೈತರ ಹೊಲ ತೋಟ ಗದ್ದೆಗಳಿಗೆ ಮಾಡುವ ಹಾನಿಯನ್ನು ಯಾರಾದರೂ ಪುಣ್ಯಾತ್ಮರು ತುಂಬಿಕೊಟ್ಟರೆ ಆಯಿತಷ್ಟೇ. ಬೆಳೆದ ಬೆಳೆಯನ್ನೆಲ್ಲ ಅವುಗಳಿಗೇ ಬಿಡಿ ಎಂದರೆ ಅದಕ್ಕೂ ಸೈ. ಮಾರುಕಟ್ಟೆಗೆ ಒಯ್ಯುವ ಕಷ್ಟವೇ ಇರುವುದಿಲ್ಲ. ರೈತರು ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ವೈಜ್ಞಾನಿಕ ಬೆಲೆ ಕೊಡದವರು ಹಂದಿ, ಆನೆ, ಕೋತಿಗಳೇ ಮುಂತಾಗಿ ರೈತರ ತೋಟ ಹೊಲಗದ್ದೆಗಳಲ್ಲಿ ಮಾಡುವ ಊಟಕ್ಕೆ ಬೆಲೆ ಕೊಟ್ಟು ನಷ್ಟ ಭರ್ತಿ ಮಾಡಿಕೊಟ್ಟಾರೆಯೇ? ಹೋದರೇ ಮಜ್ಜಿಗೆ ಕೊಡದವರು ಹೇಳಿಕಳಿಸಿದರೆ ಮೊಸರು ಕೊಡುತ್ತಾರೆಯೇ?

ಇರಲಿ, ನಮ್ಮ ತೋಟಕ್ಕೆ ಕೋತಿಗಳು ಬರುವುದನ್ನು, ಇರುವುದನ್ನೂ ಅನೂಚಾನವಾಗಿ ರೂಢಿಮಾಡಿಕೊಂಡಿವೆ. ಇವು ಬ್ಯಾಚ್‌ ಮಾಡಿಕೊಂಡಂತೆ, ಒಂದು ಬ್ಯಾಚ್‌ ಹೋದರೆ ಇನ್ನೊಂದು ಬ್ಯಾಚ್‌ ರೆಡಿಯಿರುತ್ತವೆ. ಕೋತಿಗಳಿಗೂ ಈ ರೈತರ ಮೇಲೆ ಕರುಣೆಯಿಲ್ಲ. ಯಾರೋ, ಬೆಟ್ಟಗುಡ್ಡಗಳಲ್ಲಿ, ಕಾಡುಗಳೊಳಗಿದ್ದ ಪ್ರಾಕೃತಿಕವಾಗಿ ಬೆಳೆದ ತರತರದ ಹಣ್ಣಿನ ಮರಗಳನ್ನು ಸವರಿ ಹಾಕಿ ನೀಲಗಿರಿನೆಟ್ಟವರ, ಮತ್ತು ಇವುಗಳನ್ನು ಒಕ್ಕಲೆಬ್ಬಿಸಿದವರ ಮೇಲಿನ ಸಿಟ್ಟನ್ನು ರೈತರ ಮೇಲೆ ತೀರಿಸಿಕೊಳ್ಳುತ್ತಿವೆ. ತೋಟದ ಸಾಲಿನಲ್ಲಿ ತಮ್ಮ ವಾಸ್ತವ್ಯ ಹೂಡಿ ರೈತರನ್ನು ಒಕ್ಕಲೆಬ್ಬಿಸಲು ಪ್ರಯತ್ನಿಸುತ್ತಿವೆ. ಪ್ರಾಣಿದಯಾ ಸಂಘದವರ ಪ್ರಕಾರ ಇವುಗಳಿಗೆ ರೈತರು ಕಲ್ಲು ಹೊಡೆಯುವಂತಿಲ್ಲ… ಇದಲ್ಲವೇ ವಿಚಿತ್ರ.

ನಮ್ಮವು ತೆಂಗು ಮತ್ತು ಅಡಕೆ ತೋಟಗಳು. ಕೋತಿಗಳು ಮೇಲೆ ನಾವು ಕೆಳಗೆ. ರೈತರು ಕಲ್ಲಲ್ಲಿ ಹೊಡೆದರೆ ಕೋತಿಗಳು ಎಳನೀರಿನಲ್ಲಿ ಹೊಡೆಯುತ್ತವೆ. ನರಿ ಹೂಸು ಗಿರಿ ಮುಟ್ಟುತ್ತದೆಯೇ? ಒಂದು ಎಳನೀರು ಬೇಕಾದರೆ ಮೂರ್ನಾಲ್ಕು ಎಳನೀರು ಕಿತ್ತು ಸಿಗಿದು ಕಚ್ಚಿ ಚೆಲ್ಲಿ ಸೂರೆ ಮಾಡುತ್ತವೆ. ಈ ದೃಶ್ಯವನ್ನು ನಾನು ನಿಂತು ಕಣ್ಣಾರೆ ನೋಡುತ್ತೇನೆ. ಸಂಬಳದಾರನಾದ ನನ್ನ ಕಣ್ಣಲ್ಲೇ ನೀರು ಬರುತ್ತವೆ.

ಈ ಕೋತಿಗಳು ತಮ್ಮ ಮರಿಗಳಿಗೆ ಎಳನೀರು ಕೀಳುವ ಮತ್ತು ಕುಡಿಯುವ ಟ್ರೈನಿಂಗ್‌ ಕೊಡುವುದಕ್ಕಾಗಿಯೇ ಎಷ್ಟೋ ಎಳನೀರುಗಳನ್ನು ಕಿತ್ತು ಹಾಕುತ್ತವೆ. ಆ ಮರಿ ಕೋತಿಗಳಾದರೋ ಸಣ್ಣ ಸಣ್ಣ ಕುರುಬಗಳನ್ನೆಲ್ಲಾ ಕಿತ್ತು ಟ್ರೈನಿಂಗ್‌ ಪಡೆಯಲು ಯತ್ನಿಸುತ್ತವೆ. ಇನ್ನು ಗಡವ ಕೋತಿಗಳು ಎಳನೀರು ಕುಡಿಯುವುದನ್ನು ನೋಡಬೇಕು. ಹದವಾದ ಎಳನೀರು ಕೀಳುವುದಕ್ಕೆ ಮನುಷ್ಯರೇ ಯಾಮಾರುತ್ತಾರೆ. ಎಷ್ಟೋ ಸಲ ಯಾವುವು ಹದವಾದ ಎಳನೀರು ಎಂಬುದು ಅನುಭವಿ ಎಳನೀರು ಕುಡುಕರಿಗೇ ಗೊತ್ತಾಗುವುದಿಲ್ಲ. ಒಂದೊಂದು ಕಾಲದಲ್ಲಿ ಒಂದೊಂದು ಲಕ್ಷಣ ಗುರ್ತಿಸಿ ಎಳನೀರು ಕೀಳಬೇಕಾಗುತ್ತದೆ. ಆದರೆ ಈ ಕೋತಿಗಳಾದರೋ ಪಕ್ಕಾ ಕಸುಬುದಾರರಂತೆ ಹದವಾದ ಎಳನೀರು ಕಿತ್ತು ಕುಡಿಯುತ್ತವೆ. ಅವು ಎಳನೀರನ್ನು ನುಲುಚಿ ಕಿತ್ತು ಎಡೆ ಮಟ್ಟೆ ಮೇಲೆ ಇಟ್ಟುಕೊಂಡು ಹಲ್ಲಲ್ಲಿ ಸಿಗಿಯುವುದನ್ನು ನೋಡುಬೇಕು. ಆದರೆ ಕುಡಿಯುವಾಗ ಅರ್ಧ ನೀರು ಒಳಕ್ಕೆ  ಇನ್ನರ್ಧ ಕೆಳಕ್ಕೆ. ಕೈತಪ್ಪಿ ಬಿದ್ದ ಎಳನೀರುಗಳನ್ನು ಅವು ಮೂಸಿಯೂ ನೋಡುವುದಿಲ್ಲ. ನಿಜಕ್ಕೂ ಕೋತಿಗಳು ಕಾಡುಗಳಲ್ಲಿದ್ದುದಕ್ಕಿಂತ ಇಲ್ಲಿ ಸುಖವಾಗಿ ಇರುವಂತೆ ತೋರುತ್ತಿದೆ. ಆದರೆ ರೈತರ ಗತಿ?

ಇಂಥ ಕೋತಿಗಳನ್ನು ಕೊಲ್ಲುವಂತಿಲ್ಲ, ಕೋತಿಗಳು ಹನುಮಂತನ ಅವತಾರ ಬೇರೆ. ಕಾನೂನು ತೊಡಕು, ಕೊಲ್ಲಲು ಕಲಿಯದ ರೈತ ಮನಸ್ಸು ಇತ್ಯಾದಿ ಕಾರಣಗಳಿಂದ ಅವುಗಳ ಮೇಲೆ ಸಮರ ಸಾರುವಂತಿಲ್ಲ. ಓಡಿಸಬಹುದು, ಆದರೆ ಎಲ್ಲಿಗೆ ಓಡಿಸುವುದು, ಹೇಗೆ ಓಡಿಸುವುದು. ಅವೇನು ಕಡಿಮೆ ಕೆರೆಯ ನೀರು ಕುಡಿದಿವೆಯೇ ಕ್ಷಮಿಸಿ, ಅವೇನು ಕಡಿಮೆ ತೋಟದ ಎಳನೀರು ಕುಡಿದಿವೆಯೇ?

ವಿಚಿತ್ರವೆಂದರೆ ಈ ಕೋತಿಗಳೂ ಹೆಂಗಸರನ್ನು ಕಂಡರೆ ಹಲ್ಕಿರಿದು ಹೆದರಿಸುತ್ತವೆ, ಮೇಲೆ ಬೀಳಲು ಯತ್ನಿಸುತ್ತವೆ. ಇವಕ್ಕೆ ಹೆಂಗಸರು ಎಂದರೆ ಸದರ. ಸಣಕಲ ಗಂಡಸರನ್ನೂ ಹೀಗೆ ಹೆದರಿಸಿ ಓಡಿಸುತ್ತವೆ. ಅವುಗಳ ವ್ಯಂಗ್ಯ ಕುಹಕಗಳು ಮನುಷ್ಯರನ್ನು ಮೀರಿಸುತ್ತವೆ. ಬಂದೂಕು ತೋರಿಸಿದರೆ ಹುಸಿ ಗುಂಡು ಹಾರಿಸಿದರೆ ಕಣ್ಣಿಗೆ ಕಾಣದಂತೆ ತೆಂಗಿನ ಮರದ ಸುಳಿಯಲ್ಲಿ ಅಡಗಿ ನಾಪತ್ತೆಯಾಗುತ್ತವೆ. ಏನು ಮಾಡಿದರೂ ಅವುಗಳನ್ನು ಅಲ್ಲಿಂದ ಕದಲಿಸಲು ಆಗುವುದಿಲ್ಲ.

ನಮ್ಮ ಗಂಟಲು ಹರಿಯುವಂತೆ ಕೂಗಿಕೊಂಡರೂ ಅವುಗಳ ಒಂದು ಕೂದಲು ಅಲ್ಲಾಡುವುದಿಲ್ಲ. ನಾವು ಪಕ್ಕದ ತೋಟಕ್ಕೆ ಕಷ್ಟಪಟ್ಟು ಓಡಿಸಿದರೆ ಅವಕ್ಕೆ ಯಾರ ತೋಟವಾದರೇನು? ಹೋಗುತ್ತವೆ. ಅವರು ಅಲ್ಲೇ ಇರುತ್ತಾರೆ, ನಮ್ಮ ತೋಟಕ್ಕೆ ಓಡಿಸಲು ಮುಂದಾಗುತ್ತಾರೆ. ಈ ಆಟ ಸ್ವಲ್ಪ ಹೊತ್ತು, ಅಥವ ಸ್ವಲ್ಪ ದಿನಗಳು ಅಷ್ಟೆ.

ನನಗೂ ಒಮ್ಮೊಮ್ಮೆ ಈ ಕೋತಿಗಳನ್ನು ಕೊಲ್ಲುವ ಮನಸ್ಸಾಗುತ್ತದೆ. ಕೊಲ್ಲುವ ಅನೇಕ ಅಸ್ತ್ರಗಳು ಮನಸ್ಸಿಗೆ ಬರುತ್ತವೆ. ಬಂದೂಕು, ವಿಷ, ಬಲೆ ಇತ್ಯಾದಿ.

ಕೊನೆಗೆ ನಮ್ಮ ಸುತ್ತಮುತ್ತಲಿನ ತೋಟದ ರೈತರ ಒತ್ತಾಸೆಗೆ ಒಳಗಾಗಿ ʻಕೋತಿ ಹಿಡಿಸುವʻ ಯೋಜನೆ ಸಿದ್ಧಗೊಂಡಿತು. ಅದೆಲ್ಲಿಂದಲೋ ಏನೋ ಕೋತಿ ಹಿಡಿಯುವ ಇಬ್ಬರು ತಮ್ಮ ವಿಧವಿಧವಾದ ಹತ್ಯಾರಗಳ ಸಮೇತ ಬಂದು ಇಳಿದರು. ಬಲೆ, ಬೋನು, ಮರಹತ್ತುವ ಕುಣಿಕೆಗಳು ಅವರ ಬಳಿ ಇದ್ದವು.

PC : Legal India

ಈ ಕೋತಿಗಳನ್ನು ಹಿಡಿಯುವುದು ಅಷ್ಟು ಸುಲಭವಲ್ಲ, ಅವು ಇಂಥ ಬೋನುಗಳನ್ನು ಬಲು ನೋಡಿರುತ್ತವೆ. ಕೋತಿ ಹಿಡಿಯುವವರನ್ನು ಕಂಡರೂ ಅಷ್ಟೆ, ಪೇರಿ ಕೀಳುತ್ತವೆ. ಅದು ಹೇಗೆ ʻಇವರುʻ ಕೋತಿ ಹಿಡಿಯುವವರೆಂದು ಅವುಗಳಿಗೆ ಅರಿವಾಗುತ್ತದೆಯೋ ಕಾಣೆ. ಆದರೆ ಆಮೂಲಾಗ್ರವಾಗಿ ಈ ಬಗೆಗೆ ಬಗೆದು ನೋಡಲಾಗಿ ಅದರ ಗುಟ್ಟು ರಟ್ಟಾಯಿತು. ಈ ʻಇವರುʻ ಅಲ್ಲಿ ಇಲ್ಲಿ ಎಲ್ಲೆಲ್ಲೂ ಕೋತಿ ಹಿಡಿಯುವವರು ಇವರೇ. ಈಗ ಇವರ ಸಂಖ್ಯೆ ಹೆಚ್ಚೇನು ಇಲ್ಲ, ಆದ್ದರಿಂದ ಇವರಿಗೆ ಬೇಡಿಕೆ ಅಪಾರ. ಹೀಗಾಗಿ ಕೋತಿಗಳಿಗೆ ಇವರ ಚಹರೆ, ವಿಳಾಸಗಳೆಲ್ಲಾ ಚೆನ್ನಾಗಿ ಗೊತ್ತಿರುತ್ತದೆಯಾದ್ದರಿಂದ ಇವರನ್ನು ಕಂಡಾಕ್ಷಣ ಕ್ಷಣ ಮಾತ್ರದಲ್ಲಿ ಕಣ್ಮರೆಯಾಗಲೆತ್ನಿಸುತ್ತವೆ. ಹಸಿವೆಂಬುದು ಕೆಟ್ಟದ್ದು, ಕೊನೆಗೂ ಅವು ಬೋನಿನೆಡೆಗೆ ಬರುವುದು ಅನಿವಾರ್ಯವಾಗುತ್ತದೆ.

ವಾರಗಟ್ಟಲೆ ಬೋನು ಒಡ್ಡಿ ಕಾದು, ಆ ಅವಧಿಯಲ್ಲಿ ಕೋತಿಗಳಿಗೆ ಉರಿದ ನೆಲಗಡಲೇ ಕಾಯಿ, ಬಟಾಣಿ, ಬಾಳೆಹಣ್ಣು ಇತ್ಯಾದಿ ಪ್ರೋಟೀನುಯುಕ್ತ ಸರಕುಗಳನ್ನು ತಿನ್ನಿಸಿ ಕೊನೆಗೂ 12 ಕೋತಿಗಳ ಇಡೀ ತಂಡವನ್ನು ಬೋನಿಗೆ ಕೆಡವಿದರು. ಕೋತಿಯೊಂದಕ್ಕೆ ಒಂದು ಸಾವಿರದಂತೆ ಅವರಿಗೆ ತೆತ್ತು ಅವುಗಳನ್ನು ನಮ್ಮ ಸುಪರ್ದಿಗೆ ಪಡೆದೆವು. ಕೋತಿಗಳು ಗೋಣಿ ಚೀಲದಲ್ಲಿ ಬಂಧಿತವಾಗಿದ್ದವು. ಒದ್ದಾಡುವಷ್ಟು ಒದ್ದಾಡಿ ಸುಮ್ಮನಾಗಿದ್ದ ಅವುಗಳನ್ನು ಆದಷ್ಟು ಬೇಗ ದೂರದೂರಿಗೆ ಸಾಗಿಸಿ ಬಿಡುಗಡೆಗೊಳಿಸಿ ಬರಬೇಕಾಗಿತ್ತು. ಇಲ್ಲದಿದ್ದರೆ ಅವು ಉಸಿರುಕಟ್ಟಿ ಸತ್ತು ನಮಗಷ್ಟೇ ಅಲ್ಲ ಇಡೀ ಊರಿಗೆ ಪಾಪ ಸುತ್ತಿಕೊಂಡು ನಾಶವಾಗುವ ಭಯವಿತ್ತು. ಮೂರು ಗೋಣಿ ಚೀಲಗಳಲ್ಲಿ ಬಂಧಿತವಾಗಿದ್ದ ಕೋತಿಗಳನ್ನು ಹುಳಿಯಾರಾಚೆ ಬಹುದೂರಕ್ಕೆ ಸಾಗಾಕಿ ಬಂದದ್ದು ಆಯಿತು. ಹೇಗೋ  ಈ ವಿಷಯ ಬೆಳಗಾಗುವುದರಲ್ಲಿ ಹಬ್ಬಿತ್ತು. ಇದು ಅಮಾನವೀಯವೆಂದೂ, ಅದೂ ಕೋತಿಗಳ ಮೇಲಿನ ಈ ಬಗೆಯ ಆಕ್ರಮಣ ದಯೆ ಇಲ್ಲದ ಕ್ರೌರ್ಯವೆಂದೂ ಬಿಳಿಗೆರೆಯ ಮೇನಕಾ ಶಿಷ್ಯಕೋಟಿ ಅಭಿಪ್ರಾಯಪಟ್ಟಿತು. ನಾವು ಕೋತಿಗಳನ್ನು ಹಿಡಿಸಿ ಬೇರೆಡೆಗೆ ಬಿಟ್ಟು ಬಂದದ್ದಕ್ಕೆ ಇಷ್ಟು, ನಾವೇನಾದರೂ ಕೊಂದಿದ್ದರೆ?

ನಾವಿನ್ನೂ ಕೋತಿಗಳನ್ನು ಹಿಡಿಸಿದ ಬಾಬ್ತು ಹನ್ನೆರಡು ಸಾವಿರ ರೂಪಾಯಿಗಳನ್ನು ಫಲಾನುಭವಿಗಳಿಂದ ಎತ್ತುತ್ತಿದ್ದಾಗಲೇ ಇಪ್ಪತ್ತು ಕೋತಿಗಳ ಒಂದು ಬೃಹತ್ ತಂಡ ನಮ್ಮ ತೋಟದ ಸುತ್ತಲೇ ಠಳಾಯಿಸುತ್ತಿರುವ ಸುದ್ದಿ ಬಂತು. ಅದೆಲ್ಲಿಂದ ಬಂದವೋ, ತಂದು ಬಿಟ್ಟರೋ ಏನು ಕತೆಯೋ ಗೊತ್ತಿಲ್ಲ. ಇವು ಹನ್ನೆರಡು ಕೋತಿಗಳ ತಂಡದ ಸದಸ್ಯರಿಗಿಂತಲೂ ಚುರುಕಾಗಿ ಎಳನೀರು ಕುಡಿಯತೊಡಗಿದವು. ಅಷ್ಟೇ ಅಲ್ಲ ಒಂದು ಮರಕ್ಕೆ ಬಿದ್ದರೆ ಒಂದು ಎಳನೀರನ್ನು ಬಿಡದೆ ಸೋಸುವ ಕಲೆಯಲ್ಲಿ ಇವು ಪರಿಣತಿ ಪಡೆದಿದ್ದವು. ಇದಕ್ಕೆ ಕಳಶವಿಟ್ಟಂತೆ ಸೀಬೆ ಕಾಯಿ, ಪರಂಗಿ ಕಾಯಿ, ಪರಂಗಿ ಎಲೆ, ಸಪೋಟ, ಬಾಳೆ ಕಾಯಿ ಕೊನೆಗೆ ಅಡಕೆ ಅರಳನ್ನು ಬಿಡದೆ ಸ್ವಾಹ ಮಾಡತೊಡಗಿ ರೈತರನ್ನು ಕಂಗೆಡಿಸಿದವು. ಮೊದಲು ಇದ್ದ ಬ್ಯಾಚೇ ಇದ್ದಿದ್ದರೆ ಎಷ್ಟೋ ಒಳ್ಳೆಯದಿತ್ತೆಂದು ನಾವೆಲ್ಲ ಮಾತಾಡಿಕೊಂಡೆವು. ಮುಂದುವರಿದು ಈ ಸಲ ಕೋತಿಗಳನ್ನು ಹಿಡಿಸಿ ಮನೇಕಾ ಗಾಂಧಿ ಪ್ರಣೀತ ಪ್ರಾಣಿದಯಾ ಸಂಘದ ಸದಸ್ಯರ ಮನೆಗಳಿಗೆ ತಲುಪಿಸುವ ತೀರ್ಮಾನ ಮಾಡಿದ್ದೇವೆ.

  • ಕೃಷ್ಣಮೂರ್ತಿ ಬಿಳಿಗೆರೆ

(ಹುಳಿಯಾರು ಬಿಎಂಎಸ್‌ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲರು. ತಮ್ಮ ತೋಟದಲ್ಲಿ ಸಹಜ ಕೃಷಿ ಮಾಡುತ್ತಲೇ ಕೃಷಿ ಶೋಧನೆಯಲ್ಲಿ ತೊಡಗಿಸಿಕೊಂಡಿರುವ ಇವರು ಛೂಮಂತ್ರಯ್ಯನ ಕಥೆಗಳು, ಸಾವಿರ ಕಣ್ಣಿನ ನವಿಲು, ಕಿಂಚಿತ್ತು ಪ್ರೀತಿಯ ಬದುಕು, ದಾಸಯ್ಯ ಇದು ಕನಸೇನಯ್ಯ, ಧರೆ ಮೇಲೆ ಉರಿಪಾದ, ಮಳೆ ನೀರ ಕುಡಿ, ಅನ್ನ ದೇವರ ಮುಂದೆ, ಮರದಡಿಯ ಮನುಷ್ಯ ಸೇರಿದಂತೆ ಹಲವು ಪುಸ್ತಕಗಳನ್ನು ರಚಿಸಿದ್ದಾರೆ.)


ಇದನ್ನೂ ಓದಿ: ನಮ್ಮ ತೋಟದ ಸಾಲಿಗೆ ನೀವೂ ಬನ್ನಿ-3: ಶಂಖದ ಹುಳುವಿನ ಮಾಮೇರಿ ಸೈನ್ಯದ ಬಗ್ಗೆ ನಿಮಗೆ ಗೊತ್ತೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...