ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ಕೇಂದ್ರ ಸಚಿವರೊಂದಿಗೆ ಸಭೆ ನಡೆಸಿದ್ದಾರೆ. ಕೇಂದ್ರ ಕೃಷಿ ಸಚಿವರೊಂದಿಗೆ ಕರ್ನಾಟಕದಲ್ಲಿ ಕೃಷಿ ಪದ್ಧತಿ ಮತ್ತು ಕೃಷಿ ಅಭಿವೃದ್ಧಿಯ ಬಗ್ಗೆ ಚರ್ಚಿಸಲಾಗಿದೆ. ಅಂತರರಾಜ್ಯ ಕಲಹಗಳನ್ನು ಬಗೆಹರಿಸುವ ಕುರಿತಂತೆ ಇಂದು ಜಲಶಕ್ತಿ ಸಚಿವರೊಂದಿಗೆ ಸುದೀರ್ಘ ಚರ್ಚೆ ನಡೆಸಲಾಗಿದೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಬಸವರಜ ಬೊಮ್ಮಾಯಿ, “ಕರ್ನಾಟಕದಲ್ಲಿ 2021-22 ರ ಮುಂಗಾರು ಹಂಗಾಮಿಗೆ ಬೆಂಬಲ ಬೆಲೆ ಯೋಜನೆಯಡಿ ಉದ್ದು ಮತ್ತು ಹೆಸರು ಖರೀದಿಗೆ ಬೆಂಬಲ ಬೆಲೆಯಲ್ಲಿ ಹೆಸರು, ಉದ್ದು ಖರೀದಿಗೆ ಕೇಂದ್ರದ ಅನುಮತಿ ದೊರೆತಿದ್ದು ಖರೀದಿ ಬಗ್ಗೆ ಆದೇಶ ಸದ್ಯದಲ್ಲಿಯೇ ಹೊರಬೀಳಲಿದೆ” ಎಂದಿದ್ದಾರೆ.
“ರೈತರ ಆದಾಯವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ತೆಗೆದುಕೊಳ್ಳಬೇಕಾದ ಕ್ರಮಗಳು ಹಾಗೂ ಹೊಸ ಕೃಷಿ ನೀತಿಗೆ ಸಂಬಂಧಿಸಿದಂತೆ ಕರ್ನಾಟಕಕ್ಕೆ ಹೆಚ್ಚಿನ ಪ್ರಾಶಸ್ತ್ಯ ಕೊಡುವ ಬಗ್ಗೆ ಚರ್ಚೆ ನಡೆಸಲಾಗಿದೆ. ಜೊತೆಗೆ ರೈತರ ಮಕ್ಕಳಿಗಾಗಿ ರೈತ ವಿದ್ಯಾನಿಧಿ, ವಿದ್ಯಾರ್ಥಿ ವೇತನ ಯೋಜನೆಗಳ ಉದ್ಘಾಟಿಸಲು ಕೇಂದ್ರ ಕೃಷಿ ಸಚಿವರು ಮುಂದಿನ ತಿಂಗಳ 5 ನೇ ತಾರೀಖಿನಂದು ಬೆಂಗಳೂರಿಗೆ ಆಗಮಿಸಲಿದ್ದಾರೆ” ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಸಂಸದರು, ಶಾಸಕರ ವಿರುದ್ಧದ ತನಿಖೆ ವಿಳಂಬ: ತನಿಖಾ ಏಜೆನ್ಸಿಗಳಿಗೆ ಸುಪ್ರೀಂಕೋರ್ಟ್ ಛೀಮಾರಿ
ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿಯಾಗಿರುವ ಮುಖ್ಯಮಂತ್ರಿಗಳು, ಸರ್ವೋಚ್ಚ ನ್ಯಾಯಾಲಯದಲ್ಲಿರುವ ಕೃಷ್ಣಾ ಮೇಲ್ದಂಡೆ ಯೋಜನೆ 3 ಹಂತದ ಬಗ್ಗೆ ಚರ್ಚಿಸಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.
“ಜಲವಿವಾದ ಪ್ರಕರಣ ಬಹುದಿನಗಳಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ಬಾಕಿ ಉಳಿದ್ದಿದ್ದು, ಒಕ್ಕೂಟ ಸರ್ಕಾರ ಮಧ್ಯ ಪ್ರವೇಶಿಸಿ ಪ್ರಕರಣ ಇತ್ಯರ್ಥ ಗೊಳಿಸಲು ಮನವಿ ಮಾಡಲಾಗಿದೆ. ಅಂತರರಾಜ್ಯ ಜಲವಿವಾದ ಕಾಯ್ದೆಯ ಪ್ರಕಾರ ರಾಜ್ಯದ ನಿಲುವು ಸಕಾರಾತ್ಮಕವಾಗಿದ್ದು ರಾಜ್ಯದ ಅಟಾರ್ನಿ ಜನರಲ್ ರವರ ಸಲಹೆ ಮೇರೆಗೆ ಮುಂದಿನ ನಡೆ ಇಡಲಿದೆ” ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
“ತಮಿಳುನಾಡು ಸರ್ಕಾರದ ಕಾವೇರಿ – ಗುಂಡಾರ್ ನದಿ ಜೋಡಣೆ ಯೋಜನೆಗೆ ಅನುಮತಿ ಇಲ್ಲದಿರುವುದರಿಂದ ಅನುಷ್ಠಾನ ಕಷ್ಟ ಸಾಧ್ಯ. ಮೇಕೆದಾಟು, ಮಲಪ್ರಭ ಯೋಜನೆಗಳ ಬಗ್ಗೆಯೂ ಚರ್ಚಿಸಲಾಗಿದ್ದು, ಕಾವೇರಿ ಹಾಗೂ ಎತ್ತಿನಹೊಳೆ ಬಗ್ಗೆ ನಿರ್ದಿಷ್ಟ ಪ್ರಸ್ತಾವನೆಯೊಂದಿಗೆ ಮತ್ತೆ ಕೇಂದ್ರ ಸಚಿವರನ್ನು ಭೇಟಿ ಮಾಡಲಾಗುವುದು. ಎತ್ತಿನಹೊಳೆ ಯೋಜನೆಯ ಬಗ್ಗೆ ಚರ್ಚೆಯಾಗಿದ್ದು ಆ ಬಗ್ಗೆ ಸಂಪೂರ್ಣ ಮಾಹಿತಿ ಒದಗಿಸಲಾಗಿದೆ” ಎಂದಿದ್ದಾರೆ.
ಮಹದಾಯಿ ಹಾಗೂ ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಕಾನೂನು ತಂಡದೊಂದಿಗೆ ಚರ್ಚಿಸಲಾಗುವುದು. ಈ ಬಗ್ಗೆ ರಾಜ್ಯ ಸರ್ಕಾರದ ನಿಲುವು ನ್ಯಾಯಸಮ್ಮತವಾಗಿದೆ ಎಂಬ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲಾಗಿದೆ ಎಂದು ತಿಳಿಸಿದ್ದಾರೆ.
ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಣೆ ಮಾಡಲು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆಯಬೇಕಿದೆ. ಉಳಿದಂತೆ ಎಲ್ಲಾ ಅಗತ್ಯ ಅನುಮೋದನೆಗಳು ದೊರೆತಿವೆ ಎಂದಿದ್ದಾರೆ.
ಇದನ್ನೂ ಓದಿ: ಮೈಸೂರಿನಲ್ಲಿ ವೈದ್ಯ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ: ಪ್ರಕರಣ ದಾಖಲು


