ಗಂಡಸರು ಮಹಿಳೆಯರ ಮೇಲೆ ಎಸಗುವ ಪ್ರತಿಯೊಂದು ಅಪರಾಧಕ್ಕೂ ಮಹಿಳೆಯರನ್ನೇ ದೂಷಿಸಲಾಗುತ್ತದೆ. ಅದು ಅತ್ಯಾಚಾರ ಆಗಿರಬಹುದು, ದೈಹಿಕ ದೌರ್ಜನ್ಯ ಅಥವಾ ಮೌಖಿಕ ಶೋಷಣೆಯೇ ಆಗಿರಬಹುದು. ನಿನ್ನದೇ ತಪ್ಪು ಎಂದು ಮಹಿಳೆಗೆ ಹೇಳಲಾಗುತ್ತದೆ. ಮಹಿಳೆಯರ ಮೇಲಿನ ಅಪರಾಧಗಳಿಗೆ ಕುರುಡಾಗದಿರಿ, ದನಿ ಎತ್ತಿ ಎಂದು ನಟೆ, ಮಾಜಿ ಸಂಸದೆ ನಟಿ ರಮ್ಯಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ವಿದ್ಯಾರ್ಥಿನಿಯೊರ್ವಳ ಮೇಲೆ ಅಮಾನವೀಯ ಸಾಮೂಹಿಕ ಅತ್ಯಾಚಾರ ನಡೆದಿದ್ದ ಬೆನ್ನಲ್ಲೇ “ಯುವಕ-ಯುವತಿ 7, 7:30ಯ ಸಮಯಕ್ಕೆ ಅಲ್ಲಿಗೆ ಹೋಗಿದ್ದಾರೆ. ಅದು ನಿರ್ಜನವಾದ ಪ್ರದೇಶ. ಅವರು ಹೋಗಬಾರದಿತ್ತು. ಯಾರನ್ನು ಅಲ್ಲಿಗೆ ಹೋಗಬೇಡಿ ಎಂದು ತಡೆಯಲು ನಮಗೆ ಆಗುವುದಿಲ್ಲ. ಅವರು ಹೋಗಿದ್ದಾರೆ” ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಯುವತಿ ಅಲ್ಲಿಗೆ ಹೋಗಿದ್ದೆ ತಪ್ಪು, ಸಂಜೆಯ ವೇಳೆ ಹೊರ ಬಂದಿದ್ದೆ ತಪ್ಪು ಎನ್ನುವಂತೆ ಮಾತನಾಡಿದ್ದರು.
ಗೃಹ ಸಚಿವರ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ನಟಿ ರಮ್ಯಾ ಕೂಡ ಮಹಿಳೆಯರದ್ದೇ ತಪ್ಪು ಎನ್ನುವವರ ವಿರುದ್ಧ, ಮಹಿಳೆಯರ ಮೇಲೆ ನಡೆಯುವ ಅಪರಾಧಗಳ ಬಗ್ಗೆ ಕುರುಡಾಗದಿರಿ ಎಂದು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ರಮ್ಯಾ ಅವರ ಇನ್ಸ್ಟಾಗ್ರಾಮ್ ಪೋಸ್ಟ್ ಸಾಕಷ್ಟು ವೈರಲ್ ಆಗುತ್ತಿದೆ.
ಇದನ್ನೂ ಓದಿ: ಮೈಸೂರಿನಲ್ಲಿ ವೈದ್ಯ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ: ಪ್ರಕರಣ ದಾಖಲು
View this post on Instagram
” ಗಂಡಸರು ಮಹಿಳೆಯರ ಮೇಲೆ ಎಸಗುವ ಪ್ರತಿಯೊಂದು ಅಪರಾಧಕ್ಕೂ ಮಹಿಳೆಯರನ್ನೇ ದೂಷಿಸಲಾಗುತ್ತದೆ. ಅದು ಅತ್ಯಾಚಾರ ಆಗಿರಬಹುದು, ದೈಹಿಕ ದೌರ್ಜನ್ಯ ಅಥವಾ ಮೌಖಿಕ ಶೋಷಣೆಯೇ ಆಗಿರಬಹುದು. ನಿನ್ನದೇ ತಪ್ಪು ಎಂದು ಮಹಿಳೆಗೆ ಹೇಳಲಾಗುತ್ತದೆ” ಎಂದಿದ್ದಾರೆ.
“ಇದು ನಿನ್ನ ತಪ್ಪು, ನೀನು ಆ ರೀತಿ ಮಾತನಾಡಬಾರದಿತ್ತು, ನೀನು ಆ ರೀತಿ ಮಾಡಬಾರದಿತ್ತು, ನೀನು ಆ ಉಡುಪನ್ನು ಧರಿಸಬಾರದಿತ್ತು ತುಂಬ ಬಿಗಿ ಆದಂತಹ, ತುಂಬ ಸಡಿಲ ಆಗಿರುವಂತಹ ಬಟ್ಟೆ ಧರಿಸಬಾರದಿತ್ತು, ತಡರಾತ್ರಿ ನೀನು ಹೊರಗೆ ಹೋಗಬಾರದಿತ್ತು, ಹೊರಗೇ ಹೋಗಬಾರದಿತ್ತು, ಮೇಕ್‌ಅಪ್ ಹಾಕಿಕೊಳ್ಳಬಾರದಿತ್ತು, ಯಾಕೆ ಕೆಂಪುಬಣ್ಣದ ಲಿಪ್‌ಸ್ಟಿಕ್, ನೀವು ಕಣ್ಣು ಮಿಟುಕಿಸಬಾರದಿತ್ತು..ಹೀಗೆ ನೀನು ಅದು ಮಾಡಬಾರದಿತ್ತು…ಇದು ಮಾಡಬಾರದಿತ್ತು… ಏಕೆ..? ಏಕೆಂದರೆ ಪುರುಷರು ಯಾವಗಲೂ ಇರುವುದೇ ಹಾಗೆ, ನಾವು ರಾಜಿ ಮಾಡಿಕೊಳ್ಳಬೇಕು, ನಾವು ಬದಲಾಗಬೇಕು, ನಾವು ಹೊಂದಿಕೊಳ್ಳಬೇಕು, ನಾವು ಸಹಿಸಿಕೊಳ್ಳಬೇಕು- ಇಲ್ಲ. ಇಲ್ಲ… ಇಂಥ ಅಸಂಬದ್ಧವೆಲ್ಲ ಕೊನೆಯಾಗಬೇಕು. ಪ್ರಾಮಾಣಿಕವಾಗಿ ಹೇಳಬೇಕಂದರೆ ಈ ದೂಷಣೆಯನ್ನು ಒಪ್ಪಿಕೊಳ್ಳುವ ತಪ್ಪನ್ನು ನಾನೂ ಮಾಡಿದ್ದೇನೆ. ಸ್ನೇಹಿತರಿಗೂ ಹೇಳಿದ್ದೇನೆ. ಆದರೆ ಇನ್ಮುಂದೆ ಸಾಧ್ಯವಿಲ್ಲ. ಮಹಿಳೆಯರ ವಿರುದ್ಧ ನಡೆಯುವ ಅಪರಾಧಗಳನ್ನು ನೋಡಿಕೊಂಡು ಸುಮ್ಮನಿರಬೇಡಿ, ಕುರುಡಾಗದಿರಿ. ಧ್ವನಿ ಎತ್ತಿ’ ಇದು ಇಂದಿಗೆ ಕೊನೆಯಾಗಲಿ” ಎಂದು ರಮ್ಯಾ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಸಾಮೂಹಿಕ ಅತ್ಯಾಚಾರ ಪ್ರಕರಣ: ಯುವತಿ ಅಲ್ಲಿಗೆ ಹೋಗಬಾರದಿತ್ತು ಎಂದು ಗೃಹ ಸಚಿವರ ಬೇಜವಾಬ್ದಾರಿ ಹೇಳಿಕೆ


