ಬಹುಭಾಷಾ ನಟಿ ತ್ರಿಷಾ ಮತ್ತು ನಿರ್ದೇಶಕ ಮಣಿರತ್ನಂ ಅವರು ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಇಬ್ಬರನ್ನು ಬಂಧಿಸಿ ಎಂದು ಕೆಲವು ಹಿಂದೂಪರ ಸಂಘಟನೆಗಳು ಒತ್ತಾಯಿಸುತ್ತಿವೆ.
ಮಣಿರತ್ನಂ ನಿರ್ದೇಶನದ ಪೊನ್ನಿಯಿನ್ ಸೆಲ್ವನ್ ಚಿತ್ರದಲ್ಲಿ ನಟಿ ತ್ರಿಷಾ ಕಾಣಿಸಿಕೊಂಡಿದ್ದು, ಚಿತ್ರದ ಚಿತ್ರಿಕರಣ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆಯುತ್ತಿತ್ತು. ಈ ವೇಳೆ ನಟಿ ಶಿವನ ದೇವಾಲಯದಲ್ಲಿ ಪಾದರಕ್ಷೆಗಳನ್ನು ಧರಿಸಿ ಓಡಾಡಿದ್ದಾರೆ ಎಂದು ಹೇಳಲಾಗಿದೆ.
ಇದರಿಂದ ಹಿಂದೂಗಳ ಧಾರ್ಮಿಕ ಭಾವನೆಗೆ ನೋವುಂಟಾಗಿದೆ ಎಂದಿರುವ ಧಾರ್ಮಿಕ ಸಂಘಟನೆಗಳು ನಟಿ ಮತ್ತು ನಿರ್ದೇಶಕರನ್ನು ಬಂಧಿಸಬೇಕು ಎಂದು ಒತ್ತಾಯಿಸಿವೆ.
ಇದನ್ನೂ ಓದಿ: ನೆಹರು-ಗಾಂಧಿ ಕುಟುಂಬದ ವಿರುದ್ಧ ಅವಹೇಳನಕಾರಿ ವಿಡಿಯೊ: ನಟಿ ಪಾಯಲ್ ರೋಹ್ಟಗಿ ವಿರುದ್ಧ ಪ್ರಕರಣ

ಮದ್ರಾಸ್ ಟಾಕೀಸ್ ನಿರ್ಮಾಣದಲ್ಲಿ ಮಣಿರತ್ನಂ ನಿರ್ದೇಶನದ ಪೊನ್ನಿಯಿನ್ ಸೆಲ್ವನ್ ಚಿತ್ರದ ಚಿತ್ರೀಕರಣ ಇಂದೋರ್‌ನಲ್ಲಿರುವ ಹಳೆಯ ದೇವಸ್ಥಾನದಲ್ಲಿ ನಡೆಯುತ್ತಿತ್ತು. ನಟಿಯರಾದ ತ್ರಿಷಾ ಮತ್ತು ಐಶ್ವರ್ಯ ರೈ ಅವರ ಕೆಲವು ದೃಶ್ಯಗಳನ್ನು ಚಿತ್ರೀಕರಿಸಲಾಗುತ್ತಿತ್ತು. ಚಿತ್ರೀಕರಣದ ನಡುವೆ ತ್ರಿಷಾ ಪಾದರಕ್ಷೆಗಳನ್ನು ಧರಿಸಿ ದೇವಾಲಯದ ಆವರಣದಲ್ಲಿ ಓಡಾಡಿದ್ದಾರೆ.
ನಟಿ ತ್ರಿಷಾ ಶಿವಲಿಂಗ ಮತ್ತು ನಂದಿಯ ನಡುವೆ ಪಾದರಕ್ಷೆಗಳೊಂದಿಗೆ ಓಡಾಡುತ್ತಿರವ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆಕ್ರೋಶ ವ್ಯಕ್ತವಾಗಿತ್ತು. ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ#ArrestTrisha ಎಂಬುದು ವೈರಲ್ ಮಾಡಲಾಗಿತ್ತು.
ಪೊನ್ನಿಯಿನ್ ಸೆಲ್ವನ್ ಚಿತ್ರದ ಕೆಲವು ಚಿತ್ರಗಳು ಸೋರಿಕೆಯಾದ ನಂತರ, ನಿರ್ಮಾಪಕರು ಚಿತ್ರೀಕರಣದ ಸಮಯದಲ್ಲಿ ಯಾವುದೇ ಛಾಯಾಚಿತ್ರಗಳನ್ನು ತೆಗೆದುಕೊಳ್ಳದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಚಿತ್ರಿಕರಣದ ಸಮಯದಲ್ಲಿ ಕುದುರೆಯೊಂದು ಸಾವನ್ನಪ್ಪಿತ್ತು. ಈ ಕುರಿತು ಮಣಿರತ್ನಂ ವಿರುದ್ಧ ದೂರು ದಾಖಲಾಗಿತ್ತು. ತನಿಖೆ ಪ್ರಗತಿಯಲ್ಲಿದೆ.
ಇದನ್ನೂ ಓದಿ: 200 ಹಲ್ಲಾ ಹೋ: ಪ್ರತೀಕಾರ ಹತ್ಯೆಯ ಸುತ್ತ ಮಹತ್ವದ ಜಾತಿ ದೌರ್ಜನ್ಯದ ಪ್ರಶ್ನೆಗಳು


