ಆಗಸ್ಟ್ 28 ರ ಪೋಲಿಸ್ ಲಾಠಿಚಾರ್ಜ್ ವಿರುದ್ಧ ಹರಿಯಾಣದಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು, ರಾಜ್ಯ ಸರ್ಕಾರದೊಂದಿಗೆ ಮಾತುಕತೆ ಸತತ ಎರಡನೇ ದಿನವೂ ಸಫಲವಾಗದ ಕಾರಣ ಕರ್ನಾಲ್ ಶಾಶ್ವತ ಪ್ರತಿಭಟನಾ ಸ್ಥಳವಾಗಿ ಉಳಿಯಬಹುದು ಎಂದು ರೈತರು ಹೇಳಿದ್ದಾರೆ
“ನಾವು ಇಲ್ಲಿ ಸಿಂಘು ಮತ್ತು ಟಿಕ್ರಿ ಗಡಿಯಂತಹ ಶಾಶ್ವತ ಪ್ರತಿಭಟನಾ ಸ್ಥಳವನ್ನು ಹೊಂದಬಹುದು” ಎಂದು ರೈತ ನಾಯಕ ರಾಕೇಶ್ ಟಿಕಾಯತ್ ಹೇಳಿದ್ದಾರೆ. ಜೊತೆಗೆ ಇಲ್ಲಿನ ಘಟನೆಯಿಂದ ದೆಹಲಿ ಗಡಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ತೊಂದರೆಯಾಗುವುದನ್ನು ನಾವು ಬಯಸುವುದಿಲ್ಲ ಎಂದು ಸೇರಿಸಿದ್ದಾರೆ.
ಆಗಸ್ಟ್ 28ರ ಪೋಲಿಸ್ ಲಾಠಿಚಾರ್ಜ್ ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡುವಂತೆ ರಾಜ್ಯ ಸರ್ಕಾರದೊಂದಿಗೆ ನಡೆಸಿದ ಮಾತುಕತೆ ವಿಫಲವಾಗಿದ್ದರಿಂದ ರೈತರು ಮಂಗಳವಾರ ಸಂಜೆಯಿಂದ ಕರ್ನಾಲ್‌ನ ಸರ್ಕಾರಿ ಕಚೇರಿಗಳ ಹೊರಗೆ ಟೆಂಟ್ ಹಾಕಿ ಧರಣಿ ನಡೆಸುತ್ತಿದ್ದಾರೆ.
ಇದನ್ನೂ ಓದಿ: ರೈತ ಹೋರಾಟ: ಸೆ.27ಕ್ಕೆ ಭಾರತ್ ಬಂದ್‌ಗೆ ಕರೆ ನೀಡಿದ ರೈತ ಸಂಘಟನೆಗಳು
करनाल मिनी सचिवालय पर हमारा धरना जारी रहेगा। धरना स्थल मिनी सचिवालय ही रहेगा, जब तक न्याय नहीं मिलेगा तब तक किसान का संघर्ष जारी रहेगा । #करनाल #FarmersProtest
— Rakesh Tikait (@RakeshTikaitBKU) September 8, 2021
ರೈತರು ಮತ್ತು ರಾಜ್ಯ ಸರ್ಕಾರದ ನಡುವೆ ಮೊದಲ ಸುತ್ತಿನ ಮಾತುಕತೆಯ ನಂತರ ಮಿನಿ ಸೆಕ್ರೆಟರಿಯೇಟ್‌ಗೆ ಮುತ್ತಿಗೆ ಹಾಕಲು ರೈತರು ಆರಂಭಿಸಿದ್ದರು. ಪ್ರತಿಭಟನಾಕಾರರ ಮೇಲೆ ಪೊಲೀಸರು ಜಲ ಫಿರಂಗಿಗಳನ್ನು ಬಳಸಿ ಮೆರವಣಿಗೆಯನ್ನು ತಡೆಯಲು ಪ್ರಯತ್ನಿಸಿದ್ದರು.
ಆಗಸ್ಟ್ 28 ರ ಪೋಲಿಸ್ ಲಾಠಿಚಾರ್ಜ್ ವೇಳೆ ರೈತರ ತಲೆ ಒಡೆಯಲು ಆದೇಶ ನೀಡಿದ್ದ ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಆಗಿರುವ ಆಯುಷ್ ಸಿನ್ಹಾ ಅವರನ್ನು ಅಮಾನತುಗೊಳಿಸಲು ರೈತರು ಒತ್ತಾಯಿಸುತ್ತಿದ್ದಾರೆ.
ಘಟನೆಯಲ್ಲಿ ಹತ್ತು ಜನ ರೈತರು ಗಾಯಗೊಂಡಿದ್ದರು. ಓರ್ವ ರೈತ ಸಾವನ್ನಪ್ಪಿದ್ದರು. ಹೃದಯಾಘಾತದಿಂದ ಸಾವು ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ, ಇದನ್ನು ರೈತರು ನಿರಾಕರಿಸಿದ್ದಾರೆ.
ಹರಿಯಾಣ ಭಾರತೀಯ ಕಿಸಾನ್ ಒಕ್ಕೂಟದ ಮುಖ್ಯಸ್ಥರಾಗಿರುವ ಗುರ್ನಾಮ್ ಸಿಂಗ್ ಚೌದುನಿ, ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ಧರಣಿ ಮುಂದುವರಿಯಲಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕರ್ನಾಲ್: ಮುಂದುವರೆದ ರೈತ ಪ್ರತಿಭಟನೆ, ಸರ್ಕಾರಿ ಕಚೇರಿಗಳ ಹೊರಗೆ ಜಮಾಯಿಸಿರುವ ರೈತರು


