ಅಂದಿನ ಜನತಾ ಮನೆ

ಕಳೆದುಹೋದ ದಿನಗಳು – 20

ಡೈರಿ ಕೆಲಸ ಬೆಳಗ್ಗೆ ಐದು ಗಂಟೆಗೆ ಪ್ರಾರಂಭವಾಗುತ್ತಿತ್ತು. ಹಸುಗಳ ಸೆಗಣಿಯನ್ನು ತೆಗೆಯುವವರು, ಹಸುಗಳಿಗೆ ಹಿಂಡಿ ಕೊಡುವವರು, ತೊಳೆಯುವವರು, ಹೀಗೆ ಎಲ್ಲರೂ ಅವರವರ ಕೆಲಸಗಳಲ್ಲಿ ತೊಡಗುವರು. ಆರುಗಂಟೆಗೆ ಹಾಲು ಕರೆಯಲು ಪ್ರಾರಂಭ. ಸುಮಾರು ಮೂವತ್ತು ಹಸುಗಳು ಹಾಲು ಕರೆಯಲು ಇರುತ್ತಿದ್ದವು.

ಡೈರಿಫಾರಂನ ಉಸ್ತುವಾರಿಯೆಂದರೆ ತೋಟದ ಕೆಲಸಗಳ ಹಾಗಲ್ಲ, ಅದನ್ನು ನೋಡಿಕೊಳ್ಳುವವನಿಗೆ ಅದಕ್ಕೆ ಸಂಬಂಧಪಟ್ಟ ಎಲ್ಲ ಕೆಲಸಗಳು ಸ್ವತಃ ಮಾಡಿ ಗೊತ್ತಿರಬೇಕು ಮತ್ತು ಸಾಂದರ್ಭಿಕವಾಗಿ ಮಾಡಲು ತಯಾರಿರಬೇಕು. ಯಾಕೆಂದರೆ ಬೇರೆ ಯಾವುದೇ ಕೃಷಿ ಕೆಲಸವನ್ನು ನಾಳೆಗೆ ಮುಂದೂಡಬಹುದು. ಹಸುಗಳಿಗೆ ಆಹಾರ, ಹುಲ್ಲು, ನೀರು ಕೊಡುವುದು, ಹಾಲುಕರೆಯುವುದು, ಕಾಯಿಲೆ ಬಂದರೆ ಔಷಧಿ ತಪ್ಪಿಸುವಂತೆಯೇ ಇಲ್ಲ.

ನನಗೆ ಎಲ್ಲ ಕೆಲಸವೂ ಅಭ್ಯಾಸವಾಗಿತ್ತು, ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಪ್ರತಿಹೊತ್ತಿನಲ್ಲಿ ಏಳೆಂಟು ಹಸುಗಳ ಹಾಲನ್ನು ಕರೆಯುವ ಅಭ್ಯಾಸ ಇಟ್ಟುಕೊಂಡಿದ್ದೆ. ನನ್ನ ಹದಿನಾಲ್ಕು ವರ್ಷಗಳ ಡೈರಿ ಉಸ್ತುವಾರಿಯ ಕಾಯಕದಲ್ಲಿ ಕೆಲಸಕ್ಕೆ ಹೋದ ಒಂದು ದಿನವೂ ಅದನ್ನು ತಪ್ಪಿಸಲಿಲ್ಲ.

ಕೂನೂರಿನಲ್ಲಿ ತರಬೇತಿ ಪಡೆದ ನಂತರ, ಹಸುಗಳಿಗೆ ಕ್ಯಾಲ್ಸಿಯಂ ಡ್ರಿಪ್ ಹಾಕುವುದು, ಗಬ್ಬ ಕಟ್ಟಿದೆಯೇ ಎಂದು ಪರೀಕ್ಷೆ ಮಾಡುವುದು, ಕರು ಹಾಕುವಾಗ ಎಚ್ಚರಿಕೆಯಿಂದ ಪ್ರಸವ ಮಾಡಿಸುವುದು, ಮುಂತಾದ ಕೆಲಸಗಳಲ್ಲದೆ ಕಾಲಕಾಲಕ್ಕೆ ಪಶುವೈದ್ಯರು ಹೇಳಿದ ಔಷಧಿ ಇಂಜೆಕ್ಷನ್‌ಗಳನ್ನು ಕೊಡುವುದು ಮುಂತಾದವನ್ನು ಮಾಡುತ್ತಿದ್ದೆ. ಜೊತೆಗೆ ಪಶುಸಂಗೋಪನೆಗೆ ಸಂಬಂಧಿಸಿದ ಪುಸ್ತಕಗಳನ್ನು ತಂದು ಓದತೊಡಗಿದೆ.

ಪೂರ್ಣಿಮಾ ಎಸ್ಟೇಟ್ ಡೈರಿ

ಇದರಿಂದಾಗಿ ಸುತ್ತಲಿನ ಅನೇಕರು ಅವರಲ್ಲಿ ದನ ಕರುಗಳಿಗೆ ಏನಾದರೂ ಅನಾರೋಗ್ಯವಾದಾಗ ನನಗೆ ಹೇಳಿ ಕಳುಹಿಸತೊಡಗಿದರು. ಹೇಗೂ ಸುತ್ತಾಡಲೂ ಸೈಕಲ್ಲಿತ್ತು, ಕೆಲಸ ಮಾಡುವ ಉತ್ಸಾಹವೂ ಇತ್ತು. ಸುತ್ತಲಿನ ಹಲವಾರು ಕೃಷಿಕರಿಗೆ ಅವಸರದ ಅಗತ್ಯಗಳಿಗೆ ನಾನೊಬ್ಬ ಪಶು ಚಿಕಿತ್ಸಕನಾದೆ. ಹೀಗೆ ಹೊರಗೆ ಹೋಗಿ ಕೆಲಸ ಮಾಡಲು ರವೀಂದ್ರನಾಥರ ಅನುಮತಿ ಕೇಳಿದಾಗ ಅವರು, “ನಿನಿಗೆ ಸಮಯ ಮತ್ತು ಮನಸ್ಸು ಇದ್ದರೆ ಮಾಡು. ಅವರಿಗೂ ಒಂದು ಸಹಾಯವಾಗುತ್ತದೆ” ಎಂದರು.

ಆದರೆ ಎಲ್ಲವೂ ಉಚಿತ ಸೇವೆ, ಔಷಧಿಯನ್ನು ಬಳಸಿದ್ದರೆ ಅದರ ಹಣ ಮಾತ್ರ ಪಡೆಯುತ್ತಿದ್ದೆ. ಇಲ್ಲವೇ ಔಷಧಿಯನ್ನು ಅವರಲ್ಲೇ ತರಲು ಹೇಳುತ್ತಿದ್ದೆ.

ಆ ಕಾಲದಲ್ಲಿ ಇನ್ನೂ ಸಾಕ್ಷರತಾ ಆಂದೋಲನ ಪ್ರಾರಂಭವಾಗಿಲಿಲ್ಲ. ಅದರೆ ವಯಸ್ಕರ ಶಿಕ್ಷಣ ಸಮಿತಿ ಇತ್ತು. ಅದರ ಮೂಲಕ ಒಂದಷ್ಟು ರಾತ್ರಿ ಶಾಲೆಗಳನ್ನು ಪ್ರಾರಂಭ ಮಾಡಲಾಯಿತು. ಅದಕ್ಕಾಗಿ ಸಕಲೇಶಪುರ ನಗರದಲ್ಲಿ ಒಂದು ಹತ್ತು ದಿನಗಳ ತರಬೇತಿ ಶಿಬಿರ ನಡೆಯಿತು. ತರಬೇತಿ ಪಡೆದವರು ನಂತರ ತಮ್ಮ ತಮ್ಮ ಊರಿನಲ್ಲಿ ರಾತ್ರಿ ಶಾಲೆಗಳನ್ನು ನಡೆಸಬೇಕಿತ್ತು. ಅದಕ್ಕಾಗಿ ಒಂದಷ್ಟು ಪಠ್ಯ ಪುಸ್ತಕಗಳು, ಇತರ ಪರಿಕರಗಳು, ಒಂದು ಲಾಟೀನು, ಅದಕ್ಕೊಂದಷ್ಟು ಸೀಮೆ ಎಣ್ಣೆ ದೊರೆಯುತ್ತಿತ್ತು. ಜೊತೆಯಲ್ಲಿ ತರಗತಿ ನಡೆಸುವವರಿಗೆ ಸಣ್ಣ ಸಂಭಾವನೆಯೂ ಇತ್ತು. ಆಗ ರವೀಂದ್ರನಾಥರು ಹಲವು ಯುವಕರನ್ನು ಅಲ್ಲಿ ತರಬೇತಿ ಪಡೆಯಲು ಕಳುಹಿಸಿದರು. ಹಾಗೆ ಹೋದವರಲ್ಲಿ ನಮ್ಮೂರಿನ ಪಕ್ಕದ ಮಾವಿನ ಹಳ್ಳಿ ಕಾಳಯ್ಯ ಎಂಬವರಿದ್ದರು.

ರವೀಂದ್ರನಾಥರು ಅವರ ಹೆಸರನ್ನು ಬರೆಸುವಾಗ ಕಾಳಿಪ್ರಸಾದ್ ಎಂದು ಬರೆಸಿದರು. ನಂತರ ಆತನಲ್ಲಿ ಯಾರು ಕೇಳಿದರೂ ನೀನು ನಿನ್ನ ಹೆಸರನ್ನು ಕಾಳಿಪ್ರಸಾದ್ ಎಂದು ಹೇಳು ಎಂದರು.

ನನಗೆ ಆಗ ಇದು ವಿಚಿತ್ರವೆನಿಸಿತು. ಆದರೆ ಸುಮ್ಮನಿದ್ದೆ. ದಿನಕಳೆದಂತೆ ಕಾಳಿಪ್ರಸಾದ್ ತಮ್ಮ ಕಡೆಯ ಅನೇಕ ಹುಡುಗರಿಗೆ ಇದೇ ರೀತಿ ಮರು ನಾಮಕರಣ ಮಾಡಿದರು. ಆಗ ನಾನು ಈ ವಿಚಾರವನ್ನು ರವೀಂದ್ರನಾಥರಿಗೆ ಹೇಳಿದೆ. ಆಗ ಅವರು ನೋಡು ಅವನಿಗೆ ಸ್ವಲ್ಪ ವಿದ್ಯೆ ಮೊದಲೇ ಇತ್ತು. ಆದರೆ ಅವನು ಮೂರನೆಯ ತರಗತಿಗೇ ಶಾಲೆ ಬಿಟ್ಟಿದ್ದಾನೆ. ಅದಕ್ಕೆ ಅವನ ಬಡತನ ಒಂದೇ ಕಾರಣ ಅಂತ ತಿಳಿಯಬೇಡ. ಮೊದಲು ನಾನು ಅವನ ಹೆಸರನ್ನು ಕೇಳಿದಾಗ, ಹಿಂಜರಿಯುತ್ತ “ಕಾಳಯ್ಯ” ಅಂತ ಗಂಟಲೊಳಗಿಂದ ಹೇಳಿದ.

ಪೂರ್ಣಿಮಾ ಎಸ್ಟೇಟ್ ಹಸುಗಳು

ಈಗ ಅವನ ಹೆಸರನ್ನು ಹೇಳುವಾಗ ಅವನ ಸ್ವರದಲ್ಲಾದ ಬದಲಾವಣೆ ಮತ್ತು ಆತ್ಮವಿಶ್ವಾಸವನ್ನು ನೋಡು ಎಂದರು.

ಕಾಳಿಪ್ರಸಾದ್ ಮುಂದೆ ಜಿಲ್ಲಾ ಪರಿಷತ್ ಸದಸ್ಯರೂ ಆದರು. ಅದು ಬೇರೆಯೇ ಒಂದು ಕಥೆಯಿದೆ.

ತರಬೇತಿಯ ನಂತರ ಕಾಳಿಪ್ರಸಾದ್ ಗಾಣದಹೊಳೆಯಲ್ಲಿ ರಾತ್ರಿ ಶಾಲೆಯನ್ನು ನಡೆಸತೊಡಗಿದರು. ಈ ರೀತಿ ಹಲವು ಕಡೆಗಳಲ್ಲಿ ಶಾಲೆಗಳು ನಡೆಯುತ್ತಿದ್ದವು. ಅದರಿಂದ ಹಲವರಿಗೆ ಒಂದಷ್ಟು ಸಂಭಾವನೆ ಇತ್ಯಾದಿ ದೊರೆತರೂ ಬಹಳ ಪ್ರಯೋಜನವೇನು ಆಗಲಿಲ್ಲ. ಅದಕ್ಕೆ ಹಲವಾರು ಕಾರಣಗಳಿದ್ದವು. ಮುಖ್ಯವಾಗಿ ಆಗ ಅದು ಒಂದು ಜನಾಂದೋಲನದ ರೂಪದಲ್ಲಿ ಇರಲಿಲ್ಲ. ಬಹಳಷ್ಟು ಜನರು ಇದು ತರಗತಿ ನಡೆಸುವವರು ಹಣ ಪಡೆಯಲು ಮಾಡುತ್ತಿದ್ದಾರೆಂದು ತಿಳಿದು ಅದರಲ್ಲಿ ಆಸಕ್ತಿ ತೋರಲಿಲ್ಲ. ಜೊತೆಗೆ ಈ ವಯಸ್ಕರ ಶಿಕ್ಷಣವನ್ನೇ ಲೇವಡಿ ಮಾಡುತ್ತ, ಕುಹಕ ವ್ಯಂಗ್ಯಗಳಿಂದ ನಿರುತ್ಸಾಹಗೊಳಿಸುವ ಮಂದಿಯೂ ಸಾಕಷ್ಟು ಇದ್ದರು. ಇವರಲ್ಲಿ ಗ್ರಾಮಾಂತರ ಪ್ರದೇಶದಲ್ಲಿ ಅರೆಶಿಕ್ಷಿತ ಭೂಮಾಲಿಕ ವರ್ಗವೇ ವಯಸ್ಕರ ಶಿಕ್ಷಣದ ವಿರುದ್ಧವಾಗಿದ್ದರು. ಇದೇ ವಿಷಯವನ್ನಿಟ್ಟುಕೊಂಡೇ ನಾವು “ಸತ್ಯಕ್ಕೆ ಸಾವಿಲ್ಲ” ಎಂಬ ನಾಟಕವನ್ನು ಮಾಡಿದ್ದು. ಮುಂದೆ ಬದಲಾವಣೆಯ ದಿನಗಳು ಬಂದವು ಆದರೆ ಅದಕ್ಕಾಗಿ ಮುಂದೆ ಸಾಕ್ಷರತಾ ಆಂದೋಲನದವರೆಗೆ ಕಾಯಬೇಕಾಯಿತು.

ಗಣಪಯ್ಯನವರು ಈಗಾಗಲೇ ನಡಹಳ್ಳಿ ಗ್ರಾಮದಲ್ಲಿ ದಲಿತರಿಗೆ ನೆಲ ಕೊಡಿಸಿ ತೋಟ ಮಾಡಿಕೊಡುವ ಪ್ರಯತ್ನದಲ್ಲಿ ಇದ್ದರು. ಅದರ ಮುಂದುವರಿಕೆಯಾಗಿ ಅಗಲಟ್ಟಿ ಮತ್ತು ಮಾವಿನಹಳ್ಳಿ ಗ್ರಾಮದಲ್ಲಿ ಸುಮಾರು ನೂರು ಎಕರೆ ಜಮೀನನ್ನು ನಲುವತ್ತು ದಲಿತ ಕುಟುಂಬಗಳಿಗೆ ಮಂಜೂರು ಮಾಡಿಸಿದರು. ಅದು ಮರಗಿಡಗಳಿಲ್ಲದ ಬೋಳು ದೀಣೆ ಪ್ರದೇಶವಾಗಿದ್ದು ತುಂಬಾ ಈಚಲು ಗುತ್ತಿಗಳಿದ್ದವು. ಬೇರೆಯವರೆಲ್ಲ ಆಗ “ಗಣಪಯ್ಯ ನಿಮ್ಮಗೆಲ್ಲ ಈಚಲು ಗುತ್ತಿ ಅಗಿಯಕ್ಕೆ ಮಾಡಿಕೊಡ್ತಾ ಇದ್ದಾರೆ” ಎಂದು ಕುಟುಕುತ್ತಿದ್ದರು.  ಪ್ರಾರಂಭದ ಹಂತದಲ್ಲಿ ದಲಿತರು ಆ ನೆಲವನ್ನು ಪಡೆಯಲು ಸ್ವಲ್ಪ ಹಿಂಜರಿದರೂ ನಿಧಾನವಾಗಿ ಅವರೂ ಅರ್ಥಮಾಡಿಕೊಂಡು, ಅಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಹೀಗೆ ಜಮೀನು ಪಡೆದವರಲ್ಲಿ ಕಾಳಿಪ್ರಸಾದ್ ಕುಟುಂಬದವರೂ ಇದ್ದಾರೆ.

ವಯಸ್ಕರ ಶಿಕ್ಷಣ ತರಬೇತಿ ಯ ನೋಟ್ಸ್

ಬಡವರಿಗಾಗಿ ಆಗ ಜನತಾ ಮನೆಗಳ ಯೋಜನೆ ಜಾರಿಗೆ ಬಂದಿತ್ತು. ಆಗ ಒಂದು ಮನೆಯ ಒಟ್ಟು ಖರ್ಚು ಒಟ್ಟು ಎರಡೂವರೆ ಸಾವಿರ ರೂಗಳು. ಅದರಲ್ಲಿ ಎರಡು ಸಾವಿರ ರೂ ಇಪ್ಪತ್ತು ವರ್ಷಗಳ ಅವಧಿಯ ಸರ್ಕಾರದ ಸಾಲವಿದ್ದರೆ, ಉಳಿದ ಐದುನೂರು ರೂಗಳನ್ನು ಫಲಾನುಭವಿಯೇ ಭರಿಸಬೇಕಿತ್ತು. ಅದರಲ್ಲಿ ಒಂದು ಸಾವಿರ ರೂಗಳಿಗೆ ಹೆಂಚು ಮತ್ತು ಮರವನ್ನು ಸರ್ಕಾರವೇ ಟೆಂಡರ್ ಮೂಲಕ ಪಡೆದು ಹಂಚುತ್ತಿತ್ತು. ಉಳಿದ ಹಣದಲ್ಲಿ ತಳಪಾಯ, ಗೋಡೆ, ಬಡಗಿ ಕೆಲಸ, ಸಾರಣೆ ಇತ್ಯಾದಿಗಳು ಆಗಬೇಕಿತ್ತು. ಈ ಹಣದಲ್ಲಿ ಮನೆಯನ್ನು ಪೂರ್ತಿ ಮಾಡಲು ಸಾಧ್ಯವಾಗುತ್ತಿರಲಿಲ್ಲವಾದ್ದರಿಂದ ನಿಜವಾದ ಬಡವರಿಗೆ ಮನೆ ಕಟ್ಟಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಅಷ್ಟೇ ಅಲ್ಲ ಅದಕ್ಕಾಗಿ ಕೂಲಿಕೆಲಸ ಬಿಟ್ಟು ಹಲವು ಸಲ ತಾಲ್ಲೂಕಿನ ಕೇಂದ್ರಕ್ಕೆ, ಕಛೇರಿಗಳಿಗೆ ತಿರುಗಲೂ ಅವರಿಂದ ಆಗುತ್ತಿರಲಿಲ್ಲ

ಈ ರೀತಿ ಮನೆಗಳನ್ನು ಕಟ್ಟಿಸಲು ಫಲಾನುಭವಿಗಳನ್ನು ಹುಡುಕಿ ಅರ್ಜಿ ಸಂಗ್ರಹಿಸುವುದು, ಮುಂತಾದ ಕೆಲಸಗಳನ್ನು ಗಣಪಯ್ಯ ಪ್ರಾರಂಭಿಸಿದರು, ಅದರ ಹಲವು ಕೆಲಸಗಳು ನನ್ನ ಪಾಲಿಗೆ ಬಂದವು.

ನನಗೆ ತಿರುಗಾಟಕ್ಕೆ ಹೇಗೂ ಸೈಕಲಿತ್ತು, ಜೊತೆಗೆ ನನ್ನ ಪಶುಚಿಕಿತ್ಸೆಯ ನಿಮಿತ್ತ ಅನೇಕ ಕಡೆಗಳಿಗೆ  ಹೋಗುತ್ತಿದ್ದರಿಂದ ಹಲವರ ಪರಿಚಯವಾಗಿತ್ತು. ಅಲ್ಲಿನ ಕೆಲವರು ವಸತಿ ಇಲ್ಲದವರ ಮಾಹಿತಿಯೂ ಸಿಗುತ್ತಿತ್ತು.

ಈ ರೀತಿ ನೂರಾರು ಜನರ ಪಟ್ಟಿ ಸಿದ್ಧವಾಯಿತು. ಮಾವಿನಹಳ್ಳಿ, ಹಾರ್ಲೆ, ಕೂಡಿಗೆ, ಕುಂಬರಡಿ, ನಡಹಳ್ಳಿ, ಹೆಬ್ಬಸಾಲೆ, ಕೃಷ್ಣಾಪುರ, ಹೆನ್ನಲಿ, ಅಜ್ಜನಕೆರೆ, ಹಾಗೆಯೇ ಸಕಲೇಶಪುರದಿಂದ ಆಚೆ ಕೆಲವು ಗ್ರಾಮಗಳಲ್ಲಿಯೂ ಬಡವರಿಗೆ ಮನೆ ಕಟ್ಟಿಸುವ ಯೋಜನೆ ಸಿದ್ಧವಾಯಿತು.

ಆದರೆ ಫಲಾನುಭವಿಗಳ ಐನೂರು ರೂಗಳು ಹಣವನ್ನು ಭರಿಸಬೇಕು ಅಂದಾಗ ಹೆಚ್ಚಿನವರು ಹಿಂಜರಿದರು. ಆಗ ದಿನಗೂಲಿ ಆರು ರೂಪಾಯಿ ಇತ್ತು ಐನೂರು ರೂಗಳೆಂದರೆ ಇಂದಿನ ನಲುವತ್ತು ಸಾವಿರಕ್ಕೆ ಸಮವಾಗಬಹುದು.

ಹಲವು ಬ್ಯಾಂಕುಗಳಲ್ಲಿ ಗಣಪಯ್ಯ ಸಾಲಕ್ಕಾಗಿ ವಿಚಾರಿಸಿದರು. ಹೆಚ್ಚಿನ ಬ್ಯಾಂಕುಗಳು ಈ ಯೋಜನೆಗೆ ಆಸಕ್ತಿ ತೋರಲಿಲ್ಲ. ಆಗ ಸಹಾಯಕ್ಕೆ ಬಂದವರು ವಿಜಯಾ ಬ್ಯಾಂಕಿನ ಅಂದಿನ ಮ್ಯಾನೇಜರ್ ವಿಠ್ಠಲ ಶೆಟ್ಟರು. ಅವರು ದಲಿತರಿಗೆಲ್ಲ ಬುಟ್ಟಿ ಹೆಣೆಯುವುದು ಮುಂತಾದ ನಾನಾ ಕಾರಣಗಳನ್ನು ತೋರಿಸಿ ತಲಾ ಐನೂರು ರೂ ಸಾಲ ಕೊಟ್ಟರು. ಈ ಎಲ್ಲಾ ಸಾಲಕ್ಕೂ ರವೀಂದ್ರನಾಥರು ಜಾಮೀನಾದರು.

ಫಲಾನುಭವಿಗಳ ಒಟ್ಟು ಸಂಖ್ಯೆ ಐನೂರಕ್ಕೂ ಹೆಚ್ಚಿತ್ತು. ಆ ವರ್ಷವೇ ಅತೀ ಅಗತ್ಯವಿರುವ ಮುನ್ನೂರು ಜನರನ್ನು ಆಯ್ಕೆ ಮಾಡಲಾಯಿತು. ಅವರಲ್ಲಿ ಶೇ ಎಂಬತ್ತರಷ್ಟು ದಲಿತರಿದ್ದರು. ಉಳಿದವರಲ್ಲಿ ಎಲ್ಲಾ ಜಾತಿಗೆ ಸೇರಿದ ಬಡವರಿದ್ದರು. ಈ ಮನೆಗಳಿಗೆ ಸಂಬಂಧಪಟ್ಟ ಕೆಲಸಗಳಿಗೆ ಕಛೇರಿ ತಿರುಗುವ ಮತ್ತು ಬೇರೆ ಕೆಲಸಗಳ ಹೊಣೆಯೂ ನನಗೇ ಬಂತು.

ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)


ಇದನ್ನೂ ಓದಿ: ಕಳೆದು ಹೋದ ದಿನಗಳು – 16: ಇಂದಿರಾಗಾಂಧಿ ಚಿಕ್ಕಮಗಳೂರಿನಲ್ಲಿ ಚುನಾವಣೆ ಗೆದ್ದುದ್ದು..

LEAVE A REPLY

Please enter your comment!
Please enter your name here