ಬಾಲಿವುಡ್ ಬರಹಗಾರ, ಸಾಹಿತಿ ಜಾವೇದ್ ಅಖ್ತರ್, ನಟಿ ಕಂಗನಾ ರಣಾವತ್ ವಿರುದ್ಧ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಮುಂದಿನ ವಿಚಾರಣೆಗೆ ಖುದ್ದು ಹಾಜರಾಗದಿದ್ದಲ್ಲಿ ವಾರಂಟ್ ಹೊರಡಿಸುವುದಾಗಿ ಮುಂಬೈ ಕೋರ್ಟ್ ಎಚ್ಚರಿಕೆ ನೀಡಿದೆ.
ಇಂದು (ಮಂಗಳವಾರ) ನಡೆದ ವಿಚಾರಣೆಗೆ ನಟಿ ಕಂಗನಾ ರಣಾವತ್ ಅವರ ವೈಯಕ್ತಿಕ ಹಾಜರಾತಿಗೆ ವಿನಾಯಿತಿ ನೀಡಿದ ಮುಂಬೈ ಕೋರ್ಟ್, ಮುಂದಿನ ವಿಚಾರಣೆಯ ದಿನಾಂಕ ಸೆಪ್ಟಂಬರ್ 20 ರಂದು ನ್ಯಾಯಾಲಯಕ್ಕೆ ಹಾಜರಾಗಲು ವಿಫಲವಾದರೆ ನಟಿಯ ವಿರುದ್ಧ ವಾರಂಟ್ ಹೊರಡಿಸುವುದಾಗಿ ಎಚ್ಚರಿಕೆ ನೀಡಿದೆ.
ಮಾನನಷ್ಟ ಮೊಕದ್ದಮೆ ಪ್ರಕರಣ ವಿಚಾರಣೆಗೆ ಬರುತ್ತಿದ್ದಂತೆ, ನಟಿ ಕಂಗನಾ ರಣಾವತ್ ಅವರ ಆರೋಗ್ಯ ಸರಿಯಿಲ್ಲದ ಕಾರಣ ಆ ದಿನದ ವೈಯಕ್ತಿಕ ಹಾಜರಾತಿಯಿಂದ ವಿನಾಯಿತಿ ನೀಡುವಂತೆ ನಟಿ ಪರ ವಕೀಲರು ಕೋರಿದ್ದರು.
ಇದನ್ನೂ ಓದಿ: ಜಾವೇದ್ ಅಖ್ತರ್ V/s ಕಂಗನಾ: ವಾರೆಂಟ್ ಪ್ರಶ್ನಿಸಿ ಅರ್ಜಿ ಸಲ್ಲಿಸಿದ ನಟಿ
ವಕೀಲರು ನ್ಯಾಯಾಲಯಕ್ಕೆ ವೈದ್ಯಕೀಯ ಪ್ರಮಾಣಪತ್ರವನ್ನು ಸಲ್ಲಿಸಿದ್ದಾರೆ. ಜೊತೆಗೆ ನಟಿ ತನ್ನ ಚಿತ್ರದ ಪ್ರಚಾರಕ್ಕಾಗಿ ಪ್ರಯಾಣಿಸುತಿದ್ದು, ಕೊರೊನಾ ರೋಗಲಕ್ಷಣಗಳು ಕಾಣಿಸಿಕೊಂಡಿವೆ ಎಂದು ಹೇಳಿದ್ದಾರೆ.
ಇದನ್ನು ಖಂಡಿಸಿರುವ ಜಾವೇದ್ ಅಖ್ತರ್ ಪರ ವಕೀಲರು ಇದು ಪ್ರಕರಣದ ವಿಚಾರಣೆಯನ್ನು ವಿಳಂಬಗೊಳಿಸುವ ಒಂದು ತಂತ್ರ ಎಂದಿದ್ದಾರೆ.
ವಾದಗಳನ್ನು ಆಲಿಸಿದ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಆರ್‌ಆರ್ ಖಾನ್, ನಟಿ ಕಂಗನಾ ರಣಾವತ್‌ಗೆ ಈ ದಿನದ ವಿಚಾರಣೆಯಿಂದ ವಿನಾಯಿತಿ ನೀಡಿದ್ದು, ಮುಂದಿನ ವಿಚಾರಣೆಗೆ ಹಾಜರಾಗಬೇಕು ಎಂದು ತಿಳಿಸಿ ಸೆಪ್ಟೆಂಬರ್ 20 ರಂದು ವಿಚಾರಣೆಯನ್ನು ಮುಂದೂಡಿದ್ದಾರೆ.
ಜೊತೆಗೆ ಮುಂದಿನ ವಿಚಾರಣೆಗೆ ನಟಿ ಹಾಜರಾಗಲು ವಿಫಲವಾದರೆ, ಆಕೆಯ ವಿರುದ್ಧ ವಾರಂಟ್ ಹೊರಡಿಸಲಾಗುವುದು ಎಂದು ಮ್ಯಾಜಿಸ್ಟ್ರೇಟ್ ಎಚ್ಚರಿಕೆ ನೀಡಿದ್ದಾರೆ.
ಟಿವಿ ಸಂದರ್ಶನವೊಂದರಲ್ಲಿ ನಟಿ ಕಂಗನಾ ತಮ್ಮ ವಿರುದ್ಧ ಮಾನಹಾನಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಜಾವೇದ್ ಅಖ್ತರ್ ಕಳೆದ ನವೆಂಬರ್‌ನಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ಕಳೆದ ವರ್ಷ ಜೂನ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ನಟ ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿ ಕಂಗನಾ ತಮ್ಮ ಹೆಸರನ್ನು ವಿನಾಃ ಕಾರಣ ಎಳೆದು ತಂದಿದ್ದಾರೆ ಎಂದು ಜಾವೇದ್ ಅಖ್ತರ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಅಂದಿನಿಂದ ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಹಲವು ಬಾರಿ ಪ್ರಯತ್ನಿಸಿದ್ದಾರೆ. ಪ್ರಕರಣದಲ್ಲಿ ವೈಯಕ್ತಿಕ ಹಾಜರಾತಿಯಿಂದ ವಿನಾಯಿತಿ ನೀಡಬೇಕೆಂದು ನಟಿ ಹಲವು ಬಾರಿ ಮನವಿ ಮಾಡಿದ್ದಾರೆ. ಜುಲೈ 17 ರಂದು ವಿಚಾರಣೆ ನಡೆಸಿದ್ದ ನ್ಯಾಯಾಲಯ ಇದು ಕೊನೆಯ ಅವಕಾಶ ಎಂದಿತ್ತು. ಆದರೂ ಈ ಬಾರಿ ಮತ್ತೆ ಅನಾರೋಗ್ಯದ ಕಾರಣ ನೀಡಿದ್ದಾರೆ. ಹೀಗಾಗಿ ಮುಂದಿನ ವಿಚಾರಣೆಗೆ ಹಾಜರಾಗದಿದ್ದಲ್ಲಿ ವಾರಂಟ್ ಹೊರಡಿಸುವ ಎಚ್ಚರಿಕೆ ನೀಡಲಾಗಿದೆ.
ಇದನ್ನೂ ಓದಿ: RSS, ವಿಎಚ್‌ಪಿ, ತಾಲಿಬಾನ್ ಒಂದೇ ಮನಸ್ಥಿತಿಯವು: ಸಾಹಿತಿ ಜಾವೇದ್ ಅಖ್ತರ್


