“ವಯಸ್ಕರು ತಮ್ಮ ಧರ್ಮದ ಹೊರತಾಗಿಯೂ ತಮ್ಮ ಜೀವನ ಸಂಗಾತಿಯನ್ನು ಆಯ್ಕೆ ಮಾಡುವ ಹಕ್ಕನ್ನು ಹೊಂದಿದ್ದಾರೆ” ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ. ದಂಪತಿಯ ಪೋಷಕರು ಕೂಡ ಅವರ ಸಂಬಂಧವನ್ನು ವಿರೋಧಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.
ಗೋರಖ್‌ಪುರದ ಅಂತರ್ ಧರ್ಮೀಯ ದಂಪತಿಯಾದ ಶಿಫಾ ಹಸನ್ ಮತ್ತು ಆಕೆಯ ಹಿಂದೂ ಸಂಗಾತಿ ತಮ್ಮ ಜೀವಕ್ಕೆ ಅಪಾಯವಿದೆ ಎಂದು ಹೇಳಿಕೊಂಡು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಆಲಿಸಿದ ಅಲಹಾಬಾದ್ ಹೈಕೋರ್ಟ್, ದಂಪತಿಗಳಿಗೆ ಕಿರುಕುಳದ ವಿರುದ್ಧ ರಕ್ಷಣೆ ನೀಡಿದೆ.
ನ್ಯಾಯಮೂರ್ತಿ ಮನೋಜ್ ಕುಮಾರ್ ಗುಪ್ತಾ ಮತ್ತು ನ್ಯಾಯಮೂರ್ತಿ ದೀಪಕ್ ವರ್ಮಾ ಅವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠವು, ಇಬ್ಬರು ವಯಸ್ಕರು ತಾವು ನಂಬಿರುವ ನಂಬಿಕೆ ಮತ್ತು ಧರ್ಮದ ಹೊರತಾಗಿಯೂ ತಮ್ಮ ವೈವಾಹಿಕ ಸಂಗಾತಿಯನ್ನು ಆಯ್ಕೆ ಮಾಡುವ ಹಕ್ಕನ್ನು ಹೊಂದಿದ್ದಾರೆ ಎಂದು ಹೇಳಿದೆ.
ಇದನ್ನೂ ಓದಿ: ‘ಹಸ್ತಕ್ಷೇಪ ಮಾಡುವ ಹಕ್ಕು ಯಾರಿಗೂ ಇಲ್ಲ’: ಅಂತರ್‌ಧರ್ಮೀಯ ಮದುವೆ ಎತ್ತಿ ಹಿಡಿದ ಅಲಹಾಬಾದ್ ಹೈಕೋರ್ಟ್
“ಪ್ರಸ್ತುತ ಅರ್ಜಿದಾರರು ಪರಸ್ಪರ ಪ್ರೀತಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಜೊತೆಗೆ ಇಬ್ಬರು ವ್ಯಕ್ತಿಗಳ ಜಂಟಿ ಅರ್ಜಿ ಇದಾಗಿರುವುದರಿಂದ, ಅವರ ಪೋಷಕರು ಸೇರಿದಂತೆ ಯಾರೂ ಕೂಡ ಅವರ ಸಂಬಂಧವನ್ನು ವಿರೋಧಿಸಲು ಸಾಧ್ಯವಿಲ್ಲ” ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹೇಳಿದೆ.
ಅರ್ಜಿದಾರರು ತಮ್ಮ ಜಂಟಿ ಅರ್ಜಿಯಲ್ಲಿ, ತಾವು ಪರಸ್ಪರ ಪ್ರೀತಿಸುತ್ತಿದ್ದೇವೆ ಮತ್ತು ತಮ್ಮ ಸ್ವಂತ ಇಚ್ಛೆಯಂತೆ ಒಟ್ಟಿಗೆ ವಾಸಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಆದರೂ, ಅವರ ಸಂಬಂಧವನ್ನು ಕುಟುಂಬದ ಕೆಲವು ಸದಸ್ಯರು ಒಪ್ಪಿಕೊಳ್ಳುತ್ತಿರಲಿಲ್ಲ ಮತ್ತು ಅವರ ಶಾಂತಿಯುತ ಜೀವನಕ್ಕೆ ತೊಂದರೆಯಾಗುತ್ತಿದೆ ಎಂದಿದ್ದಾರೆ.
ಎಲ್ಲ ಕಡೆಯ ಸುದೀರ್ಘ ವಾದವನ್ನು ಆಲಿಸಿದ ನಂತರ, ದಂಪತಿಗೆ ರಕ್ಷಣೆ ನೀಡಿದ ನ್ಯಾಯಾಲಯವು, ಅವರ ಸಂಬಂಧವನ್ನು ಆಕ್ಷೇಪಿಸುವ ಹಕ್ಕನ್ನು ಅವರ ಹೆತ್ತವರೂ ಹೊಂದಿಲ್ಲ ಎಂದು ಹೇಳಿದೆ.
ಯುವತಿಯ ತಂದೆಯಿಂದ ಅಥವಾ ಬೇರೆ ಯಾವುದೇ ವ್ಯಕ್ತಿಯಿಂದ ದಂಪತಿಗೆ ಯಾವುದೇ ಕಿರುಕುಳ ಉಂಟಾಗದಂತೆ ನೋಡಿಕೊಳ್ಳುವಂತೆ ಗೋರಖ್‌ಪುರ ಪೊಲೀಸ್ ಅಧಿಕಾರಿಗಳಿಗೆ ನ್ಯಾಯಾಲಯ ಸೂಚಿಸಿದೆ.
ಇದನ್ನೂ ಓದಿ: ಸಲಿಂಗ ದಂಪತಿಗೆ ರಕ್ಷಣೆ ನೀಡಿ: ಪೊಲೀಸರಿಗೆ ಅಲಹಾಬಾದ್ ಹೈಕೋರ್ಟ್ ಆದೇಶ


