ಲವ್ ಜಿಹಾದ್: ಉತ್ತರ ಪ್ರದೇಶದಲ್ಲಿ ಮತಾಂತರ ನಿಷೇಧ ಕಾಯ್ದೆಯಡಿ ಮೊದಲ ಬಂಧನ

ಹಲವಾರು ಸಂದರ್ಭಗಳಲ್ಲಿ ಉತ್ತರಪ್ರದೇಶದ ಅಲಹಾಬಾದ್ ಹೈಕೋರ್ಟ್ ಅಂತರ್‌ಜಾತಿ ಮತ್ತು ಅಂತರ್ ಧರ್ಮೀಯ ಮದುವೆಗಳನ್ನು ಎತ್ತಿ ಹಿಡಿದು ದಂಪತಿಗಳಿಗೆ ರಕ್ಷಣೆ ನೀಡಿದೆ. ಮತಾಂತರ ವಿರೋಧಿ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಜನೆವರಿ 15ರಂದು ಕೈಗೆತ್ತಿಕೊಳ್ಳಲಿದೆ.

ಇದೇನೂ ಮೊದಲ ಸಲವಲ್ಲ, ಹಲವಾರು ಸಲ ಅಂತರ್‌ಧರ್ಮೀಯ ದಂಪತಿಗಳ ಪರ ಅಲಹಾಬಾದ್ ಹೈಕೋರ್ಟ್ ನಿಂತಿದೆ. ಮತಾಂತರ ವಿರೋಧಿ ಕಾನೂನು ಸೃಷ್ಟಿಸುತ್ತಿರುವ ಗೊಂದಲ-ಕಿರಿಕಿರಿಯ ಪ್ರಕರಣಗಳಲ್ಲಿ ಈ ಕೋರ್ಟ್ ಅಂತರ್‌ಧರ್ಮೀಯ ಮದುವೆಗಳ ಪರ ನಿಂತಿದೆ.

ಬುಧವಾರ ಕೂಡ, ಹೊಸ ಕಾನೂನಿನಿಂದ ಅನಗತ್ಯ ಕಿರುಕುಳಕ್ಕೆ ಒಳಗಾದ ಅಂತರ್‌ಧರ್ಮೀಯ ದಂಪತಿಗಳ ಪರ ನಿಂತ ಹೈಕೋರ್ಟ್, ‘ಇವರ ಶಾಂತಿಯುತ ಬದುಕಿನಲ್ಲಿ ಹಸ್ತಕ್ಷೇಪ ಮಾಡುವ ಅರ್ಹತೆ, ಅಧಿಕಾರ ಯಾರಿಗೂ ಇಲ್ಲ’ ಎಂದು ಸ್ಪಷ್ಟವಾಗಿ ಹೇಳಿದೆ ಎಂದು ಲೈವ್‌ಲಾ ವರದಿ ಮಾಡಿದೆ.

ಮುಸ್ಲಿಂ ಪುರುಷ ಮತ್ತು ಅವರ ಹಿಂದೂ ಪತ್ನಿ (ನಂತರದಲ್ಲಿ ಇವರು ಸ್ವ ಇಚ್ಛೆಯಿಂದ ಇಸ್ಲಾಂಗೆ ಮತಾಂತರಗೊಂಡಿದ್ದಾರೆ) ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸರಳ್ ಶ್ರೀವಾಸ್ತವ ನೇತೃತ್ವದ ಹೈಕೋರ್ಟ್ ಪೀಠ ಈ ಕೆಳಗಿನಂತೆ ಅಭಿಪ್ರಾಯಪಟ್ಟಿದೆ.

‘ಮೆಜಾರಿಟಿ ವಯಸ್ಸು ತಲುಪಿದ ಇಬ್ಬರು ವ್ಯಕ್ತಿಗಳು ಜೊತೆಯಾಗಿ ಬದುಕುತ್ತಿದ್ದರೆ, ಅವರ ಶಾಂತಿಯುತ ಬದುಕಿನಲ್ಲಿ ಹಸ್ತಕ್ಷೇಪ ಮಾಡುವ ಅರ್ಹತೆ/ಅಧಿಕಾರ ಯಾರಿಗೂ ಇಲ್ಲ ಎಂದು ಈ ಕೋರ್ಟ್ ಮತ್ತೆ ಮತ್ತೆ ಸ್ಪಷ್ಟಪಡಿಸಿದೆ…’

ತಾವು ವಯಸ್ಕರಾಗಿದ್ದೇವೆ (ಮೆಜಾರಿಟಿ ವಯಸ್ಸಿನವರು) ಎಂದು ಹೇಳಿದ್ದ ದಂಪತಿ ತಾವು, 1997 ಮತ್ತು 1998ರಲ್ಲಿ ಜನಿಸಿರುವ ದಾಖಲೆಗಳನ್ನು ಕೋರ್ಟ್‌ಗೆ ಒದಗಿಸಿದ್ದರು.

‘ಅಗತ್ಯ ಬಿದ್ದರೆ ಈ ದಂಪತಿಗೆ ಸೂಕ್ತ ರಕ್ಷಣೆ ನೀಡಿ’ ಎಂದು ಬಿಜ್ನೋರ್ ಎಸ್‌ಪಿಗೆ ಸೂಚಿಸಿದ ನ್ಯಾ. ಶ್ರೀವಾಸ್ತವ್, ಫೆಬ್ರುವರಿ 8ಕ್ಕೆ ವಿಚಾರಣೆ ಮುಂದೂಡಿದರು ಎಂದು ಲೈವ್ ಲಾ ವರದಿ ಮಾಡಿದೆ. ‘ಪತ್ನಿ ಹೆಸರಲ್ಲಿ 3 ಲಕ್ಷ ರೂ. ಡಿಪಾಸಿಟ್ ಮಾಡಲು ಕೋರ್ಟ್ ಪತಿಗೆ ಸೂಚಿಸಿದ್ದು, ಇದು ಯಾವ ಕಾರಣಕ್ಕೆ ಎಂಬುದು ಸ್ಪಷ್ಟವಾಗಿಲ್ಲ.

ಈ ವಿಚಾರಣೆ ಸಂದರ್ಭದಲ್ಲಿ ಹೈಕೋರ್ಟ್ ಸುಪ್ರಿಂಕೋರ್ಟ್‌ನ ಎರಡು ತೀರ್ಪುಗಳನ್ನು ಉಲ್ಲೇಖಿಸಿದೆ. ಅಂತರ್‌ಧರ್ಮೀಯ ಮದುವೆ ವಿರೋಧಿಸಿ ಮಹಿಳೆಯ ಪಾಲಕರು ಸಲ್ಲಿಸಿದ ಅರ್ಜಿ ಪ್ರಕರಣದ ತೀರ್ಪು(2006) ಮತ್ತು ಸಂಬಂಧವೊಂದಕ್ಕಾಗಿ ಮಹಿಳೆಯನ್ನು ಆ ಕುಟುಂಬದವರೇ ಕೊಂದ ಪ್ರಕರಣದ ತೀರ್ಪು (2008)ಗಳನ್ನು ಕೋರ್ಟ್ ಉಲ್ಲೇಖಿಸಿದೆ.

2006ರಲ್ಲಿ ಸುಪ್ರೀಂ ಕೋರ್ಟಿನಲ್ಲಿ ನ್ಯಾ. ಮಾರ್ಖಂಡೇಯ ಖಟ್ಜು ತೀರ್ಪಿನಲ್ಲಿ ಉಲ್ಲೇಖಿಸಿದ ಸಾಲುಗಳನ್ನು ಅಲಹಾಬಾದ್ ಹೈಕೋರ್ಟ್ ಉಲ್ಲೇಖಿಸಿದೆ: ‘ಇದು ಮುಕ್ತ ಮತ್ತು ಪ್ರಜಾಪ್ರಭುತ್ವ ದೇಶವಾಗಿದ್ದು, ಮೇಜರ್ ವಯಸ್ಸು ತಲುಪಿದ ಯಾರೇ ಆಗಲಿ ತಮಗೆ ಇಷ್ಟವಾದವರನ್ನು ಮದುವೆ ಆಗಬಹುದು. ಹುಡುಗ ಅಥವಾ ಹುಡುಗಿಯ ಪೋಷಕರಿಗೆ ಇಂತಹ ಅಂತರ್‌ಜಾತಿ ಅಥವಾ ಅಂತರ್‌ಧರ್ಮೀಯ ಮದುವೆ ಇಷ್ಟವಾಗದಿದ್ದಲ್ಲಿ, ಅವರು ಹೆಚ್ಚೆಂದರೆ ಆ ದಂಪತಿಯ ಜೊತೆ ಸಾಮಾಜಿಕ ಸಂಪರ್ಕ ಕಡಿದುಕೊಳ್ಳಬಹುದು, ಆದರೆ ಆ ದಂಪತಿಗೆ ಬೆದರಿಕೆ ಹಾಕುವುದನ್ನಾಗಲಿ, ಅವರಿಗೆ ಹಿಂಸಿಸುವುದನ್ನಾಗಲಿ, ಹಿಂಸೆಗೆ ಪ್ರಚೋದನೆ ಮಾಡುವುದನ್ನಾಗಲಿ ಮಾಡುವಂತಿಲ್ಲ….’

ಒತ್ತಾಯದ ಮತಾಂತರ ತಡೆಗೆ ಇತ್ತೀಚೆಗೆ ಉತ್ತರಪ್ರದೇಶ ಸರ್ಕಾರ ಜಾರಿಗೆ ತಂದ ಕಾಯ್ದೆಯ ಹಿನ್ನೆಲೆಯಲ್ಲಿ ಅಲಹಾಬಾದ್ ಹೈಕೋರ್ಟಿನ ಈ ಅಭಿಪ್ರಾಯ ಮಹತ್ವದ್ದಾಗಿದೆ. ವಾಸ್ತವದಲ್ಲಿ ಈ ಕಾಯ್ದೆ ಸಂಘ ಪರಿವಾರದ ‘ಲವ್ ಜಿಹಾದ್’ ಕತೆಗೆ ಕಾನೂನಾತ್ಮಕ ಬೆಂಬಲ ಕೊಡಲು ಜಾರಿಗೆ ಬಂದಿದೆ. ‘ಮದುವೆ ಮೂಲಕ ಮುಸ್ಲಿಂ ಪುರುಷರು ಹಿಂದೂ ಮಹಿಳೆಯರನ್ನು ಬಲವಂತದ ಮತಾಂತರ ಮಾಡುತ್ತಾರೆ’ ಎಂಬ ಕಪೋಕಲ್ಪಿತ ಸಂಚನ್ನು ಲವ್ ಜಿಹಾದ್ ಸೂಚಿಸುತ್ತದೆ.

ಕಾಯ್ದೆ ಅಂಗೀಕಾರದ ನಂತರ ಹಲವಾರು ಎಫ್‌ಐಆರ್ ದಾಖಲಾಗಿವೆ ಮತ್ತು ಹಲವಾರು ಸಂಶಯಾಸ್ಪದ ಬಂಧನಗಳು ನಡೆದಿವೆ. 2020ರ ನವೆಂಬರ್ ಒಂದರಲ್ಲೇ ಅಲಹಾಬಾದ್ ಹೈಕೋರ್ಟ್, 125 ಅಂತರ್‌ಧರ್ಮಿಯ ದಂಪತಿಗಳಿಗೆ ರಕ್ಷಣೆ ನೀಡಲು ಆದೇಶಿಸಿದೆ. ಆ ತಿಂಗಳಲ್ಲೇ ಏಕ ನ್ಯಾಯಾಧೀಶರ ಪೀಠವೊಂದು, ‘ಅಂತರ್‌ಧರ್ಮೀಯ ಮದುವೆಗಳು ಮತಾಂತರದ ಉದ್ದೇಶಕ್ಕೇ ನಡೆಯುತ್ತವೆ’ ಎಂದು ಪ್ರಕಟಿಸಿದ ನಿರ್ಧಾರವನ್ನು ಖಂಡಿಸಿದ್ದ ಹೈಕೋರ್ಟ್, ಇದು ಅಸಮ್ಮತ ನಿರ್ಧಾರವಾಗಿದ್ದು, ಈ ನಿರ್ಧಾರ ‘bad in law’ ಎಂದು ಟೀಕಿಸಿತ್ತು.

ಡಿಸೆಂಬರ್‌ನಲ್ಲಿ ಇದೇ ಅಲಹಾಬಾದ್ ಹೈಕೋರ್ಟ್, 21 ವರ್ಷದ ಹಿಂದೂ ಯುವತಿ ಶಿಖಾ ತನ್ನ ಮುಸ್ಲಿಂ ಪತಿಯೊಂದಿಗೆ ಮತ್ತೆ ಒಂದಾಗಲು ನೆರವು ನೀಡಿತ್ತು. ‘ಒಬ್ಬ ವಯಸ್ಕ ಮಹಿಳೆ ತನ್ನಿಷ್ಟದಂತೆ ಬದುಕುವ ಆಯ್ಕೆ ಹೊಂದಿದ್ದಾಳೆ. ಆಕೆ ಮೂರನೇ ವ್ಯಕ್ತಿಯ ಅಡೆತಡೆಗಳನ್ನು ಧಿಕ್ಕರಿಸಿ, ತನ್ನ ಆಯ್ಕೆಯಂತೆ ಮುಕ್ತವಾಗಿ ಮುನ್ನಡೆಯುವ ಸ್ವಾತಂತ್ರ್ಯ ಹೊಂದಿದ್ದಾಳೆ’ ಎಂದು ಪೀಠ ಅಭಿಪ್ರಾಯ ಪಟ್ಟಿತ್ತು.

ಡಿಸೆಂಬರ್ 7ರಂದು ಚೀಫ್ ಮ್ಯಾಜಿಸ್ಟ್ರೇಟ್ ಪೀಠವು ಶಿಖಾ ಅವರನ್ನು ಮಕ್ಕಳ ಕಲ್ಯಾಣ ಸಮಿತಿಯ ಆಶ್ರಯದಲ್ಲಿಟ್ಟು, ಆಕೆ ತನ್ನ ಪೋಷಕರ ಮನೆಯಲ್ಲಿ ವಾಸಿಸಲು ವ್ಯವಸ್ಥೆ ಮಾಡಲು ಸೂಚಿಸಿತ್ತು. ಆದರೆ ಅಲಹಾಬಾದ್ ಹೈಕೋರ್ಟ್ ಶಿಖಾ ತನ್ನ ಮುಸ್ಲಿಂ ಪತಿಯೊಂದಿಗೆ ಮತ್ತೆ ಒಂದಾಗುವಂತೆ ಮಾಡಿತ್ತು.

ಮತಾಂತರ ವಿರೋಧಿ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಅಲಹಾಬಾದ್ ಹೈಕೋರ್ಟ್ ಜನೆವರಿ 15ರಂದು ಕೈಗೆತ್ತಿಕೊಳ್ಳಲಿದೆ.


ಇದನ್ನೂ ಓದಿ: ಲವ್ ಜಿಹಾದ್ ಎಂಬ ಕಪೋಲಕಲ್ಪಿತ: ಮತಾಂತರ ವಿರೋಧ ಕಾಯ್ದೆಯ ಅವಾಂತರ..

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here