ಅತ್ಯಂತ ಅಪಾಯಕಾರಿ ವಿಧದ ಡೆಂಗ್ಯೂ ಪ್ರಕರಣಗಳು ವರದಿಯಾಗುತ್ತಿರುವ 11 ರಾಜ್ಯಗಳಿಗೆ ಒಕ್ಕೂಟ ಸರ್ಕಾರ ಎಚ್ಚರಿಕೆ ನೀಡಿದೆ. ಪ್ರಕರಣಗಳನ್ನು ಅದಷ್ಟು ಬೇಗನೆ ಪತ್ತೆಹಚ್ಚಲು, ಸಹಾಯವಾಣಿಯನ್ನು ಪ್ರಾರಂಭಿಸಲು ಸಲಹೆ ನೀಡಿದೆ. ಡೆಂಗ್ಯೂ ಪರೀಕ್ಷೆಯ ಸಾಕಷ್ಟು ಪರೀಕ್ಷಾ ಕಿಟ್‌ಗಳು, ಲಾರ್ವಿಸೈಡ್‌ಗಳು ಮತ್ತು ಔಷಧಿಗಳನ್ನು ಸಂಗ್ರಹಿಸಲು ಕ್ರಮಗಳನ್ನು ತೆಗೆದುಕೊಳ್ಳುವಂತೆ 11 ರಾಜ್ಯಗಳಿಗೆ ತಿಳಿಸಿದೆ.
ಕೊರೊನಾ ಪ್ರಸ್ತುತ ಸ್ಥಿತಿಗತಿಗಳ ಬಗ್ಗೆ ನಡೆದ ಉನ್ನತ ಮಟ್ಟದ ಪರಿಶೀಲನಾ ಸಭೆಯಲ್ಲಿ ಡೆಂಗ್ಯೂ ಪ್ರಕರಣಗಳ ಕುರಿತು ಚರ್ಚಿಸಲಾಗಿದೆ. ಮುಂಬರುವ ಹಬ್ಬಗಳ ಕಾರಣ ಹೆಚ್ಚಿನ ಜನ ಸೇರುವ ಸಾಮೂಹಿಕ ಸಭೆಗಳನ್ನು ತಪ್ಪಿಸಲು ರಾಜ್ಯಗಳಿಗೆ ನಿರ್ದೇಶನ ನೀಡಿದೆ.
ಸೆರೊಟೈಪ್ – II ಡೆಂಗ್ಯೂನ ಪ್ರಕರಣಗಳನ್ನು ವರದಿ ಮಾಡುವ ರಾಜ್ಯಗಳಲ್ಲಿ ಆಂಧ್ರ ಪ್ರದೇಶ, ಗುಜರಾತ್, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಉತ್ತರ ಪ್ರದೇಶ, ಮಹಾರಾಷ್ಟ್ರ, ಒಡಿಶಾ, ರಾಜಸ್ಥಾನ, ತಮಿಳುನಾಡು ಮತ್ತು ತೆಲಂಗಾಣ ಸೇರಿವೆ.
ಇದನ್ನೂ ಓದಿ: ರಾಜ್ಯದ ಮಕ್ಕಳನ್ನು ಕಾಡುತ್ತಿದೆ ವೈರಲ್ ಫೀವರ್: ಹಲವೆಡೆ ಹಾಸಿಗೆ ಸಿಗದೆ ಪರದಾಟ
ಈ 11 ರಾಜ್ಯಗಳಿಗೆ “ಸೆರೋಟೈಪ್- II ಡೆಂಗ್ಯೂ” ಉಂಟುಮಾಡುವ ಸಮಸ್ಯೆಗಳ ತ್ವರಿತ ವರದಿ ನೀಡಲು ತಂಡಗಳನ್ನು ನಿಯೋಜಿಸುವಂತೆ ಆರೋಗ್ಯ ಸಚಿವಾಲಯ ಮತ್ತು ಕುಟುಂಬ ಕಲ್ಯಾಣ ತಿಳಿಸಿದೆ. ಸಹಾಯವಾಣಿಗಳು, ವೆಕ್ಟರ್ ನಿಯಂತ್ರಣದ ವಿಧಾನಗಳು ಮತ್ತು ಡೆಂಗ್ಯೂ ರೋಗಲಕ್ಷಣಗಳ ಬಗ್ಗೆ ಪ್ರಚಾರಗಳನ್ನು ಕೈಗೊಳ್ಳಲು ತಿಳಿಸಿದೆ.
ರಾಜ್ಯದಲ್ಲಿಯೂ ಡೆಂಗ್ಯೂ ವೈರಲ್ ಫೀವರ್ ಪ್ರಕರಣಗಳು ವರದಿಯಾಗುತ್ತಿದ್ದು, ಯಾದಗಿರಿ, ಬಳ್ಳಾರಿ, ವಿಜಯಪುರ, ಕೊಪ್ಪಳ, ಬೆಂಗಳೂರು, ಗದಗ, ಚಿತ್ರದುರ್ಗ, ಕೋಲಾರ, ಚಿಕ್ಕಬಳ್ಳಾಪುರ, ಧಾರವಾಡ, ಮಂಗಳೂರಿನ ಮಕ್ಕಳಲ್ಲಿ ವೈರಲ್ ಫೀವರ್ ಕಾಣಿಸಿಕೊಂಡಿದೆ. ಯಾದಗಿರಿ ಮತ್ತು ಗದಗದಲ್ಲಿ ಹೆಚ್ಚಿನ ಮಕ್ಕಳು ಈ ಸೋಂಕಿಗೆ ತುತ್ತಾಗಿದ್ದಾರೆ.
ಇದು ಮಳೆಗಾಲವಾದ್ದರಿಂದ ಮಕ್ಕಳಲ್ಲಿ ಜ್ವರ, ಕೆಮ್ಮು, ಶೀತ, ನೆಗಡಿ ಕಣಿಸಿಕೊಳ್ಳುತ್ತದೆ. ಸಣ್ಣ ಜ್ವರ ಕೂಡ ಹೆಚ್ಚು ದಿನ ಇರುತ್ತದೆ. ಜ್ವರ ಉಲ್ಬಣಿಸಿದರೆ ಗುಣವಾಗುವಾಗುವುದು ತಡವಾಗುತ್ತದೆ. ವೈರಲ್ ನ್ಯುಮೊನಿಯಾಗೆ ತಿರುಗುತ್ತದೆ. ಆಗ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಬೇಕಾಗುತ್ತದೆ. ‘ಒಂದು ಮಗುವಿನಲ್ಲಿ ವೈರಾಣು ಸೋಂಕು ಕಾಣಿಸಿಕೊಂಡರೆ ಆ ಮಗುವಿನೊಂದಿಗೆ ಇನ್ನೊಂದು ಮಗು ಬೆರೆಯಲು ಬಿಡಬಾರದು. ವೈರಾಣು ಜ್ವರಕ್ಕೆ ನಿರ್ದಿಷ್ಟ ಔಷಧ ಇರುವುದಿಲ್ಲ ಎಂದು ತಜ್ಞ ವೈದ್ಯರು ತಿಳಿಸಿದ್ದಾರೆ.
ಇದನ್ನೂ ಓದಿ: ಅತ್ಯಾಚಾರ ನಿಲ್ಲಬೇಕು, ಅತ್ಯಾಚಾರಿಗಳಿಗೆ ಶಿಕ್ಷೆಯಾಗಬೇಕು: ಸೈಕ್ಲಿಂಗ್ ಜಾಗೃತಿ ಮೂಡಿಸುತ್ತಿರುವ ಕಿರಣ್


