ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮಿಯಾಪುರ ಗ್ರಾಮದಲ್ಲಿ ದಲಿತ ಸಮುದಾಯದ ಮಗುವೊಂದು ಆಕಸ್ಮಿಕವಾಗಿ ದೇವಸ್ಥಾನ ಪ್ರವೇಶಿಸಿದಕ್ಕೆ ಮಗುವಿನ ಕುಟುಂಬಕ್ಕೆ ಗ್ರಾಮಸ್ಥರು ದಂಡ ವಿಧಿಸಿದ್ದರು. ದೇವಸ್ಥಾನ ಶುದ್ಧಿಕರಿಸಿ ಅಸ್ಪೃಶ್ಯತೆ ಆಚರಿಸಿದ್ದರು, ಆದರೂ ಘಟನೆ ಬಗ್ಗೆ ದೂರು ಮಾತ್ರ ದಾಖಲಾಗದಕ್ಕೆ ದಲಿತಪರ ಸಂಘಟನೆಗಳ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆ ಕುರಿತು ಪ್ರಕರಣ ದಾಖಲಿಸಿಕೊಳ್ಳದೆ ಶಾಂತಿ-ಸೌಹಾರ್ದ ಸಭೆ ನಡೆಸಿ ಪ್ರಕರಣವನ್ನು ಮುಚ್ಚಿ ಹಾಕಲು ಅಧಿಕಾರಿಗಳು ಪ್ರಯತ್ನಿಸಿದ್ದಾರೆ ಎಂದು ಕರ್ನಾಟಕ ಮಾದಿಗ ರಕ್ಷಣಾ ವೇದಿಕೆ ಅಧ್ಯಕ್ಷ ಕರಿಯಪ್ಪ ಗುಡಿಮನಿ ಆರೋಪಿಸಿದ್ದಾರೆ.
ಕುಷ್ಟಗಿ ತಾಲೂಕಿನ ಮಿಯಾಪುರದಲ್ಲಿ ಸೆ. 4 ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಚನ್ನದಾಸರ ಸಮುದಾಯದ ಮಗುವಿನ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಆಂಜನೇಯ ದೇವಸ್ಥಾನಕ್ಕೆ ಕುಟುಂಬದವರು ತೆರಳಿದ್ದರು. ಆಕಸ್ಮಿಕವಾಗಿ ಮಗು ದೇವಸ್ಥಾನದ ಒಳಗೆ ಪ್ರವೇಶಿಸಿದೆ. ದಲಿತರು ಗುಡಿ ಪ್ರವೇಶಿಸಿದ್ದಕ್ಕೆ ಅಪವಿತ್ರವಾಗಿದೆ ಎಂದು ಸೆ.11 ರಂದು ಗ್ರಾಮದ ಸವರ್ಣಿಯರು ಸಭೆ ನಡೆಸಿ, ದೇವಸ್ಥಾನವನ್ನು ಶುದ್ಧೀಕರಿಸಿದ್ದರು. ಕುಟುಂಬಕ್ಕೆ 25 ಸಾವಿರ ರೂಪಾಯಿ ದಂಡ ವಿಧಿಸಿದ್ದರು.
ಇದನ್ನೂ ಓದಿ: ಅತ್ಯಾಚಾರ ನಿಲ್ಲಬೇಕು, ಅತ್ಯಾಚಾರಿಗಳಿಗೆ ಶಿಕ್ಷೆಯಾಗಬೇಕು: ಸೈಕ್ಲಿಂಗ್ ಜಾಗೃತಿ ಮೂಡಿಸುತ್ತಿರುವ ಕಿರಣ್
ಬಳಿಕ ಗ್ರಾಮಕ್ಕೆ ಪೊಲೀಸ್, ಕಂದಾಯ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ದಂಡ ವಿಧಿಸಿದವರಿಗೆ ಎಚ್ಚರಿಕೆ ನೀಡಿ, ಗ್ರಾಮಸ್ಥರಿಗೆ ತಿಳಿವಳಿಕೆ ಹೇಳಿದ್ದರು. ಆದರೆ, ಕಾನೂನು ಕ್ರಮ ಕೈಗೊಂಡಿಲ್ಲ.
ಕುಷ್ಟಗಿ ತಹಶೀಲ್ದಾರ ಸಿದ್ದೇಶ, ಗಂಗಾವತಿ ಡಿವೈಎಸ್ಪಿ ರುದ್ರೇಶ ಉಜ್ಜನಕೊಪ್ಪ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಬಾಲಚಂದ್ರ ಸಂಗನಾಳ, ಸಿಪಿಐ ನಿಂಗಪ್ಪ ಎನ್.ಆರ್, ಪಿಎಸ್‌ಐಗಳಾದ ತಿಮ್ಮಣ್ಣ ನಾಯಕ, ಅಶೋಕ ಬೇವೂರು, ಕಂದಾಯ ನಿರೀಕ್ಷಕ ಉಮೇಶಗೌಡ ಪಾಟೀಲ್, ಪಿಡಿಒ ವೆಂಕಟೇಶ ನಾಯ್ಕ್ ಇದ್ದರು ಭೇಟಿ ನೀಡಿ, ಶಾಂತಿ-ಸೌಹಾರ್ದ ಸಭೆ ನಡೆಸಿದ್ದರು.
ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಕರ್ನಾಟಕ ಮಾದಿಗ ರಕ್ಷಣಾ ವೇದಿಕೆ ಅಧ್ಯಕ್ಷ, ಹೋರಾಟಗಾರ ಕರಿಯಪ್ಪ ಗುಡಿಮನಿ, “ಗಂಗಾವತಿ ಡಿವೈಎಸ್‌ಪಿ ಸಭೆ ನಡೆಸಿ ಸುಮ್ಮನೆ ಬಿಟ್ಟಿದ್ದಾರೆ. ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳದೆ ತಪ್ಪನ್ನು ಮುಚ್ಚಿಡಲು ಸಭೆ ನಡೆಸಿದ್ದಾರೆ. ಅವರು ಅಸ್ಪೃಶ್ಯತಾ ನಿವಾರಣೆ ಬಗ್ಗೆ ತಿಳಿ ಹೇಳಬೇಕಿತ್ತು. ಆದರೆ,
ದೂರು ದಾಖಲಾಗುವುದು ಬೇಡ. ಶಾಂತಿ ಕಾಪಾಡಿ ಎಂದು ಬಾಯಿ ಮಾತಿನಲ್ಲಿ ಹೇಳಿದ್ದಾರೆ” ಎಂದು ಆರೋಪಿಸಿದ್ದಾರೆ.

“ಸಭೆ ನಡೆಸಿದ ಮಾತ್ರಕ್ಕೆ ಆ ದಲಿತ ಕುಟುಂಬಕ್ಕೆ ಆಗಿರುವ ಅವಮಾನ. ಮಾನಸಿಕ ಹಿಂಸೆ ಕಡಿಮೆಯಾಗುತ್ತದೆಯೇ…? ಅವರ ಮೇಲಾದ ದೌರ್ಜನ್ಯದ ಬಗ್ಗೆ ನೋವು ಇದ್ದೆ ಇರುತ್ತದೆ. ಕೊಪ್ಪಳ ಜಿಲ್ಲೆಯಲ್ಲಿ ಸರಣಿ ಘಟನೆಗಳು ಆಗುತ್ತಿವೆ. ಡಿವೈಎಸ್‌ಪಿ ರುದ್ರೇಶ ಉಜ್ಜನಕೊಪ್ಪ ಅವರ ವ್ಯಾಪ್ತಿಯ ಗ್ರಾಮಗಳಲ್ಲಿ ದಲಿತರ ಮೇಲೆ ಅವಮಾನ, ಶೋಷಣೆ ನಡೆಯುತ್ತಲೇ ಇವೆ. ಪೊಲೀಸರು ಉಳ್ಳವರ ಪರ ಇದ್ದಾರೆ. ಹೀಗಾಗಿ ಅವರು ಘಟನೆಗಳನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಇವರನ್ನು ಗಂಗಾವತಿಯಿಂದ ವರ್ಗಾವಣೆ ಮಾಡಬೇಕು. ನಾವು ನಮ್ಮ ಸಂಘದ ವತಿಯಿಂದ ಗ್ರಾಮಕ್ಕೆ ಭೇಟಿ ನೀಡುತ್ತೇವೆ” ಎಂದು ಮಾಹಿತಿ ನೀಡಿದ್ದಾರೆ.
ಇನ್ನು ಘಟನೆಯನ್ನು ಖಂಡಿಸಿರುವ ಭೀಮ್ ಆರ್ಮಿಯ ಮುಖಂಡ ನಟರಾಜ್ ದಿಂಡಗೂರು, “ಮನುಷ್ಯರನ್ನು ಮನುಷ್ಯ ಎಂದು ನೋಡದ ಧರ್ಮ ಇದು. ಆಡವಾಡುವ ಮಗುವಿನ ಮೇಲೆ ಅಸ್ಪೃಶ್ಯತಾ ಆಚರಣೆ ನಡೆಸುವುದು ಅಮಾನವೀಯ. ಅಲ್ಲಿ ಕಾನೂನು ವ್ಯವಸ್ಥೆ ಸವರ್ಣಿಯರ ಪರವಾಗಿದೆ. ಇವರು ದೊಡ್ಡ ದೊಡ್ಡ ಭಾಷಣ ಮಾಡುತ್ತಾರೆ. ನಾವೆಲ್ಲ ಹಿಂದೂಗಳು ಒಂದು ಎಂದು..ಆದರೆ, ಇಂತಹ ಘಟನೆಗಳು ಬಂದಾಗ ನಾವು ಯಾರು…? ನಮ್ಮ ಅಸ್ತಿತ್ವವೇನು…? ಮೈಲಿಗೆ ಎಂದು ಮಗುವಿಗೆ ದಂಡ ಹಾಕುವ ಧರ್ಮವಿದ್ದರೆ ಅದು ನಮ್ಮ ಹೆಮ್ಮೆಯ ಸನಾತನ ಹಿಂದೂ ಧರ್ಮ. ಇಂತಹ ಘಟನೆಗಳಿಗೆ ತಾಲೂಕು ಆಡಳಿತ, ಜಿಲ್ಲಾಡಳಿತ ಕಾರಣ. ಇಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಕಾಂಗ್ರೆಸ್ ಕೂಡ ಘಟನೆಯನ್ನು ಖಂಡಿಸಿದ್ದು, “ಬಿಜೆಪಿ ತನ್ನ ಆಡಳಿತದಲ್ಲಿ ದಲಿತ ವಿರೋಧಿ ವಾತಾವರಣ ನಿರ್ಮಿಸುತ್ತಿದೆ. ದಲಿತರಿಗೆ ಮೂತ್ರ ಕುಡಿಸುವುದರಿಂದ ಹಿಡಿದು ಬಹಿಷ್ಕಾರ, ಹಲ್ಲೆಯ ಪ್ರಕರಣಗಳು ಹೆಚ್ಚುತ್ತಿವೆ. ಮನುವಾದಿ ಬಿಜೆಪಿ ಆಡಳಿತದಲ್ಲಿ ದಲಿತರಿಗೆ ನೆಮ್ಮದಿಯ ಬದುಕಿಲ್ಲದಾಗಿದೆ. ಕೇಂದ್ರ ಸಚಿವ ನಾರಾಯಣಸ್ವಾಮಿ ಅವರು ಕಟ್ಟಲು ಹೊರಟ ಹಿಂದೂರಾಷ್ಟ್ರದ ಅಡಿಗಲ್ಲು ಇದೇನಾ!?” ಎಂದು ಪ್ರಶ್ನಿಸಿದೆ.
ಬಿಜೆಪಿ ತನ್ನ ಆಡಳಿತದಲ್ಲಿ ದಲಿತ ವಿರೋಧಿ ವಾತಾವರಣ ನಿರ್ಮಿಸುತ್ತಿದೆ.
ದಲಿತರಿಗೆ ಮೂತ್ರ ಕುಡಿಸುವುದರಿಂದ ಹಿಡಿದು ಬಹಿಷ್ಕಾರ, ಹಲ್ಲೆಯ ಪ್ರಕರಣಗಳು ಹೆಚ್ಚುತ್ತಿವೆ. ಮನುವಾದಿ @BJP4Karnataka ಆಡಳಿತದಲ್ಲಿ ದಲಿತರಿಗೆ ನೆಮ್ಮದಿಯ ಬದುಕಿಲ್ಲದಾಗಿದೆ.
ಕೇಂದ್ರ ಸಚಿವ ನಾರಾಯಣಸ್ವಾಮಿ ಅವರು ಕಟ್ಟಲು ಹೊರಟ ಹಿಂದೂರಾಷ್ಟ್ರದ ಅಡಿಗಲ್ಲು ಇದೇನಾ!? pic.twitter.com/bdPeijxz5P
— Karnataka Congress (@INCKarnataka) September 21, 2021
ಕೊಪ್ಪಳ ಜಿಲ್ಲೆಯಲ್ಲಿ ಈಗಲೂ ಸಹ ಗ್ರಾಮೀಣ ಪ್ರದೇಶಗಳಲ್ಲಿ ದಲಿತರ ಮೇಲೆ ಶೋಷಣೆ ನಡೆಯುತ್ತಲೆ ಇದೆ ಎಂದು ಹೋರಾಟಗಾರರು ಆರೋಪಿಸಿದ್ದಾರೆ. ಆಗಸ್ಟ್ ತಿಂಗಳಲ್ಲಿ ಕೊಪ್ಪಳದ ಗಂಗಾವತಿ ತಾಲೂಕಿನ ಸಿಂಗನಾಳ ಗ್ರಾಮದಲ್ಲಿ ಮಾದಿಗ ಸಮುದಾಯದ ಜನರ ಮೇಲೆ, ಕುರುಬ ಮತ್ತು ನಾಯಕ ಸಮುದಯಗಳ ಜನರು ಗುಂಪು ಕಟ್ಟಿಕೊಂಡು ಬಂದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು.
ಇದನ್ನೂ ಓದಿ: ಗಂಗಾವತಿ: ಮಾದಿಗ ಸಮುದಾಯದ ಮೇಲೆ ಹಲ್ಲೆ ಪ್ರಕರಣ- ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲದು ಎಂದ ಕರಿಯಪ್ಪ ಗುಡಿಮನಿ


