ವಿವಾದಿತ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತ ಸಂಘಟನೆಗಳ ಒಕ್ಕೂಟ ಸಂಯುಕ್ತ ಕಿಸಾನ್ ಮೋರ್ಚಾ ಸೆಪ್ಟೆಂಬರ್ 27ಕ್ಕೆ ಕರೆ ನೀಡಿರುವ ಭಾರತ್ ಬಂದ್‌ಗೆ ಜಗನ್ ಮೋಹನ್ ರೆಡ್ಡಿಯವರ ಆಂಧ್ರಪ್ರದೇಶ ಸರ್ಕಾರ ಸಂಪೂರ್ಣ ಬೆಂಬಲವನ್ನು ಘೋಷಿಸಿದೆ.
ವಿಶಾಖಪಟ್ಟಣಂ ಉಕ್ಕಿನ ಕಾರ್ಖಾನೆಯ ಕಾರ್ಮಿಕರಿಗೆ ಮತ್ತು ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ರಾಜ್ಯ ಸರ್ಕಾರ ಬೆಂಬಲ ನೀಡುತ್ತದೆ ಎಂದು ಸಾರಿಗೆ ಸಚಿವ ಪೆರ್ನಿ ವೆಂಕಟರಾಮಯ್ಯ ತಿಳಿಸಿದ್ದಾರೆ.
ವೈಎಸ್ಆರ್ ಕಾಂಗ್ರೆಸ್ ಪಕ್ಷ ಸೇರಿದಂತೆ ಆಂಧ್ರಪ್ರದೇಶ ಸರ್ಕಾರವು ರೈತರು ಮತ್ತು ಉಕ್ಕಿನ ಕಾರ್ಖಾನೆಯ ಕಾರ್ಮಿಕರ ಪ್ರತಿಭಟನೆಯನ್ನು ಬೆಂಬಲಿಸುತ್ತದೆ ಎಂದು ಹೇಳಿದ್ದಾರೆ.
ಸೆಪ್ಟೆಂಬರ್ 26 ಮಧ್ಯರಾತ್ರಿಯಿಂದ ಸೆಪ್ಟೆಂಬರ್ 27 ಮಧ್ಯಾಹ್ನದವರೆಗೆ ರಾಜ್ಯಾದ್ಯಂತ ಎಪಿಎಸ್‌ಆರ್‌ಟಿಸಿ ಬಸ್‌ಗಳನ್ನು ಸ್ಥಗಿತಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಸಚಿವ ಪೆರ್ನಿ ವೆಂಕಟರಾಮಯ್ಯ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಭಾರತ್ ಬಂದ್: ರೈತರ ಕರೆಗೆ ಅಖಿಲ ಭಾರತ ವಕೀಲರ ಒಕ್ಕೂಟದ ಸಂಪೂರ್ಣ ಬೆಂಬಲ
ವಿಶಾಖಪಟ್ಟಣಂ ಉಕ್ಕಿನ ಕಾರ್ಖಾನೆಯ ಖಾಸಗೀಕರಣವನ್ನು ತಾನು ಸಂಪೂರ್ಣವಾಗಿ ವಿರೋಧಿಸುತ್ತೇನೆ ಎಂದು ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಸ್ಪಷ್ಟಪಡಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಬಂದ್‌ನಲ್ಲಿ ಶಾಂತಿಯುತ ಪ್ರತಿಭಟನೆಗೆ ಮನವಿ ಮಾಡಿದ್ದಾರೆ.
ಈಗಾಗಲೇ ಕಾಂಗ್ರೆಸ್, ಎಡಪಕ್ಷಗಳು ಮತ್ತು ತೆಲುಗು ದೇಶಂ ಪಕ್ಷಗಳು ಭಾರತ್ ಬಂದ್‌ಗೆ ತಮ್ಮ ಬೆಂಬಲವನ್ನು ಸೂಚಿಸಿವೆ. ರೈತರು ಕರೆ ನೀಡಿರುವ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ರಾಜ್ಯದಲ್ಲಿಯೂ ಸೋಮವಾರ ಕರ್ನಾಟಕ ಬಂದ್‌ಗೆ ರೈತಪರ ಸಂಘಟನೆಗಳು ಕರೆ ನೀಡಿದೆ. ರೈತರ ಕರೆಗೆ ಶಾಲಾ-ಕಾಲೇಜುಗಳು ನೈತಿಕ ಬೆಂಬಲ ವ್ಯಕ್ತಪಡಿಸಿದ್ದು, ಅಖಿಲ ಭಾರತ ವಕೀಲರ ಒಕ್ಕೂಟ ಸಂಪೂರ್ಣ ಬೆಂಬಲ ನೀಡಿ ಪ್ರತಿಭಟನೆಯಲ್ಲಿ ಭಾಗವಹಿಸುವುದಾಗಿ ಘೋಷಿಸಿದೆ.
ರಾಜ್ಯದ ವಿದ್ಯಾರ್ಥಿ ಸಂಘಟನೆಗಳು, ಮಹಿಳಾ, ದಲಿತ, ಜನಪರ ಸಂಘಟನೆಗಳು ಪ್ರತಿಭಟನೆಯಲ್ಲಿ ತೊಡಗಿಸಿಕೊಳ್ಳಲು ಸಭೆ ನಡೆಸಿ ನಿರ್ಧರಿಸಿವೆ. ಭಾರತ್ ಬಂದ್ ಹಿನ್ನೆಲೆ ರಾಜ್ಯದಲ್ಲಿ ಕರ್ನಾಟಕ ಬಂದ್ ಯಶಸ್ವಿಗೊಳಿಸುವುದು ಮುಖ್ಯ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.
ಇದನ್ನೂ ಓದಿ: ಸೆ.27ಕ್ಕೆ ಭಾರತ್ ಬಂದ್: ಕರ್ನಾಟಕದಲ್ಲಿ ಬಂದ್ ಸಿದ್ಧತೆ ಬಗ್ಗೆ ಸಂಯುಕ್ತ ಹೋರಾಟದ ಬಹಿರಂಗ ಸಭೆ


