Homeಮುಖಪುಟಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಈಗ ಕೋಲ್ಕತ್ತಾ ಮತದಾರ! ಕಾರಣವೇನು?

ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಈಗ ಕೋಲ್ಕತ್ತಾ ಮತದಾರ! ಕಾರಣವೇನು?

- Advertisement -
- Advertisement -

ಈ ವರ್ಷ ಪಶ್ಚಿಮ ಬಂಗಾಳದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ ಪರವಾಗಿ ರಣನೀತಿ ರೂಪಿಸಿ ಬೃಹತ್ ಗೆಲುವಿನಲ್ಲಿ ಪಾತ್ರ ವಹಿಸಿದ್ದ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಕೋಲ್ಕತ್ತಾದ ಮತದಾರರೂ ಆಗಿದ್ದಾರೆ. ಇದುವರೆಗೂ ಬಿಹಾರದ ಸಸಾರಾಮ್ ಜಿಲ್ಲೆಯ ತಮ್ಮ ಸ್ವಗ್ರಾಮದಲ್ಲಿ ಮತದಾರರಾಗಿದ್ದ ಅವರು ಕಳೆದ ವಿಧಾನಸಭಾ ಚುನಾವಣೆಯ ವೇಳೆಯಲ್ಲಿಯೇ ಪಶ್ಚಿಮ ಬಂಗಾಳಕ್ಕೆ ವರ್ಗಾಯಿಸಿಕೊಂಡಿದ್ದು ಸದ್ಯ ದಕ್ಷಿಣ ಕೋಲ್ಕತ್ತಾ ಲೋಕಸಭಾ ಕ್ಷೇತ್ರದ ಮತದಾರರಾಗಿದ್ದಾರೆ. ಮಾತ್ರವಲ್ಲ ಏಪ್ರಿಲ್‌ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿಯೂ ಮತ ಚಲಾಯಿಸಿದ್ದಾರೆ.

ಈ ಬಾರಿಯ ಬಂಗಾಳ ಚುನಾವಣೆ ರೋಚಕತೆ ಸೃಷ್ಟಿಸಿತ್ತು. ಬಿಜೆಪಿ ಶತಾಯಗತಾಯ ಅಧಿಕಾರ ಹಿಡಿಯಲು ಭಾರೀ ಯತ್ನ ನಡೆಸಿತ್ತು. ಟಿಎಂಸಿ ಕೂಡ ಮೂರನೇ ಬಾರಿಗೆ ಅಧಿಕಾರ ಪಡೆಯುವ ಯತ್ನದಲ್ಲಿ ಪ್ರಶಾಂತ್ ಕಿಶೋರ್‌ರವರನ್ನು ಚುನಾವಣಾ ತಂತ್ರಜ್ಞರನ್ನಾಗಿ ನೇಮಿಸಿಕೊಂಡಿತ್ತು. 8 ಹಂತಗಳಲ್ಲಿ ನಡೆದ ಚುನವಣೆ ಜಿದ್ದಾಜಿದ್ದಿನಿಂದ ಕೂಡಿತ್ತು. ಮೇ 2 ರಂದು ಚುನಾವಣಾ ಫಲಿತಾಂಶ ಘೋಷಣೆಯಾದಾಗ ಟಿಎಂಸಿಯು ಒಟ್ಟು ಇರುವ 292 ಕ್ಷೇತ್ರಗಳಲ್ಲಿ 213 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ಪಾರಮ್ಯ ಮೆರದಿತ್ತು. ಬಿಜೆಪಿ ಭಾರೀ ಮುಖಭಂಗ ಅನುಭವಿಸಿತ್ತು.

ಈ ಚುನಾವಣಾ ಸಮಯದಲ್ಲಿ ಪ್ರಶಾಂತ್ ಕಿಶೋರ್ ಬಂಗಾಳದಲ್ಲಿದ್ದರು. ಚುನಾವಣಾ ಬಿಸಿಯೇರುತ್ತಿದ್ದ ಸಮಯದಲ್ಲಿ ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿ ಮೇಲೆ ದಾಳಿ ನಡೆದಿತ್ತು ಎಂಬ ಆರೋಪ ಕೇಳಿಬಂದಿತ್ತು. ಆಗ ಚುನಾವಣಾ ಘರ್ಷಣೆಗಳ ಹಿನ್ನೆಲೆಯಲ್ಲಿ ಬಿಜೆಪಿಯು ಪ್ರಶಾಂತ್ ಕಿಶೋರ್ ವಿರುದ್ಧ ದೂರು ನೀಡಿ ಅವರನ್ನು ಕೋಲ್ಕತ್ತಾದಿಂದ ಹೊರಹಾಕಬಹುದಾದ ಸಾಧ್ಯತೆಯಿದ್ದುದರಿಂದ ಅವರು ಕೋಲ್ಕತ್ತಾದ ಮತದಾರರಾಗಿ ಬದಲಾದರು ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಹಲವು ಹಂತಗಳಲ್ಲಿ ಮತದಾನ ನಡೆಯುತ್ತಿರುವಾಗ ಅವರು ಪ್ರಚಾರಕರಾಗಿ ಕೋಲ್ಕತ್ತಾದಲ್ಲಿ ಹೇಗೆ ಉಳಿಯಬಹುದು ಎಂದು ಬಿಜೆಪಿ ದೂರು ನೀಡಿದರೆ ತೊಂದರೆಯಾಗಬಹುದು ಎಂಬ ಆತಂಕದಿಂದ ಅವರು ಈ ನಿರ್ಧಾರಕ್ಕೆ ಬಂದರು ಎನ್ನಲಾಗಿದೆ. ಚುನಾವಣೆ ಮತ್ತು ನಂತರದ ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಅವರು ಸಿಎಂ ಮಮತಾ ಬ್ಯಾನರ್ಜಿಯ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಮನೆಯಲ್ಲಿ ತಂಗಿದ್ದರು. ಅದನ್ನೆ ತಾತ್ಕಾಲಿಕ ವಿಳಾಸವಾಗಿ ನೀಡಿದ್ದಾರೆ.

ಆ ಚುನಾವಣೆಯಲ್ಲಿ ಟಿಎಂಸಿ ಬಹುದೊಡ್ಡ ಅಂತರದಲ್ಲಿ ಗೆದ್ದರೂ ಸಹ ಸಿಎಂ ಮಮತಾ ಬ್ಯಾನರ್ಜಿ ಮಾತ್ರ ಕೂದಲೆಳೆ ಅಂತರದಲ್ಲಿ ಸೋಲುಂಡರು. ಈ ಸೆಪ್ಟಂಬರ್ 30 ರಂದು ಭವಾನಿಪುರದಲ್ಲಿ ಉಪಚುನಾವಣೆಯಲ್ಲಿ ಅವರು ಸ್ಪರ್ಧಿಸಿದ್ದಾರೆ. ಮುಖ್ಯಮಂತ್ರಿ ವಿರುದ್ಧ ಸ್ಪರ್ಧಿಸಲು ಬಿಜೆಪಿ ಪಕ್ಷದ ನಾಯಕಿ ಪ್ರಿಯಾಂಕಾ ಟಿಬ್ರೆವಾಲ್ ಅವರನ್ನು ಕಣಕ್ಕಿಳಿಸಿದೆ.

ಪ್ರತಿಷ್ಠಿತ ಕಣವಾಗಿರುವ ಭವಾನಿಪುರ ಉಪ ಚುಣಾವಣೆಯಲ್ಲಿ ಮಮತಾ ಬ್ಯಾನರ್ಜಿ ವಿರುದ್ದ ಅಭ್ಯರ್ಥಿಯನ್ನು ನಿಲ್ಲಿಸದಿರಲು ಕಾಂಗ್ರೆಸ್‌ ನಿರ್ಧರಿಸಿದೆ. ಮಮತಾ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಮುಂದುವರೆಯಲು ನವೆಂಬರ್‌ 5 ರ ಒಳಗೆ ಶಾಸಕಿಯಾಗಿ ಆಯ್ಕೆಯಾಗಲೇಬೇಕಾಗಿದೆ.


ಇದನ್ನೂ ಓದಿ: ಬಂಗಾಳ ಉಪಚುನಾವಣೆ: ಮಮತಾ ಬ್ಯಾನರ್ಜಿ ಎದುರು ಸ್ಪರ್ಧಿಸದಿರಲು ಕಾಂಗ್ರೆಸ್ ನಿರ್ಧಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...