ಕಾಂಗ್ರೆಸ್‌ಗೆ ಸೇರ್ಪಡೆಯಾಗಿರುವ ಸಿಪಿಐ ಯುವ ನಾಯಕ ಕನ್ಹಯ್ಯ ಕುಮಾರ್ ಕಾಂಗ್ರೆಸ್ ಕುರಿತು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿರುವ ನಟ, ಸಾಮಾಜಿಕ ಹೋರಾಟಗಾರ ಚೇತನ್ ಕುಮಾರ್ ಇದು ಅಸತ್ಯ ಮತ್ತು ಭಟ್ಟಂಗಿತನ ಎಂದಿದ್ದಾರೆ.
ಸೆಪ್ಟಂಬರ್ 28 ರಂದು ಕಾಂಗ್ರೆಸ್‌ಗೆ ಸೇರ್ಪಡೆಯಾದ ಕನ್ಹಯ್ಯ ಕುಮಾರ್, “ಕಾಂಗ್ರೆಸ್ ಎಂಬುದು ಕೇವಲ ಒಂದು ಪಕ್ಷವಲ್ಲ, ಅದೊಂದು ಆದರ್ಶ. ಈ ದೇಶದ ಅತಿ ಪ್ರಾಚೀನ ಮತ್ತು ಪ್ರಜಾತಾಂತ್ರಿಕ ಪಕ್ಷವಾದ ಕಾಂಗ್ರೆಸ್ ಉಳಿಯದಿದ್ದರೆ, ಈ ದೇಶ ಉಳಿಯುವುದಿಲ್ಲ. ದೊಡ್ಡ ವಿಪಕ್ಷವನ್ನು ಉಳಿಸದಿದ್ದರೇ, ಚಿಕ್ಕ ಚಿಕ್ಕ ಪಕ್ಷಗಳು ಉಳಿಯುವುದಿಲ್ಲ” ಎಂದು ಹೇಳಿದ್ದರು.
ಕನ್ಹಯ್ಯ ಹೇಳಿಕೆಯನ್ನು ಟೀಕೆ ಮಾಡಿರುವ ನಟ ಚೇತನ್, “ಹೊಸದಾಗಿ ಕಾಂಗ್ರೆಸ್‌ಗೆ ಸೇರ್ಪಡೆಯಾದ ಕನ್ಹಯ್ಯ ಕುಮಾರ್ ಅವರು ‘ಕಾಂಗ್ರೆಸ್ ಇಲ್ಲದೇ ದೇಶ ಉಳಿಯಲು ಸಾಧ್ಯವಿಲ್ಲ’ ಎಂಬ ಹೇಳಿಕೆಯನ್ನು ನೀಡಿದ್ದಾರೆ.
ಇದು ಅಸತ್ಯ ಮತ್ತು ಭಟ್ಟಂಗಿತನ” ಎಂದಿದ್ದಾರೆ.
ಇದನ್ನೂ ಓದಿ: ಭಗತ್ ಸಿಂಗ್ ಜನ್ಮದಿನದಂದು ಕಾಂಗ್ರೆಸ್ ಸೇರಿದ ಕನ್ಹಯ್ಯ ಕುಮಾರ್, ಜಿಗ್ನೇಶ್ ಮೇವಾನಿ
“ಕಾಂಗ್ರೆಸ್ (ಮತ್ತು ಬಿಜೆಪಿಯ) ಅವಕಾಶವಾದ ಮತ್ತು ಬೂಟಾಟಿಕೆಗಳಿಲ್ಲದೆಯೇ ಕರ್ನಾಟಕ ಮತ್ತು ಭಾರತವು ಉತ್ತಮವಾಗಿರುತ್ತದೆ. ವೈಯಕ್ತಿಕ ಅಧಿಕಾರದ ಸಲುವಾಗಿ, ಕನ್ಹಯ್ಯ ಅವರು ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದ್ದಾರೆ” ಎಂದು ಕನ್ಹಯ್ಯ ವಿರುದ್ಧ ಕಿಡಿ ಕಾರಿದ್ದಾರೆ.
“ದೇಶದಲ್ಲಿ ಇಂದು ವೈಚಾರಿಕ ಸಂಘರ್ಷ ನಡೆಯುತ್ತಿದೆ. ಇದಕ್ಕೆ ಕಾಂಗ್ರೆಸ್ ನಾಯಕತ್ವ ನೀಡುತ್ತದೆ. ಆರಾಮ ಖುರ್ಚಿಯಲ್ಲಿ ಕೂತು ಮಾತಾಡುವ ಸಮಯ ಇದಲ್ಲ. ಇದು ತುರ್ತು ಸಂದರ್ಭವಾಗಿದೆ. ಹಾಗಾಗಿ ಈ ದೇಶದ ಕೋಟ್ಯಾಂತರ ಯುವಕರ ಭವಿಷ್ಯವನ್ನು ರಕ್ಷಿಸುವುದಕ್ಕಾಗಿ ನಾನು ಕಾಂಗ್ರೆಸ್ ಸೇರುತ್ತಿದ್ದೇನೆ” ಎಂದು ಕನ್ಹಯ್ಯ ಕುಮಾರ್ ಕಾಂಗ್ರೆಸ್ ಸೇರ್ಪಡೆಯಾದ ಬಳಿಕ ಸುದ್ದಿಗಾರಿಗೆ ತಿಳಿಸಿದ್ದರು.
ಕನ್ಹಯ್ಯ ಕುಮಾರ್ ಮತ್ತು ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಇಬ್ಬರು ಸೆಪ್ಟಂಬರ್ 28 ರಂದು ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಶಾಸಕ ಜಿಗ್ನೇಶ್ ಮೇವಾನಿ ಮುಂದಿನ ಚುನಾವಣೆಯನ್ನು ಕಾಂಗ್ರೆಸ್ ಪಕ್ಷದ ಬಾವುಟ ಹಿಡಿದು ಎದುರಿಸುತ್ತೇನೆ ಎಂದು ಹೇಳಿದರು. ಕನ್ಹಯ್ಯ ಕುಮಾರ್ ಕಾಂಗ್ರೆಸ್ ಸೇರ್ಪಡೆಗೆ ಪರ ವಿರೋಧ ಚರ್ಚೆಗಳು ನಡೆಯುತ್ತಲೇ ಇವೆ.
ಇದನ್ನೂ ಓದಿ: ಕಾಂಗ್ರೆಸ್ ಎಂಬುದು ಕೇವಲ ಒಂದು ಪಕ್ಷವಲ್ಲ, ಅದೊಂದು ಆದರ್ಶ: ಕನ್ಹಯ್ಯ ಕುಮಾರ್


