ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಮಂತ್ರಿ ಮಾಲ್ ಮಾಲೀಕರು ಆಸ್ತಿ ತೆರಿಗೆ ಪಾವತಿಸದ ಹಿನ್ನೆಲೆಯಲ್ಲಿ ಮಾಲ್‌ಗೆ ಬಿಬಿಎಂಪಿ ಅಧಿಕಾರಿಗಳು ಬೀಗ ಹಾಕಿದ್ದಾರೆ. ಪಾಲಿಕೆಗೆ ಆಸ್ತಿ ತೆರಿಗೆ ಕಟ್ಟದೆ ಇಷ್ಟು ದಿನ ಸತಾಯಿಸುತ್ತಿದ್ದ ಹಿನ್ನೆಲೆ ಮಾಲ್‌ಗೆ ಬೀಗ ಹಾಕಲಾಗಿದೆ. ಈ ಕಾರಣದಿಂದ ಮಾಲ್‌ಗೆ ಬರುವವರನ್ನು BBMP ಮಾರ್ಷಲ್‌ಗಳು ಮತ್ತು ಮಾಲ್ ಸಿಬ್ಬಂದಿ ವಾಪಸ್ ಕಳಿಸುತ್ತಿದ್ದಾರೆ.
ಮಂತ್ರಿಮಾಲ್ 27 ಕೋಟಿ 22 ಲಕ್ಷ 6 ಸಾವಿರದ 302 ರೂಪಾಯಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದೆ. ಬಿಬಿಎಂಪಿ ಹಲವು ಬಾರಿ ನೋಟಿಸ್ ನೀಡಿದ್ದರೂ ಮಾಲೀಕರು ಪ್ರತಿಕ್ರಿಯಿಸಿರಲ್ಲ. ಹೀಗಾಗಿ ಮಂತ್ರಿಮಾಲ್ ವಿರುದ್ದ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, ಬಿಬಿಎಂಪಿ ಅಧಿಕಾರಿಗಳು ಮಾಲ್‌ನ ಮುಖ್ಯ ದ್ವಾರಕ್ಕೆ ಬೀಗ ಹಾಕಿದ್ದಾರೆ.
ಬಿಬಿಎಂಪಿ ಜಂಟಿ ಆಯುಕ್ತ ಶಿವಸ್ವಾಮಿ ನೇತೃತ್ವದ ತಂಡ ಮಂತ್ರಿ ಮಾಲ್‌ಗೆ ತೆರಳಿದ್ದು, ಮಾಲ್‌ನಲ್ಲಿದ್ದ ಜನರನ್ನು ಹೊರಗಿ ಕಳುಹಿಸಿ, ಮುಖ್ಯ ದ್ವಾರಕ್ಕೆ ಬೀಗ ಜಡಿಸಿದ್ದಾರೆ. ಗ್ರಾಹಕರು ಮಾಲ್‌ನಿಂದ ವಾಪಸ್ ತೆರಳಿದ್ದಾರೆ. ಸದ್ಯ ಮಾಲ್‌ಗೆ ಬೀಗ ಹಾಕಲಾಗಿದ್ದು, ಮುಖ್ಯ ಆಯುಕ್ತರ ನಿರ್ದೇಶನದಂತೆ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ವಸತಿ ಶಾಲೆಯ 60 ವಿದ್ಯಾರ್ಥಿಗಳಿಗೆ ಕೊರೊನಾ; ಅ.20 ವರೆಗೆ ಶಾಲೆ ಬಂದ್
ಈ ಹಿಂದೆ ಮಾಲೀಕರು ಆಸ್ತಿ ತೆರಿಗೆ ಪಾವತಿಗೆ ನೀಡಿದ್ದ ಚೆಕ್ ಬೌನ್ಸ್ ಆಗಿತ್ತು. ಈ ಹಿನ್ನೆಲೆಯಲ್ಲಿ ಚೆಕ್ ಬೌನ್ಸ್ ಪ್ರಕರಣ ದಾಖಲಿಸಲಾಗಿದೆ. ಬೌನ್ಸ್ ಕೇಸ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.
ಸದ್ಯಕ್ಕೆ 5 ಕೋಟಿ ರೂಪಾಯಿ ತೆರಿಗೆಯನ್ನು ತಕ್ಷಣದಲ್ಲೇ ಪಾವತಿಸಬೇಕು. ಮಾಲೀಕರು ಇದಕ್ಕೆ ಒಪ್ಪದಿದ್ದರೆ ಮಾಲ್‌ನಲ್ಲಿರುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗುವುದು. ಇದಕ್ಕೆ ಕಾನೂನಿನಲ್ಲಿ ಅವಕಾಶವಿದೆ ಎಂದು ಜಂಟಿ ಆಯುಕ್ತ ಶಿವಸ್ವಾಮಿ ತಿಳಿಸಿದ್ದಾರೆ.
ಮಂತ್ರಿ ಮಾಲ್‌ನ ಮಾಲೀಕರು 5 ಕೋಟಿ ರೂಪಾಯಿ ಪಾವತಿಸಿರುವ ಡಿಡಿಯನ್ನು ನೀಡಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಯುತ್ತಿದ್ದು, ಅಧಿಕಾರಗಳ ಮುಂದಿನ ನಡೆ ಏನು ಎಂದು ತಿಳಿಯಬೇಕಿದೆ.
ಇದನ್ನೂ ಓದಿ: ಹಾಸನ: ದಿಂಡಗನೂರಿನಲ್ಲಿ ಮೊದಲ ಬಾರಿಗೆ ದೇವಾಲಯ ಪ್ರವೇಶಿಸಿದ ದಲಿತರು: ಗ್ರಾಮದಲ್ಲಿ ಬೂದಿ ಮುಚ್ಚಿದ ಕೆಂಡದಂತಹ ಪರಿಸ್ಥಿತಿ


