ಬುಧವಾರ ಬಿಜೆಪಿಯ ಅಮಿತ್ ಶಾ ಅವರನ್ನು ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಭೇಟಿಯಾದಾಗಿನಿಂದ ಅವರು ಬಿಜೆಪಿ ಸೇರುವ ವಿಚಾರ ಚರ್ಚೆಗೆ ಬಂದಿತ್ತು ಬಿಜೆಪಿಗೆ ಸೇರುವ ವದಂತಿಗಳನ್ನು ತಳ್ಳಿ ಹಾಕಿರುವ ಕ್ಯಾಪ್ಟನ್, ಬಿಜೆಪಿ ಪಕ್ಷಕ್ಕೆ ಸೇರುವುದಿಲ್ಲ. ಆದರೆ ಖಂಡಿತವಾಗಿಯೂ ಕಾಂಗ್ರೆಸ್ ತೊರೆಯುತ್ತೆನೆ ಎಂದಿದ್ದಾರೆ.
NDTV ಗೆ ನೀಡಿರುವ ಸಂದರ್ಶನದಲ್ಲಿ ಈ ಕುರಿತು ಸ್ಪಷ್ಟಪಡಿಸಿದ್ದಾರೆ. “ಇಲ್ಲಿಯವರೆಗೆ ನಾನು ಕಾಂಗ್ರೆಸ್‌ನಲ್ಲಿದ್ದೇನೆ. ಆದರೆ ಮುಂದೆ ನಾನು ಕಾಂಗ್ರೆಸ್‌ನಲ್ಲಿ ಉಳಿಯುವುದಿಲ್ಲ. ನನ್ನನ್ನು ಈ ರೀತಿ ನಡೆಸಿಕೊಳ್ಳಬಾರದಿತ್ತು” ಎಂದು ಹೇಳಿದ್ದಾರೆ.
ಪಂಜಾಬ್ ಕಾಂಗ್ರೆಸ್ ಪಕ್ಷದೊಳಗೆ ನಡೆಯುತ್ತಿದ್ದ ಆಂತರಿಕ ಕಚ್ಚಾಟದಿಂದಾಗಿ ಸೆ.18 ರಂದು ರಾಜ್ಯದ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸೆಪ್ಟಂಬರ್ 29 ರಂದು ಪಂಜಾಬ್ ಕಾಂಗ್ರೆಸ್ ನಾಯಕ ಅಮರಿಂದರ್ ಸಿಂಗ್, ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದರು. ಬಿಜೆಪಿ ಸೇರ್ಪಡೆಯಾಗುತ್ತಾರೆ ಎಂಬ ಊಹಾಪೋಹಗಳು ಹರಡಿದ್ದವು.
ಇದನ್ನೂ ಓದಿ: ‘ಪಿಎಂ ಪೋಶಣ್’: ಬಿಸಿಯೂಟ ಯೋಜನೆಯ ಹೆಸರು ಬದಲಿಸಿದ ಒಕ್ಕೂಟ ಸರ್ಕಾರ!
“ನಾನು 52 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ನನನ್ನು ಈ ರೀತಿ ನಡೆಸಿಕೊಳ್ಳಬಾರದಿತ್ತು. ಬೆಳಿಗ್ಗೆ 10.30 ಕ್ಕೆ ನೀವು ರಾಜೀನಾಮೆ ನೀಡುತ್ತೀರಿ ಎಂದು ಕಾಂಗ್ರೆಸ್ ಅಧ್ಯಕ್ಷರು ಹೇಳುತ್ತಾರೆ. ನಾನು ಯಾವುದೇ ಪ್ರಶ್ನೆಗಳನ್ನು ಕೇಳಲಿಲ್ಲ. ಸಂಜೆ 4 ಗಂಟೆಗೆ ರಾಜ್ಯಪಾಲರ ಬಳಿ ಹೋಗಿ ರಾಜೀನಾಮೆ ನೀಡಿದ್ದೇನೆ. 50 ವರ್ಷಗಳ ನಂತರವೂ ನಿಮಗೆ ನನ್ನ ವಿಶ್ವಾಸಾರ್ಹತೆಯ ಬಗ್ಗೆ ನಿಮಗೆ ಅನುಮಾನವಿದ್ದರೆ, ನನ್ನ ಬಗ್ಗೆ ನಂಬಿಕೆ ಇಲ್ಲದಿದ್ದರೆ, ನಾನು ಪಕ್ಷದಲ್ಲಿ ಉಳಿಯುವುದರ ಅರ್ಥವೇನು..? ಎಂದು ಪ್ರಶ್ನಿಸಿದ್ದಾರೆ.
ಪಕ್ಷದಿಂದ ನನಗೆ ಮೂರು ಬಾರಿ ಅವಮಾನ ಮಾಡಲಾಗಿದೆ ಎಂದು ಸೋನಿಯಾ ಗಾಂಧಿ ಅವರಿಗೆ ತಿಳಿಸಿರುವುದಾಗಿ ಅಮರಿಂದರ್ ಸಿಂಗ್ ಹೇಳಿದ್ದರು. ಪಂಜಾಬ್‌ನಲ್ಲಿ ಕಾಂಗ್ರೆಸ್ ಕೆಳಗಿಳಿಯುತ್ತಿದೆ ಎಂದು ಹೇಳಿರುವ ಅಮರಿಂದರ್ ಸಿಂಗ್, ನವಜೋತ್ ಸಿಂಗ್ ಸಿಧು ಅವರನ್ನು “ಚೈಲ್ಡಿಶ್” ಎಂದು ಕರೆದಿದ್ದಾರೆ.
“ರಾಜ್ಯದಲ್ಲಿ ಕಾಂಗ್ರೆಸ್ ಜನಪ್ರಿಯತೆ ಇಳಿಮುಖವಾಗುತ್ತಿದೆ. ಜುಲೈ ಮತ್ತು ಸೆಪ್ಟೆಂಬರ್ ನಡುವೆ ಕಾಂಗ್ರೆಸ್ ನಡೆಸಿದ ಸಮೀಕ್ಷೆಯಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ಜನಪ್ರಿಯತೆ ಏರುತ್ತಿರುವುದು ಮತ್ತು ಕಾಂಗ್ರೆಸ್ ಜನಪ್ರಿಯತೆ 20% ಕುಸಿದಿರುವುದು ವರದಿಯಾಗಿದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಅಮಿತ್ ಶಾ ಅವರನ್ನು ಭೇಟಿಯಾದ ಪಂಜಾಬ್ ಮಾಜಿ ಸಿಎಂ ಅಮರಿಂದರ್ ಸಿಂಗ್!


