ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ಹಿಂಸಾಚಾರದಲ್ಲಿ ನಾಲ್ಕು ರೈತರು ಸೇರಿದಂತೆ ಎಂಟು ಜನರು ಸಾವನ್ನಪ್ಪಿದ ಎರಡು ದಿನಗಳ ನಂತರ ಗಾಯಾಳು ರೈತ ಮುಖಂಡ ಹೇಳಿಕೆ ನೀಡಿದ್ದು, ಪ್ರತಿಭಟನಾಕಾರರ ಮೇಲೆ ಹರಿದ ಕಾರನ್ನು ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಚಾಲನೆ ಮಾಡುತ್ತಿದ್ದರು ಎಂದು ಆರೋಪಿಸಿದ್ದಾರೆ.
ದೆಹಲಿಯ ಮೇದಂತದಲ್ಲಿ ಆಸ್ಪತ್ರೆಗೆ ದಾಖಲಾಗಿರುವ ರೈತ ಮುಖಂಡ ತೇಜಿಂದರ್ ಸಿಂಗ್ ವಿರ್ಕ್, 72 ಗಂಟೆಗಳ ನಂತರವೂ ಆರೋಪಿಗಳನ್ನು ಬಂಧಿಸದಿರುವುದು ದುರದೃಷ್ಟಕರ ಎಂದು ಹೇಳಿದ್ದಾರೆ.
ಭಾನುವಾರ ಕೇಂದ್ರ ಸಚಿವ ಅಜಯ್ ಮಿಶ್ರಾ ಭೇಟಿ ಮತ್ತು ಉಪಮುಖ್ಯಮಂತ್ರಿ ಕೇಶವ್ ಶರ್ಮಾ ವಿರುದ್ಧ ನಡೆದ ಪ್ರತಿಭಟನೆಯನ್ನು ರೈತ ಮುಖಂಡ ಮತ್ತು ಎಸ್‌ಕೆಎಂ ಸದಸ್ಯ ತೇಜಿಂದರ್ ಸಿಂಗ್ ವಿರ್ಕ್ ಆಯೋಜಿಸಿದ್ದರು.
ಇದನ್ನೂ ಓದಿ: ಇತ್ತ ಹತ್ಯೆಗೀಡಾದ ರೈತರಿಗಾಗಿ ಶೋಕಿಸುತ್ತಿರುವ ದೇಶ : ಅತ್ತ ಯುಪಿಯ ಕಾರ್ಯಕ್ರಮಗಳಲ್ಲಿ ಪ್ರಧಾನಿ ಭಾಗಿ
NDTV ಜೊತೆಗೆ ಮಾತನಾಡಿರುವ ತೇಜಿಂದರ್ ವಿರ್ಕ್, “ಇದು ನಮ್ಮನ್ನು ಕೊಲ್ಲುವ ಪಿತೂರಿಯಾಗಿತ್ತು. ಅಜಯ್ ಮಿಶ್ರಾ ಅವರು ಲಖಿಂಪುರವನ್ನು ಬಿಟ್ಟು ಉತ್ತರ ಪ್ರದೇಶದಲ್ಲಿ ರೈತರಿಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಯ ವಿರುದ್ಧ ನಾವು ಪ್ರತಿಭಟನೆ ನಡೆಸುತ್ತಿದ್ದೆವು. ನಾವು ಪೊಲೀಸರು ಮತ್ತು ಆಡಳಿತದೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇವು ಅವರ ಮೇಲೆ ಕಪ್ಪು ಬಾವುಟ ಬೀಸಲು ಮಾರ್ಗದುದ್ದಕ್ಕೂ ನಿಂತಿದ್ದೆವು” ಎಂದಿದ್ದಾರೆ.
“ಅವರ ಮಾರ್ಗ ಬದಲಾಗಿದೆ ಎಂದು ನಮಗೆ ಮಧ್ಯಾಹ್ನ 3 ಗಂಟೆಗೆ ತಿಳಿಯಿತು. ನಾವು ಶಾಂತಿಯುತವಾಗಿ ಹಿಂತಿರುಗಲಾರಂಭಿಸಿದೆವು. ಇದ್ದಕ್ಕಿದ್ದಂತೆ, ವೇಗವಾಗಿ ಬಂದ ಕಾರುಗಳು ನಮಗೆ ಹಿಂದಿನಿಂದ ಡಿಕ್ಕಿ ಹೊಡೆದವು. ಕಾರು ಗಂಟೆಗೆ 100 ಕಿಮೀ ವೇಗದಲ್ಲಿತ್ತು. ಅವರು ಉದ್ದೇಶಪೂರ್ವಕವಾಗಿ ನಮ್ಮ ಮೇಲೆ ಕಾರು ಹರಿಸಿದರು. ಅಜಯ್ ಮಿಶ್ರಾ ಅವರ ಮಗ ಮತ್ತು ಅವನ ಸಹಚರರು ಕಾರಿನಲ್ಲಿದ್ದರು. ಆಗ ನನಗೆ ಪ್ರಜ್ಞೆ ತಪ್ಪಿತು” ಎಂದು ಮಾಹಿತಿ ನೀಡಿದ್ದಾರೆ.
ಕೇಂದ್ರ ಸಚಿವರನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿರುವ ರೈತ ಮುಖಂಡ, “ನಾನು ಸಾಕ್ಷಿ ಹೇಳಲು ಸಿದ್ಧನಿದ್ದೇನೆ. ಯೋಗಿ ಆದಿತ್ಯನಾಥ್ ಸರ್ಕಾರ ದಾಳಿಕೋರರಿಗೆ ಸಹಾಯ ಮಾಡುತ್ತಿದೆ” ಎಂದು ಆರೋಪಿಸಿದ್ದಾರೆ.
ಭಾನುವಾರದ ಹಿಂಸಾಚಾರದಲ್ಲಿ ತೀವ್ರವಾಗಿ ಗಾಯಗೊಂಡಿರುವ ಸಂಯುಕ್ತ ಕಿಸಾನ್ ಮೋರ್ಚಾದ ಸದಸ್ಯ ತೇಜಿಂದರ್ ಸಿಂಗ್ ವಿರ್ಕ್ ಸದ್ಯ ದೆಹಲಿಯ ಮೇದಂತದಲ್ಲಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ: #भाजपा_के_आतंकवादी | ‘ಬಿಜೆಪಿ ಭಯೋತ್ಪಾದಕರು’ – ಟ್ವಿಟರ್ ಟ್ರೆಂಡ್


