ಲಖಿಂಪುರ್ ಖೇರಿ ಹತ್ಯಾಕಾಂಡದಲ್ಲಿ ಹುತಾತ್ಮರಾದ ರೈತರು ಮತ್ತು ಪತ್ರಕರ್ತರಿಗೆ ಇಂದು ದೇಶದ ರೈತರು ಅಂತಿಮ ನಮನ ಸಲ್ಲಿಸುತ್ತಿದ್ದಾರೆ. ಹತ್ಯೆ ನಡೆದ ಟಿಕುನಿಯಾದಲ್ಲಿ ಸಮಾವೇಶ ನಡೆಯುತ್ತಿದೆ. ಉತ್ತರ ಪ್ರದೇಶದ ಹಲವು ನಗರಗಳಲ್ಲಿ ಅಂತಿಮ ನಮನ (Antim ardaas) ಕಾರ್ಯಕ್ರಮ ಆಯೋಜಿಸಲಾಗಿದೆ.
ಸಂಯುಕ್ತ ಕಿಸಾನ್ ಮೋರ್ಚಾದ ರೈತ ನಾಯಕರು ಲಖಿಂಪುರ್ ಖೇರಿಗರ ತಲುಪಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ದು, ಅಗಲಿದ ರೈತರಿಗಾಗಿ ಪ್ರಾರ್ಥನೆ ಸಲ್ಲಿಸಲಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಅಕ್ಟೋಬರ್ 3 ರಂದು ಲಖಿಂಪುರ್ ಖೇರಿ ಹತ್ಯಾಕಾಂಡದಲ್ಲಿ ಹುತಾತ್ಮರಾದ ನಾಲ್ವರು ರೈತರಿಗೆ ಶ್ರದ್ಧಾಂಜಲಿ ಸಲ್ಲಿಸಲು ಮತ್ತು ಶಾಹೀದ್ ಕಿಸಾನ್ ದಿವಸ್ ಆಚರಿಸಲು ಸುಮಾರು 2 ಲಕ್ಷ ರೈತರು ಲಖಿಂಪುರ್ ಖೇರಿಗೆ ಆಗಮಿಸುತ್ತಿದ್ದು, ಟಿಕುನಿಯಾದ ಸಾಹೇಬ್‌ಜಡ್ಡಾ ಇಂಟರ್ ಕಾಲೇಜಿನಲ್ಲಿ ಕಾರ್ಯಕ್ರಮ ನಡೆಯುತ್ತಿದೆ.
ಇದನ್ನೂ ಓದಿ: ರೈತರ ಹತ್ಯಾಕಾಂಡಕ್ಕೆ ಪ್ರತಿರೋಧ: ಅ.18ಕ್ಕೆ ರೈಲ್ ರೋಕೋ, 26ಕ್ಕೆ ಲಕ್ನೋದಲ್ಲಿ ಮಹಾಪಂಚಾಯತ್

ಅಂತಿಮ ನಮನದಲ್ಲಿ ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಮತ್ತು ಉತ್ತರಾಖಂಡದ ರೈತರು ಭಾಗವಹಿಸುವ ನಿರೀಕ್ಷೆಯಿದೆ. ರಾಕೇಶ್ ಟಿಕಾಯತ್, ದರ್ಶನ್ ಪಾಲ್, ಯೋಗೇಂದ್ರ ಯಾದವ್ ಸೇರಿದಂತೆ ಹಲವು ರೈತ ನಾಯಕರು ಭಾಗವಹಿಸಿದ್ದಾರೆ.
ಅಂತಿಮ ಪಾರ್ಥನೆಗೆ ರಾಜಕೀಯ ನಾಯಕರು ಬೆಂಬಲ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಲಖಿಂಪುರ್ ಖೇರಿಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದಾರೆ.
ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದ್ದರೂ, ಕಾರ್ಯಕ್ರಮದಲ್ಲಿ ಯಾವುದೇ ರಾಜಕೀಯ ನಾಯಕನನ್ನು ರೈತ ಮುಖಂಡರೊಂದಿಗೆ ವೇದಿಕೆ ಹಂಚಿಕೊಳ್ಳಲು ಅನುಮತಿಸುವುದಿಲ್ಲ ಎಂದು ಭಾರತೀಯ ಕಿಸಾನ್ ಯೂನಿಯನ್ ಸದಸ್ಯರೊಬ್ಬರು ಸ್ಪಷ್ಟನೆ ನೀಡಿದ್ದಾರೆ.
ಆರ್‌ಎಲ್‌ಡಿ ಮುಖ್ಯಸ್ಥ ಜಯಂತ್ ಚೌಧರಿಗೆ ಪೊಲೀಸರು ತಡೆ ನೀಡಿದ್ದು, ಅವರ ಬೆಂಬಲಿಗರು ವಿಮಾನ ನಿಲ್ದಾಣದ ಹೊರಗೆ ಪ್ರತಿಭಟನೆ ನಡೆಸಿದ ನಂತರ ಬರೇಲಿ ವಿಮಾನ ನಿಲ್ದಾಣದಿಂದ ಲಖಿಂಪುರ್ ಖೇರಿಗೆ ತೆರಳಲು ಪೊಲೀಸರು ಅನುಮತಿ ನೀಡಿದ್ದಾರೆ.
ಅಂತಿಮ ಪಾರ್ಥನೆ ನಡೆಯುವ ಎಲ್ಲಾ ಸ್ಥಳಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

ಕಾರ್ಯಕ್ರಮದ ಲೈವ್ ನೋಡಿ…
ಇದನ್ನೂ ಓದಿ: ಲಖಿಂಪುರ್ ಖೇರಿ ಹತ್ಯಾಕಾಂಡ: ಆರೋಪಿ ಆಶಿಶ್ ಮಿಶ್ರಾ 3 ದಿನ ಪೊಲೀಸ್ ವಶಕ್ಕೆ


