ಕಳೆದು ಹೋದ ದಿನಗಳು….. ಭಾಗ -2, ಅಧ್ಯಾಯ  -6

ಕಾಫಿಗೆ ಶೇ.30 ರಷ್ಟು ಮುಕ್ತ ಮಾರುಕಟ್ಟೆ ದೊರೆತ ಕೂಡಲೇ ಕಾಫಿ ಬೆಲೆಯೂ ಒಂದೇ ಸಮನೆ ಏರತೊಡಗಿತು. ಈ ಶೇ.30 ರಷ್ಟು ಕಾಫಿ ಭಾರತದ ಆಂತರಿಕ ಮಾರುಕಟ್ಟೆಗೆ ಮಾತ್ರವೆಂದೂ ಉಳಿದ ಶೇ.70 ರಷ್ಟು ಬೆಳೆ ರಪ್ತು ಕೋಟಾ ಇದ್ದು ಅದನ್ನು ಕಾಫಿ ಬೋರ್ಡಿಗೆ ಕೊಡಬೇಕೆಂದು ನಿಗದಿಯಾಗಿತ್ತು. ಸರ್ಕಾರದ  ಈ ನಿರ್ದೇಶನವನ್ನು ಹೆಚ್ಚಿನವರು ಗಾಳಿಗೆ ತೂರಿದರು. ಅವರೆಲ್ಲರೂ ಮುಕ್ತ ಮಾರುಕಟ್ಟೆಯಲ್ಲಿ ಕಾಫಿ ಮಾರಾಟ ಮಾಡತೊಡಗಿದರು.

ಬೆಳೆಗಾರರ ಕೈಯಲ್ಲಿ ದುಡ್ಡು ಝಣಝಣಿಸತೊಡಗಿತು. ಖಾಸಗಿ ಸಾಲ ಕೊಡುವವರೂ ಮತ್ತು ಬ್ಯಾಂಕುಗಳೂ ಕಾಫಿ ಬೆಳೆಗಾರರಿಗೆ ಕೇಳಿದ್ದಕ್ಕಿಂತ ಹೆಚ್ಚು ಸಾಲ ಕೊಡತೊಡಗಿದರು. ಹಳ್ಳಿಗಳಿಗೆ ವಾಹನಗಳು ಬಂದವು. ಹೋಬಳಿ ಕೇಂದ್ರವೂ ಅಲ್ಲದ ಕೆಲವು ಊರುಗಳು ಮಾರುತಿ ಕಾರುಗಳಿಂದ ತುಂಬಿ ‘ಮಾರುತಿ ನಗರ’ ಗಳೆಂಬ ಅಡ್ಡ ಹೆಸರು ಪಡೆದವು. ಅದ್ದೂರಿಯ “ಬ್ಲಾಸಂ ಪಾರ್ಟಿ”ಗಳೂ, (ಮಾರ್ಚ್- ಏಪ್ರಿಲ್ ತಿಂಗಳಲ್ಲಿ ಒಳ್ಳೆಯ ಮಳೆಯಾಗಿ ತೋಟದಲ್ಲಿ ಕಾಫಿ ಹೂ ಬಿಟ್ಟಾಗ ಗೆಳೆಯರಿಗೆ ಕೊಡುವ ಪಾರ್ಟಿ). ಜೊತೆಗೆ ರಮ್ಮಿ ನಾಕೌಟ್ ಎಂಬ ಎರಡು ಮೂರು ದಿನ ನಡೆಯುವ ಜೂಜಿನ ಜಾತ್ರೆಗಳೂ ಪ್ರಾರಂಭವಾದವು. ಇಲ್ಲೆಲ್ಲ ಲಕ್ಷಾಂತರ ರೂ ವ್ಯವಹಾರ ನಡೆಯುತ್ತಿದ್ದವು. ಮೊದಲೇ ಐಷಾರಾಮೀ ದೊರೆಗಳೆಂಬ ಅಪಖ್ಯಾತಿ ಪಡೆದಿದ್ದ ಕಾಫಿಬೆಳೆಗಾರರು ಹೊರ ಜಗತ್ತಿನ ಕಣ್ಣಲ್ಲಿ ‘ತುಘಲಕ್’ ದೊರೆಗಳಾಗಿದ್ದರು.

ಆದರೆ ಕಾಫಿವಲಯದೊಳಗಿನ ಪರಿಸ್ಥಿತಿ ಬೇರೆಯೇ ಇತ್ತು. ಕಾಫಿತೋಟಗಳ ಬೆಲೆ ಗಗನಕ್ಕೇರಿ ಮಾರುವವರ -ಕೊಳ್ಳುವವರ, ಜೊತೆಯಲ್ಲಿ ದಳ್ಳಾಳಿಗಳ ಭರಾಟೆ ಹೆಚ್ಚಾಯಿತು. ಕಾಫಿತೋಟಗಳ ವ್ಯಾಪಾರ ಭೂಗತ ಜಗತ್ತಿನವರ ನಿಯಂತ್ರಣದಲ್ಲಿ ನಡೆಯಬೇಕಾದ ಪರಿಸ್ಥಿತಿಯೂ ನಿರ್ಮಾಣವಾಯಿತು. ಇದರೊಂದಿಗೆ ಕೆಲವರು ಕಾಫಿ ವ್ಯಾಪಾರಿಗಳೂ ಅವ್ಯವಹಾರಗಳಲ್ಲಿ ತೊಡಗಿದರು. ಇದೆಲ್ಲದರ ಜೊತೆ ಟಿಂಬರ್-ಚಕ್ಕೆ ವ್ಯವಹಾರಗಳೂ ಸೇರಿ ಹಣದ ಚಲಾವಣೆ ಹೆಚ್ಚಿದಂತೆ ಹೊಡೆದಾಟ, ಬಡಿದಾಟಗಳು ಮಾತ್ರವಲ್ಲ ಕಾಫಿತುಂಬಿದ ಲಾರಿಗಳು ದಾರಿಯಲ್ಲಿ ದರೋಡೆಯಾಗುವ ಘಟನೆಗಳೂ ನಡೆದವು. ಎಲ್ಲ ಕಡೆಗಳಲ್ಲಿ ಖಾಸಗಿ ಸೆಕ್ಯುರಿಟಿಯವರನ್ನು ನೇಮಿಸಿಕೊಳ್ಳುವ ಅನಿವಾರ್ಯತೆಯೂ ಬಂತು. ಒಟ್ಟಾರೆಯಾಗಿ ಕಾಫಿ ವಲಯ ಪ್ರಕ್ಷುಬ್ಧವಾಯಿತು.

ಕಾಫಿಗೆ ಎಂದೂ ಕಾಣದಂತಹ ಉತ್ತಮ ಬೆಲೆ ಬಂದದ್ದು ಹಲವು ಪರಿಣಾಮಗಳನ್ನು ಬೀರಿತು. ಸುಮಾರಾಗಿ ಐದು ದಶಕಗಳ ಕಾಲ ಮಾರುಕಟ್ಟೆಯ ಜವಾಬ್ದಾರಿಯೇ ಇಲ್ಲದೆ ಒಂದು ರೀತಿಯ ಸಂತೃಪ್ತಿ ಮತ್ತು ಆರಾಮತನದ ಭಾವದಲ್ಲಿ ಇದ್ದ ಕಾಫಿ ಬೆಳೆಗಾರರಿಗೆ ಈ ಕನಸಿನಲ್ಲಿಯೂ ಊಹಿಸದ ಹೆಚ್ಚಿನ ಬೆಲೆ ಒಂದು ಭ್ರಮಾಲೋಕವನ್ನು ಕಟ್ಟಿಕೊಟ್ಟಿತು. ಕಾಫಿ ಬೋರ್ಡಿನ ಹಿಡಿತದಿಂದ ಬಿಡಿಸಿಕೊಂಡದ್ದು ತಮ್ಮ ಭಾಗ್ಯವೆಂದೇ ತಿಳಿದು ವರ್ತಿಸಿದರು. ಜೊತೆಯಲ್ಲಿ ಈ ಸ್ಥಿತಿ ಶಾಶ್ವತ ಎಂಬಂತೆ ಭಾವಿಸಿದರು.

ಆಗಲೂ ಕೆಲವರು ಪ್ರಜ್ಞಾವಂತರು ಮಾತ್ರ ತಮ್ಮ ಹಳೆಯ ಸಾಲಗಳನ್ನು ತೀರಿಸಿದರು. ತೋಟಗಳನ್ನು ಅಭಿವೃದ್ಧಿ ಮಾಡಿದರು. ಮನೆಗಳನ್ನು ಕಟ್ಟಿಕೊಂಡರು. ಬೇರೆ ಕಡೆಗಳಲ್ಲಿಯೂ ಹಣ ಹೂಡಿ ಒಂದಷ್ಟು ಭದ್ರತೆಯನ್ನು ಸೃಷ್ಟಿಸಿಕೊಂಡರು. ಇಂಥವರ ಪ್ರಯತ್ನಗಳಿಂದ ಮುಂದಿನ ದಿನಗಳಲ್ಲಿ ಕಾಫಿ ಉತ್ಪಾದನೆಯಲ್ಲಿಯೂ ಹೆಚ್ಚಳವಾಯಿತು.

ಈ ಎರಡು ರೀತಿಯವರೂ ಅಲ್ಲದ ಆತುರಗಾರರ ಗುಂಪೊಂದಿತ್ತು. ಕಾಫಿ ತೋಟಗಳಿಗೆ ಆ ಕಾಲಕ್ಕೆ ಅತ್ಯುತ್ತಮ ಬೆಲೆ ಬಂದಿದ್ದರಿಂದ ‘ಸುಖವಾಗಿ’ ಇರುವ ಕನಸು ಕಂಡು ತೋಟಗಳನ್ನು ಮಾರಿ ಸಿಟಿ ಸೇರಿದರು. ಇವರಲ್ಲಿ ಸಣ್ಣ ಸಂಖ್ಯೆಯವರು ಮಾತ್ರ ಯಶಸ್ಸು ಗಳಿಸಿದರು. ಹೆಚ್ಚಿನವರು ಬೇರೆ ವ್ಯವಹಾರವೂ ಗೊತ್ತಿಲ್ಲದೆ ಬಹಳ ಬೇಗ ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬಿದ್ದರು.

ಹಣದ ಚಲಾವಣೆ ಹೆಚ್ಚಿದ್ದರಿಂದ ಒಂದಷ್ಟು ಉದ್ಯೋಗವಕಾಶಗಳು ಹೆಚ್ಚಿದ್ದವು. ಕೂಲಿ ಕಾರ್ಮಿಕರಿಗೂ ಬೇಡಿಕೆ ಹೆಚ್ಚಿದ್ದರಿಂದ ಅವರ ಚೌಕಾಸಿಯ ಶಕ್ತಿ ಹೆಚ್ಚಿ ಅವರಿಗೂ ಕೂಡಾ ಒಂದಷ್ಟು ಹೆಚ್ಚಿನ ವೇತನ ದೊರೆಯುವಂತಾಯಿತು.

ಆದರೆ ಇವೆಲ್ಲವನ್ನೂ ಗಮನಿಸುತ್ತ ನಾವು ಏನಾದರೂ ಮಾಡಬೇಕು. ಎಲ್ಲವನ್ನೂ ಖಾಸಗಿ ವ್ಯಾಪಾರಸ್ಥರ ಮರ್ಜಿಗೆ ಬಿಟ್ಟರೆ ಮುಂದೆ ಖಂಡಿತ ಅಪಾಯವಿದೆ ಎಂಬುದನ್ನು ಅರಿತ ದೂರದೃಷ್ಟಿಯವರೂ ಇದ್ದರು. ಅವರಲ್ಲಿ ಕೆಲವರು ಸೇರಿ ಕಾಫಿಬೆಳೆಗಾರರದ್ದೇ ಆದ ಒಂದು ಸಂಸ್ಥೆಯಿರಬೇಕು ಎಂದು ಯೋಚಿಸಿದರು. ಅದು ಸಹಕಾರಿ ಸಂಸ್ಥೆಯಾಗಿರಬೇಕು ಎಂದೂ ಅವರ ಚಿಂತನೆಯಾಗಿತ್ತು. ಅದಕ್ಕೆ ಕಾರಣ ಈಗಾಗಲೇ ಅಡಿಕೆ ಬೆಳೆಗಾರರು ಸ್ಥಾಪಿಸಿಕೊಂಡಿದ್ದ ಕ್ಯಾಂಪ್ಕೋ ಎಂಬ ಸಹಕಾರಿ ಸಂಸ್ಥೆ ಇತ್ತು.

ಅಡಿಕೆ ಸಹಕಾರ ಸಂಘ, ಕಾಂಪ್ಕೋ ಕಛೇರಿ

ಆಗ ಹಾಸನಜಿಲ್ಲೆಯಿಂದ ಎನ್.ಜಿ.ರವೀಂದ್ರನಾಥ, ಎನ್.ಎಂ.ಶಿವಪ್ರಸಾದ್, ಬಿ.ಎ.ಜಗನ್ನಾಥ್ ಚಿಕ್ಕಮಗಳೂರು  ಜಿಲ್ಲೆಯಿಂದ ಡಿ.ಎಸ್ ರಘು. ಪ್ರದೀಪ್ ಕೆಂಜಿಗೆ, ಕೊಡಗಿನಿಂದ ಭೀಮಯ್ಯ, ಕೆ.ಸಿ.ರಾಮಮೂರ್ತಿ, ತಮಿಳುನಾಡಿನಿಂದ ಪೆಮ್ಮಯ್ಯ ಹೀಗೇ ಹಲವಾರು ಜನರು ಸೇರಿ ಒಂದು ಸಮಿತಿಯನ್ನು ರಚಿಸಿಕೊಂಡು ಕಾಫಿ ಬೆಳೆಗಾರರ ಸಹಕಾರಿ ಸಂಸ್ಥೆಯನ್ನು ರಚಿಸಿಕೊಳ್ಳಲು ಪ್ರಯತ್ನಿಸಿದರು. ಮತ್ತು ಈ ಬಗ್ಗೆ ಎಲ್ಲ ಸಲಹೆ, ಮಾರ್ಗದರ್ಶನ ಮತ್ತು ಅದಕ್ಕೆ ಬೇಕಾದ ಹಲವು ಬಗೆಯ ಸಂಘಟನಾತ್ಮಕ ತಳಹದಿಯನ್ನು ರೂಪಿಸಿಕೊಟ್ಟವರು ಅಂದಿನ ಕಾಂಪ್ಕೋ ಆಧ್ಯಕ್ಷರಾಗಿದ್ದ ವಾರಣಾಸಿ ಸುಬ್ರಾಯ ಭಟ್ ಅವರು. ಅವರ ಅಪಾರ ಅನುಭವದ ಮಾರ್ಗದರ್ಶನದಿಂದ ಕೊಮಾರ್ಕ್ ಎಂಬ ಸಹಕಾರಿ ಸಂಸ್ಥೆ ಪ್ರಾರಂಭವಾಯಿತು. ರವೀಂದ್ರನಾಥರು ಕೊಮಾರ್ಕ್‌ನ ಅಧ್ಯಕ್ಷರಾಗಿ ಆಯ್ಕೆಯಾದರು.

ಆಗಲೇ ಹಲವಾರು ಖಾಸಗಿ ಸಂಸ್ಥೆಗಳು, ಮಾತ್ರವಲ್ಲ ಖಾಸಗಿ ವ್ಯಕ್ತಿಗಳೂ ಕಾಫಿ ವ್ಯಾಪಾರ ವಹಿವಾಟುಗಳಲ್ಲಿ ತೊಡಗಿಕೊಂಡಿದ್ದರು. ಅವರೆಲ್ಲರ ಜೊತೆ  ಕೊಮಾರ್ಕ್ ಕಾಫಿ ವ್ಯವಹಾರದಲ್ಲಿ ಸ್ಪರ್ಧಿಸಬೇಕಿತ್ತು.

ಕೊಮಾರ್ಕ್ ಲಾಂಛನ

ಅಡಿಕೆ ವ್ಯವಹಾರವೂ ದೊಡ್ಡ ಮಟ್ಟದ್ದೇ. ಆದರೆ ಜಾಗತಿಕ ಮಟ್ಟದಲ್ಲಿ ಭಾರತದ ಅಡಿಕೆಯ ಉತ್ಪಾದನೆಯೂ ದೊಡ್ಡ ಪ್ರಮಾಣದ್ದೇ. ಅದಕ್ಕೆ ಭಾರತದ ಆಂತರಿಕ ಮಾರುಟ್ಟೆಯೂ ದೊಡ್ಡದೇ. ಅಡಿಕೆಯ ರಪ್ತು ವ್ಯವಹಾರ ಕೆಲವು ದೇಶಗಳಿಗೆ ಸೀಮಿತವಾದುದು.

ಭಾರತದ ಕಾಫಿ ಉತ್ಪಾದನೆ ಜಾಗತಿಕ ಮಾರುಕಟ್ಟೆಯಲ್ಲಿ ನಗಣ್ಯ. ಕೇವಲ ಶೇ4ರಷ್ಟು ಮಾತ್ರ. ನಮ್ಮ ಕಾಫಿಗೆ ಆಂತರಿಕ ಮಾರುಕಟ್ಟೆ ಬಹಳ ಸಣ್ಣದು. ಕಾಫಿ ಉದ್ಯಮ ಪ್ರಪಂಚದಲ್ಲಿ ತೈಲೋದ್ಯಮದ ನಂತರ ಎರಡನೇ ಸ್ಥಾನದಲ್ಲಿರುವ ಅತಿದೊಡ್ಡ ಹಣಕಾಸು ವ್ಯವಹಾರದ ಉದ್ಯಮವಾಗಿದೆ. ಇದೆಲ್ಲದರಿಂದ ಭಾರತದ ಕಾಫಿ ಉದ್ಯಮ ಜಾಗತಿಕವಾಗಿಯೇ ಸ್ಪರ್ಧಿಸಬೇಕಾದ ಅನಿವಾರ್ಯತೆಯಿದೆ. ಅಲ್ಲದೆ ಜಾಗತಿಕ ವ್ಯವಹಾರಸ್ಥರೂ ಕೂಡಾ ನಮ್ಮ ಊಹೆಗೂ ನಿಲುಕದಷ್ಟು ದೊಡ್ಡ ಪ್ರಮಾಣದವರು. ಅವರ ಮುಂದೆ ನಮ್ಮ ಶಕ್ತಿ ಬಹಳ ಸಣ್ಣದು.

ಅಡಿಕೆ ಹಾಗೂ ಕಾಫಿಯ ಬೆಳೆ ಮತ್ತು ಮಾರಾಟ ವ್ಯವಸ್ಥೆಯಲ್ಲಿ ಈ ಮುಖ್ಯವಾದ ವ್ಯತ್ಯಾಸವಿದೆ.

ಆದ್ದರಿಂದ ಕೊಮಾರ್ಕನ ಮುಂದಿನ ಹಾದಿ ಕಠಿಣವೂ ಬಹಳ ಜವಾಬ್ದಾರಿಯದ್ದೂ ಆಗಿತ್ತು.

ಪ್ರಾರಂಭಿಕ ದಿನಗಳಲ್ಲಿ ಕೊಮಾರ್ಕ್ ಅತ್ಯುತ್ತಮವಾಗಿಯೇ ಕೆಲಸ ಮಾಡತೊಡಗಿತು. ಕೊಮಾರ್ಕನ ಕಾಫಿ ಕೊಳ್ಳುವ ಬೆಲೆಯನ್ನಾಧರಿಸಿಯೇ ಉಳಿದ ವ್ಯಾಪಾರಸ್ಥರು ಕಾಫಿಗೆ ಬೆಲೆ ನಿಗದಿ ಮಾಡುವ ಪದ್ಧತಿ ಬಹಳ ಬೇಗ ಜಾರಿಗೆ ಬಂತು. ಕಾಫಿ ಬೋರ್ಡ್‌ನ ಹೊರತಾಗಿಯೂ ನಾವು ಕಾಫಿ ಮಾರುಕಟ್ಟೆಯನ್ನು ನಿಭಾಯಿಸಿಕೊಳ್ಳಬಲ್ಲೆವೆಂಬ ಧೈರ್ಯ ಕೊಮಾರ್ಕ್‌ನ ಸಂಘಟಕರಲ್ಲಿ ಮೂಡಿತು.

ಕೊಮಾರ್ಕ್ ಬಗ್ಗೆ

ಹೀಗೆ ಹಲವು ವರ್ಷಗಳ ಕಾಲ ಎಲ್ಲವೂ ಒಂದು ರೀತಿಯಲ್ಲಿ ಎಲ್ಲವನ್ನೂ ವ್ಯವಸ್ಥಿತವಾಗಿ ನಿರ್ವಹಿಸುತ್ತದ್ದ ಕಾಫಿ ಬೋರ್ಡ್, ಬೆಳೆಗಾರನಿಗೆ ತನ್ನ ಉತ್ಪನ್ನದ ಮಾರಾಟದ ಬಗ್ಗೆ ಶ್ರಮವಹಿಸಬೇಕಾದ ಜವಾಬ್ದಾರಿಯೇ ಇಲ್ಲದಂತೆ  ಮಾಡಿತ್ತು. ಮಾರಾಟ ಹಣ ಪಾವತಿಯಲ್ಲಿಯೂ ಅಷ್ಟೆ ಬೆಳೆದ ಕಾಫಿಯನ್ನು ಕಾಫಿ ಬೋರ್ಡಿನ ಡಿಪೋ ಅಥವಾ ಕ್ಯೂರಿಂಗ್ ವರ್ಕ್ಸ್ ಗಳಿಗೆ ತಲುಪಿದ ತಕ್ಷಣ ಒಂದು ಪ್ರಾರಂಭಿಕ ಪಾವತಿ ಬರುತ್ತಿತ್ತು. ಇದು ಸುಮಾರಾಗಿ ಒಟ್ಟು ಮೌಲ್ಯದ ಶೇಕಡ ಅರವತ್ತರಷ್ಟು ಇರುತ್ತಿತ್ತು. ಉಳಿದ ಹಣ ಕಾಫಿ ಕ್ಯೂರಿಂಗ್ ಆದ ನಂತರ ಅವರ ಕಾಫಿಯ ಉತ್ಪನ್ನ ಮತ್ತು ವೈವಿದ್ಯಕ್ಕನುಗುಣವಾಗಿ ಪ್ರತಿ ಕಿಲೋಗ್ರಾಮಿಗೆ ಇಷ್ಟು ಪಾಯಿಂಟ್‌ಗಳೆಂದು ಅಂಕ ನೀಡಲಾಗುತ್ತಿತ್ತು. ಪ್ರತಿಯೊಬ್ಬ ಬೆಳೆಗಾರರಿಗೂ ಅವರಿಗೆ ಲಭ್ಯವಾದ ಒಟ್ಟು ಪಾಯಿಂಟ್‌ಗಳ ಆಧಾರದಲ್ಲಿ ಪ್ರತಿ ಪಾಯಿಂಟಿಗೆ ಇಷ್ಟು ರೂಪಾಯಿ ಅಥವಾ ಪೈಸೆಗಳ ಲೆಕ್ಕದಲ್ಲಿ ಹಲವು ಕಂತುಗಳಲ್ಲಿ ಹಣ ಪಾವತಿಯಾಗುತ್ತಿತ್ತು. ಎಷ್ಟೋ ಸಲ ಅಂತಾರಾಷ್ಟ್ರೀಯ ಮಾರುಕಟ್ಟೆ ಮತ್ತು ಕಾಫಿ ಮಾರಾಟವಾಗುತ್ತಿರುವ ಪ್ರಮಾಣವನ್ನಾಧರಿಸಿ ಹಣದ ಕಂತುಗಳು ಮೂರು ನಾಲ್ಕು ಐದು ವರ್ಷಗಳ ಕಾಲವೂ ಬರುತ್ತಲೇ ಇರುತ್ತಿದ್ದವು. ಒಮ್ಮೆ ಬೆಳೆಗಾರರು ಬೆಳೆದ ಕಾಫಿ ಬೆಳೆ ಕಾಫಿ ಬೋರ್ಡಿನ ವಶಕ್ಕೆ ಬಂದ ನಂತರ ಅದು ಸಂಪೂರ್ಣವಾಗಿ ಅದರ ಸ್ವತ್ತಾದ್ದರಿಂದ, ಒಂದು ಕಂತಿನಲ್ಲಿ ವಿದೇಶಕ್ಕೆ ಕಾಫಿ ಮಾರಾಟವಾಗುತ್ತಿರುವ ಪ್ರಮಾಣ ಎಷ್ಟೇ ಇರಲಿ ಅದರಿಂದ ಬಂದ ಹಣ ಬೆಳೆಗಾರರರಿಗೆ ಅವರಿಗೆ ದೊರೆತಿರುವ ಪಾಯಿಂಟಿನ ಪ್ರಕಾರ ಹಂಚಿಕೆಯಾಗುತ್ತಿತ್ತು.

ಕೊಮಾರ್ಕ ಬಗ್ಗೆ ಸುದ್ದಿಗಳು

ಸಾಮಾನ್ಯವಾಗಿ ಬೆಳೆಗಾರರು ಮೊದಲ ಕಂತಿನ ಹಣವನ್ನು ಪಡೆದು ನಂತರದ ಒಂದೆರಡು ಕಂತುಗಳನ್ನು ನಿರೀಕ್ಷಿಸಿ ಅದು ತನ್ನ ವಾರ್ಷಿಕ ಆದಾಯ ಎಂದುಕೊಳ್ಳುತ್ತಿದ್ದರು. ಅದಕ್ಕೆ ತಕ್ಕಂತೆ ಕಂತು ಕಂತಾಗಿಯೇ ಖರ್ಚು ವೆಚ್ಚಗಳನ್ನು ರೂಪಿಸಿಕೊಳ್ಳುತ್ತಿದ್ದರು. ಕೆಲವು ಸಲ ಅನಿರೀಕ್ಷಿತವಾಗಿ ಹೆಚ್ಚುವರಿ ಹಣ ಬಂದಾಗ ಅದನ್ನು ಇತರ ಬಾಬ್ತುಗಳಿಗೆ ಖರ್ಚು ಮಾಡುತ್ತಿದ್ದರು.

ಈ ವ್ಯವಸ್ಥೆ ನಿಂತು ಹೋಗಿತ್ತು. ಬೆಳೆಯನ್ನು ಮಾರಾಟ ಮಾಡಿದ ಕೂಡಲೇ ಎಲ್ಲ ಹಣ ಕೈಗೆ ಬರಲು ಪ್ರಾರಂಭವಾದದ್ದು ಒಮ್ಮೆಲೇ ಕಟ್ಟಿದ್ದ ಕೆರೆಯನ್ನು ಒಡೆದು ಹಾಕಿದಂತಾಯಿತು. ಹೊಸ ಪರಿಸ್ಥಿತಿಯಲ್ಲಿ ಆರ್ಥಿಕ ಶಿಸ್ತನ್ನು ಕೂಡಲೇ ರೂಡಿಸಕೊಳ್ಳಲಾರದೆ ಹಲವರು ನಾನಾ ರೀತಿಯಲ್ಲಿ ಖರ್ಚುಮಾಡಿ ಮುಂದಿನ ದಿನಗಳಲ್ಲಿ ಸೋತು ಹೋದರು.

  • ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)


ಕಳೆದುಹೋದ ದಿನಗಳು ಭಾಗದ ಹಿಂದಿನ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಇದನ್ನೂ ಓದಿ: ಕರ್ನಾಟಕದ ಗೃಹ ಸಚಿವರಾಗಿದ್ದ ಸಿ.ಎಂ ಪೂಣಚ್ಚರವರು ಮತ್ತು ಅವರ ಪೂರ್ಣಿಮಾ ಎಸ್ಟೇಟ್

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ಪ್ರಸಾದ್ ರಕ್ಷಿದಿ
+ posts

1 COMMENT

LEAVE A REPLY

Please enter your comment!
Please enter your name here