ಬಾಲ್ಯವಿವಾಹದಿಂದಾಗಿ ಜಾಗತಿಕವಾಗಿ ದಿನಕ್ಕೆ 60 ಕ್ಕೂ ಹೆಚ್ಚು ಬಾಲಕಿಯರು ಸಾವನ್ನಪ್ಪುತ್ತಿದ್ದಾರೆ. ಈ ಪೈಕಿ ದಕ್ಷಿಣ ಏಷ್ಯಾದಲ್ಲಿಯೇ ದಿನಕ್ಕೆ ಆರು ಹೆಣ್ಣು ಮಕ್ಕಳು ಬಲಿಯಾಗುತ್ತಿದ್ದಾರೆ ಎಂದು ಸೇವ್ ದಿ ಚಿಲ್ದ್ರನ್ ವರದಿ ಹೇಳಿದೆ. ಅಂತರಾಷ್ಟ್ರೀಯ ಹೆಣ್ಣು ಮಗುವಿನ ದಿನದಂದು ಬಿಡುಗಡೆ ಮಾಡಲಾದ ಸೇವ್ ದಿ ಚಿಲ್ದ್ರನ್ ವರದಿಯ ವಿಶ್ಲೇಷಣೆಯ ಪ್ರಕಾರ, ಬಾಲ್ಯ ವಿವಾಹಕ್ಕೆ ಒಳಗಾದ ಹೆಣ್ಣು ಮಕ್ಕಳಲ್ಲಿ ಅಂದಾಜು 22,000 ಬಾಲಕಿಯರು ಪ್ರತಿ ವರ್ಷ ಗರ್ಭಧಾರಣೆ ಮತ್ತು ಹೆರಿಗೆಯ ಸಂದರ್ಭದಲ್ಲಿ ಸಾವನ್ನಪ್ಪುತ್ತಿದ್ದಾರೆ.
ದಕ್ಷಿಣ ಏಷ್ಯಾದಲ್ಲಿ ಪ್ರತಿ ವರ್ಷ 2,000 (ಪ್ರತಿ ದಿನ ಆರು)ಬಾಲ್ಯ ವಿವಾಹ ಸಂಬಂಧಿ ಸಾವುಗಳು ಸಂಭವಿಸುತ್ತಿವೆ. ಪೂರ್ವ ಏಷ್ಯಾ ಮತ್ತು ಪೆಸಿಫಿಕ್ ಭಾಗದಲ್ಲಿ ವಾರ್ಷಿಕ 650 ಸಾವುಗಳು (ಪ್ರತಿ ದಿನ ಎರಡು), ಮತ್ತು ಲ್ಯಾಟಿನ್ ಅಮೇರಿಕನ್ ಮತ್ತು ಕೆರಿಬಿಯನ್ ಭಾಗದಲ್ಲಿ ವಾರ್ಷಿಕ 560 (ದಿನಕ್ಕೆ ಎರಡು) ಸಾವುಗಳಾಗಿವೆ ಎಂದು ವರದಿ ಹೇಳಿದೆ.
“ಬಾಲ್ಯ ವಿವಾಹವಾದವರಲ್ಲಿ ಅಂದಾಜು 22,000ಕ್ಕೂ ಹೆಚ್ಚು ಹೆಣ್ಣು ಮಕ್ಕಳು ಗರ್ಭಧಾರಣೆ ಮತ್ತು ಹೆರಿಗೆಯಿಂದ ಸಾಯುತ್ತಿದ್ದಾರೆ. ಬಾಲ್ಯವಿವಾಹವು ಒಂದು ದಿನಕ್ಕೆ 60 ಕ್ಕೂ ಹೆಚ್ಚು ಬಾಲಕಿಯರನ್ನು ಬಲಿಪಡೆಯುತ್ತಿದೆ. ಜಾಗತಿಕವಾಗಿ ಮತ್ತು ದಕ್ಷಿಣ ಏಷ್ಯಾದಲ್ಲಿ ದಿನಕ್ಕೆ 6 ಹೆಣ್ಣುಮಕ್ಕಳು ಸಾವನ್ನಪ್ಪುತ್ತಿದ್ದಾರೆ” ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಆದರೂ, ವಿಶ್ವದಲ್ಲೇ ಪಶ್ಚಿಮ ಮತ್ತು ಮಧ್ಯ ಆಫ್ರಿಕಾದಲ್ಲಿ ಅತಿಹೆಚ್ಚು ಬಾಲ್ಯವಿವಾಹಗಳು ನಡೆಯುತ್ತಿವೆ. ಜಾಗತಿಕವಾಗಿ ಅಂದಾಜು ಮಾಡಿದ ಬಾಲ್ಯವಿವಾಹ ಸಂಬಂಧಿತ ಸಾವುಗಳಲ್ಲಿ ಅರ್ಧದಷ್ಟು (9,600) ಅಥವಾ ದಿನಕ್ಕೆ 26 ಸಾವುಗಳು ಇಲ್ಲಿ ಸಂಭವಿಸುತ್ತಿವೆ. ಈ ಭಾಗದಲ್ಲಿ ಅಪ್ರಾಪ್ತ ತಾಯಂದಿರ ಮರಣ ಪ್ರಮಾಣವು ಜಗತ್ತಿನ ಎಲ್ಲೆಡೆಯಿಗಿಂತ ನಾಲ್ಕು ಪಟ್ಟು ಹೆಚ್ಚಾಗಿದೆ.
ಇದನ್ನೂ ಓದಿ: ಬೆಂಗಳೂರು: ಪೌರಕಾರ್ಮಿಕರ ಘನತೆಯ ಬದುಕು, ಗೌರವ, ವಸತಿ, ಶಿಕ್ಷಣಕ್ಕಾಗಿ 15 ದಿನಗಳ ಜಾಥಾ
“ಕಳೆದ 25 ವರ್ಷಗಳಲ್ಲಿ ಜಾಗತಿಕವಾಗಿ ಸುಮಾರು 80 ಮಿಲಿಯನ್ ಬಾಲ್ಯವಿವಾಹಗಳನ್ನು ತಡೆಗಟ್ಟಲಾಗಿತ್ತು. ಆದರೂ, ಕೋವಿಡ್ -19 ಸಾಂಕ್ರಾಮಿಕ ರೋಗಕ್ಕೆ ಮುನ್ನವೇ ಈ ಕ್ರಮಗಳು ಸ್ಥಗಿತಗೊಳ್ಳಲಾರಂಭಿಸಿದ್ದವು. ಕೊರೊನಾ ನಂತರ, ಬಾಲ್ಯವಿವಾಹ ಮತ್ತಷ್ಟು ಹೆಚ್ಚಿತು.
“ಕೊರೊನಾದಿಂದಾಗಿ ಶಾಲೆಗಳ ಮುಚ್ಚುವಿಕೆ, ಆರೋಗ್ಯ ಸೇವೆಗಳ ಕೊರತೆ ಮತ್ತು ಹೆಚ್ಚಿನ ಕುಟುಂಬಗಳು ಬಡತನಕ್ಕೆ ತಳ್ಳಲ್ಪಟ್ಟಿವೆ. ಇದರಿಂದಾಗಿ ದೀರ್ಘಾವಧಿಯ ಲಾಕ್‌ಡೌನ್‌ಗಳಲ್ಲಿ ಮಹಿಳೆಯರು ಮತ್ತು ಬಾಲಕಿಯರು ಹಿಂಸೆಯ ಅಪಾಯವನ್ನು ಎದುರಿಸುತ್ತಾರೆ. 2030ರ ವೇಳೆಗೆ ಜಾಗತಿಕವಾಗಿ ಇನ್ನೂ 10 ಮಿಲಿಯನ್ ಬಾಲಕಿಯರು ಬಾಲ್ಯ ವಿವಾಹವಾಗುವ ನಿರೀಕ್ಷೆಯಿದೆ. ಇದರಿಂದಾಗಿ ಹೆಚ್ಚಿನ ಬಾಲಕಿಯರು ಸಾವನ್ನಪ್ಪುವ ಅಪಾಯದಲ್ಲಿದ್ದಾರೆ” ಎಂದು ವರದಿ ಹೇಳಿದೆ.
ಬಾಲ್ಯ ವಿವಾಹವು ಲೈಂಗಿಕ ಮತ್ತು ಲಿಂಗ ಆಧಾರಿತ ದೌರ್ಜನ್ಯದ ಅತ್ಯಂತ ಕೆಟ್ಟ ಮತ್ತು ಮಾರಕ ರೂಪವಾಗಿದೆ ಎಂದು ಸೇವ್ ದಿ ಚಿಲ್ಡ್ರನ್ ಇಂಟರ್‌ನ್ಯಾಷನಲ್‌ನ ಸಿಇಒ ಇಂಗರ್ ಅಶಿಂಗ್ ಹೇಳಿದ್ದಾರೆ.
ಪ್ರತಿ ವರ್ಷ, ಲಕ್ಷಾಂತರ ಹೆಣ್ಣು ಮಕ್ಕಳು ಹೆಚ್ಚಾಗಿ ವಯಸ್ಸಾದ ಪುರುಷರೊಂದಿಗೆ ವಿವಾಹವಾಗಲು ಒತ್ತಾಯಿಸಲ್ಪಡುತ್ತಾರೆ. ಹೀಗಾಗಿ ಕಲಿಯಲು, ಮಕ್ಕಳಾಗಲು ಮತ್ತು ಅನೇಕ ಸಂದರ್ಭಗಳಲ್ಲಿ ಬದುಕಲು ಅವರು ಅವಕಾಶವನ್ನು ಕಸಿದುಕೊಳ್ಳುತ್ತಾರೆ.
ಇದನ್ನೂ ಓದಿ: ಚರಂಡಿ ಕ್ಲೀನ್ ಮಾಡುವವರ ಪಾತ್ರ ಮಾಡಬೇಕು, ಸಮಾಜದಲ್ಲಿ ಕ್ಲೀನ್ ಮಾಡುವುದು ಬಹಳಷ್ಟಿದೆ: ನಟ ಶಿವರಾಜ್ ಕುಮಾರ್
“ಅಪ್ರಾಪ್ತ ಬಾಲಕಿಯರು ಮಕ್ಕಳನ್ನು ಹೆರುವುದೇ ಅವರ ಸಾವಿಗೆ ಕಾರಣವಾಗಿದೆ. ಏಕೆಂದರೆ ಅವರ ಎಳೆಯ ದೇಹಗಳು ಮಕ್ಕಳನ್ನು ಹೊಂದುವುದಕ್ಕೆ ಸಿದ್ಧವಾಗಿರುವುದಿಲ್ಲ. ಮಕ್ಕಳನ್ನು ಹೊಂದುವ ಬಾಲಕಿಯರ ಮೇಲಾಗುವ ಆರೋಗ್ಯದ ಅಪಾಯಗಳನ್ನು ನಿರ್ಲಕ್ಷಿಸಬಾರದು” ಎಂದು ಹೇಳಿದ್ದಾರೆ.
ಸರ್ಕಾರಗಳು ಹೆಣ್ಣು ಮಕ್ಕಳಿಗೆ ಆದ್ಯತೆ ನೀಡಬೇಕು. ಅವರನ್ನು ಬಾಲ್ಯ ವಿವಾಹ ಮತ್ತು ಅಕಾಲಿಕ ಹೆರಿಗೆ ಸಂಬಂಧಿತ ಸಾವುಗಳಿಂದ ರಕ್ಷಿಸಬೇಕು ಎಂದು ಅಶಿಂಗ್ ಹೇಳಿದ್ದಾರೆ.
ಬಾಲ್ಯ ವಿವಾಹದ ಇತಿಹಾಸವನ್ನು ನೋಡಿದರೆ, ಇದು ನಮ್ಮ ಸಾಮೂಹಿಕ ವೈಫಲ್ಯವನ್ನು ತೋರಿಸುತ್ತದೆ. ಇದು ಈ ಶತಮಾನದಲ್ಲಿಯೂ ಮಾನವೀಯತೆಗೆ ವಿರುದ್ದವಾಗಿದೆ. ಮಕ್ಕಳ ಬಾಲ್ಯವನ್ನು ಕಸಿದುಕೊಳ್ಳುವುದು. ಅವರ ಕಲಿಕೆಯ ಮೂಲಭೂತ ಹಕ್ಕನ್ನು ಮತ್ತು ಸಂತೋಷ ಹಾಗೂ ನಿರಾತಂಕದ ಬಾಲ್ಯವನ್ನು ಆನಂದಿಸುವುದನ್ನು ಕಿತ್ತುಕೊಳ್ಳುವುದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಇದನ್ನು ನಾವು ಖಂಡಿಸಬೇಕಿದೆ ಎಂದು ಸೇವ್ ದಿ ಚಿಲ್ಡ್ರನ್, ಇಂಡಿಯಾದ ಸಿಇಒ ಸುದರ್ಶನ್ ಹೇಳಿದ್ದಾರೆ.
ವಿವಿಧ ರೀತಿಯ ಅಸಮಾನತೆ ಮತ್ತು ತಾರತಮ್ಯ (ಲಿಂಗ, ಜನಾಂಗ, ಅಂಗವೈಕಲ್ಯ, ಆರ್ಥಿಕ ಹಿನ್ನೆಲೆ) ಸೇರಿದಂತೆ ಎಲ್ಲ ಹೆಣ್ಣು ಮಕ್ಕಳಿಗೂ ಅವರ ಹಕ್ಕುಗಳನ್ನು ಸರ್ಕಾರಗಳು ಖಾತರಿಪಡಿಸಬೇಕು ಎಂದು ಸಂಘಟನೆ ಒತ್ತಾಯಿಸಿದೆ.
ಕೃಪೆ: ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್
ಕನ್ನಡಕ್ಕೆ: ಸೋಮಶೇಖರ್ ಚಲ್ಯ
ಇದನ್ನೂ ಓದಿ: ಅಸೂಕ್ಷ್ಮ, ಪ್ರೊಪಗಂಡಾ ಮತ್ತು ಕ್ರಿಮಿನಲ್‌ಗಳಿಗೆ ಮಾರ್ಗದರ್ಶಿಯಂತಿರುವ ಕ್ರೈಮ್ ಸ್ಟೋರೀಸ್ ಇಂಡಿಯಾ ಡಿಟೆಕ್ಟಿವ್ಸ್


