ಲಖಿಂಪುರ್ ಖೇರಿ ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಂಗಳವಾರ ಮತ್ತೊಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ರೈತರ ಮೇಲೆ ಹರಿದ ಬೆಂಗಾವಲು ವಾಹನವನ್ನು ಚಲಾಯಿಸುತ್ತಿದ್ದ ಆರೋಪಿಗಳಲ್ಲಿ ಒಬ್ಬ ಎನ್ನಲಾಗಿದೆ.
ಅಕ್ಟೋಬರ್ 3 ರಂದು ಪ್ರತಿಭಟನೆ ಮುಗಿಸಿ ಶಾಂತಿಯುತವಾಗಿ ವಾಪಸ್ ತೆರಳುತ್ತಿದ್ದ ರೈತರ ಮೇಲೆ ಕೇಂದ್ರ ಸಚಿವ ಅಜಯ್ ಮಿಶ್ರಾ ಮಗ ಆಶಿಶ್ ಮಿಶ್ರಾ ಮತ್ತು ಆತನ ಬೆಂಗಾವಲು ಹರಿದು ನಾಲ್ವರು ರೈತರು ಮೃತಪಟ್ಟಿದ್ದರು. ನಂತರ ನಡೆದ ಹಿಂಸಾಚಾರದಲ್ಲಿ ಮತ್ತೆ ನಾಲ್ವರು ಸಾವನ್ನಪ್ಪಿದ್ದರು. ಈ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಮಂಗಳವಾರ ಮತ್ತೊಬ್ಬ ಆರೋಪಿಯನ್ನು ಬಂಧಿಸಿದೆ. ಆರೋಪಿಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ಬಂಧಿತ ಆರೋಪಿ ಶೇಖರ್ ಭಾರತಿ, ಅಕ್ಟೋಬರ್ 3 ರಂದು ಪ್ರತಿಭಟನಾ ನಿರತ ರೈತರ ಮೇಲೆ ದಾಳಿ ಮಾಡಿದ ಮೂರು ಎಸ್ಯುವಿಗಳಲ್ಲಿ ಒಂದನ್ನು ಓಡಿಸುತ್ತಿದ್ದ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಆತ ಕೇಂದ್ರ ಸಚಿವ ಅಜಯ್ ಕುಮಾರ್ ಮಿಶ್ರಾ ಅವರ ಮಗ ಆಶಿಶ್ ಮಿಶ್ರಾ ಅವರ ಆಪ್ತ ಸಹಾಯಕ ಅಂಕಿತ್ ದಾಸ್ ಒಡೆತನದ ಕಪ್ಪು ಫಾರ್ಚುನರ್ ಅನ್ನು ಚಾಲನೆ ಮಾಡುತ್ತಿದ್ದರು ಎಂದು ವರದಿಯಾಗಿದೆ.
ಇದನ್ನೂ ಓದಿ: ರೈತ ಹುತಾತ್ಮ ದಿನ ಆಚರಣೆ: ಬೆಂಗಳೂರಿನಲ್ಲಿ ಅನ್ನದಾತರ ಮಕ್ಕಳಿಂದ ಶ್ರದ್ಧಾಂಜಲಿ
ಈ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ನಾಲ್ಕನೇ ವ್ಯಕ್ತಿ ಶೇಖರ್ ಭಾರತಿ. ಈ ಹಿಂದೆ, ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಸಚಿವರ ಮಗ ಆಶಿಶ್ ಮಿಶ್ರಾ, ಲುವಕುಶ್ ಮತ್ತು ಆಶಿಶ್ ಪಾಂಡೆ ಎಂಬುವರನ್ನು ಬಂಧಿಸಿದ್ದಾರೆ.
ಇನ್ನೊಂದು ಬೆಳವಣಿಗೆಯಲ್ಲಿ, ಅಂಕಿತ್ ದಾಸ್ ಮತ್ತು ಲತೀಫ್ ಇಬ್ಬರ ಮುಖ್ಯ ನ್ಯಾಯಾಧೀಶರ ನ್ಯಾಯಾಲಯದಲ್ಲಿ ಶರಣಾಗತಿಗಾಗಿ ಅರ್ಜಿಯನ್ನು ಸಲ್ಲಿಸಿದ್ದಾರೆ. ಅಂಕಿತ್ ದಾಸ್ ದಿವಂಗತ ಮಾಜಿ ಸಚಿವ ಅಖಿಲೇಶ್ ದಾಸ್ ಅವರ ಸೋದರಳಿಯ.
ಹತ್ಯಾಕಾಂಡದ ಪ್ರಮುಖ ಆರೋಪಿಯಾಗಿರುವ ಆಶಿಶ್ ಮಿಶ್ರಾರನ್ನು ಘಟನೆ ನಡೆದು 5 ದಿನಗಳ ಬಳಿಕ ಲಖಿಂಪುರ್ ಖೇರಿಯಲ್ಲಿ 12 ಗಂಟೆಗಳ ಕಾಲ ವಿಚಾರಣೆ ನಡೆಸಿದ ನಂತರ , “ಆತ ಸರಿಯಾಗಿ ಪ್ರತಿಕ್ರಿಯಿಸುತ್ತಿಲ್ಲ, ವಿಚಾರಣೆಗೆ ಸಹಕರಿಸುತ್ತಿಲ್ಲ” ಎಂದು ಹೇಳಿ ಬಂಧಿಸಿದ್ದರು. ಬಳಿಕ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿತ್ತು. ಅಲ್ಲಿಂದ ಉತ್ತರ ಪ್ರದೇಶದ ನ್ಯಾಯಾಲಯ ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಅ.11 ರಂದು ಆದೇಶಿಸಿದೆ.
ಇದನ್ನೂ ಓದಿ: ಲಖಿಂಪುರ್ ಹತ್ಯಾಕಾಂಡದ ಹುತಾತ್ಮ ರೈತರಿಗೆ ಅಂತಿಮ ನಮನ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಭಾಗಿ


