ಕಾಫಿ ಉದ್ಯಮದಲ್ಲಿ ಎಂದು ಮರೆಯಲಾಗದ ಇನ್ನೊಂದು ಹೆಸರು ಸಿದ್ಧಾರ್ಥ ಹೆಗಡೆಯವರದು. ಬಹುಶಃ ಇಂದು ಭಾರತದ ಯುವಪೀಳಿಗೆಯಲ್ಲಿ ಅವರ ಹೆಸರನ್ನು ಕೇಳದವರೇ ಇಲ್ಲವೆನ್ನಬಹುದು. ಯಾಕೆಂದರೆ ಯುವಕರ ನೆಚ್ಚಿನ ಮತ್ತು ಮೆಚ್ಚಿನ ತಾಣಗಳಾಗಿದ್ದ ಕೆಫೇ ಕಾಫಿ ಡೇ ಗಳು.
ಸಿದ್ಧಾರ್ಥ ಒಬ್ಬ ದೊಡ್ಡ ಕನಸುಗಾರ. ಅವರು ಮಲೆನಾಡಿಗ. ಕಾಫಿ ಅವರ ಬದುಕಾಗಿತ್ತು, ಕಾಫಿ ಅವರ ಕನಸಾಗಿತ್ತು. ಕಾಫಿ ಕೃಷಿಯಿಂದ ಕಾಫಿ ಉದ್ಯಮಕ್ಕಿಳಿದು ಹೊಸತೊಂದು ಸಾಧನೆಯ ಸಾಮ್ರಾಜ್ಯ ಕಟ್ಟುವುದರೊಂದಿಗೆ ಸಾವಿರಾರು ಯುವಕರಿಗೆ ಉದ್ಯೋಗ ನೀಡಿದವರು. ಮಲೆನಾಡಿನ ರಸ್ತೆಬದಿಯ ಕಟ್ಟೆಗಳಲ್ಲಿ, ಟೀ ಅಂಗಡಿಯಲ್ಲಿ, ಇತರ ಸಣ್ಣ ಪುಟ್ಟ ಸ್ಥಳಗಳಲ್ಲಿ ಹಾಳು ಹರಟೆಗಳಲ್ಲಿ ಕಾಲ ಕಳೆಯುತ್ತಿದ್ದ ಯುವಕರನ್ನು ದುಡಿಮೆಗೆ ಹಚ್ಚುವುದಷ್ಟೇ ಅಲ್ಲ ಗೌರವಯುತವಾದ ಸಂಬಳ, ಸಂಭಾವನೆಯನ್ನೂ ಕಲ್ಪಿಸಿಕೊಟ್ಟವರು. 2019 ರಲ್ಲಿ ಈ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದವರ ಸಂಖ್ಯೆ 20,000 ಕ್ಕೂ ಹೆಚ್ಚಿತ್ತು.

ಶ್ರೀಮಂತ ಕುಟುಂಬದಲ್ಲಿ ಹುಟ್ಟಿದ ಸಿದ್ದಾರ್ಥರಿಗೆ ಹಿರಿಯರಿಂದ ಬಂದ ದೊಡ್ಡ ಕಾಫಿ ಪ್ಲಾಂಟೇಷನ್ ಇತ್ತು. 1992 ರಲ್ಲಿ ಅವರು ಅಮಾಲ್ಗಮೇಟೆಡ್ ಬೀನ್ ಕಾಫಿ ಎಂಬ ಕಾಫಿ ವಾಣಿಜ್ಯ ಸಂಸ್ಥೆಯನ್ನು ಸ್ಥಾಪಿಸಿದ ನಂತರ ಅವರ ಕಾಫಿ ಪ್ಲಾಂಟೇಷನ್ ಗಳೂ ವಿಸ್ತಾರವಾದವು. 1995-96 ರಲ್ಲಿ ಪ್ರಾರಂಭವಾದ ಕೆಫೆ ಕಾಫಿ ಡೇ, ಕಾಫಿ ಚಿಲ್ಲರೆ ಮಾರಾಟ ಕೇಂದ್ರಗಳು. ಅತಿ ಬೇಗ ಭಾರತ ಮಾತ್ರವಲ್ಲ ವಿದೇಶಗಳಲ್ಲಿಯೂ ಪ್ರಸಿದ್ಧವಾದವು. ಕೆಫೆ ಕಾಫಿ ಡೇ ಯಂತೂ ಇತರ ದೊಡ್ಡ ಕಾಫಿ ಕಂಪನಿಗಳಿಗೂ ಸಾದ್ಯವಾಗದಷ್ಟು ಬೆಳೆಯಿತು. ಕೇವಲ ಎರಡು ದಶಕಗಳಲ್ಲಿ 1700 ಕೆಫೆ ಕಾಫಿ ಡೇ ಕೇಂದ್ರಗಳು ಮತ್ತು ಸುಮಾರು 50,000 ದಷ್ಟು ಚಿಲ್ಲರೆ ಮಾರಾಟ ಯಂತ್ರ ಕೇಂದ್ರಗಳು ಸ್ಥಾಪನೆಯಾದದ್ದು ಸಣ್ಣ ಸಾಧನೆಯಲ್ಲ. ಇಂದು ಭಾರತದ ಆಂತರಿಕ ಮಾರುಕಟ್ಟೆ ಸಾಕಷ್ಟು ವೃದ್ಧಿಯಾಗಿದ್ದರೆ ಅದರಲ್ಲಿ ಸಿದ್ಧಾರ್ಥರ ಕೊಡುಗೆಯೂ ದೊಡ್ಡದು.

A lot can happen over a cup of coffee ಎನ್ನುವ ಕೆಫೆ ಕಾಫಿ ಡೇ ಘೋಷಣೆಯೇ ಯುವ ಪೀಳಿಗೆಯನ್ನು ಆಕರ್ಷಿಸಿತ್ತು.
ನಗರಗಳ ಸಾವಿರಾರು ಯುವ ಉದ್ಯೋಗಿಗಳಿಗೆ ಕಾಫಿ ಡೇ ನಿತ್ಯದ ಮೆಚ್ಚಿನ ತಾಣವಾಯಿತು.
ನಾವು ಈ ಸಂದರ್ಭದಲ್ಲಿ ಒಂದು ವಿಚಾರವನ್ನು ಮತ್ತೆ ನೆನಪಿಸಿಕೊಳ್ಳಬೇಕು. ಇದೇ ರೀತಿಯ ಒಂದು ಸಾಹಸವನ್ನು ಸುಮಾರು ಒಂದು ಶತಮಾನದ ಹಿಂದೆಯೇ ಒಬ್ಬರು ಮಹಿಳೆ ಮಾಡಿದ್ದರು. ಅವರೂ ಒಬ್ಬ ಕಾಫಿ ಬೆಳೆಗಾರರರು. ಅವರ ಬಗ್ಗೆ ಹಿಂದೆಯೇ ಉಲ್ಲೇಖವನ್ನು ಮಾಡಿದ್ದೇನೆ.
ಅವರು ಭಾರತದ ಪ್ರಥಮ ಮಹಿಳಾ ಉದ್ಯಮಿಯೆನಿಸಿದ ಕೊಡಗಿನ ಸಾಕಮ್ಮ 1920 ರಲ್ಲಿ ಅವರು ಬೆಂಗಳೂರಿನಲ್ಲಿ “ಸಾಕಮ್ಮಾಸ್ ಕಾಫಿ” ಎಂಬ ಕಾಫಿ ಪುಡಿ ಉದ್ಯಮವನ್ನು ಸ್ಥಾಪಿಸಿದ್ದರು. ಅವರೂ ಕೂಡ ಹಲವಾರು ಊರುಗಳಿಗೆ ತಮ್ಮ ಕಾಫಿ ಪುಡಿ ಉದ್ಯಮವನ್ನು ವಿಸ್ತರಿಸಿದ್ದರು.
ಸಿದ್ದಾರ್ಥರ ಕಾಫಿ ಸಂಬಂಧಿತ ಉದ್ಯಮಗಳು ಕೊಮಾರ್ಕ್ ನ ಹುಟ್ಟಿನ ಜೊತೆ ಜೊತೆಯಾಗಿಯೇ ಸಾಗಿದ್ದವು. ಕೊಮಾರ್ಕ್ ನ ಸಂಘಟನೆಯ ಸಮಯದಲ್ಲಿಯೇ ಸಿದ್ಧಾರ್ಥ ಅವರೊಮ್ಮೆ ಭಾರತದ ಕಾಫಿಯ ಸ್ಥಿತಿ -ಗತಿಗಳ ಬಗ್ಗೆ ಹೇಳಿದ್ದರು. ಆ ಸಂದರ್ಭದಲ್ಲೇ, ಕಾಫಿ ವ್ಯವಹಾರಗಳೆಲ್ಲವೂ ವಿದೇಶಗಳ ಹಿಡಿತದಲ್ಲಿರುವ ದೊಡ್ಡ ಉದ್ಯಮ. ಅದರ ಜೊತೆ ಭಾರತದ ಸಹಕಾರಿ ವಲಯದ ಸಂಸ್ಥೆಯೊಂದು ಸ್ಪರ್ಧಿಸಬೇಕಾದರೆ ಇರುವ ಕಷ್ಟ ಮತ್ತು ಸಮಸ್ಯೆಗಳ ಬಗ್ಗೆಯೂ ಹೇಳಿದ್ದರು.
ಇವುಗಳೇನೇ ಇರಲಿ ಕೆಲಕಾಲ ಇವೆರಡೂ ಸಂಸ್ಥೆಗಳು ಸಮಾನಾಂತರವಾಗಿ ಕೆಲಸ ಮಾಡುತ್ತ ಬೆಳೆಗಾರರರಿಗೆ ಒಂದು ರೀತಿಯ ಮಾರುಕಟ್ಟೆಯ ಸ್ಥಿರತೆಯನ್ನೂ ಜೊತೆಯಲ್ಲಿ ಆರ್ಥಿಕ ಸ್ಥೈರ್ಯವನ್ನೂ ನೀಡಿದ್ದವು.
ಸಾವಿರಾರು ಕೋಟಿಗಳ ಬೃಹತ್ ಉದ್ಯಮಿಯಾಗಿದ್ದ ಸಿದ್ದಾರ್ಥ ಅಷ್ಟೇ ಸರಳ ವ್ಯಕ್ತಿಯೂ ಆಗಿದ್ದರು. ನಮ್ಮೂರಿನ ಸುತ್ತಮತ್ತ ಅವರ ಹಲವಾರು ತೋಟಗಳಿದ್ದವು. ಅನೇಕ ಸಾರ್ವಜನಿಕ ಕಾರ್ಯಗಳಿಗೆ ಅವರು ನಿರಂತರವಾಗಿ ಸಹಾಯ ಮಾಡಿದ್ದಾರೆ.
ಕುಪ್ಪಳಿಯಲ್ಲಿನ ಕವಿಶೈಲದ ಕುವೆಂಪು ಮತ್ತು ತೇಜಸ್ವಿ ಸ್ಮಾರಕಗಳ ನಿರ್ಮಾಣದಲ್ಲಿ ಲಕ್ಷಾಂತರ ರೂಗಳ ಕೊಡುಗೆ ಮಾತ್ರವಲ್ಲ ಇತರ ಸಹಾಯಗಳನ್ನೂ ಮಾಡಿದ್ದಾರೆ. ಸಿದ್ದಾರ್ಥರ ಬೆಂಬಲವಿಲ್ಲದಿದ್ದರೆ ಕಲಾವಿದ ಕೆ.ಟಿ.ಶಿವಪ್ರಸಾದರ ಅದ್ಭುತ ಶಿಲ್ಪ ಕಲಾ ನಿರ್ಮಾಣಗಳು ಸಾಧ್ಯವಾಗುತ್ತಿರಲಿಲ್ಲ ಎನಿಸುತ್ತದೆ.


ನಾವು ಹಾನುಬಾಳಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಾಡಿದಾಗಲೂ ಅಷ್ಟೇ “ಗುಡ್ ಕಾಫಿ ನೆಲದಲ್ಲಿ ಇವೆಲ್ಲ ಆಗಬೇಕು ಕಣ್ರಿ” ಎಂದು ಹೇಳಿ ಹಣ ಸಹಾಯ ಮಾಡಿದ್ದರು.
ಇಷ್ಟು ವರ್ಷಗಳ ನಂತರ ನಾನಿದನ್ನು ಬರೆಯುತ್ತಿರುವ ವೇಳೆಗೆ, ಸಿದ್ದಾರ್ಥರು ಇಲ್ಲ. ಅವರು ಕಟ್ಟಿದ ಸಂಸ್ಥೆಗಳನ್ನು ಉಳಿಸಿಕೊಳ್ಳುವ ಹೋರಾಟವನ್ನು ಅವರ ಕುಟುಂಬದವರು ನಡೆಸುತ್ತಿದ್ದಾರೆ.

ಕೊಮಾರ್ಕ್ ಸಂಸ್ಥೆಯೂ ನಾಮಾವಶೇಷ ಸ್ಥಿತಿಯಲ್ಲಿದೆ. (ಅದನ್ನು ಮುಂದೆ ಬರೆಯುತ್ತೇನೆ).
ಸಿದ್ಧಾರ್ಥರ ದುರಂತದಲ್ಲಿ ಮುಕ್ತಾಯವಾದ ಬದುಕನ್ನು ನೋಡಿದಾಗ ಗಿರೀಶ್ ಕಾರ್ನಾಡರ ನಾಟಕದ ಸಾಲುಗಳು ನೆನಪಿಗೆ ಬರುತ್ತವೆ. ಅವರ ತುಘಲಕ್ ನಾಟಕದ ತುಘಲಕ್ ಪಾತ್ರದ ಮಾತುಗಳಿವು.
“ಬೆಳಕಿಲ್ಲದ ಹಾದಿಯಲ್ಲಿ ನಡೆಯಬಹುದು, ಆದರೆ ಕನಸುಗಳಿಲ್ಲದ ಹಾದಿಯಲ್ಲಿ ನಡೆಯುವುದು ಹೇಗೆ ?”
ಚರಿತ್ರೆಯ ತುಘಲಕ್ ಹುಚ್ಚು ದೊರೆಯೆಂದು ಖ್ಯಾತನಾದವ, ಕಾರ್ನಾಡರ ತುಘಲಕ್ ಕನಸುಗಾರ, ತನ್ನ ಕಾಲವನ್ನು ಮೀರಿ ಮುಂದೋಡಿದವ. ಅಪಾರ ಬುದ್ಧಿವಂತ. ಜಾಗತೀಕರಣದ ಚಿಮ್ಮು ಹಲಗೆಯನ್ನೇರಿ ದಿಗಂತಕ್ಕೆ ಜಿಗಿದ ಸಿದ್ಧಾರ್ಥ ಅದೇ ಜಾಗತೀಕರಣದ ಮಾರಿಸುಳಿಗೆ ಬಲಿಯಾದರೇ? ಸಿದ್ಧಾರ್ಥರ ತಪ್ಪು ಸರಿಗಳೇನೇ ಇರಲಿ. ಅವರು ದುರಂತವಪ್ಪಿರಲಿ… ಕಾಫಿ ಬೆಳೆಗಾರರು ಅಂದಿಗೂ ಇಂದಿಗೂ ಸಿದ್ಧಾರ್ಥ ತಮ್ಮವನೆಂದು ಎದೆಯಲ್ಲಿಟ್ಟುಕೊಂಡಿದ್ದಾರೆ… ಅಲ್ಲಿ ಸಿದ್ಧಾರ್ಥ ಚಿರಸ್ಥಾಯಿ.
ಕೊಮಾರ್ಕ್ ನ ವ್ಯವಹಾರಗಳು ಚೆನ್ನಾಗಿ ನಡೆದು ಮೊದಲಿನ ಎರಡು ವರ್ಷಗಳಲ್ಲಿ ಕೋಟ್ಯಂತರ ಲಾಭ ಗಳಿಸಿತ್ತು. ಭಾರತೀಯ ಕಾಫಿ ಮಾರುಕಟ್ಟೆಯ ಮುಂದಾಳುವಾಗಿ ಕೊಮಾರ್ಕ ಸಂಸ್ಥೆ ಹೊರಹೊಮ್ಮಿತ್ತು.
ಕೊಮಾರ್ಕ್ ನ ನಿರ್ದೇಶಕರುಗಳಲ್ಲಿ ಈಗ ಸಂಸ್ಥೆ ಹೊಸ ಹೊಸ ವಿಸ್ತರಣೆಗೆ ಸಂದರ್ಭ ಬಂದಿದೆ ಅನ್ನಿಸತೊಡಗಿತ್ತು. ಅದರ ಮೊದಲ ಹೆಜ್ಜೆಯಾಗಿ ಅಮುಲ್ ಸಂಸ್ಥೆಯೊಡನೆ ಒಪ್ಪಂದ ಮಾಡಿಕೊಂಡು ಅದರ ಮೂಲಕ ಕಾಫಿ ಪುಡಿ ಮಾರಾಟವನ್ನು ಪ್ರಾರಂಭಿಸುವ ಉದ್ದೇಶವಿತ್ತು. ಅಮುಲ್ ಕೂಡಾ ಒಂದು ಸಹಕಾರಿ ಸಂಸ್ಥೆಯಾದದ್ದರಿಂದ ಇದು ಸರಿಯಾದ ಕ್ರಮವೂ ಆಗಿತ್ತು. ಆ ಸಮಯದಲ್ಲೇ ಅಮುಲ್ ಸಂಸ್ಥೆಗೆ ದೇಶಾದ್ಯಂತ ಒಂದು ಲಕ್ಷದಷ್ಟು ಮಾರಾಟ ಮಳಿಗೆಗಳಿದ್ದವು. ಇದು ಯಶಸ್ವಿಯಾದರೆ ದೇಶದ ಆಂತರಿಕ ಮಾರುಕಟ್ಟೆ ದೊಡ್ಡ ಪ್ರಮಾಣದಲ್ಲಿ ವಿಸ್ತರಿಸುವ ಸಾಧ್ಯತೆ ಇತ್ತು. ಇದಕ್ಕೆ ಪೂರಕವಾಗಿ ಕೊಮಾರ್ಕ್ ಸಂಸ್ಥೆಯೇ ಒಂದು ಇನ್ಸ್ಟಂಟ್ ಕಾಫಿ ಪುಡಿ ಉದ್ಯಮವನ್ನೂ ಸ್ಥಾಪಿಸಲು ತೊಡಗುವುದೆಂದೂ ತೀರ್ಮಾನಿಸಿ ಆ ನಿಟ್ಟಿನಲ್ಲಿಯೂ ಪ್ರಯತ್ನಗಳು ಪ್ರಾರಂಭವಾದವು.
ಕೊಮಾರ್ಕ್ ನ ನಿರ್ದೇಶಕರುಗಳಾದ ಎನ್.ಎಂ.ಶಿವಪ್ರಸಾದ್, ಪ್ರದೀಪ್ ಕೆಂಜಿಗೆ, ನಂದೀಶ್ ಬಾಳ್ಳು ಮುಂತಾದವರಲ್ಲದೆ ಕಾಫಿ ಮಂಡಳಿಯ ಸದಸ್ಯರಾಗಿದ್ದು ಕೊಮಾರ್ಕ ಸಂಸ್ಥೆಗೆ ಸಲಹೆಗಾರರೂ ಆಗಿದ್ದ ಬಾಳ್ಳು ಜಗನ್ನಾಥ್ ಇವರೆಲ್ಲರೂ ರವೀಂದ್ರನಾಥರ ಜೊತೆಗೂಡಿ ಈ ವಿಚಾರದಲ್ಲಿ ಗುಜರಾತ್, ದೆಹಲಿ, ಹೈದರಾಬಾದ್ ಮುಂತಾದ ಕಡೆಗಳಿಗೆ ಹಲವು ಸಲ ಹೋಗಿ ಸರ್ವ ಸಿದ್ಧತೆ ನಡೆಸಿದರು. ಆದರೆ ಇವರೆಲ್ಲರಿಗೂ ಅನಿರೀಕ್ಷಿತವಾದ ಆದರೆ ಎಲ್ಲರನ್ನೂ ಬೆಚ್ಚಿಬೇಳಿಸುವಂತಹ ವಿದ್ಯಮಾನಗಳು ಕೋಮಾರ್ಕ್ ಸಂಸ್ಥೆಯಲ್ಲಿ ನಡೆದು ಹೋಗಿದ್ದವು.
- ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)
ಕಳೆದುಹೋದ ದಿನಗಳು ಹಿಂದಿನ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕಳೆದುಹೋದ ದಿನಗಳು 33 – ಬರವಣಿಗೆಯ ಹಿನ್ನೆಲೆ : ಪ್ರಸಾದ್ ರಕ್ಷಿದಿ



Soddarth was never born with Golden spoon.He owned only 90 acres of plantation.By the turn of d century the empire was expanded – courtesy then CM of Karnataka.