ಸತತವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗುತ್ತಿರುವ ಕುರಿತು ಒಕ್ಕೂಟ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಮೋದಿ ಸರ್ಕಾರ ಜನರಿಗೆ ತೊಂದರೆ ನೀಡುವಲ್ಲಿ ದಾಖಲೆ ಸೃಷ್ಟಿಸಿದೆ ಎಂದು ಆರೋಪಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಮಾಧ್ಯಮ ವರದಿಯನ್ನು ಟ್ಯಾಗ್ ಮಾಡಿದ್ದಾರೆ. ವರದಿಯಲ್ಲಿ ಈ ವರ್ಷ ಪೆಟ್ರೋಲ್ ಬೆಲೆ ದಾಖಲೆಯ 23.53 ರೂ.ಗಳಷ್ಟು ಹೆಚ್ಚಾಗಿದೆ ಎಂದು ಹೇಳಲಾಗಿದೆ.
“ಸಾರ್ವಜನಿಕರಿಗೆ ತೊಂದರೆ ನೀಡುವಲ್ಲಿ ಮೋದಿಯವರ ಸರ್ಕಾರವು ದೊಡ್ಡ ದಾಖಲೆಗಳನ್ನು ಸೃಷ್ಟಿಸಿದೆ. ಮೋದಿ ಸರ್ಕಾರದಲ್ಲಿ ಅತಿ ಹೆಚ್ಚು ನಿರುದ್ಯೋಗ ಸೃಷ್ಟಿಯಾಗಿದೆ. ಸರ್ಕಾರಿ ಆಸ್ತಿಗಳನ್ನು ಮಾರಾಟ ಮಾಡಲಾಗುತ್ತಿದೆ. ಒಂದು ವರ್ಷದಲ್ಲಿ ಅತ್ಯಧಿಕವಾಗಿ ಪೆಟ್ರೋಲ್ ದರಗಳು ಹೆಚ್ಚಾಗಿವೆ” ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಪ್ರಿಯಾಂಕ ಗಾಂಧಿ ಜೊತೆ ಸೆಲ್ಫಿ ಕ್ಲಿಕ್ಕಿಸಿದ ಮಹಿಳಾ ಪೊಲೀಸರ ವಿರುದ್ದ ತನಿಖೆಗೆ ಆದೇಶ
मोदी जी की सरकार ने जनता को कष्ट देने के मामले में बड़े-बड़े रिकॉर्ड बनाए हैं
सबसे ज्यादा बेरोजगारी: मोदी सरकार में
सरकारी संपत्तियां बिक रहीं: मोदी सरकार में
पेट्रोल के रेट एक साल में सबसे ज्यादा बढ़े: मोदी सरकार में pic.twitter.com/pL2369ujn2
— Priyanka Gandhi Vadra (@priyankagandhi) October 24, 2021
ಇದೇ ವರದಿಯನ್ನು ಟ್ವೀಟ್ ಮಾಡಿರುವ ಕಾಂಗ್ರೆಸ್ ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲಾ, ಇದೇ “ಅಚ್ಛೇ ದಿನ್” (ಒಳ್ಳೆಯ ದಿನಗಳು) ಎಂದು ಒಕ್ಕೂಟ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಸತತ ಐದನೇ ದಿನವೂ ದೇಶಾದ್ಯಂತ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯು ಏರಿಕೆಯಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 107.59 ರೂಪಾಯಿಗೆ ಏರಿದೆ. ಡೀಸೆಲ್ ಬೆಲೆ ಲೀಟರ್‌ಗೆ 96.32 ರೂಪಾಯಿಯಷ್ಟಿದೆ. ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕ್ರಮವಾಗಿ 113.12 ಮತ್ತು 104 ರೂಪಾಯಿಯಿದೆ.
ಇಂಧನ ಬೆಲೆ ಏರಿಕೆಯನ್ನು ವಿರೋಧಿಸಿ ಕಾಂಗ್ರೆಸ್ ದೇಶಾದ್ಯಂತ 15 ದಿನಗಳ ಬೃಹತ್ ಪ್ರತಿಭಟನೆಗೆ ಕರೆ ನೀಡಿದೆ. ನವೆಂಬರ್ 14 ರಿಂದ 15 ದಿನಗಳು ನಿರಂತವಾಗಿ ಪ್ರತಿಭಟನೆ ನಡೆಸಲಾಗುವುದು ಎಂದು ಕಾಂಗ್ರೆಸ್ ತಿಳಿಸಿದೆ.
“ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ವಿರುದ್ಧ ನವೆಂಬರ್ 14 ರಿಂದ ನವೆಂಬರ್ 29 ರವರೆಗೆ ನಿರಂತರವಾಗಿ ಅಭಿಯಾನಗಳ ಮೂಲಕ ಬೃಹತ್ ಪ್ರತಿಭಟನೆ ನಡೆಸಲಿದ್ದೇವೆ” ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಶನಿವಾರ ತಿಳಿಸಿದ್ದಾರೆ.
ಇದನ್ನೂ ಓದಿ: ಯುಪಿಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರಿದರೆ ಪದವಿ ವಿದ್ಯಾರ್ಥಿನಿಯರಿಗೆ ‘ಸ್ಕೂಟಿ’: ಪ್ರಿಯಾಂಕ ಗಾಂಧಿ ಮತ್ತೊಂದು ಘೋಷಣೆ


