ಉತ್ತರ ಪ್ರದೇಶದ ಆಗ್ರಾದಲ್ಲಿ ಪೊಲೀಸ್ ಕಸ್ಟಡಿಯಲ್ಲಿ ಹತ್ಯೆಗೊಳಗಾಗಿದ್ದ ದಲಿತ ಯುವಕ ಅರುಣ್ ಕುಮಾರ್ ವಾಲ್ಮೀಕಿ ಅವರ ಮನೆಗೆ ಭಾರತೀಯ ಕಿಸಾನ್ ಯೂನಿಯನ್ ಟಿಕಾಯತ್ ಬಣದ ನಾಯಕ ರಾಕೇಶ್ ಟಿಕಾಯತ್ ಸೋಮವಾರ ಭೇಟಿ ನೀಡಿದ್ದರು.
ಮೃತ ಅರುಣ್ ಕುಮಾರ್ ವಾಲ್ಮೀಕಿ ಅವರ ಕುಟುಂಬವನ್ನು ಭೇಟಿ ಮಾಡಿದ ರಾಕೇಶ್ ಟಿಕಾಯತ್ ಮೃತನ ಕುಟುಂಬಸ್ಥರಿಗೆ 40 ಲಕ್ಷ ರೂಪಾಯಿ ಪರಿಹಾರ ಮತ್ತು ಸರ್ಕಾರಿ ಉದ್ಯೋಗ ನೀಡಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
“ಪರಿಹಾರ ನೀಡುವಾಗ ರಾಜ್ಯ ಸರ್ಕಾರ ತಾರತಮ್ಯ ಮಾಡುತ್ತಿದೆ, ಲಖಿಂಪುರ ಖೇರಿ ಮತ್ತು ಕಾನ್ಪುರದಲ್ಲಿ ಸಂತ್ರಸ್ತರಿಗೆ 40 ರಿಂದ 45 ಲಕ್ಷ ಪರಿಹಾರ ನೀಡಿದರೆ, ಆಗ್ರಾದಲ್ಲಿ ಕೇವಲ 10 ಲಕ್ಷ ರೂಪಾಯಿ ಪರಿಹಾರ ನೀಡಿದೆ” ಎಂದು ಆರೋಪಿಸಿದ್ದಾರೆ.
‘ರಾಜ್ಯ ಸರ್ಕಾರ ಅರುಣ್ ಕುಟುಂಬಕ್ಕೂ 40 ಲಕ್ಷ ರೂಪಾಯಿ ಪರಿಹಾರ ನೀಡಬೇಕು, ಸರ್ಕಾರ ತಾರತಮ್ಯ ಮಾಡಬಾರದು. ಕುಟುಂಬದ ಸದಸ್ಯರಿಗೆ ಸರ್ಕಾರಿ ಕೆಲಸ ನೀಡಬೇಕು. ಜೊತೆಗೆ ಅವರ ಸಾವಿನ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಮಂಡ್ಯದಲ್ಲಿ ಅಮಾನವೀಯ ಜಾತಿ ದೌರ್ಜನ್ಯ: ದಲಿತ ಯುವಕನ ಮೇಲೆ ಹಲ್ಲೆ, ಹಸುವಿಗೆ ಕಟ್ಟಿ ಮೆರವಣಿಗೆ
आगरा में अरुण बाल्मीकि की पुलिस अभिरक्षा में मृत्यु हो गयी थी। आज अरुण बाल्मिकी के परिवार से मुलाकात कर न्याय के इस संघर्ष में मदद का भरोसा दिलाया। सरकार से मांग है कि नागरिकों में भेद न करे,अरुण के परिवार को भी कानपुर,लखीमपुर की घटना के बराबर मुवावजा दिया जाय।@CMOfficeUP @ANI pic.twitter.com/WbPjD16a34
— Rakesh Tikait (@RakeshTikaitBKU) October 25, 2021
ಆಗ್ರಾದ ಜಗದೀಶ್ ಪುರ ಪೊಲೀಸ್ ಠಾಣೆಯಲ್ಲಿ 25 ಲಕ್ಷ ರೂಪಾಯಿ ಕಳ್ಳತನ ಮಾಡಿರುವ ಆರೋಪದ ಮೇಲೆ ಠಾಣೆಯಲ್ಲಿ ನೈರ್ಮಲ್ಯ ಕಾರ್ಮಿಕರಾಗಿ ಕೆಲಸ ಮಾಡಿದ್ದ ಅರುಣ್ ಕುಮಾರ್ ವಾಲ್ಮೀಕಿ (30) ಎಂಬುವವರನ್ನು ಬಂಧಿಸಲಾಗಿತ್ತು. ಅಕ್ಟೋಬರ್ 19 ರಂದು ವಿಚಾರಣೆಯ ವೇಳೆ ಅವರ ಆರೋಗ್ಯ ಸ್ಥಿತಿ ಹದಗೆಟ್ಟು, ಆಸ್ಪತ್ರೆಗೆ ತೆರಳುವಷ್ಟರಲ್ಲೇ ಸಾವನ್ನಪ್ಪಿದ್ದರು. ಪೊಲೀಸರ ಥಳಿತದಿಂದಲೇ ಸಾವನ್ನಪ್ಪಿದ್ದಾರೆ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದರು.
ಈ ವೇಳೆ ವಿವಾದಿತ ಕೃಷಿ ಕಾನೂನುಗಳನ್ನು ರದ್ದುಗೊಳಿಸದ ಬಗ್ಗೆ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. “ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕದಂತೆ ನಾನು ರೈತರಲ್ಲಿ ಮನವಿ ಮಾಡುತ್ತೇನೆ. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಬಿಜೆಪಿಯನ್ನು ವಿರೋಧಿಸುತ್ತದೆ” ಎಂದು ಹೇಳಿದ್ದಾರೆ.
“ನಾವು ಚುನಾವಣೆಗೆ ಅಭ್ಯರ್ಥಿಗಳನ್ನು ನಿಲ್ಲಿಸುವುದಿಲ್ಲ. ಯಾವುದೇ ರಾಜಕೀಯ ಪಕ್ಷಕ್ಕೂ ವಿಧಾನಸಭೆ ಚುನಾವಣೆಯಲ್ಲಿ ಬೆಂಬಲಿಸುವುದಿಲ್ಲ. ಆದರೆ, ಬಿಜೆಪಿಯನ್ನು ವಿರೋಧಿಸುತ್ತೇವೆ” ಎಂದು ರಾಕೇಶ್ ಟಿಕಾಯತ್ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ದಲಿತ ಯುವಕನ ಲಾಕಪ್ ಡೆತ್: ಐವರು ಪೊಲೀಸರ ಅಮಾನತು, ಅಪರಿಚಿತರ ವಿರುದ್ಧ ಕೊಲೆ ಪ್ರಕರಣ


