ದಲಿತ ಯುವಕನ ಲಾಕಪ್ ಡೆತ್: ಐವರು ಪೊಲೀಸರ ಅಮಾನತು, ಅಪರಿಚಿತರ ವಿರುದ್ಧ ಕೊಲೆ ಪ್ರಕರಣ

ಉತ್ತರ ಪ್ರದೇಶದ ಆಗ್ರಾ ಜಿಲ್ಲೆಯ ಜಗದೀಶ್‌ಪುರ ಪೊಲೀಸ್‌ ಠಾಣೆಯಲ್ಲಿ ದಲಿತ ಯುವಕ ಅರುಣ್ ಕುಮಾರ್ ವಾಲ್ಮೀಕಿ ಅವರ ಲಾಕಪ್ ಡೆತ್‌ಗೆ ಸಂಬಂಧಿಸಿದಂತೆ ಐವರು ಪೊಲೀಸರನ್ನು ಅಮಾನತು ಮಾಡಲಾಗಿದೆ. ಜೊತೆಗೆ ಅಪರಿಚಿತರ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ.

ಜಗದೀಶ್ ಪುರ ಪೊಲೀಸ್ ಠಾಣೆಯಲ್ಲಿ 25 ಲಕ್ಷ ರೂಪಾಯಿ ಕಳ್ಳತನ ಮಾಡಿರುವ ಆರೋಪದ ಮೇಲೆ ಠಾಣೆಯಲ್ಲಿ ನೈರ್ಮಲ್ಯ ಕಾರ್ಮಿಕರಾಗಿ ಕೆಲಸ ಮಾಡಿದ್ದ ಅರುಣ್ ಕುಮಾರ್‌ ವಾಲ್ಮೀಕಿ (30) ಎಂಬುವವರನ್ನು ಮಂಗಳವಾರ ಬಂಧಿಸಲಾಗಿತ್ತು. ವಿಚಾರಣೆಯ ವೇಳೆ ಅವರ ಆರೋಗ್ಯ ಸ್ಥಿತಿ ಹದಗೆಟ್ಟು, ಆಸ್ಪತ್ರೆಗೆ ತೆರಳುವಷ್ಟರಲ್ಲೇ ಸಾವನ್ನಪ್ಪಿದ್ದರು. ಪೊಲೀಸರ ಥಳಿತದಿಂದಲೇ ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದರು.

ಈ ಘಟನೆ ಬೆಳಕಿಗೆ ಬಂದ ನಂತರ ಜಗದೀಶ್ ಪುರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್, ಸಬ್ ಇನ್ಸ್‌ಪೆಕ್ಟರ್ ಸೇರಿದಂತೆ ಮೂವರು ಕಾನ್‌ಸ್ಟೇಬಲ್‌ಗಳನ್ನು ಅಮಾನತುಗೊಳಿಸಲಾಗಿದೆ. ಸೆಕ್ಷನ್ 302 ರ ಪ್ರಕಾರ ಅಪರಿಚಿತರ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಪ್ರಿಯಾಂಕ ಗಾಂಧಿ ಜೊತೆ ಸೆಲ್ಫಿ ಕ್ಲಿಕ್ಕಿಸಿದ ಮಹಿಳಾ ಪೊಲೀಸರ ವಿರುದ್ದ ತನಿಖೆಗೆ ಆದೇಶ”

’ಮೃತ ದಲಿತ ವ್ಯಕ್ತಿ ತಾನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದರು. ಅವರ ಮನೆಯಿಂದ 15 ಲಕ್ಷ ರೂಪಾಯಿ ವಶಪಡಿಸಿಕೊಳ್ಳಲಾಗಿದೆ. ಕಳ್ಳತನದ ನಂತರ ಗುರುತು ಸಿಗಬಾರದು ಎಂದು ಅರುಣ್ ತಲೆ ಬೋಳಿಸಿಕೊಂಡಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ವಶದಲ್ಲಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ ಕಾರಣ, ಘಟನೆಯ ಬಗ್ಗೆ ಮ್ಯಾಜಿಸ್ಟ್ರೇಟ್ ವಿಚಾರಣೆಗೆ ಆದೇಶಿಸಲಾಗಿದೆ. ಮೃತ ವ್ಯಕ್ತಿಯ ಸಹೋದರ ರಿಂಕು ದೂರಿನ ಮೇರೆಗೆ ಜಗದೀಶಪುರ ಪೊಲೀಸ್ ಠಾಣೆಯಲ್ಲಿ ಅಪರಿಚಿತರ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. ವಿಚಾರಣೆಯ ವೇಳೆ ಪೊಲೀಸರ ದೌರ್ಜನ್ಯದಿಂದಾಗಿ ಅರುಣ್ ಕುಮಾರ್‌ ವಾಲ್ಮೀಕಿ ಮೃತಪಟ್ಟಿದ್ದಾರೆ ಎಂದು ಸಹೋದರ ಆರೋಪಿಸಿದ್ದಾರೆ.

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಬುಧವಾರ ರಾತ್ರಿ ಮೃತ ಅರುಣ್ ಕುಟುಂಬ ಸದಸ್ಯರನ್ನು ಭೇಟಿ ಮಾಡಿದ್ದಾರೆ. ಈ ಪ್ರದೇಶದಲ್ಲಿ ವಾಸಿಸುತ್ತಿರುವ ಹತ್ತಕ್ಕೂ ಹೆಚ್ಚು ಯುವಕರನ್ನು ಪೊಲೀಸರು ಕರೆದುಕೊಂಡು ಹೋಗಿ, ತೀವ್ರವಾಗಿ ಥಳಿಸಿದ್ದಾರೆ ಎಂದು ಕುಟುಂಬ ಸದಸ್ಯರು ಪ್ರಿಯಾಂಕಾಗೆ ತಿಳಿಸಿದ್ದಾರೆ. ಪೊಲೀಸರು ಚಿತ್ರಹಿಂಸೆ ನೀಡಿದ್ದರಿಂದಲೇ ಅರುಣ್ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಇನ್ನು, ಆಮ್ ಆದ್ಮಿ ಪಕ್ಷದ ಸಂಸದ ಸಂಜಯ್ ಸಿಂಗ್ ಕೂಡ ಸಂತ್ರಸ್ತ ಕುಟುಂಬವನ್ನು ಭೇಟಿಯಾದರು. ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಕೂಡ ಘಟನೆಯನ್ನು ಖಂಡಿಸಿದ್ದಾರೆ.

ಆಗ್ರಾ ಜಿಲ್ಲೆಯ ಜಗದೀಶ್‌ಪುರ ಪೊಲೀಸ್‌ ಠಾಣೆಯಲ್ಲಿ ಶನಿವಾರ ರಾತ್ರಿ ‘ಮಾಲ್ಖಾನ'(ಜಪ್ತಿ ಮಾಡಿದ ವಸ್ತುಗಳನ್ನು ಪೊಲೀಸರು ಸಂಗ್ರಹಿಸಿ ಇರಿಸುವ ಸ್ಥಳ) ದಿಂದ ಎರಡು ಪಿಸ್ತೂಲ್ ಮತ್ತು 25 ಲಕ್ಷ ರೂಪಾಯಿಗಳನ್ನು ಕಳ್ಳತನ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಆರು ಪೊಲೀಸ್ ಸಿಬ್ಬಂದಿಯನ್ನು ಭಾನುವಾರ ಅಮಾನತುಗೊಳಿಸಲಾಗಿತ್ತು. ಬಳಿಕ ದಲಿತ ಯುವಕ ಅರುಣ್ ಕುಮಾರ್‌ ವಾಲ್ಮೀಕಿಯನ್ನು ಕಳ್ಳತನದ ಆರೋಪದಲ್ಲಿ ಬಂಧಿಸಲಾಗಿತ್ತು.


ಇದನ್ನೂ ಓದಿ: ಯುಪಿ: ಪೊಲೀಸ್‌ ಠಾಣೆಯಿಂದಲೇ 25 ಲಕ್ಷ ರೂ. ನಗದು ಮತ್ತು 2 ಪಿಸ್ತೂಲ್ ಕಳವು!

LEAVE A REPLY

Please enter your comment!
Please enter your name here