ವಿವಾದಿತ ಕೃಷಿ ಕಾನೂನುಗಳ ರದ್ದತಿಗಾಗಿ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಬೆಂಬಲಿಸಿ ದೆಹಲಿ-ಹರಿಯಾಣ ಗಡಿಯಲ್ಲಿರುವ ನಿಹಾಂಗ್ ಸಮೂಹದ ಸದಸ್ಯರು ಪ್ರತಿಭಟನಾ ಸ್ಥಳವನ್ನು ತೊರೆಯುವ ಸಾಧ್ಯತೆಯಿಲ್ಲ ಎಂದು ಹೇಳಿದ್ದಾರೆ.
“ಸಿಂಘು ಗಡಿಯಲ್ಲಿ ಬುಧವಾರ ಧಾರ್ಮಿಕ ಕ್ರಮದ ಮಹಾಪಂಚಾಯತ್ ನಡೆದಿದ್ದು, ಗುರುವಾರ ಸಾಮೂಹಿಕ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ನಿರ್ಧಾರವನ್ನು ಪ್ರಕಟಿಸಲಾಗುವುದು” ಎಂದು ನಿಹಾಂಗ್‌ಗಳ ಮುಖಂಡರೊಬ್ಬರು ತಿಳಿಸಿದ್ದಾರೆ.
“ನಾವು ಸಿಂಘು ಗಡಿಯನ್ನು ಬಿಟ್ಟು ಹೋಗುವ ಸಾಧ್ಯತೆಯಿಲ್ಲ. ನಾವು ರೈತರನ್ನು ಬೆಂಬಲಿಸಲು ಇಲ್ಲಿದ್ದೇವೆ” ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಸದಸ್ಯರೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ರೈತ ಹೋರಾಟ ನೆಲದಲ್ಲಿ ಕೊಲೆ: ನಿಹಾಂಗ್ ಬೆಂಬಲಿತ ವ್ಯಕ್ತಿ ಪೊಲೀಸರಿಗೆ ಶರಣು
ದಲಿತ ಯುವಕ ಲಖ್ಬೀರ್ ಸಿಂಗ್ ಹತ್ಯೆ ಪ್ರಕರಣದಲ್ಲಿ ನಿಹಾಂಗ್ ಸಿಖ್ಖರನ್ನು ಬಂಧಿಸಿದ ಮೇಲೆ ನಾವು ಪ್ರತಿಭಟನಾ ಸ್ಥಳವನ್ನು ತೊರೆಯುವುದಾಗಿ ಹಲವರು ಹೇಳಿದ್ದರು. ಈ ಕುರಿತು ಧಾರ್ಮಿಕ ಸಭೆಗಳನ್ನು ನಡೆಸಲಾಗಿತ್ತು. ಬುಧವಾರ (ಅ.27) ಧಾರ್ಮಿಕ ಮಹಾಪಂಚಾಯತ್ ನಡೆದಿದ್ದು, ಇಂದು ನಿರ್ಧಾರ ಘೋಷಿಸಲಾಗುತ್ತದೆ.
ಒಕ್ಕೂಟ ಸರ್ಕಾರದ ವಿವಾದಿತ ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ಹೋರಾಟದ ನೇತೃತ್ವ ವಹಿಸಿರುವ ರೈತ ಸಂಘಗಳ ಒಕ್ಕೂಟ ಸಂಘಟನೆಯಾದ ಸಂಯುಕ್ತ ಕಿಸಾನ್ ಮೋರ್ಚಾ, ಸಿಖ್ ಪವಿತ್ರ ಗ್ರಂಥವನ್ನು ಅಪವಿತ್ರಗೊಳಿಸಿದ ಆರೋಪದ ಮೇಲೆ ದಲಿತ ಯುವಕನನ್ನು ಹತ್ಯೆ ಮಾಡಿದ್ದ ನಿಹಾಂಗ್‌ಗಳನ್ನು ಪ್ರತಿಭಟನಾ ಸ್ಥಳವನ್ನು ಬಿಟ್ಟು ಹೋಗುವಂತೆ ಹೇಳಿತ್ತು.
ಪಂಜಾಬ್‌ನ ತರನ್ ತರನ್ ಜಿಲ್ಲೆಯ ಚೀಮಾ ಕಲಾನ್ ಗ್ರಾಮದ 35 ವರ್ಷದ ದಲಿತ ಯುವಕ ಲಖ್ಬೀರ್ ಸಿಂಗ್ ಅಕ್ಟೋಬರ್ 15 ರಂದು ಸಿಂಘು ಗಡಿಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಸಿಖ್ ಧಾರ್ಮಿಕ ಗ್ರಂಥವನ್ನು ಅಪವಿತ್ರಗೊಳಿಸಿದ ಆರೋಪದಲ್ಲಿ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಪ್ರಕರಣದಲ್ಲಿ ಇಬ್ಬರು ನಿಹಾಂಗ್ ಸದಸ್ಯರನ್ನು ಬಂಧಿಸಲಾಗಿದೆ .ಸಂಪೂರ್ಣ ತನಿಖೆಗೆ ಸಂಯುಕ್ತ ಕಿಸಾನ್ ಮೋರ್ಚ ಮತ್ತು ಸಂತ್ರಸ್ತರ ಕುಟುಂಬ ಆಗ್ರಹಿಸಿದೆ.
ಕೊಲೆ ಪ್ರಕರಣದಲ್ಲಿ ಬಂಧಿತನಾಗಿರುವ ನಿಹಾಂಗ್ ಸಿಖ್ ಸರಬ್ಜಿತ್ ಸಿಂಗ್ ಪದೇ ಪದೇ ಮೃತ ಲಖ್ಬೀರ್ ಸಿಂಗ್ ಗ್ರಾಮಕ್ಕೆ ಭೇಟಿ ನೀಡಿರುವದನ್ನು ಗ್ರಾಮದ ನಿವಾಸಿಗಳು ದೃಢಪಡಿಸಿದ್ದಾರೆ. ಆರೋಪಿತ ನಿಹಾಂಗ್ ಗುಂಪಿನ ಮುಖ್ಯಸ್ಥ ಬಿಜೆಪಿ ಸಚಿವರೊಂದಿಗೆ ಸಭೆ ನಡೆಸಿರುವುದನ್ನು ಒಪ್ಪಿಕೊಂಡಿದ್ದಾರೆ.
“ನಾವು ಈ ವರ್ಷದ ಜುಲೈ ತಿಂಗಳಿನಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಸೇರಿ ಇತರ ಬಿಜೆಪಿ ಮುಖಂಡರನ್ನು ರಹಸ್ಯವಾಗಿ ಭೇಟಿಯಾಗಿದ್ದು ನಿಜ. ಸಿಂಘು ಗಡಿಯಲ್ಲಿನಲ್ಲಿ ಧರಣಿ ನಿಲ್ಲಿಸಲು 10 ಲಕ್ಷ ರೂ ಮತ್ತು ಕುದುರೆಗಳ ಆಮಿಷವೊಡ್ಡಿದ್ದರು” ಎಂದು ನಿಹಾಂಗ್ ಬಾಬಾ ಅಮನ್ ಸಿಂಗ್ ಒಪ್ಪಿಕೊಂಡಿದ್ದಾರೆ ಎಂದು ದಿ ಟ್ರಿಬ್ಯೂನ್ ವರದಿ ಮಾಡಿದೆ.
ಇದನ್ನೂ ಓದಿ: ಕೇಂದ್ರ ಕೃಷಿ ಸಚಿವರನ್ನು ಭೇಟಿಯಾಗಿದ್ದು ನಿಜ, ಧರಣಿ ನಿಲ್ಲಿಸಲು 10 ಲಕ್ಷ ರೂ ಆಮಿಷವೊಡ್ಡಿದ್ದರು:ನಿಹಾಂಗ್ ಬಾಬಾ


